ADVERTISEMENT

ಕಥೆ | ಚೌಡಕಿ ತಾಯವ್ವ

ಪ್ರಜಾವಾಣಿ ವಿಶೇಷ
Published 6 ಮೇ 2023, 22:25 IST
Last Updated 6 ಮೇ 2023, 22:25 IST
   

ಶ್ರೀಧರ ಗಸ್ತಿ ಧಾರವಾಡ

ಉಧಗಾಯಿ ಉಧ ಉಧ ಉಧ, ತಾಯಿ ಎಲ್ಲವ್ವ ನಿನ್ನ ಪಾದಕ ಉಧೋ ಉಧೋ ಉಧೋ ಎಂಬ ಉದ್ಘೋಷದೊಂದಿಗೆ ಕೋಟಿ ಕೋಟಿ ಜನ ಭಕ್ತರ ಮಾನಸದೇವ್ರು ಅಂದ್ರೆ ತಾಯಿ ಎಲ್ಲವ್ವ. ಉಗರಖೋಡದ ಕರಿಯ ಮತ್ತು ಹೆಂಡತಿ ಕೆಂಪಿ ಮದುವೆಯಾಗಿ ಹತ್ತು ವರ್ಷ ಆದ್ರು ಮಕ್ಕಳಾಗಿಲ್ಲ. ಮಕ್ಕಳ ಕೊಡವ್ವ ತಾಯೇ, ಹೆಣ್ಣು ಹುಟ್ಟಿದ್ರೆ ಮುತ್ತ ಕಟ್ಟಸ್ತಿನಿ ಅಂತಾ ಬೇಡಿಕೊಂಡು ಹುಟುಗಿ ಉಟ್ಟು, ದೀಡ ನಮಸ್ಕಾರ ಹಾಕಿದರು. ಜೋಗಮ್ಮಂದಿರು ಚೌಡಕಿ ಪದ ಹೇಳಿದರು. ಆ ಚೌಡಕಿ ಭಕ್ತಿ ಪದಗಳ ನಿನಾದದ,ಮಧ್ಯೆ ತಾಯಿ ಎಲ್ಲವ್ವಳ ಉದ್ಘೋಷಣೆ, ಕರಿಯನ ಬಾಳಲ್ಲಿ ಬೆಳಕನ್ನು ತುಂಬಿತ್ತು. ಕಾಕತಾಳೀಯ ಎನ್ನುವಂತೆ ರ‍್ಷದೊಳಗೆ ಕರಿಯನ ಮನೆಯಲ್ಲಿ ಸಂಭ್ರಮ, ಹೆಂಡತಿ ಕೆಂಪಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ತಾಯಿ ಯಲ್ಲವ್ವ ಕರುಣಿಸಿದ ಹರಕೆಯ ಕೂಸದು ಎಂದು ಸಂಭ್ರಮಿಸಿದರು. ಜೋಗಮ್ಮಂದಿರ ಚೌಡಕಿ ಪದಗಳು, ಜೋಗುಳಿ ಪದಗಳ ಸಂಭ್ರಮದೊಂದಿಗೆ ಹರಕೆ ತೀರಿದ್ದಕ್ಕಾಗಿ ಪಡ್ಡಲಗಿ ತುಂಬಿಸಿ, ಕೂಸಿಗೆ 'ತಾಯವ್ವ' ಎಂದು ನಾಮಕರಣ ಮಾಡಿದರು.

ತಾಯವ್ವ ಹೆಸರಿಗೆ ತಕ್ಕಂತೆ ಗೌರವರ್ಣದ ಚೆಲುವೆ. ಬೆಳೆದಂತೆಲ್ಲ ಮೈಕೈ ತುಂಬಿಕೊಂಡು ಯೌವನಕ್ಕೆ ಕಾಲಿಡುವ ಹೊತ್ತಿಗೆ ತನ್ನ ತಂದೆ ತಾಯಿಯನ್ನು ಕಳೆದುಕೊಂಡಿದ್ದಳು. ದೂರದ ಸಂಬಂಧಿ ಸುಂದ್ರಮ್ಮಳ ಆಶ್ರಯದಲ್ಲಿ ಬೆಳೆಯತೊಡಗಿದಳು. ಸುಂದ್ರಮ್ಮಳ ಒಳ್ಳೆಯ ಒಡನಾಟ ಅವಳಿಗೆ ಯಾವ ಕೊರತೆಯನ್ನೂ ತರಲಿಲ್ಲ. ಅನಾಥ ಪ್ರಜ್ಞೆಯ ಸೋಂಕು ತಾಗದಂತೆ ಜೋಪಾನ ಮಾಡಿದಳು. ಅನಾಥ ಪ್ರಜ್ಞೆ ಕಾಡದಿರಲೆಂದು ಎಲ್ಲರೂ ಮುದ್ದು ಮಾಡುವವರೇ, ಉಣ್ಣುವಾಗ ಎಲ್ಲರ ಕೈತುತ್ತು ಅನಿವಾರ್ಯವಾಗಿತ್ತು. ಹಬ್ಬ ಹರಿದಿನ, ಜಾತ್ರೆ, ಮದುವೆ,ಹುಟ್ಟು ಹಬ್ಬದ ಸಮಾರಂಭಗಳಲ್ಲಿ ತಾಯವ್ವಳಿಗೆ ಹೊಸ ಲಂಗ ಫ್ರಾಕು ತಪ್ಪುತಿರಲಿಲ್ಲ. ಬೆಳೆದಂತೆಲ್ಲ ಹೆಚ್ಚಿನ ಜವಾಬ್ದಾರಿ ಸುಂದ್ರಮ್ಮಳ ಹೆಗಲಿಗೆ ವರ್ಗಾವಣೆಯಾಗಿತ್ತು.

ADVERTISEMENT

ತಾಯವ್ವ ಬೆಳೆದಂತೆಲ್ಲ ಊರ ಹರೆಯದ ಹೈಕಳ ಕಣ್ಣು ಬೀಳಲಾರಂಭಿಸಿತು. ಶಾಲೆಗೆ ಹೋಗುವಾಗ ಬರುವಾಗ ಗೋಳು ಹೊಯ್ಯುವವರ ಸಮಸ್ಯೆ, ಸಂಕುಚಿತ ಸ್ವಭಾವದ ತಾಯವ್ವಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಹೀಗಾಗಿ ಸಾಲಿ ಅಷ್ಟಕ್ಕಷ್ಟೇ ಎನ್ನುವಂತಾಯಿತು. ತಾಯವ್ವಳ ಸರಳ ಸೌಂದರ್ಯ, ಯೌವನ, ಕಣ್ಣು ಕುಕ್ಕುವಂತಿತ್ತು. ನೆರೆಹೊರೆಯವರೆಲ್ಲ ಸೇರಿ ತಾಯವ್ವಳ ಮದುವೆ ಮಾಡುವ ಪ್ರಸ್ತಾಪ ಸುಂದ್ರಮ್ಮಳ ಮುಂದಿಟ್ಟರು. ಸುಂದ್ರಮ್ಮ ಅದೇಕೋ ಏನನ್ನೂ ಮಾತನಾಡದೇ ಮೌನಿಯಾದಳು. ಆಕೆಯ ಮೌನ ತಾಯವ್ವಳಿಗೆ ಬೆಳಕಾಗುವುದೇನೋ ಎಂಬ ಭಾವ ನೆರೆಹೊರೆಯವರದಾಗಿತ್ತು.

ಸುಂದ್ರಮ್ಮಳ ವಿಚಾರವೇ ಬೇರೆಯದಾಗಿತ್ತು. ಊರ ಗೌಡರ ಒಡನಾಡಿಯಾಗಿದ್ದ ಸುಂದ್ರಮ್ಮ, ಗೌಡನ ಮಗ ಒಡ್ಡಿದ ಹಣದ ದುರಾಸೆಗೆ ತಾಯವ್ವಳನ್ನು ಬಲಿಕೊಡಲು ಉಪಾಯ ಮಾಡಿದ್ದಳು. ಹೇಗೂ ಅವರವ್ವ ಅಪ್ಪನ ಆಸೆಯಂತೆ ತಾಯವ್ವಳಿಗೆ ಮುತ್ತು ಕಟ್ಟಿಸಿದರೆ, ನನ್ನ ಜವಾಬ್ದಾರಿ ಮುಗೀತು ಎಂದು ಒಂದೇ ಏಟಿನಲ್ಲಿ ಎರಡು ಹಕ್ಕಿಗೆ ಕಲ್ಲೊಡೆದು ಕೈ ತೊಳೆದುಕೊಳ್ಳಲು ತಯಾರಿಯಲ್ಲಿದ್ದ ಸಂದ್ರಮ್ಮಳ ಕನಸಿಗೆ ಓಣಿಯ ಯುವಕರು ಅಡ್ಡಗಾಲಾಗಿದ್ದರು. ವಿಷಯ ಗೊತ್ತಾದ ಯುವಕರು ಸುಂದ್ರಮ್ಮಳಿಗೆ ಚಳ್ಳೆ ಹಣ್ಣು ಬಿಡಿಸಲು ಕಾಯುತಿದ್ದರು. ‘ತಾಯವ್ವ’ ನಿನಗಷ್ಟೇ ಮಗಳಲ್ಲ ಅವಳು ನಮಗೂ ಮಗಳೇ. ನಾವೂ ಅವಳಿಗೆ ಉಣಿಸಿದ್ದೇವೆ ತಿನಿಸಿದ್ದೇವೆ. ಅವಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅವರವ್ವ ಯಾವುದೋ ಹೊತ್ತಿನಲ್ಲಿ ಬೇಡಿಕೊಂಡಿದ್ದನ್ನು ನಾವು ಒಪ್ಪುವುದಿಲ್ಲ. ಅದು ಕಾನೂನಿಗೆ ವಿರುದ್ಧವಾದದ್ದು. ದೇವದಾಸಿ ಪದ್ಧತಿ ಯಾವಾಗಲೋ ನಿಂತು ಹೋಗಿದೆ. ಎಲ್ಲವ್ವತಾಯಿ ಇದನ್ನೆಲ್ಲ ಮಾಡ್ರಿ ಅಂತ ಹೇಳೋದಿಲ್ಲ. ಮನುಷ್ಯ ತನ್ನ ಸ್ವರ‍್ಥಕ್ಕಾಗಿ ಮಾಡಿಕೊಂಡ ವ್ಯವಸ್ಥೆ ಇದು. ಇಷ್ಟೆಲ್ಲ ಹೇಳಿದಾಗ್ಯೂ ತಾಯವ್ವಳಿಗೆ ಮುತ್ತು ಕಟ್ಟಿಸಿದರೆ ನಿನ್ನ ಮೇಲೆ ದೂರು ಕೊಡಬೇಕಾಗುತ್ತದೆ ಎಂದು ಸುಂದ್ರಮ್ಮಳನ್ನು ಎಚ್ಚರಿಸಿದ್ದರು. ಇದಾವುದರ ಪರಿವೇ ಇಲ್ಲದ ತಾಯವ್ವ ಅಪಾಯದ ಕಕ್ಷೆಯಲ್ಲಿದ್ದಳು. ಬೂದಿಯೊಳಗಿನ ಕೆಂಡದಂತೆ ದಿನದಿಂದ ದಿನಕ್ಕೆ ಒಬ್ಬರೂ ಮತ್ತೊಬ್ಬರನ್ನು ದೂರುವುದು, ಏಟು ಎದಿರೇಟಿನ ಮಾತಿನ ತಾಕಲಾಟಗಳು ನಡೆಯುತ್ತಿದ್ದವು. ಇದೆಲ್ಲವೂ ತನ್ನ ಸಲುವಾಗಿಯೇ ಎಂಬುದು ಗೊತ್ತಾಗಿ ತಾಯವ್ವಳ ಮನಸ್ಸು ಗಾಸಿಯಾಗಿತ್ತು. ಸೂಕ್ಷ್ಮಮತಿಯಾದ ತಾಯವ್ವ ತನ್ನ ಸಲುವಾಗಿ ಈ ಯಾವ ಜಗಳ, ಪೋಲೀಸ್ ಕೇಸು ಆಗೋದೇ ಬೇಡವೆಂದು ನಿರ್ಧರಿಸಿದ್ದಳು.

ಸುಂದ್ರಮ್ಮ ಎಂದಿನಂತೆ, ಏ ತಾಯವ್ವ ಕಸ ಗೂಡ್ಸೇಳ ಎಷ್ಟೊತ್ತ ಮಕ್ಕೋತಿ... ಅಂತ ಮೂರು ನಾಲ್ಕು ಬಾರಿ ಕರೆದರೂ ಓಗೊಡದೇ ಇದ್ದಾಗ, ತಾಯವ್ವಳ ಕೋಣೆಯತ್ತ ಧಾವಿಸುತ್ತಾಳೆ. ತಾಯವ್ವ ಮಲಗುವ ಕೋಣೆ ಬಾಗಿಲು ತೆರೆದಿದೆ ಆದರೆ ತಾಯವ್ವ ಇಲ್ಲ. ಸುಂದ್ರಮ್ಮ, ಸ್ವಲ್ಪೊತ್ತು ಆಕಡೆ ಈಕಡೆ ನೋಡುತ್ತಾಳೆ, ವಿಚಾರಿಸುತ್ತಾಳೆ. ಅವಳು ಅಲ್ಲಿ ಎಲ್ಲಿಯೂ ಕಾಣದಿದ್ದಾಗ ಗಾಬರಿಯಾಗುತ್ತದೆ. ಅಳುತ್ತಾಳೆ, ಕಿರುಚುತ್ತಾಳೆ. ನೆರೆಹೊರೆಯವರೆಲ್ಲ ಸೇರುತ್ತಾರೆ. ಮರುಗುತ್ತಾರೆ, ದಿಕ್ಕಿಲ್ಲದ ಪರದೇಶಿ ಮಗಳು ಎಲ್ಲಿ ಹೋತೋ ಏನಾತೋ ಎಂದು ಹಲಬುತ್ತಾರೆ. ರೋದಿಸುತ್ತಾರೆ. ಸುಂದ್ರಮ್ಮಳ ರೋದನೆ ಮುಗಿಲು ಹರಿದು ಬೀಳುವಂತೆ ಜೋರಾಗಿತ್ತು. ‘ಎಷ್ಟೊಂದು ಚೆಂದಾಗಿ ಬೆಳಸಿದ್ನಲ್ಲೇ ಮೂದೇವಿ ಎಲ್ಲಿ ಹೋದೆ, ನನ್ನ ಜೀವನ ಹಾಳ ಮಾಡಿದೆಲ್ಲೆ, ನನ್ನ ಕೈಗೆ ಬಂದ ತುತ್ತು ಬಾಯಿಗಿ ಬರದಂಗ ಮಾಡಿದೆಲ್ಲೆ’ ಅಂತಾ ತನ್ನ ಮನದಾಳದ ನೋವುಗಳನ್ನು ತೋಡಿಕೊಳ್ಳುತ್ತಿದ್ದಳು.

ತಾಯವ್ವ ಏನಾದಳು? ಏನೊಂದು ಅರಿಯದ ಸಣ್ಣ ಹುಡುಗಿ ಅದೆಲ್ಲಿ ಹೋದಳು? ಅನಾಥ ಪ್ರಜ್ಞೆ ಕಾಡಿತೆ? ಅಥವಾ ಯಾರಾದರೂ ಕಿಡ್ನಾಪ್ ಮಾಡಿದರೆ? ಹೀಗೆ ಏನೆಲ್ಲಾ ಕಲ್ಪಿಸಿಕೊಳ್ಳಬಹುದಿತ್ತೋ ಅದೆಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಬಂದು ಹೋಗಿತ್ತು. ಕ್ಷಣಮಾತ್ರದಲ್ಲಿ ತಾಯವ್ವ ಕಾಣೆಯಾದ ಸುದ್ದಿ ಓಣಿ ಓಣಿಗಳ ಮಾತಾಗಿತ್ತು. ಊರೆಲ್ಲಾ ಗುಲ್ಲೋ ಗುಲ್ಲು, ಎಲುಬಿಲ್ಲದ ನಾಲಗೆಗೆ ವಿಷಯ ವಸ್ತು ಏನೆಲ್ಲಾ ಮಾತನಾಡಿಸಿತ್ತು. ಊರಿನ ಹಿರಿ ಕಿರಿಯರಾದಿಯಾಗಿ ಅವಳನ್ನು ಹುಡುಕದ ಜಾಗ ಒಂದೂ ಉಳಿಯಲಿಲ್ಲ. ಪೋಲೀಸ್ ಕೇಸನ್ನೂ ದಾಖಲಿಸಲಾಯಿತು. ಊರ ಗೌಡನ ಮಗನ ಸುತ್ತಲೂ ಸಂಶಯದ ಗಿರಕಿ ಹೊಡೆದು ಅದೂ ಸುಳ್ಳಾಯಿತು. ಸಂಬಂಧಿಕರ ಸಾವನ್ನೇ ಮೂರು ದಿನಕ್ಕೆ ಮೊಟಕುಗೊಳಿಸುವ ನಮ್ಮ ಜನ, ಪರದೇಶಿಯಾದ ತಾಯವ್ವಳನ್ನು ಮರೆಯುವುದು ದೊಡ್ಡ ವಿಷಯವೇನಲ್ಲ. ತಾಯವ್ವ ತಾನು ಹುಟ್ಟಿ ಬೆಳೆದ ಮನೆ, ಊರು ಕೇರಿ ಬಿಟ್ಟು ಜನರ ಮನಸ್ಸಿನಿಂದ ತುಂಬಾ ದೂರವಾಗಿದ್ದಳು.

ಅಂದು ನಸುಕಿನ ಜಾವ ತಾಯವ್ವ ತನ್ನ ಬಟ್ಟೆ ಬರೆಯನ್ನೆಲ್ಲ ಒಂದು ಗಂಟು ಮೂಟೆಯಲ್ಲಿ ಕಟ್ಟಿಕೊಂಡು, ಅವ್ವ ಅಪ್ಪನನ್ನು ನೆನೆಸಿಕೊಂಡು, ತನ್ನ ಜನ್ಮಕ್ಕೆ ಆಶ್ರಯ ನೀಡಿ, ಆಡಿ,ಹಾಡಿ ಬೆಳೆದ ಮನೆಯನ್ನು ಕಣ್ತುಂಬಿಸಿಕೊಂಡು ಭಾರವಾದ ಹೆಜ್ಜೆಹಾಕುತ್ತಾ ಬಾಗಿಲನ್ನು ಮುಂದೆ ಮಾಡಿಕೊಂಡು, ಗೊತ್ತು ಗುರಿಯಿಲ್ಲದ ದಾರಿಯತ್ತ ವೇಗದ ಹೆಜ್ಜೆ ಹಾಕಿ ಮರೆಯಾಗಿ ಹೋದಳು. ಕಾಲ ಗತಿಸಿದಂತೆ ಜನ ಸ್ವಾಭಾವಿಕವಾಗಿ ಎಲ್ಲವನ್ನು ಮರೆತು ತಮ್ಮ ನಿತ್ಯ ಜೀವನದಲ್ಲಿ ತೊಡಗಿಕೊಂಡಿದ್ದರು. ತಾಯವ್ವ ಆ ಊರಿನ ಜನಮಾನಸದಿಂದ ದೂರವಾಗಿದ್ದಳು. ಸುಮಾರು ಹದಿನೈದಿಪ್ಪತ್ತು ವರ್ಷಗಳು ಕಳೆದಾದ ಮೇಲೆ ಉಗರಖೋಡದ ಜನರಿಗೆ ಒಂದು ಸೋಜಿಗ ಕಾದಿತ್ತು. ಆಕಾಶವಾಣಿ ಧಾರವಾಡ ನಿಲಯದಿಂದ ಸಂಜೆ 7 ಗಂಟೆಗೆ ಪ್ರಸಾರವಾಗುವ ಚೌಡಕಿ ಪದಗಳ ಕರ‍್ಯಕ್ರಮದಲ್ಲಿ ‘ಉಗರಖೋಡದ ಚೌಡಕಿ ತಾಯವ್ವ ಹಾಗೂ ಸಂಗಡಿಗರಿಂದ ಚೌಡಕಿಯ ಪದಗಳನ್ನು ಕೇಳಿರಿ’ ಎಂಬ ಅಚಾನಕ್ಕಾದ ಪ್ರಕಟಣೆಯ ಸುದ್ದಿ, ರೇಡಿಯೋ ಕೇಳುತಿದ್ದ ಕೆಲವು ಜನರನ್ನು ಆಶ್ಚರ್ಯ ಚಕಿತರನ್ನಾಗಿಸಿತ್ತು. ಕಳೆದುಹೋದ ತಾಯವ್ವಳನ್ನು ನೆನಪಿಸಿಕೊಳ್ಳುತ್ತ ಚೌಡಕಿ ಪದಗಳನ್ನು ಕೇಳಿದವರು ಊರ ತುಂಬಾ ಸುದ್ದಿ ಮಾಡಿದ್ದರು. ಟಿವಿ ಮಾಧ್ಯಮಗಳ ಭರಾಟೆಯಲ್ಲಿ ರೇಡಿಯೋ ಕೇಳದ ಜನರಿಗೆ ನಿರಾಸೆ ಕಾದಿತ್ತು. ಜೊತೆಗೆ ತನ್ನ ಇರುವಿಕೆಯನ್ನು ಬಿಟ್ಟುಕೊಡದೇ ತಾನು ಉಗರಖೋಡದವಳೆಂದು ಹೇಳಿದ್ದು ಜನರಲ್ಲಿ ಇನ್ನೂ ಕುತೂಹಲ ಕೆರಳಿಸಿತ್ತು. ಊರು ಬಿಡುವಾಗ ಇನ್ನೂ ಹದಿನೈದು, ಹದಿನಾರರ ವಯಸ್ಸು, ಈಗವಳು ಹೇಗಾಗಿರಬಹುದು ಬದುಕಿಗೆ ಏನು ಮಾಡಿಕೊಂಡಿದ್ದಾಳೆ. ಜೋಗಮ್ಮ, ಅಂತಂದಾಗ ಇಲ್ಲ ಸಲ್ಲದ ವಿಚಾರಗಳು ಬಂದು ಹೋಗಿದ್ದವು. ಜನ ಒಂದನ್ನು ಮರೆಮಾಚುತ್ತಿರುವಾಗಲೇ ಮತ್ತೊಂದು ಸುದ್ದಿ ಪ್ರವಹಿಸಿತ್ತು. ಉಗರಖೋಡದ ಚೌಡಕಿ ತಾಯವ್ವಳ ಮಗಳು ಈಗ ಜಿಲ್ಲಾಧಿಕಾರಿ. ತಪ್ಪದೇ ನೋಡಿ ವೀಕ್ಷಕರೇ..... ಎಂದು ಕಳೆದ ಒಂದು ವಾರದಿಂದ ಖಾಸಗಿ ವಾಹಿನಿಯೊಂದು ಪ್ರಸಾರ ಮಾಡುತಿತ್ತು.

ತಾಯವ್ವ ಮುಗ್ಧ ಹೆಣ್ಣು. ಚೆಲುವೆ. ಹೆಸರಿಗೆ ಜೋಗಮ್ಮಳಾದರೂ ಎಂದೂ ಆ ಹೆಸರಿಗೆ ಕಳಂಕ ತಂದವಳಲ್ಲ. ತುಂಬಾ ಸುಸಂಸ್ಕೃತೆ, ಸೂಕ್ಷ್ಮ ಸ್ವಭಾವದವಳು. ಶಾಲೆ ತಲೆಗೆ ಹತ್ತಲಿಲ್ಲ ಅನ್ನುವುದೊಂದು ಬಿಟ್ಟರೆ ಯಾವುದಕ್ಕೂ ಕಡಿಮೆಯಿರಲಿಲ್ಲ. ಊರಲ್ಲಿ ಯಾರಿಗೂ ತನ್ನಿಂದ ತೊಂದರೆಯಾಗದಿರಲೆಂದು ಊರ ತೊರೆದವಳು. ಗೊತ್ತು ಗುರಿ ಇಲ್ಲದ ತುಂಬು ಯೌವನದ ಹೆಣ್ಣೊಂದು ಮನೆಬಿಟ್ಟು ಹೊರಟಾಗ ಏನಾಗಿರಬೇಡ ಅವಳ ಮನಸ್ಥಿತಿ? ಹಾಗೆ ಊರುಬಿಟ್ಟು ಹೊರಬಂದ ತಾಯವ್ವ ಮಹಾರಾಷ್ಟ್ರದ ಚಿಕಾಲಗುಡ್ಡಕ್ಕೆ ಬರುತ್ತಾಳೆ. ಕಳ್ಳಬಳ್ಳಿ ಇಲ್ಲದ, ಗೊತ್ತು ಗುರಿ ಇಲ್ಲದೇ, ಹಾಗೆ ಬಂದವಳಿಗೆ ಯಲ್ಲವ್ವ ತಾಯಿಯ ಅಪಾರ ಭಕ್ತಾದಿಗಳು ನೆಲೆಯೂರಿರುವ ಊರಲ್ಲಿ ತಾಯವ್ವ ಜೋಗಮ್ಮಳೆಂದು ಗೊತ್ತಾದ ಮರುಕ್ಷಣವೇ, ತಾಯಿ ಯಲ್ಲವಳೇ ನಮ್ಮೂರಿಗೆ ಬಂದಿರುವಳೆಂದು, ಅವಳಿಗೆ ಆಶ್ರಯ ನೀಡುವುದರೊಂದಿಗೆ ಕೆಲವು ಕಾಲ ಅಲ್ಲಿಯೇ ನೆಲೆಯೂರಲು ಅವಕಾಶ ಮಾಡಿಕೊಡುತ್ತಾರೆ. ತಾಯಿ ಯಲ್ಲವ್ವಳ ಅಪಾರ ಭಕ್ತ ಗಣ ಅಲ್ಲಿದ್ದುದರಿಂದ ಅವಳನ್ನು ನೋಡುವ ದೃಷ್ಟಿ ಗೌರವದಿಂದ ಕೂಡಿಯಾಗಿತ್ತು.

ಅವಳಿಗೊಂದು ನೆಲೆ ಕೊಟ್ಟ ಊರಿನಲ್ಲಿ ಅವಳ ಸುತ್ತಮುತ್ತ ಒಂದು ದೈವ ಗಣವೇ ಕೂಡಿದಂತಾಗಿತ್ತು. ಅವಳು ದೇವಿಸ್ತುತಿ ಮಾಡಲಿಕ್ಕೆಂದು ಒಂದು ಗುಂಪನ್ನೇ ಕಟ್ಟಿಕೊಂಡಳು. ಗಂಗವ್ವ, ಕಾಶವ್ವ, ಗೋದವ್ವ, ಮಲೆವ್ವ ಹೀಗೆ ಅವರ ಐದು ಜನರ ಗುಂಪು ಊರೂರ ಜೋಗಾಡುತ್ತ, ದೇವಿಯ ಹಾಡು ಹೇಳುತ್ತ ಸ್ತುತಿ ಮಾಡುವದು, ಅವರು ಕೊಟ್ಟ ಕಾಳು ಕಡಿ ಹಣ ಎಲ್ಲವನ್ನು ಸಮನಾಗಿ ಹಂಚಿಕೊಳ್ಳುವುದು ಮತ್ತು ಅದರಿಂದಲೇ ಜೀವನ ಸಾಗಿಸುವದು ನಿತ್ಯ ಕಾಯಕವಾಗಿತ್ತು. ಇದರ ಜೊತೆಗೆ ಯಾವುದಾದರೂ ಊರುಗಳಿಗೆ ವಿಶೇಷ ಆಹ್ವಾನದ ಮೇರೆಗೆ ಜಾತ್ರೆ, ದೇವರ ಪೂಜೆ ಪುನಸ್ಕಾರಗಳಲ್ಲಿಯೂ ಭಾಗವಹಿಸಿ ಅವರು ಕೊಟ್ಟ ಹಣ ವಸ್ತುಗಳೇ ಇವರ ಆದಾಯ, ಇದರಿಂದಲೇ ಅವರ ಜೀವನ ಸಾಗಿಸುವದಾಗಿತ್ತು.ಆ ಟೀಮಿನಲ್ಲಿ ಅತೀ ಚಿಕ್ಕವಳೆಂದರೆ ತಾಯವ್ವ. ಕೆಲವೇ ದಿನಗಳಲ್ಲಿ ತಾಯವ್ವ ತನ್ನ ಶಾರೀರದಿಂದ ಬಹು ಬೇಗ ಪ್ರಸಿದ್ಧಿಯಾಗಿದ್ದಳು. ಅವಳು ಹಾಡುತಿದ್ದಾಳೆ ಅಂದರೆ ಸಾಕು ಅವಳ ಹಾಡನ್ನು ಕೇಳಲು ಜನಸಾಗರವೇ ಮುಗಿಬೀಳುತಿತ್ತು. ಅವಳಿಂದ ಆ ಟೀಮಿನಲ್ಲಿರುವ ಎಲ್ಲರ ಆದಾಯದಲ್ಲಿ ಸ್ವಲ್ಪ ಏರಿಕೆಯೂ ಆಗಿತ್ತು. ಹೀಗಾಗಿ ಅವಳನ್ನು ಯಾರು ಜರಿಯುತ್ತಿರಲಿಲ್ಲ. ಆ ಟೀಮಿನ ಎಲ್ಲ ಹಿರಿಯ ಜೀವಗಳಿಗೆ ತಾಯವ್ವ ಗೌರವ ಕೊಡುತ್ತಿದ್ದಳು. ಅವಳೆಂದರೆ ಎಲ್ಲರಿಗೂ ಪ್ರೀತಿ. ನಾಲ್ಕೈದು ವರ್ಷಗಳಲ್ಲಿ ತಾಯವ್ವಳೇ ಆ ಗುಂಪಿನ ನಾಯಕತ್ವ ಪಡೆದಿದ್ದಳು. ಉಳಿದ ಸದಸ್ಯರು ವಯಸ್ಸಾದ್ದರಿಂದ ಅವರ ಸ್ಥಾನವನ್ನು ವಯಸ್ಸಿನವರಾದ ರೇಣುಕಾ, ಮೀನಾಕ್ಷಿ, ಲಕ್ಷ್ಮೀ, ಕಸ್ತೂರೆವ್ವ ತುಂಬಿಕೊಂಡಿದ್ದರು. ಹೀಗಾಗಿ ಎಲ್ಲ ನಿರ್ಧಾರಗಳು, ತೀರ್ಮಾನಗಳು ತಾಯವ್ವ ಇರುವ ಮನೆಯಲ್ಲಿಯೇ ಆಗುತ್ತಿದ್ದವು. ಅವಳ ಒಳ್ಳೆಯ ಗುಣಕ್ಕೆ ಊರ ಮಂದಿಯೆಲ್ಲ ಸೇರಿ ಒಂದು ಮನೆಯನ್ನು ಕಟ್ಟಿಕೊಟ್ಟಿದ್ದರು. ಈ ಮಧ್ಯೆ ಎಷ್ಟೋ ವರಗಳು ಅವಳ ಸೌಂದರ್ಯ, ಗುಣ ಮೆಚ್ಚಿಕೊಂಡು ಲಗ್ನವಾಗುವಂತೆ ಹಿರಿಯರ ಮೂಲಕ ಬೇಡಿಕೆ ಇಟ್ಟಿದ್ದರು. ಏನನ್ನೂ ಓದಿರದ ತಾಯವ್ವ ತನ್ನ ತಂದೆ ತಾಯಿಯರ ಆಸೆಯಂತೆ ತಾನು ಹೀಗೆ ಇರುತ್ತೇನೆ, ಆ ತಾಯಿಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ, ಈ ವಿಷಯದಲ್ಲಿ ಮತ್ತೇ ಯಾರೂ ಪ್ರಸ್ತಾಪ ಮಾಡಬೇಡಿ ಎಂದು ಖಂಡತುಂಡವಾಗಿ ಹೇಳಿದ್ದಳು. ಹೀಗಾಗಿ ಅವಳ ಬಗ್ಗೆ ಯಾರೂ ಅಗೌರವ ತೋರಿಸುತ್ತಿರಲಿಲ್ಲ. ಅವಳ ವೈಯಕ್ತಿಕ ಜೀವನದಲ್ಲಿ ಯಾರೂ ಭಾಗಿದಾರರಾಗಲಿಲ್ಲ. ವೈಪರೀತ್ಯವೋ ಏನೋ ಅವಳು ಆ ಊರಿಗೆ ಕಾಲಿಟ್ಟ ದಿನಗಳಿಂದ ಎಲ್ಲವೂ ಒಳ್ಳೆಯದೇ ಆಗಿತ್ತು. ಹೀಗಾಗಿ ತಾಯವ್ವ ಮನೆ ಮನೆಯ ಮಗಳಾಗಿದ್ದಳು. ಅವಳ ಚೌಡಕಿ ಬಾರಿಸುವಿಕೆ ಆರಂಭವೇ ವಿಶೇಷವಾಗಿತ್ತು ಆ ಬಾರಿಸುವಿಕೆ ಆರಂಭವಾಯ್ತು ಅಂದ್ರೆ ಸಾಕು ಎಲ್ಲರೂ ಇದು ತಾಯವ್ವಳೇ ಎಂದು ಗುರ್ತಿಸುವಷ್ಟು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಸಿದ್ಧಿಯಾಗಿದ್ದಳು.

ಒಬ್ಬ ಜೋಗಮ್ಮಳ ಮಗಳು ಜಿಲ್ಲಾಧಿಕಾರಿಯಾಗಿದ್ದಾಳೆಂದರೆ ಚಿಕಾಲಗುಡ್ಡ, ಉಗರಖೋಡ ಹಾಗೂ ಆ ಊರಿನ ಸುತ್ತಮುತ್ತಲಿನ ಜನಕ್ಕೆ ತುಂಬಾ ಸೋಜಿಗ. ಅದುಹೇಗೆ ಸಾಧ್ಯ ಎಂದು ಕೆಲವರು ಅಂದುಕೊಂಡರೆ, ಇನ್ನೂ ಕೆಲವರು ಜೋಗತಿ ಅಲ್ವಾ? ಆದ್ರೂ ಆಗಿರಬಹುದು ಎಂಬ ಅನೇಕ ಪ್ರಶ್ನಾರ್ಥಕವನ್ನಿಟ್ಟುಕೊಂಡೇ ಆ ಪ್ರಸಾರದ ದಿನಕ್ಕಾಗಿ ಕಾಯುತ್ತಿದ್ದರು. ಅಂದು ಮಂಗಳವಾರ ಸಂಜೆ 6-30ರ ದೂರದರ್ಶನದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ತಾಯವ್ವ, ಮಗಳು ಅಮೃತಾ ಕೇಂದ್ರ ಬಿಂದುವಾಗಿದ್ದರು. ‘ಚೌಡಕಿ ತಾಯವ್ವಳ ಮಗಳೀಗ ಜಿಲ್ಲಾಧಿಕಾರಿ. ಇದೊಂದು ಸೋಜಿಗದ ಕವರ್ ಸ್ಟೋರಿ ಹೇಳ್ತಾ ಇದ್ದೀವಿ ವೀಕ್ಷಕರೇ’ ಎಂದು ಹೇಳುತ್ತಾ, ಇಬ್ಬರನ್ನೂ ವೇದಿಕೆಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಆರಂಭದಲ್ಲಿಯೇ ಜಿಲ್ಲಾಧಿಕಾರಿ ಅಮೃತಾ ಮಾತನಾಡುತ್ತ, ‘ನೋಡಿ.. ನೀವು ಸಂದರ್ಶನ ಮಾಡ್ತಾ ಇದ್ದೀರಿ. ಆದ್ರೆ ನಮ್ಮ ತಾಯಿ ಕಲಿತವಳಲ್ಲ ಅವಳು ನೀವು ಕೇಳೋ ಪ್ರಶ್ನೆಗಳಿಂದ ಉತ್ತರ ಕೊಡಲು ಗೊಂದಲ ಮಾಡ್ಕೋಬಹುದು. ಅದು ನನಗಿಷ್ಟವಿಲ್ಲ. ಅವಳಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಡಿ’ ಎಂದಳು. ಮನವಿಗೆ ಒಪ್ಪಕೊಂಡ ಸುಗಮಕಾರ, ‘ತಾಯವ್ವ ಅವರೇ... ನಮಸ್ಕಾರಾ. ನಿಮ್ಮ ಜೀವನದ ಪ್ರತಿಯೊಂದು ಮಧುರ ಕ್ಷಣವನ್ನು ನಮ್ಮ ವೇದಿಕೆ ಮುಂದೆ ಹಂಚಿಕೊಳ್ಳಿ. ಸಾಕಷ್ಟು ಜನ ನಿಮ್ಮ ಅಭಿಮಾನಿಗಳು, ವೀಕ್ಷಕರು ನಿಮ್ಮ ಮಾತು ಕೇಳಲು ತುದಿಗಾಲ ಮೇಲೆ ನಿಂತಿದ್ದಾರೆ’ ಅಂದಾಗ...

ಮಾತು ಆರಂಭಿಸಿದ ತಾಯವ್ವ, ‘ಮೊದಲ ನಾನು ಉಗರಖೋಡ ಮತ್ತ ಚಿಕಾಲಗುಡ್ಡ ಮತ್ತ ಸುತ್ತಮುತ್ತಲಿನ ಊರ ಜನಕ್ಕ ಕ್ಷಮಾ ಕೇಳ್ತಿನಿ. ನನ್ನ ಹರೇದ ವಯಸ್ಸಿನ್ಯಾಗ, ಉಗರಖೋಡದ ನನ್ನ ಬಂಧುಗಳಿಗೆ, ಊರ ಜನಕ್ಕ ಹೇಳದ ಬಂದಬಿಟ್ಟೆ. ಅದಕ್ಕ ಕಾರಣವೂ ಇತ್ತು. ನನ್ನಿಂದಾಗಿ ಎರಡು–ಮೂರು ಪಂಗಡಗಳ ನಡುವೆ ನನ್ನ ಸಲುವಾಗಿ ಜಗಳ ಆದವು. ದಿನಾ ಬೆಳಗಾದ್ರ ಈ ಕಿರಿಕಿರಿ ನನಗ ಸಹಸಾಕ ಆಗಲಿಲ್ಲ. ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯ್ತು. ಒಂದೆರಡು ಸಲ ಬಡದಾಟ ಆಗಿ ಕೆಲವರು ತಲೀನೂ ಒಡಕೊಂಡ್ರು. ಹಿಂಗಾಗಿ ಇನ್ನಾ ಏನೇನ ಆಕ್ಕೈತೋ ಏನೋ ಅಂತಾ ಭಯ ಆತು. ನೆಮ್ಮದಿಯಿಂದ ಇರೋ ಊರಾಗ ನನ್ನಿಂದ ಇದೆಲ್ಲ ಆಗೋದು ನನಗ ಇಷ್ಟ ಇರಲಿಲ್ಲ. ಮೇಲಾಗಿ ನನ್ನ ತಂದೆ ತಾಯಿ ಇಚ್ಛೆಯಂತೆ ಜೋಗಮ್ಮಳಾಗಿಯೇ ಇರಬೇಕೆಂದು ನಿರ್ಧರಿಸಿ, ಮನೆ ಬಿಟ್ಟು ಸೌದತ್ತಿಗೆ ಬಂದೆ, ಅಲ್ಲಿಂದ ಬೆಳಗಾಂವಿಗೆ ಬಂದೆ. ಮತ್ತ ಯಾವುದೋ ಒಂದ ಬಸ್ಸು ಹತ್ತಿದೆ, ಕಂಡಕ್ಟರ್ ಎಲ್ಲಿ ಅಂತ ಕೇಳಿದ, ನನಗ ಏನೂ ಹೇಳಾಕ ಆಗ್ಲಿಲ್ಲ ಯಾರೋ ಒಬ್ಬ ತನಗ ಟಿಕೇಟು ತಗಸಾಕ ಚಿಕಾಲಗುಡ್ಡ ಅಂದದ್ದ ಕೇಳಿ, ನನಗ ಅಂತ ತಿಳಕೊಂಡು, ಟಿಕೇಟ್ ಕೊಟ್ಟ ಚಿಕಾಲಗುಡ್ಡಕ್ಕೆ ಬಂದ ಇಳಿಸಿದ. ಬಸ್ ನಿಲ್ದಾಣದಲ್ಲಿ ಇಳಿಯೋ ಹೊತ್ತಿಗೆ ಅಲ್ಲಿ ಜೋಗತ್ಯಾರು ಬಾರಿಸೋ ಚೌಡಕಿ ಸದ್ದು ಕೇಳಿ ಅಲ್ಲಿಗೆ ಹೋದೆ. ಗುರುತು ಪರಿಚಯವಿಲ್ಲದ ನನ್ನನ್ನು, ಹಣೆಯ ಮೇಲೆ ಭಂಡಾರ ಇದ್ದದ್ದ ನೋಡಿ, ಸಹದೇವ ಖಂಡುಬಾ ಕುಟುಂಬದವರು ಸೇರಿಸಿಕೊಂಡ್ರು. ಅವ್ರು ಯಲ್ಲವ್ವ ದೇವಿಯ ಪರಮ ಭಕ್ತರು, ಹಡ್ಡಲಗಿ ತುಂಬಿಸ್ತಾ ಇದ್ದರು. ನಾನು ಅಲ್ಲಿ ಹೋಗಿ ನನ್ನ ವಿಚಾರಗಳನ್ನು ತಿಳಿಸಿದೆ. ಅವರಿಗೇನು ತಿಳಿಯಿತೋ ಗೊತ್ತಿಲ್ಲ... ನನಗೆ ಆಶ್ರಯ ಕೊಟ್ಟರು. ಸ್ವಲ್ಪೇ ದಿನದಲ್ಲಿ ನಾನು ಅಲ್ಲಿಯ ಕುಟುಂಬದಲ್ಲಿ ಒಬ್ಬಳಾಗಿದ್ದೆ, ಖಂಡುಬಾ ಕಾಕಾ ನನ್ನನ್ನು ಮಗಳಿಗಿಂತ ಹೆಚ್ಚಿಗೆ ನೋಡ್ಕೊಂಡ್ರು. ನನ್ನ ಸ್ವಾಭಿಮಾನಕ್ಕೆ ಯಾವತ್ತೂ ಅಡ್ಡಿಯಾಗಲಿಲ್ಲ. ನಾನೂ ನಮ್ಮ ಜೋಗತಿಯರ ಒಂದ ಗುಂಪು ಕಟ್ಟಿದೆ .ಎಲ್ಲಾ ಜನ ನನ್ನ ಹರಿಸಿದ್ರು.

ಒಂದ ದಿನ ಜೋಗಾಡಾಕ ಹೋಗಿ ಹೊಳ್ಳಿ ಬರಾತಿದ್ಯು ರಾತ್ರೀನೂ ಭಾಳ ಆಗಿತ್ತು. ಪಕ್ಕದ ಹಳ್ಳಿ ಆದ್ರಿಂದ ನಡಕೋತ ಬರತಿದ್ವಿ. ಅಮಾಸಿ ರಾತ್ರಿ 8 ಗಂಟೆ ಇರಬೇಕು. ದಾರಿ ಒಳಗ ಒಂದ ಚೌಡೆವ್ವನ ಗುಡಿ ಇತ್ತು. ಆ ಗುಡಿ ಊರ ಬಿಟ್ಟು ದೂರದ ಮಡ್ಡಿಯೊಳಗ ಇದ್ದದರಿಂದ ಸಂಜಾದ್ರ ಅಲ್ಲಿ ಯಾರೂ ಬರತಿದ್ದಿಲ್ಲ. ನಮಗೆಲ್ಲಾ ನಡದು ಸುಸ್ತಾಗಿತ್ತು. ಅಲ್ಲದ ನಾವೆಲ್ಲಾ ಕಾಳ ಕಡಿ ಹಂಚಕೊಳ್ಳೋದ ಅಲ್ಲಿ. ಗುಡಿ ಎತ್ತರದ ಮ್ಯಾಲಿತ್ತು. ಚೌಡೆವ್ವನ ಗುಡಿ ಕಡೆ ಯಾವುದೋ ಒಂದ ಬಿಳಿ ಕಾರ ಭರ್ ಅಂತಾ ಬಂತು. ಒಬ್ಬ ಅದರಾಗಿಂದ ಇಳದ. ನಾ ನೋಡಿದಂಗ ಆ ಮನಸ್ಯಾನ ಅಕ್ಕಪಕ್ಕದ ಯಾವ ಹಳ್ಳಿಲೂ ನೋಡಿದ್ದಿಲ್ಲ. ಅಂವ ಏನನ್ನೋ ಗುಡಿ ಮುಂದ ಇಟ್ಟು ಮತ್ತ ಹಂಗ ಜೋರಾಗಿ ಹೋದದ್ದು ನೋಡಿದ್ವಿ. ಆದ್ರ ನಮಗೇನದು ವಿಶೇಷ ಅನಿಸಲಿಲ್ಲ. ಗುಡಿಂದ ದೂರದಲ್ಲಿದ್ದ ಬೇವಿನಗಿಡದ ಕಟ್ಟೀಮ್ಯಾಲ ಕುಂತ ನಮ್ಮ ಕಾಳು ಕಡಿಯೆಲ್ಲವನ್ನ ಹಂಚಿಕೊಂಡ. ಮನಿಕಡೆ ಹೋಗಬೇಕು ಅನ್ನೋದ್ರಾಗ ಯಾವುದೋ ಕೂಸ ಅಳೋ ಸಪ್ಪಳ ಕೇಳಿತು. ಗಾಬರಿನೂ ಆತು. ಜೊತೆಗೆ ಆಮಾಸಿದ್ದದರಿಂದ ಯಾವುದರೆ ದೆವ್ವ ಗಿವ್ವ ಬಂತೆನೋ ಅಂತ ಗಾಬರೀನೂ ಆತು. ದೇವರಗುಡಿ ಇತ್ತಲ, ಇಲ್ಲೆಲ್ಲಿ ದೆವ್ವ ಅಂತಾ ಹೆದರಕೋತನ ಗುಡಿಕಡೆ ಹೋದ್ವಿ.ಅಲ್ಲೊಂದ ಚೌಕಾಂದ ಡಬ್ಬಿ ಇತ್ತು. ಆ ಡಬ್ಬಿ ಬಾಯಿ ತಗದ ನೋಡಿದ್ರ ತಾಸೊಪ್ಪತ್ತಿನಲ್ಲಿ ಹುಟ್ಟಿದ ಹಸಿಗೂಸು. ಅಳೋ ಧ್ವನಿ ಜೋರಾತು. ಆವಾಗ್ಲೆ ನಾವಂದಕೊಂಡ್ವಿ. ಅದೇ ಮನಸ್ಯಾ ಇಟ್ಟ ಹೋಗಿದ್ದು ಅಂತ. ತುಂಬಾ ಮುದ್ದು ಮುದ್ದಾದ ಹೆಣ್ಣು ಹಸಿಗೂಸು.
ನಮಗೆ ಏನು ಮಾಡಬೇಕು ಅನ್ನೋದೇ ತಿಳಿಲಿಲ್ಲ ಮೊದಲು ಆ ಕೂಸಿಗೆ ನನ್ನ ಸೀರೆಯ ಸೆರಗು ಹರಿದು ಹೊಚ್ಚಿಸಿದೆ. ಆ ಸನ್ನಿವೇಶದಲ್ಲಿ ನಮ್ಮ ದಣಿವೆಲ್ಲ ಮರೆತೇ ಹೋಯಿತು. ಅಲ್ಲಿದ್ದವರಲ್ಲಿ ನಾನೇ ಹಿರಿಯಳಾದ್ದರಿಂದ ಯಾರೂ ಆ ಕೂಸನ್ನು ಮುಟ್ಟಲೂ ಮುಂದೆ ಬರಲಿಲ್ಲ. ಜನರ ಅಪವಾದಗಳಿಗೆ ಹೆದರಿ ಹಿಂದೆ ಸರಿದರು. ಹೀಗಾಗಿ ಒಂಟಿಯಾದ ನಾನೇ ಎತ್ಕಂಡು ಬಂದೆ. ಲಗ್ನವಾಗಲಿಲ್ಲ, ಹೆರಲಿಲ್ಲ ಆದರೂ ತಾಯಿ ಭಾಗ್ಯವನ್ನು ಆ ಚೌಡವ್ವಳೇ ಕರುಣಿಸಿದ್ದಾಳೆಂದು ಸ್ವೀಕರಿಸಿದೆ. ಯಾರು, ಏಕೆ, ಯಾವ ಕಾರಣಕ್ಕೆ ಈ ಮಗುವನ್ನು ಅಲ್ಲಿ ಬಿಟ್ಟರೋ ಗೊತ್ತಿಲ್ಲ, ಆದರೆ ಏನೂ ತಪ್ಪೆಸಗದ ಈ ಹಸುಗೂಸಿಗೇಕೆ ಈ ಶಿಕ್ಷೆ ಎಂದುಕೊಂಡು ಧರ‍್ಯಮಾಡಿ ನಾನೇ ಇಟ್ಟುಕೊಂಡೆ. ಸುದ್ದಿ ಊರತುಂಬ ಹರಡಿತು ಯಾವುದೋ ಶ್ರೀಮಂತ ಕುಟುಂಬದ ಮಗುವಾದ್ದರಿಂದ ದಷ್ಟಪುಷ್ಟವಾಗಿಯೇ ಇತ್ತು. ಕೆಲವರು ಒಳ್ಳೆದಾತು ಅಂದ್ರೆ, ಇನ್ನ ಕೆಲವರು ಅನಾಥೆಗೊಬ್ಳು ಅನಾಥೆ ಛುಲೋ ಆತಬಿಡು ಅಂದ್ರು. ಹೀಗೆ ಎಲ್ಲ ತರಹದ ಮಾತುಗಳನ್ನು ಕೇಳ್ತಾ ಒಂಟಿಯಾಗಿದ್ದ ನನ್ನ ಬಾಳಿಗೆ ಬೆಳಕಾಗಿ ಬಂದ ಈ ಹುಡುಗಿಗೆ ಅಮೃತಾ ಅಂತ ಹೆಸರಿಟ್ಟೆ.

‘ನನ್ನ ಬದುಕಿನ ಮತ್ತೊಂದು ಪರ್ವ ಆರಂಭವಾಗಿತ್ತು ಆ ತಾಯಿಯೇ ನನಗೆ ಮತ್ತೊಂದು ಜವಾಬ್ದಾರಿ ಕೊಟ್ಟಿರಬಹುದೆಂದು ನಿಷ್ಠೆಯಿಂದ ಬೆಳೆಸಿದೆ, ನನ್ನೆಲ್ಲ ಪ್ರೀತಿಯನ್ನು ಧಾರೆ ಎರೆದೆ. ಅಮೃತಾ ತುಂಬಾ ಜಾಣೆಯಾದ್ದರಿಂದ ತರಗತಿಯಲ್ಲಿ ನಂಬರ್ ಒನ್ ಆಗಿದ್ದಳು. ಮರಾಠಿ ಹತ್ತನೇ ವರ್ಷ ಪಾಸಾದ ಮೇಲೆ ಪಿಯುಸಿಗೆ ಹಚ್ಚಬೇಕಾಗಿತ್ತು. ಆವಾಗ ಒಂದ ಘಟನೆ ನಡೆದುಬಿಟ್ಟಿತು. ಆ ಊರ ಪಟೇಲನ ಮಗ ನನ್ನ ಮಗಳನ್ನು ಕಾಡಿಸಲು ಶುರು ಮಾಡಿದ್ದ. ಜೊತೆಗೆ ಆತನಾಡಿದ ಮಾತು ನನ್ನ ಮನಸ್ಸಿಗೆ ತುಂಬಾ ನೋವಾಗಿತ್ತು. ನೀನೇನೇ! ಜೋಗಮ್ಮನ ಮಗಳು, ಏನಬೇಕು ಹೇಳು? ಎಂದು ಪೀಡಿಸುತಿದ್ದ. ಹೀಗಾಗಿ ಆವತ್ತೇ ರಾತ್ರಿ ಯಾರಿಗೂ ಹೇಳದೇ ಧಾರವಾಡಕ್ಕೆ ಬಂದ್ವಿ. ಬಾಡಿಗೆ ಮನೆ ಹಿಡಿದು ಉಳಕೊಂಡು, ನನ್ನ ಮಗಳನ್ನು ಓದಿಸಿದೆ. ಯಾವದೋ ಸಂದರ್ಭದಲ್ಲಿ ನನ್ನ ಹಾಡು ಮತ್ತು ಚೌಡಕಿ ಬಾರಿಸುವಿಕೆ ಕೇಳಿದ ಆಕಾಶವಾಣಿಯ ಬಸು ಸರ್ ಹಾಡಲಿಕ್ಕೆ ಅವಕಾಶ ಕೊಟ್ರು. ಕಲಾವಿದರ ಮಾಸಾಶನ ಬರೋ ಹಾಗೆ ಮಾಡಿದ್ರು. ಹಿಂಗ ಒಬ್ರಿಲ್ಲ ಮತ್ತೊಬ್ರು ನನಗೆ ಸಹಾಯ ಮಾಡಿ ಇವತ್ತು ನನ್ನ ಮಗಳು ಈ ಮಟ್ಟಕ್ಕೆ ಬೆಳೀಲಿಕ್ಕೆ ಕಾರಣರಾಗಿದ್ದಾರೆ. ಅವರೆಲ್ಲರಿಗೂ ನನ್ನ ನಮಸ್ಕಾರಗಳು.’ ಇದೆಲ್ಲವನ್ನೂ ಬಿಟ್ಟ ಕಣ್ಣು ಬಿಟ್ಟಂತೆ, ತದೇಕಚಿತ್ತದಿಂದ ಕೇಳುತಿದ್ದ ದೂರದರ್ಶನದ ಮಾಲೀಕ ಹಾಗೂ ಸುಗಮಕಾರ ಚಿನ್ನಪ್ಪ ಬಡಿಗೇರ ಮೂರ್ಛೆ ಹೋಗಿಬಿಟ್ಟಿದ್ದ. ಮುಖದ ಮೇಲೆ ನೀರು ಚಿಮುಕಿಸಿದಾಗ ಕಣ್ಣು ಬಿಡುತ್ತಾ ಅಮ್ ಅಮ್ ಅ.. ಮೃ...ತಾ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.