ADVERTISEMENT

ಉಷಾ ಯಾದವ್ ಅವರ ಕಥೆ: ಸಾಗರದ ಒಂದು ಹನಿ

ಡಾ.ಎಚ್.ಎಂ.ಕುಮಾರಸ್ವಾಮಿ
Published 13 ಡಿಸೆಂಬರ್ 2025, 23:30 IST
Last Updated 13 ಡಿಸೆಂಬರ್ 2025, 23:30 IST
   

ಮೂಲ ಹಿಂದಿ: ಉಷಾ ಯಾದವ್

ಕನ್ನಡಕ್ಕೆ: ಎಚ್.ಎಂ.ಕುಮಾರಸ್ವಾಮಿ

“...ದೀಪಕ್ ಎಲ್ಲಿದ್ದಾನೆ? ಕೆಲವು ದಿನಗಳಿಂದ ಕಾಣಿಸ್ತಾ ಇಲ್ಲ...” ಆಸ್ಪತ್ರೆಯ ವಾರ್ಡ್ ಬೆಡ್ ಮೇಲೆ ಮಲಗಿದ್ದ ಪ್ರಮೋದ ಕೇಳಿದರು.

ADVERTISEMENT

“...ಎಲ್ಲಿಯೋ ಹೋಗಿರಬಹುದು. ಯಾವುದೋ ಕೆಲಸದಲ್ಲಿ ಬ್ಯುಸಿ ಆಗಿರಬಹುದು...” ಹಾಸಿಗೆಯ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಪ್ರಮೋದರ ಆತ್ಮೀಯ ಮಿತ್ರ ಪ್ರತಾಪ್ ಸಹಜವಾಗಿಯೇ ಹೇಳಿದರು.

“...ಇದ್ದಕ್ಕಿದ್ದ ಹಾಗೆ ಅದೃಶ್ಯವಾಗಿ ಹೋಗುವಂತಹ ಅದ್ಯಾವ ಮಹಾ ಕೆಲಸ ಇದೆ ಆತನಿಗೆ...?” ಪ್ರಮೋದ ಅಸಹನೆಯಿಂದಲೇ ಕೇಳಿದ.

“...ನೀನ್ಯಾಕೆ ಚಿಂತೆ ಮಾಡ್ತೀಯಾ? ನೀನೀಗ ಖುಷಿಯಾಗಿರಬೇಕು. ನಿನಗೆ ಕಿಡ್ನಿಯ ಜೋಡಣೆ ಸಕ್ಸಸ್ ಆಗಿದೆ. ಅದು ನಿನ್ನ ಶರೀರಕ್ಕೆ ಸರಿಯಾಗಿ ಹೊಂದಿಕೊಂಡಿದೆ. ಆರೋಗ್ಯ ಸುಧಾರಿಸುತ್ತಿದೆ. ಚಿಂತೆ ಮಾಡಬೇಡ...” ಪ್ರಮೋದ ಸಮಜಾಯಿಸಿದರು.

“...ಚಿಂತೆ ಮಾಡದೆ ಇದ್ರೆ ಹೇಗೆ? ಆ ಹುಡುಗ ಮನೇಲಿ ಒಬ್ಬನೇ ಇದ್ದಾನೆ...” ಪ್ರಮೋದ್ ಈ ರೀತಿ ಯೋಚಿಸುವುದಕ್ಕೆ ಕಾರಣವೂ ಇತ್ತು. ಕಳೆದ ಆರು ತಿಂಗಳಿಂದಲೂ ಅವರು ಇದೇ ಚಿಂತೆಯನ್ನು ಅನುಭವಿಸುತ್ತಿದ್ದಾರೆ. ಯಾಕಾದ್ರೂ ಈ ಹುಡುಗನ ಬಗ್ಗೆ ಕನಿಕರ ಉಂಟಾಯಿತೋ...! ಎಂದು ತನ್ನ ಮೂರ್ಖತನವನ್ನು ಹಳಿದುಕೊಳ್ಳುತ್ತಾರೆ.

***

ಆರು ತಿಂಗಳುಗಳ ಹಿಂದೆ ಒಂದು ಮುಸ್ಸಂಜೆಯ ಹೊತ್ತಿನಲ್ಲಿ ಇದ್ದಕ್ಕಿದ್ದ ಹಾಗೆ ದೀಪಕ್ ಎಂಬ ಈ ಯುವಕ ಇವರ ಮುಂದೆ ಬಂದು ನಿಂತುಬಿಡುತ್ತಾನೆ. ದೂರದ ಸಂಬಂಧದ ದೀಪಕ್‌ನ ಪರಿಚಯ ಇವರಿಗೆ ಇತ್ತು.

“...ಇದೇನು ದೀಪಕ್...? ಇದ್ದಕ್ಕಿದ್ದ ಹಾಗೆ ಬಂದುಬಿಟ್ಟೆ...?” ಕೊಂಚ ಗಾಬರಿಯಿಂದಲೇ ಕೇಳಿದರು.

“...ಅಂಕಲ್...! ಅಪ್ಪ ಅಮ್ಮನ ಜೊತೆ ಜಗಳ ಮಾಡಿಕೊಂಡು ಮನೆಯಿಂದ ಹೊರಟು ಬಂದಿದ್ದೇನೆ. ಅವರ ಬೈಗುಳವನ್ನು ಕೇಳಿಸಿಕೊಂಡು ನನಗೆ ಸಾಕಾಗಿ ಹೋಯ್ತು. ಈ ನಗರದಲ್ಲಿ ಇದ್ದುಕೊಂಡು ಏನಾದರೂ ಚಿಕ್ಕಪುಟ್ಟ ಕೆಲಸ ಮಾಡುತ್ತಾ ಜೀವನ ಮಾಡುತ್ತೇನೆ. ಯಾವುದಾದರೂ ಕೆಲಸ ಕೊಡಿಸಿ...”

ದೀಪಕ್‌ನ ಈ ದೃಢ ಮಾತುಗಳಿಂದ ಇವರ ಮೇಲೆ ಸಿಡಿಲೇ ಎರಗಿದಂತಾಯಿತು. ಆಸಕ್ತಿ ಇಲ್ಲದಿದ್ದರೂ ಹೇಳಲೇಬೇಕಾದ ಅನಿವಾರ್ಯತೆಯಿಂದ ಹೇಳಿದರು “...ಮಗೂ ಕೆಲಸಗಳು ನನ್ನ ಕೈಯಲ್ಲಿ ಇವೆ ಏನು? ಹಳ್ಳಿಯಲ್ಲಿ ಹೇಗೋ ಇದ್ದುಕೊಂಡು ಎರಡು ಹೊತ್ತು ತಿಂದುಂಡುಕೊಂಡು ಆರಾಮವಾಗಿ ಇರೋದು ಬಿಟ್ಟು ಹೀಗೆ ಮುಖ ತಿರುಗಿಸಿಕೊಂಡು ಯಾಕಪ್ಪ ಓಡಿ ಬಂದೆ...?”

“...ಅಂಕಲ್., ನನಗಾದ ಟೆನ್ಶನ್ ಹಿಂಸೆಯನ್ನು ಇಲ್ಲಿ ಹೇಳೋದಕ್ಕೆ ಆಗಲ್ಲ. ಅಂಕಲ್...!”

“...ಅಯ್ಯೋ., ಅಂಥಾ ಹಿಂಸೆ ಏನಾಯ್ತು...?”

“...ಹೇಳಪ್ಪ...”

“...ಹೇಳೋದಿಲ್ಲ ಅಂಕಲ್. ಹೇಳಿದ್ರೆ ನೀವೂ ಸಹ ನನ್ನನ್ನು ತಪ್ಪು ತಿಳಿದುಕೊಳ್ಳುತ್ತೀರಿ...”

ದೀಪಕ್ ಮುಖ ದಪ್ಪಗೆ ಮಾಡಿಕೊಂಡು ಹೀಗೆ ಹೇಳಿದ್ದನ್ನು ಕೇಳಿ ಪ್ರಮೋದ್ ಚಿಕ್ಕ ಮಕ್ಕಳು ನಗುವ ಹಾಗೆ ನಕ್ಕು ಹೇಳಿದರು; “...ಅಯ್ತಪ್ಪ, ನೀನು ಹೇಳದಿದ್ರೆ ಪರವಾಗಿಲ್ಲ. ನಾನೇ ನಿನ್ನ ಅಣ್ಣ ದಿನೇಶ್‌ನಿಗೆ ಪೋನ್ ಮಾಡಿ ಕೇಳಿಕೊಳ್ತೇನೆ...”

ದೀಪಕ್‌ನ ಅಣ್ಣನಿಗೆ ಫೋನ್ ಮಾಡಿದಾಗ ಆತ ನಿರಾಳ ಭಾವದಿಂದ ಹೇಳಿದ “...ಓಹೋ., ಅವನು ನಿಮ್ಮ ಬಳಿ ಬಂದಿದ್ದಾನಾ...! ನಾವು ಇಲ್ಲಿ ಅಕ್ಕಪಕ್ಕ, ಸಂಬಂಧಿಕರ ಹತ್ರ ವಿಚಾರ ಮಾಡಿ ಸುಸ್ತಾಗಿ ಹೋಗಿದ್ದೆವು. ಅಬ್ಬಾ...!”

“...ಅದ್ಸರಿ., ವಿಷಯ ಏನು ಆಯ್ತು ಅಂತ? ದೀಪಕ್ ಹಳ್ಳಿ ಬಿಟ್ಟು ಯ್ಯಾಕೆ ಓಡಿಬಂದಿದ್ದಾನೆ...?”

“...ಆತ ಏನನ್ನೂ ಹೇಳಲಿಲ್ಲವೆ...?” ದಿನೇಶ್ ಕೇಳಿದ.

“...ಇಲ್ಲ...”

“...ನಿಜ ಹೇಳಬೇಕು ಅಂದ್ರೆ ನಾವು ಅವನನ್ನು ಜೋರಾಗಿಯೇ ಗದರಿಸಿ ಬೈದಿದ್ದೆವು. ಅಷ್ಟಕ್ಕೇ ಅವನು ಸಿಟ್ಟು ಮಾಡಿಕೊಂಡು ಮನೆಯಿಂದ ಹೊರಟು ಬಂದ ಅಷ್ಟೆ. ನಾವು ಅಕ್ಕಪಕ್ಕದಲ್ಲೆಲ್ಲಾ ಹುಡುಕಾಡಿದೆವು. ಕಾಣದೇ ಇದ್ದಾಗ ಎಲ್ಲಾದ್ರೂ ಕೆರೆ-ಬಾವಿ ಅಥವಾ ರೇಲ್ವೆ ಹಳಿ ಮೇಲೆ ಜಿಗಿದುಬಿಟ್ಟರೆ...ಅಂತ ನಮಗೂ ದಿಗಿಲು ಆಯ್ತು...”

ಅಣ್ಣ ದಿನೇಶ್‌ನ ಮಾತುಗಳನ್ನು ಕೇಳಿ ಪ್ರಮೋದ್‌ಗೆ ಕೋಪ ಬಂತು.

“...ಅಲ್ಲಪ್ಪಾ ಅವನು ಯ್ಯಾಕೆ ಅಂತಹ ನಿರ್ಧಾರಕ್ಕೆ ಬರ್ತಾನೆ...? ಪ್ರಾಣ ಕಳೆದುಕೊಳ್ಳೋದು ಏನು ತಮಾಷೆ ಆಟವೇ...”

“...ಹಾಗಲ್ಲ ಪ್ರಮೋದ್. ನೀನಂತೂ ಸಂಸಾರೊಂದಿಗನಲ್ಲ. ಹೆಂಡತಿ, ಮಕ್ಕಳ ಜಂಜಾಟ ಇಲ್ಲದೇ ಇದ್ದ ಕಾರಣ ಹಾಗೆ ಹೇಳ್ತಾ ಇದ್ದೀಯಾ...” ದಿನೇಶ್ ದೀರ್ಘ ನಿಟ್ಟಿಸುರು ಬಿಡುತ್ತ ಮತ್ತೆ ಮುಂದುವರೆಸಿದ ಇವತ್ತಿನ ವಾತಾವರಣ ನಿನಗೆ ಗೊತ್ತಿದೆ. ಕೆಲವೇ ದಿನಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಒಬ್ಬ ಹುಡುಗಿ ತನ್ನ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ತೀರಿಕೊಂಡಳು. ಅವಳ ಅಮ್ಮ ಮಗಳು ಕದ್ದು-ಮುಚ್ಚಿ ಮೊಬೈಲ್ ನೋಡುವುದನ್ನು ಕಂಡು ‘ಸುಮ್ಮನೆ ಸಮಯ ಹಾಳು ಮಾಡ್ತಾ ಇದ್ದೀಯಾ...’ ಎಂದು ಜೋರು ಮಾಡಿ ಆಕೆಯ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಳು ಅಷ್ಟೇ. ಮತ್ತೊಬ್ಬಳು ಕಳೆದ ವರ್ಷ ರಕ್ಷಾಬಂಧನಕ್ಕೆ ತವರಿಗೆ ಕಳುಹಿಸಲಿಲ್ಲ ಎಂಬ ಕಾರಣಕ್ಕೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು. ಇಂಥ ಕಥೆಗಳು ಸಾಕಷ್ಟು ಇವೆ. ಇವತ್ತಿನ ಯುವ ಪೀಳಿಗೆ ಯಾವಾಗ ಯಾವ ಕಾರಣಕ್ಕೆ ಸಿಟ್ಟುಗೊಳ್ತಾರೆ, ಅಪಮಾನ ಅಂದುಕೊಳ್ತಾರೆ ಅಂತಾನೆ ತಿಳಿಯೋದಿಲ್ಲ. ದೀಪಕ್‌ನ ಬಗ್ಗೆ ನಾವಂತೂ ಗಾಬರಿಗೊಂಡಿದ್ದೆವು...”

“...ಅದ್ಸರಿ ದಿನೇಶ್, ದೀಪಕ್ ಮನೆ ಬಿಟ್ಟು ಬರೋದಕ್ಕೆ ಏನು ಕಾರಣ ಅಂತ ನೀನು ಹೇಳಲೇ ಇಲ್ಲವಲ್ಲ...!”

ದೀರ್ಘವಾಗಿ ಉಸಿರೆಳೆಯುತ್ತ ದಿನೇಶ್ ಹೇಳಿದ “...ಅದು ಏನೂಂದ್ರೆ.. ನಮ್ಮ ಊರಿನ ಸರಪಂಚರ ಮಗ ಪಕ್ಕದ ಗ್ರಾಮದ ಒಬ್ಬಳು ಹುಡುಗಿಯ ರೇಪ್ ಮತ್ತು ಕೊಲೆಯ ಸಂಬಂಧವಾಗಿ ಅರೆಸ್ಟ್ ಆಗಿದ್ದ. ಆತನ ಪರವಾಗಿ ಸಾಕ್ಷಿ ಹೇಳುವಂತೆ ಆ ಹುಡುಗನ ತಂದೆ ದೀಪಕ್‌ನನ್ನು ಒತ್ತಾಯಿಸುತ್ತಿದ್ದರು. ಆದ್ರೆ ದೀಪಕ್ ‘ನಾನು ಸುಳ್ಳು ಸಾಕ್ಷಿ ಹೇಳೋದಿಲ್ಲ’ ಅಂತ ಹಠ ಹಿಡಿದಿದ್ದ. ನಾವು ಮನೆಯವರು ದೀಪಕ್‌ಗೆ ‘ನೋಡಪ್ಪ, ಸರಪಂಚರನ್ನು ಎದುರು ಹಾಕಿಕೊಂಡು ಈ ಹಳ್ಳೀಲಿ ಇರೋದು ಕಷ್ಟವಾಗಿ ಬಿಡುತ್ತೆ. ಅವರು ಹೇಳಿದ ಹಾಗೆ ಕೇಳು... ಏನೂ ಮಾಡೋದಕ್ಕೆ ಆಗುವುದಿಲ್ಲ...” ಎಂದು ಒತ್ತಾಯಿಸಿದೆವು. ಇದೇ ವಿಷಯವಾಗಿ ದೀಪಕ್‌ನನ್ನು ಚೆನ್ನಾಗಿ ಬೈದು ಗದರಿಸಿದೆವು. ಅಷ್ಟಕ್ಕೆ ದೀಪಕ್ ಕೋಪದಿಂದ ಮನೆಬಿಟ್ಟು ಹೊರಟು ಬಂದಿದ್ದಾನೆ...

ಫೋನ್ ರಿಸೀವರ್‌ನ್ನು ಇಟ್ಟು ಏನೂ ಮಾತಾಡದೆ ಗಂಭೀರವಾಗಿ ಕುಳಿತುಕೊಂಡರು. ಎದುರಿಗೆ ಕುಳಿತಿದ್ದ ದೀಪಕ್ ಮೌನ ಮುರಿದು ಎದ್ದುನಿಂತು ಹೇಳಿದ “...ನೀವೂ ಸಹ ನನ್ನನ್ನು ತಪ್ಪು ತಿಳಿದುಕೊಂಡ ಹಾಗಿದೆ. ಸರಿ, ನಾನಿನ್ನೂ ಹೊರಡುತ್ತೇನೆ...”

ಪ್ರಮೋದ್ ನಗುತ್ತಾ ಹೇಳಿದರು “...ಸರಿಯಾಗಿ ಇರೋದನ್ನ ತಪ್ಪು ಅಂತ ಹೇಗೆ ತಿಳಿದುಕೊಳ್ಳಲಿ? ನೀನು ಮಾಡಿದ್ದು ಸರಿಯಾಗಿಯೇ ಇದೆ. ಏನೂ ಚಿಂತೆ ಮಾಡಬೇಡ. ಇಲ್ಲಿ ಆರಾಮಾಗಿ ಇರು. ಊರಿನ ಪ್ರಧಾನರ ಮಗನ ವಿಷಯ ಸರಿಯಾದ ಮೇಲೆ ನೀನು ಊರಿಗೆ ಹೋಗಬಹುದು...”

“...ಇಲ್ಲ ನನಗೆ ಹಳ್ಳಿಯ ವಾತಾವರಣ ಹಿಡಿಸುತ್ತಿಲ್ಲ. ನಾನು ಇಲ್ಲಿಯೇ ಪಟ್ಟಣದಲ್ಲಿ ಇರ್ತೇನೆ...” ದೀಪಕ್ ದೃಢವಾಗಿ ಹೇಳಿದ.

“...ಸರಿ ಆ ಬಗ್ಗೆ ಆಮೇಲೆ ನೋಡೋಣ. ಈಗ ಚಹಾ ಕುಡಿದು ಸ್ವಲ್ಪ ವಿಶ್ರಾಂತಿ ತಗೋ...”

ಹಳ್ಳಿಯ ಅಲ್ಪಶಿಕ್ಷಿತ ಯುವಕನ ಪ್ರಾಮಾಣಿಕತೆ, ಧೈರ್ಯ ಹಾಗೂ ಭಾವನೆಯನ್ನು ಗಮನಿಸಿ ಪ್ರಮೋದ್ ಆತನಿಗೆ ತಮ್ಮ ಜೊತೆ ಇರಲು ಅನುಮತಿಸಿದ್ದರು.

ಮಾರನೆಯ ದಿನ ಬೆಳಗ್ಗೆ ವಾಕಿಂಗ್‌ಗೆ ಹೋದಾಗ ತನ್ನ ಆತ್ಮೀಯ ಸ್ನೇಹಿತ ಪ್ರತಾಪನಿಗೆ ಈ ವಿಷಯ ತಿಳಿಸಿದರು. ಆಗ ಅವರು ಕೂಡ ಖುಷಿ ವ್ಯಕ್ತಪಡಿಸುತ್ತ “...ತುಂಬಾ ಒಳ್ಳೆಯ ವಿಚಾರ. ನಿಮ್ಮ ಮನೆಗೆ ಬಂದು ಆತನನ್ನು ಮಾತನಾಡಿಸುತ್ತೇನೆ. ಇಂದಿನ ಯುವಪೀಳಿಗೆಯಲ್ಲಿ ಹೀಗೆ ಸತ್ಯದ ಪರವಾಗಿ ದೃಢವಿಶ್ವಾಸ ಹೊಂದುವವರ ಸಂಖ್ಯೆ ಕಡಿಮೆಯೇ ಇದೆ. ಆ ಯುವಕ ನಿಜವಾಗಿಯೂ ಪ್ರಾಮಾಣಿಕ ಎಂದು ಒಪ್ಪಿಕೊಳ್ಳಲೇಬೇಕು...”

ಪ್ರತಾಪ್ ನೀಡಿದ ಈ ಪ್ರಶಂಸೆ ಪತ್ರ ಪ್ರಮೋದ್‌ರ ವಿಶ್ವಾಸವನ್ನು ಹೆಚ್ಚಿಸಿತು. ಇದರ ಪರಿಣಾಮವಾಗಿ ಈ ಬಯಸದೇ ಬಂದ ವ್ಯಕ್ತಿ ದೀಪಕ್ ಅತಿಥಿಯ ಸ್ಥಾನ ಪಡೆದುಕೊಂಡ. ಆದರೆ ಈ ಭಾವನೆ ಬಹಳ ದಿನ ಉಳಿಯಲಿಲ್ಲ.

“...ಆತನನ್ನು ಕುತ್ತಿಗೆಗೆ ಕಟ್ಟಿಕೊಂಡು ನನಗೆ ಏಗೋದಕ್ಕೆ ಆಗುತ್ತಿಲ್ಲ ಪ್ರತಾಪ್. ನನ್ನ ಮಾನಸಿಕ ನೆಮ್ಮದಿಯೆಲ್ಲಾ ಹಾಳಾಗಿ ಹೋಯಿತು...” ಒಂದು ದಿನ ಪ್ರಮೋದ್ ವಾಕಿಂಗ್ ಸಮಯದಲ್ಲಿ ಪ್ರತಾಪ್ ಎದುರು ರೇಗಾಡುತ್ತಲೇ ಹೇಳಿದರು.

“...ಏಕೆ? ಏನಾಯ್ತು...? ಹುಡುಗನಂತೂ ತುಂಬಾ ಒಳ್ಳೆಯವನು. ನಾನು ಅವನನ್ನು ಅನೇಕ ಸಾರಿ ಭೇಟಿಯಾಗಿ ಮಾತಾಡಿದ್ದೇನೆ. ಈಗ ಇದ್ದಕ್ಕಿದ್ದ ಹಾಗೆ ಏನಾಯ್ತು...? ಪ್ರತಾಪ್ ಆಶ್ಚರ್ಯದಿಂದಲೇ ಕೇಳಿದರು.

“...ನಾನು ಕೆಲವು ವರ್ಷಗಳಿಂದ ಒಬ್ಬಂಟಿಯಾಗಿ ಇದ್ದೇನೆ ಎಂದು ನಿನಗೆ ಗೊತ್ತು ಪ್ರತಾಪ್. ತಾಯಿ ಹೊರಟು ಹೋದ ಮೇಲೆ ಸ್ವಲ್ಪ ಸಮಯ ರಘು ಚಿಕ್ಕಪ್ಪನ ಜೊತೆಗಿದ್ದಾಗ ಸಮಯ ಹೇಗೋ ಕಳೆಯುತ್ತಿತ್ತು. ನನ್ನ ಅಡ್ಡಾದಿಡ್ಡಿ ಸ್ವಭಾವವನ್ನು ಚಿಕ್ಕಪ್ಪ ಸಂಭಾಳಿಸಿಕೊಂಡು ಹೋಗುತ್ತಾ ಎಲ್ಲವನ್ನು ಸಂಬಾಳಿಸುತ್ತಿದ್ದರು. ಆದರೆ ಈ ಹುಡುಗ ಆ ಸ್ಥಾನವನ್ನು ತುಂಬಲಾರ. ನನ್ನ ಮನಸ್ಸು ವಿಚಲಿತವಾಗಿ ಹೋಗಿದೆ. ಒಬ್ಬನೇ ಇರಬೇಕು ಎಂದು ಅಂದುಕೊಂಡರೆ, ಏನೋ ಆಗುತ್ತಿದೆ...”

“...ನೋಡು ಪ್ರಮೋದ್, ರಘು ಚಿಕ್ಕಪ್ಪರಿಗೆ ವಯಸ್ಸಾಗಿದೆ. ಎಷ್ಟು ಸಮಯ ಅಂತ ನಿನ್ನ ಸಂಗಡ ಅವರು ಇರಲು ಸಾಧ್ಯ? ಈ ದೀಪಕ್ ಈಗ ಅವರ ಸ್ಥಾನವನ್ನು ತುಂಬಲು ಸಾಧ್ಯ ಎಂದು ನನ್ನ ನಂಬಿಕೆ...” ಪ್ರತಾಪ್ ಗಂಭೀರವಾಗಿ ಹೇಳಿದರು.

“...ಇಲ್ಲ... ಇಲ್ಲ. ದೀಪಕ್‌ನಿಂದ ರಘು ಚಿಕ್ಕಪ್ಪನ ಸ್ಥಾನ ತುಂಬಲು ಸಾಧ್ಯವಿಲ್ಲ...” ಪ್ರಮೋದ್ ಉತ್ತೇಜಿತರಾಗಿದ್ದರು.

“...ನೀನು ಸ್ವಲ್ಪ ತಾಳ್ಮೆಯಿಂದ ಇರು. ಆತ ನಿನಗೆ ಸಹಾಯಕನಾಗಿರುತ್ತಾನೆ...”

“...ನನಗೇನು ಹಾಗೆನಿಸುವುದಿಲ್ಲ. ಆದ್ರೂ ಪ್ರಯತ್ನಿಸುತ್ತೇನೆ...” ಪ್ರಮೋದ್ ಮಾತು ನಿಲ್ಲಿಸಿದರು.

ಪ್ರಮೋದ್ ಮೂಲತಃ ಉದಾಸೀನ ಸ್ವಭಾವದವರಾಗಿದ್ದರು. ದೊಡ್ಡ ಸರ್ಕಾರಿ ಹುದ್ದೆಯಲ್ಲಿದ್ದ ಕಾರಣ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದಾಗ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ ತರುವುದು ಅವರಿಗೆ ಅಭ್ಯಾಸವಾಗಿತ್ತು. ಹಾಗೆ ತಂದ ವಸ್ತುಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಹಾಕಿಬಿಡುತ್ತಿದ್ದರು. ಬೆಲೆ ಬಾಳುವ ಉಂಗುರಗಳನ್ನು ನೋಟುಗಳಿಂದ ತುಂಬಿರುತ್ತಿದ್ದ ಪರ್ಸ್ಅನ್ನು ಟೇಬಲ್ ಮೇಲೆ, ದಿಂಬಿನ ಪಕ್ಕ ಇಟ್ಟುಬಿಡುತ್ತಿದ್ದರು. ರಘು ಚಿಕ್ಕಪ್ಪ ಇವೆಲ್ಲವನ್ನೂ ಸರಿಯಾದ ಜಾಗಕ್ಕೆ ಇರಿಸಿ ಆಗಾಗ ಎಚ್ಚರಿಸುತ್ತಿದ್ದರು. ಹಾಗಾಗಿ ಮನೆಯಲ್ಲಿ ಕಳ್ಳತನ, ವಸ್ತುಗಳು ಆಚೀಚೆ ಆಗುವುದು ನಡೆಯುತ್ತಿರಲಿಲ್ಲ. ಈಗ ದೀಪಕ್ ಬಂದ ಮೇಲೆ ರಘು ಚಿಕ್ಕಪ್ಪನ ನೆನಪು ಮತ್ತೆ ಮತ್ತೆ ಬರತೊಡಗಿ ಮನಸು ತಳಮಳಗೊಳ್ಳತೊಡಗಿತು.

ದೀಪಕ್ ಎಷ್ಟಾದರೂ ಹೊರಗಿನ ಹುಡುಗ. ದೂರದ ಸಂಬಂಧದವನಾಗಿದ್ದರೂ ಬಡ ಕುಟುಂಬದವನಾಗಿದ್ದ. ಆತ ತನ್ನ ಪ್ರಾಮಾಣಿಕತೆಯ ಉದಾಹರಣೆಯನ್ನು ತೆರೆದಿಟ್ಟಿದ್ದರೂ ಇದು ನಂಬಿಕೆಯ ಪ್ರಶ್ನೆ. ಆಸೆ, ಮೋಹ, ಲೋಭ ಯಾರನ್ನೂ ಬಿಟ್ಟಿಲ್ಲವಲ್ಲ. ಹಾಂ., ದೀಪಕ್ ಬಂದಾಗಿನಿಂದಲೇ ರಘು ಚಿಕ್ಕಪ್ಪ ಅವನಿಗೆ ಮನೆ, ವಸ್ತುಗಳನ್ನು ಜತನ ಮಾಡುವ, ಯಾವ ವಸ್ತು ಎಲ್ಲಿರಬೇಕು ಅಲ್ಲಿಯೇ ಇರಿಸುವ ಪಾಠವನ್ನು ಹೇಳಲು ಶುರು ಮಾಡಿದ್ದರು. ಒಂದು ಸೂಜಿ ಕೂಡ ರಘು ಚಿಕ್ಕಪ್ಪ ಅನುಭವಿ ಕಣ್ಣಿನಿಂದ ಆಚೀಚೆ ಆಗಲು ಸಾಧ್ಯವಿರಲಿಲ್ಲ. ಅದೇನೋ ಎಲ್ಲರ ಮೇಲು ಸಿಟ್ಟಾಗುತ್ತಿದ್ದ ಚಿಕ್ಕಪ್ಪ ದೀಪಕ್‌ನ ಬಗ್ಗೆ ಮಾತ್ರ ಸಹನೆಯಿಂದ ಇರುತ್ತಿದ್ದರು.

ರಘು ಚಿಕ್ಕಪ್ಪ ಇರೋತನಕ ನಿಶ್ಚಿಂತನಾಗಿ ಇದ್ದ ಪ್ರಮೋದ್ ಮೇಲೆ ಬರಸಿಡಿಲೆರಗಿದಂತಾಯಿತು. ಅದೇನಾಯಿತೋ ಏನೋ., ಎರಡೇ ಎರಡು ದಿನ ಜ್ವರ ಬಂದು ಮಲಗಿದ ರಘು ಚಿಕ್ಕಪ್ಪ ಹೊರಟೆ ಹೋಗಿಯೇಬಿಟ್ಟರು. ಈಗ ಮನೆಯಲ್ಲಿ ದೀಪಕ್‌ನ ಇರುವಿಕೆಯ ಕುರಿತು ಯೋಚಿಸುತ್ತಾ ಹೋದ ಹಾಗೆ ಪ್ರಮೋದ್‌ಗೆ ರಾತ್ರಿ ನಿದ್ದೆ, ಹಗಲು ಶಾಂತಿ ಇಲ್ಲದಾಗಿ ಹೋಯಿತು. ಎಷ್ಟಾದರೂ ಈ ಹುಡುಗ ಮನೆಯಲ್ಲಿ ಜಗಳ ಮಾಡಿಕೊಂಡು ಹೆಂಡತಿ, ಮಕ್ಕಳನ್ನು ಸಹ ಬಿಟ್ಟು ಓಡಿ ಬಂದಿದ್ದಾನೆ. ದುಡಿಮೆಯೂ ಇಲ್ಲ, ಸಂಸಾರದ ಜವಾಬ್ದಾರಿಯು ಇಲ್ಲ. ಇಂದಲ್ಲ ನಾಳೆ ಮನೆಯ ಬೆಲೆಬಾಳುವ ವಸ್ತುಗಳನ್ನು ಎತ್ತಿಕೊಂಡು ಸದ್ದಿಲ್ಲದೆ ಪರಾರಿಯಾದರೆ...!' ಯೋಚಿಸುತ್ತಾ ಹೋದಹಾಗೆ ಪ್ರಮೋದ್‌ರ ಶರೀರ ನಡುಗಿ ಹೃದಯ ಕಂಪಿಸಿದಂತಾಯಿತು.

ಪ್ರತಾಪ್ ಜೊತೆ ತನ್ನ ತೊಳಲಾಟವನ್ನು ಹಂಚಿಕೊಂಡಾಗ ದೊಡ್ಡ ಉಪದೇಶವೇ ದೊರೆಯಿತು. “....ನೋಡಪ್ಪ., ಸಾಧ್ಯವಾದಷ್ಟು ಮಟ್ಟಿಗೆ ಬೆಲೆಬಾಳುವ ವಸ್ತುಗಳನ್ನೆಲ್ಲ ಲಾಕರ್ ಅಥವಾ ಕಪಾಟಿನಲ್ಲಿ ಇಟ್ಟು ಬೀಗ ಹಾಕು. ಆತನಿಗೆ ಯಾವ ಸೂಚನೆಯೂ ಸಿಗಬಾರದು. ಆತನ ಜೊತೆ ಮುಕ್ತವಾಗಿ ಮಾತಾಡುತ್ತಾ ಬೆರೆಯುವುದನ್ನು ಅಭ್ಯಾಸ ಮಾಡಿಕೋ. ದೀಪಕ್ ಇರುವ ಕಾರಣ ನಿನಗೆ ಹೊತ್ತು ಹೊತ್ತಿಗೆ ಸರಿಯಾಗಿ ಚಹಾ, ತಿಂಡಿ, ಊಟ ದೊರೆಯುತ್ತಿದೆ. ಅವನೂ ಇಲ್ಲ ಅಂದ್ರೆ ನೀನು ಒಬ್ಬನೇ ಏನು ಮಾಡುತ್ತೀಯಾ...?”

“...ನಮ್ಮ ಬಡಾವಣೆಯಲ್ಲಿ ತುಂಬಾ ಜನ ಮನೆಗೆ ಊಟ, ತಿಂಡಿ ತರಿಸಿಕೊಳ್ತಾರೆ. ನಾನೂ ಕೂಡ ಹಾಗೆ ಮಾಡ್ತೇನೆ. ಹೋಂ ಡೆಲಿವರಿ ವ್ಯವಸ್ಥೆ ಇರೋವಾಗ ಏನು ಚಿಂತೆ...”

“...ಅದ್ಸರಿ, ಆದ್ರೆ ಮನೆ ಕಸ ಗುಡಿಸೋದು, ಒರೆಸೋದು, ಬಟ್ಟೆ ತೊಳೆಯೋದು... ಜೊತೆಗೆ ಬೇರೆ ಕೆಲಸಗಳು ಇರುತ್ತವೆ ಅಲ್ವೇ...!” ಪ್ರತಾಪ್ ಪ್ರಶ್ನಿಸಿದರು.

“...ಅಯ್ಯೋ, ಈಗೇನು ಎಲ್ಲದಕ್ಕೂ ಮಷೀನ್ ಬಂದಿದೆ. ವಿದೇಶಗಳಲ್ಲಿ ಮಷೀನ್‌ಗಳಿಂದಲೇ ಕೆಲಸ ಮಾಡಿಸಿಕೊಳ್ತಾರೆ. ನಾನು ಹಾಗೆ ಮಾಡಿಕೊಳ್ತೇನೆ...”

“...ಇದ್ದಕ್ಕಿದ್ದ ಹಾಗೆ ಏನಾದ್ರೂ ಆರೋಗ್ಯ ಸಮಸ್ಯೆ ಆದ್ರೆ ಏನು ಮಾಡ್ತೀಯಾ ಪ್ರಮೋದ್...”

“...ನಿನ್ನಂಥ ಸ್ನೇಹಿತರು ಇರೋವಾಗ ಯೋಚನೆ ಯ್ಯಾಕೆ? ಫೋನ್ ಮಾಡಿದ್ರೆ ಹತ್ತೇ ನಿಮಿಷದಲ್ಲಿ ನೀನು ಹಾಜರಾಗಿ ಬಿಡ್ತೀಯಾ...” ಪ್ರತಾಪ್‌ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರು ಪ್ರಮೋದ್.

“...ನೋಡಪ್ಪ., ನೀನು ಯೋಚಿಸಿದಷ್ಟು ವಾಸ್ತವ ಸ್ಥಿತಿ ಸುಲಭವಾಗಿಲ್ಲ. ನಿನ್ನ ಅದೃಷ್ಟವೋ ಏನೋ, ಸದ್ಯ ನಿನಗೆ ಈ ದೀಪಕ್ ಸಿಕ್ಕಿದ್ದಾನೆ. ಅಲ್ಲ., ನೀನು ಅವನ ಹೆಂಡತಿ ಮಕ್ಕಳನ್ನು ಸಹ ಇಲ್ಲಿಗೇ ಯಾಕೆ ಕರೆಸಿಕೊಳ್ಳಬಾರದು? ಹಾಗೆ ಮಾಡಿದರೆ, ನೀನು ನಿಶ್ಚಿಂತೆಯಿಂದ ಇರಬಹುದಲ್ಲ...!”

“...ಛೀ... ಇದೆಲ್ಲಾ ಶುದ್ಧ ತಲೆ ಹರಟೆ ವಿಚಾರ...” ಪ್ರಮೋದ್ ಸಿಡಿಮಿಡಿಗೊಂಡರು.

“...ಈಗ ಒಬ್ಬನನ್ನೇ ಇಟ್ಟುಕೊಂಡು ತಲೆಗೆ ಹುಳ ಬಿಟ್ಟುಕೊಂಡ ಹಾಗೆ ಆಗಿದೆ. ಇನ್ನು ಅವನ ಪರಿವಾರವೇ ಬಂದುಬಿಟ್ಟರೆ ಕೇಳೋದೇ ಬೇಡ...”

“...ಯಾಕಪ್ಪ., ಅವನೇನಾದರೂ ಇಲ್ಲೀತನಕ ನೀನು ದೂರು ನೀಡುವ ಹಾಗೆ ನಡೆದುಕೊಂಡಿದ್ದಾನಾ...” ಪ್ರತಾಪ್ ಪ್ರಶ್ನಿಸಿದರು.

“...ಹಾಗೇನಿಲ್ಲ., ಆದರೆ ಆತ ಹೇಳಿಕೇಳಿ ಬಡವ. ಬಡತನದ ಸ್ಥಿತಿಯಲ್ಲಿ ಪ್ರಾಮಾಣಿಕತೆ ಸ್ಥಿರವಾಗಿರುತ್ತೆ ಎಂದು ಯಾವ ಗ್ಯಾರಂಟಿ...? ನಿರ್ಗತಿಕತೆ ಮನುಷ್ಯನನ್ನು ಬಹಳ ಬೇಗ ಅಪರಾಧಿಯನ್ನಾಗಿ ಮಾಡಿಬಿಡುತ್ತದೆ. ನನ್ನ ಮನೆಯಲ್ಲಿ ಎಷ್ಟು ಬೆಲೆಬಾಳುವ ವಸ್ತುಗಳು ಇವೆ. ಅವುಗಳು ಎಲ್ಲೆಲ್ಲಿ ಇವೆ ಎಂಬುದು ನನಗೇ ಸರಿಯಾಗಿ ನೆನಪಿಲ್ಲ. ಹಾಗಾಗಿ ಈ ದೀಪಕ್‌ನನ್ನು ನಂಬೋದು ಹೇಗೆ? ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಆಗಾಗ ಏಳುತ್ತದೆ. ಹೇಳಿ, ಕೇಳಿ ಸಂಸಾರವನ್ನೇ ಬಿಟ್ಟು ಓಡಿ ಬಂದಿರೋ ಇವನಿಗೆ ಯಾವ ಜವಾಬ್ದಾರಿ ತಾನೆ ಇರುತ್ತೆ...? ನಾನು ಸಹ ಮನೆಯಲ್ಲಿ ಎಲ್ಲಾ ಸಮಯದಲ್ಲಿಯೂ ಇರೋದಿಲ್ಲ. ಒಂದೊಂದೇ ವಸ್ತುಗಳು ಕಾಣೆಯಾಗಲಾರಂಭಿಸಿದರೆ...?” ರಿಟೈರ್ ಮೆಂಟ್ ಆದ ಮೇಲಂತೂ ಅದೂ ಇದೂ ಅಂತ ಸಾಮಾನುಗಳನ್ನು ತಂದು ತುಂಬಿಸಿದ್ದೇನೆ.

“...ದೀಪಕ್ ಅಪ್ರಮಾಣಿಕನಾಗಲಾರ ಎಂದು ನನಗನಿಸುತ್ತೆ. ಇದನ್ನು ನನ್ನ ಅನುಭವದಿಂದ ಹೇಳ್ತಾ ಇದ್ದೇನೆ. ಒಬ್ಬ ಮನುಷ್ಯನನ್ನು ಅಳೆಯೋದಕ್ಕೆ ಹೆಚ್ಚು ಸಮಯ ಬೇಕಾಗೋದಿಲ್ಲ...”

“...ಆದ್ರೆ ಬಡತನ ಮನುಷ್ಯನನ್ನು ಯಾವ ಹಂತಕ್ಕೆ ಬೇಕಾದರೂ ಇಳಿಸಿಬಿಡುತ್ತೆ. ಆತನಿಗೆ ಊರಿನಲ್ಲಿ ಎರಡು ಚಿಕ್ಕ ಕೋಣೆಗಳ ಒಂದು ಮುರುಕಲು ಮನೆ ಬಿಟ್ಟರೆ ಮತ್ತೇನಿದೆ? ನಾನು ಅವನನ್ನು ನನ್ನ ಮನೆಯಲ್ಲಿ ಇರಲು ಹೇಳಿ ತಪ್ಪು ಮಾಡಿದೆ...” ಪ್ರಮೋದ್ ಒಂದೇ ಉಸಿರಿಗೆ ಹೇಳಿದರು.

“...ದಯವಿಟ್ಟು ಈ ಯುವಕನ ಬಗ್ಗೆ ವಿನಾಕಾರಣ ಸಂಶಯ ಪಡಬೇಡ ಪ್ರಮೋದ್...” ಪ್ರತಾಪ್ ವಿನಂತಿಯ ಸ್ವರದಲ್ಲಿ ಹೇಳಿದ.

“...ನಾನು ಅವನ ಬಡತನದ ಬಗ್ಗೆ ಸಂಶಯ ಪಡುತ್ತಿದ್ದೇನೆ. ದೀಪಕ್ ನನ್ನ ಮನೆಯಲ್ಲಿ ಇರೋತನಕ ನನಗೆ ನೆಮ್ಮದಿ ಸಿಗೋದಿಲ್ಲ. ಯಾವೆಲ್ಲ ವಸ್ತುಗಳು ಅಂತ ನಾನು ಬೀಗ ಹಾಕಿ ಇಡಲಿ? ನನ್ನ ಟೇಬಲ್ ಮೇಲೆ ಇರುವ ಒಂದೊಂದು ಪೆನ್‌ಗಳು ಕೂಡ ಬೆಲೆಬಾಳುವಂಥವು...”

“...ಹಾಗಿದ್ದರೆ ದೀಪಕ್ ನನ್ನು ಮನೆಯಿಂದ ಹೊರಗೆ ಹಾಕಿಬಿಡು...” ಒಂದು ದಿನ ಪ್ರತಾಪ್ ಉದ್ವಿಗ್ನ ವಾಗಿ ಹೇಳಿದರು.

“...ಅದೇ ಸರಿ., ಇಂದೇ ಆತನನ್ನು ಮನೆಯಿಂದ ಹೊರಗೆ ಹೋಗಲು ಹೇಳ್ತೇನೆ...”

ಅದೇ ದಿನ ಸಂಜೆ ಪ್ರಮೋದ್ ದೀಪಕ್ ನನ್ನು ಕರೆದು ಹೇಳಿದ “...ದೀಪಕ್ ನೀನು ಇಲ್ಲಿ ಇರೋದ್ರಿಂದ ನನ್ನ ನೆಮ್ಮದಿಗೆ ಯಾಕೋ ಕಿರಿಕಿರಿ ಅನ್ನಿಸ್ತಾ ಇದೆ. ಬೇಸರ ಮಾಡ್ಕೋಬೇಡ. ನೀನು ನಿನ್ನ ಹಳ್ಳಿಗೆ ಹಿಂತಿರುಗಿ ಹೋಗೋದು ಒಳ್ಳೆಯದು ಅಥವಾ ಅದು ಸಾಧ್ಯ ಆಗೋದಿಲ್ಲ ಅಂದ್ರೆ ಬೇರೆ ಎಲ್ಲಾದರೂ ವ್ಯವಸ್ಥೆ ಮಾಡಿಕೊ...”

“...ನೀವು ನೇರವಾಗಿ ಹೇಳಿ ತುಂಬಾ ಒಳ್ಳೆಯದು ಮಾಡಿದ್ರಿ ಅಂಕಲ್, ಒಂದೆರಡು ದಿನದಲ್ಲೇ ನಾನು ಇಲ್ಲಿಂದ ಹೊರಟು ಹೋಗ್ತೇನೆ. ಹಾಗೇನೆ ನಿಮಗೆ ಸಾಧ್ಯವಾದರೆ ನನಗೆ ಬೇರೆ ಎಲ್ಲಾದರೂ ಒಂದು ಕೆಲಸ ಹುಡುಕಿಕೊಡಿ...” ದೀಪಕ್ ವಿನಮ್ರವಾಗಿ ಹೇಳಿದ.

***

ಪ್ರಮೋದ್ ಮನೆಯಲ್ಲಿ ದೀಪಕ್‌ಗೆ ಈ ರಾತ್ರಿ ಕೊನೆಯದಾಗಿತ್ತು. ನಾಳೆ ಬೆಳಗ್ಗೆ ಆತ ಹೊರಡುವವನಿದ್ದ.
ಬೆಳಗ್ಗೆ ಪ್ರಮೋದ್ ಸ್ನಾನ ಮುಗಿಸಿ ಬಾತ್ ರೂಂನಿಂದ ಹೊರಬಂದವನಿಗೆ ಆಯಾಸವಾದಂತಾಗಿ ತಲೆ ತಿರುಗಲಾರಂಭಿಸಿತು. ಹೊಯ್ದಾಡುತ್ತಾ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡ. ಸಂಯೋಗವಶಾತ್ ದೀಪಕ್ ಅಲ್ಲಿಯೇ ಇದ್ದ.

ಪ್ರಜ್ಞೆ ಬಂದಾಗ ಪ್ರಮೋದ್ ಆಸ್ಪತ್ರೆಯೊಂದರ ಹಾಸಿಗೆ ಮೇಲೆ ಮಲಗಿದ್ದ. ಆತನ ಮಸುಕು ಮಸುಕಾದ ದೃಷ್ಟಿಗೆ ಡಾಕ್ಟರ್, ನರ್ಸ್ ಮತ್ತು ಪ್ರತಾಪ್ ಕಾಣಿಸಿದರು. ಅಂತಹ ಸ್ಥಿತಿಯಲ್ಲಿಯೂ ಆತನಿಗೆ ‘ದೀಪಕ್ ಮನೆಯಲ್ಲಿಯೇ ಇದ್ದರೆ...!’ ಎಂದು ಅನಿಸದೇ ಇರಲಿಲ್ಲ.

ಹೆಚ್ಚು ಯೋಚಿಸಲು, ಮಾತಾಡಲು ಸಮಯ ಇರಲಿಲ್ಲ. ಡಾಕ್ಟರ್ ಪರೀಕ್ಷೆಗೆ ತಯಾರಾದರು. ದೀರ್ಘ ತಪಾಸಣೆ ನಂತರ ಡಾಕ್ಟರ್ ಪ್ರತಾಪನನ್ನು ಕರೆದು ತಿಳಿಸಿದರು ಪೇಷಂಟ್‌ನ ಕಿಡ್ನಿ ಪೇಲ್ ಆಗುವ ಸ್ಥಿತಿಯಲ್ಲಿದೆ. ಕಿಡ್ನಿಯ ಮರುಜೋಡಣೆ ಆಗಬೇಕಿದೆ. ತಡ ಮಾಡೋ ಹಾಗಿಲ್ಲ...” ಎಂದರು.

ಸಾಕಷ್ಟು ಶ್ರೀಮಂತಿಕೆ ಜೊತೆಗೆ ಪ್ರತಾಪ್ ನಂತಹ ಪ್ರಾಣಮಿತ್ರ ಇರೋವಾಗ ಚಿಕಿತ್ಸೆಗೆ ಎಷ್ಟು ಖರ್ಚಾದರೂ ಪ್ರಮೋದ್‌ಗೆ ಏನೂ ಚಿಂತೆ ಇರಲಿಲ್ಲ ಆದರೆ ಕಿಡ್ನಿಗೆ ತುಂಬಾ ಬೇಡಿಕೆ ಇದ್ದುದ್ದರಿಂದ ಪ್ರಮೋದ್‌ಗೆ ಕಿಡ್ನಿ ಕೊಂಡುಕೊಳ್ಳಲು ಕನಿಷ್ಠ ಕೆಲವು ತಿಂಗಳಾದರೂ ಕಾಯಬೇಕಾದ ಮಾಹಿತಿ ದೊರೆಯಿತು. ಆದರೆ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಡಯಾಲಿಸಿಸ್‌ನಿಂದಲೂ ಹೆಚ್ಚು ಸಮಯ ಮುಂದೂಡಲು ಸಾಧ್ಯವಿಲ್ಲ ಎಂದು ಡಾಕ್ಟರ್ ಎಚ್ಚರಿಸಿದರು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಪ್ರಮೋದ್ ಚಡಪಡಿಸಲಾರಂಭಿಸಿದ್ದರು.

***

ಸಕಾಲಕ್ಕೆ ಕಿಡ್ನಿ ದೊರೆತು ಜೋಡಣೆಯೂ ಯಶಸ್ವಿಯಾಯಿತು. ಎಲ್ಲವೂ ಪವಾಡದ ರೀತಿಯಲ್ಲಿ ನಡೆದುಹೋದದಕ್ಕೆ ಪ್ರಮೋದ್ ಆಶ್ಚರ್ಯ ಚಿಕಿತನಾಗಿದ್ದರು.

“...ಕಿಡ್ನಿ ಇಷ್ಟು ಬೇಗ ಹೇಗೆ ದೊರೆಯಿತು...?” ಪ್ರಮೋದ್ ಉದ್ವಿಗ್ನತೆ ತಡೆಯಲಾರದೆ ಪ್ರತಾಪ್ ರನ್ನು ಕೇಳಿದರು.

“...ಅಲ್ಲಪ್ಪಾ! ಮಾವಿನ ಹಣ್ಣು ತಿಂದು ಆದಮೇಲೆ ಅದರ ಗೊರಟೆ ಬಗ್ಗೆ ಯೋಚನೆ ಯಾಕೆ...?” ಪ್ರತಾಪ್ ಮಾರ್ಮಿಕವಾಗಿ ಹೇಳಿದರು.

ಈ ಉತ್ತರದಿಂದ ಪ್ರಮೋದ್ ಸುಮ್ಮನಾದರೂ ದೀಪಕ್ ಕಾಣದೇ ಇರುವ ಬಗ್ಗೆ ಕೇಳದೇ ಇರಲಾಗಲಿಲ್ಲ.
“...ಅದು ಸರಿ., ದೀಪಕ್ ಎಲ್ಲಿ ಕಾಣಿಸ್ತಾನೆ ಇಲ್ಲವಲ್ಲ...!”

ಪ್ರತಾಪ್ ಕೇಳಿಸಿಯೂ ಕೇಳಿಸದವರ ಹಾಗೆ ಕುರ್ಚಿಯಿಂದ ಎದ್ದುಬಂದು ಕೇಳಿದರು “...ಆಂ., ಏನು ತೊಂದರೆ? ಡಾಕ್ಟರ್‌ರನ್ನು ಕರೆಸಬೇಕೆ...?”

“...ಇಲ್ಲ. ಬೇಡ. ನನಗೆ ದೀಪಕ್ ನ ಬಗ್ಗೆ ತಿಳಕೋಬೇಕು...”

“...ಏನು ತಿಳಿಕೋಬೇಕು...?”

“...ಅದೇ., ಅವನು ಇನ್ನೂ ಮನೆಯಲ್ಲಿಯೇ ಇದ್ದಾನಾ...?”

“...ಇಲ್ಲ. ಒಂದೆರೆಡು ದಿನದ ಮಟ್ಟಿಗೆ ಮನೆಯ ಕಾವಲಿಗೆ ನಾನು ಬೇರೆಯವರಿಗೆ ಹೇಳಿ ಬಂದಿದ್ದೇನೆ...”

“...ಅಂದ್ರೆ., ಅವನು ಮನೆ ಬಿಟ್ಟು ಹೋದನೇ...? ಮನೆಯ ಸಾಮಾನುಗಳೆಲ್ಲ ಸುರಕ್ಷಿತವಾಗಿದ್ದಾವೆ ತಾನೆ...? ಅಂತೂ ನನ್ನ ಸಂಶಯ ನಿಜ ಆದ ಹಾಗೆ ಆಯ್ತು...” ಪ್ರಮೋದ್ ಒಂದೇ ಉಸಿರಿಗೆ ಹೇಳಿದ.

“...ಪ್ರಮೋದ್., ಸುಮ್ಮನೆ ಆ ಹುಡುಗನ ಬಗ್ಗೆ ಸಂಶಯ ಪಡಬೇಡ...”

“...ಮನೆಯಲ್ಲಿ ಇರಿಸಿಕೊಂಡಿದ್ದ ನನಗೆ ಆ ದೀಪಕ್ ಎಂಥವನು ಅಂತ ಗೊತ್ತಿದೆ ಪ್ರತಾಪ್...”

“...ಅವನು ನೀನು ತಿಳಿದಿರುವವಂಥ ಹುಡುಗ ಅಲ್ಲ...” ಪ್ರತಾಪ್ ರೇಗಿದ.

“...ಹಾಗಿದ್ದರೆ ಅವನು ಈಗ ಇಲ್ಲಿ ಇರಬೇಕಾಗಿತ್ತಲ್ಲವೆ? ಎಲ್ಲಿದ್ದಾನೆ ಮತ್ತೆ...? ಹೇಳು ಪ್ರತಾಪ್...”

“...ಪಕ್ಕದ ವಾರ್ಡ್ನಲ್ಲಿದ್ದಾನೆ. ನಿನಗೆ ಒಂದು ಕಿಡ್ನಿಯನ್ನು ಅವನೇ ನೀಡಿದ್ದು. ಈಗ ಚಿಕಿತ್ಸೆ ಪಡೆಯುತ್ತಿದ್ದಾನೆ...”

“ಆಂ...!” ಎಂದಷ್ಟೇ ಉದ್ಗರಿಸಲು ಸಾಧ್ಯವಾಯಿತು ಪ್ರಮೋದ್‌ರಿಗೆ. ಒಂದು ಕ್ಷಣ ಮೌನಕ್ಕೆ ಜಾರಿದರು ಪ್ರಮೋದ್.

ಪ್ರಮೋದ್‌ನ ಮೌನಕ್ಕೆ ಸಾಗರದ ಒಂದು ತಣ್ಣನೆಯ ಹನಿ ಸೇರಿ ಹೋದಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.