ADVERTISEMENT

ಡಾ. ಲಕ್ಷ್ಮಣ ವಿ.ಎ ಅವರ ಕಥೆ.. ಜಿರಿ ಮಳೆಯ ಕಣ್ಣು!

ಜಿರಿ ಮಳೆಯ ಕಣ್ಣು

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 21:25 IST
Last Updated 14 ಜೂನ್ 2025, 21:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೇಗ ಬೇಗ ಹತ್ತು... ಹತ್ತು... ಈ ಲಾರಿ ಹತ್ತು... ಈ ಲಾರೀ ಡ್ರೈವರ್ ಅಣ್ಣಂಗೆ ಕನ್ನಡ ಬರುತ್ತದೆ ಅಂತ ಕಾಣುತ್ತೆ. ಮಾಗಡಿ ರೋಡಿನಲ್ಲಿ ನಿನ್ನ ಇಳಿಸಲು ಹೇಳುತ್ತೇನೆ, ಅಲ್ಲಿಂದ ಎರಡು ಕಿ.ಮೀ. ನಡೆದು ಹೋದರೆ ಬಾಲು ಅಂಕಲ್ ತೋಟ ಸಿಗುತ್ತದೆ. ಅಲ್ಲಿ ತಲುಪಿದ ಮೇಲೆ ಅವರಿಗೆ ಒಂದು ಫೋನು ಮಾಡಲು ಹೇಳು ಎಂದು ನರಸಿಂಹ ತನ್ನ ಗೆಳೆಯ ಬಾಲುವಿನ ವಿಳಾಸ ಬರೆದ ಚೀಟಿಯನ್ನು ದೀಪೂವಿನ ಬೆವೆತ ಕೈಗೆ ತುರುಕಿ ನೈಸ್ ಹೆದ್ದಾರಿಯಲಿ ಹಾಯುವ ಕಂಡ ಕಂಡ ಲಾರಿಗೆ ಕೈ ಮಾಡಿ ನಿಲ್ಲಿಸಲು ಹೇಳುತ್ತಿದ್ದ.

ಪಪ್ಪಾ... ಪಪ್ಪಾ.... ಬೇಡ ಪಪ್ಪಾ... ಪ್ಲೀಸ್ ನಿನ್ನ ಕಾಲಿಗೆ ಬೀಳ್ತೀನಿ ಪಪ್ಪಾ. ಇನ್ನೊಂದು ಸಲ... ಸಾರಿ... ಸಾರೀ ಪಪ್ಪ... ಹೀಗೆಲ್ಲಾ ಮಾಡಲ್ಲ ಪಪ್ಪಾ... ಪ್ಲೀಸ್ ನಾನು ಇನ್ನು ಮುಂದೆ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೀತೀನಿ, ನಾ ಎಲ್ಲೂ ಹೋಗೋದಿಲ್ಲ ಪಪ್ಪಾ... ನನ್ನ ವಾಪಸು ಮನೆಗೆ ಕರೆದುಕೊಂಡು ಹೋಗು ಎಂದು ಮಗ ತನ್ನ ತಂದೆಯ ಕೈ ಬೆರಳು ಬಿಗಿಯಾಗಿ ಹಿಡಿದು ಲಾರಿ ಹತ್ತಲು ನಿರಾಕರಿಸಿ ಕೊಸರಾಡುತ್ತಲೇ ಇರುವ ಹೊತ್ತಿನಲಿ ಜಿರಿ ಕಣ್ಣಿನ ಮಳೆಯ ದಿನವೊಂದು ಭಾರವಾದ ಕನಸಿನಂತೆ ಸರಿದು ಹೋಗುತ್ತಿತ್ತು.

ADVERTISEMENT

‘ಮುದ್ದು ಮಾಡಿದ್ದು ಜಾಸ್ತಿಯಾಯ್ತು ನಿನಗೆ’

‘ಕೊಬ್ಬಿಗೆ ಹೀಗಾಡ್ತಿದ್ದೀಯ ನೀನು, ಕಷ್ಟ ಅಂದ್ರೆ ಗೊತ್ತಿಲ್ಲ ನಿನಗೆ!... ಪಾಠ ಕಲಿಸುತ್ತೇನೆ ನಿನಗೆ. ಪ್ರಪಂಚದ ಅರಿವಾಗಲಿ ನಿನಗೆ! ಅನ್ನದ ರುಚಿ ತಿಳಿಯುತ್ತಿಲ್ಲ ನಿನಗೆ... ನರಸಿಂಹ ತನ್ನ ಮಗನ ಮೇಲೆ ಉರಿದುರಿದು ಬೀಳುತ್ತಲೇ ಇದ್ದ.

ಮನೆ ಬಿಡುವಾಗಿನಿಂದಲೂ ಅಷ್ಟೇ. ದೀಪೂ ಅತ್ತು ಕರೆದು ರಣಾ ರಂಪ ಮಾಡುತ್ತಲೇ ಮೊಬೈಕು ಹತ್ತಲು ಹಠ ಮಾಡುತ್ತ ಕೈ ಕಾಲು ಬಡಿಯುತ್ತ ಹಿಂದೆ ಕುಳಿತುಕೊಂಡಿದ್ದ. ಅವ್ವ ಶಾಲ್ಮಲೆ ಉಕ್ಕುಕ್ಕಿ ಬರುವ ಬಿಕ್ಕುಗಳ ಸೆರಗ ಮರೆಯಲ್ಲಿ ಮುಚ್ಚಿಕೊಂಡು ಅಡುಗೆ ಮನೆಯಿಂದ ಓಡೋಡಿ ಬಂದು ದೀಪೂವಿನ ಬ್ಯಾಗಿಗೆ ರಾತ್ರಿಯ ಊಟಕ್ಕಾಗಲೆಂದು ಬಿಸಿಬೇಳೆ ಬಾತ್‍ನ ಟಿಫನ್ನು ಬಾಕ್ಸು ಪುಟ್ಟನ ಬ್ಯಾಗಿನೊಳಗೆ ಜಾಗ ನೋಡಿ ತುರುಕಿದಳು. ನಿನ್ನೆ ರಾತ್ರಿ ಖುದ್ದು ಅವಳೇ ಒಂದು ತಟ್ಟೆ ಲೋಟ ಹಳೆಯ ಯುನಿಫಾರ್ಮು ಸ್ವೇಟರು ಎಲ್ಲ ಜೋಡಿಸಿ ದೀಪೂವಿನ ಬ್ಯಾಗಿಗೆ ತುಂಬಿ ಇಟ್ಟಿದ್ದಳು.

‘ಏನೂ ಆಗಲ್ಲಾ ಕಂದಾ... ನೀನು ಗುಡ್ ಬಾಯ್ ಆದಮೇಲೆ ನಿನ್ನ ಅಲ್ಲಿಂದ ಕರ್ಕೊಂಡು ಬರ್ತೀವಿ. ಅಲ್ಲಿತಂಕಾ ಯಾರ ಜೊತಿಗೂ ತಂಟೆ ಮಾಡದೇ ಹುಸಾರಾಗಿರು’ ಎಂದು ಅತ್ತೂ ಅತ್ತೂ ಬೆವೆತ ಮಗನ ನೆತ್ತಿಯ ಸವರಿ ಕೆನ್ನೆಗೆ ಮುತ್ತಿಕ್ಕಿ ಇನ್ನು ಹೆಚ್ಚು ಹೊತ್ತು ತಾನು ಈ ಬೀದಿಯಲ್ಲಿದ್ದರೆ ಅದುಮಿಟ್ಟುಕೊಂಡ ದುಃಖ ಸ್ಫೋಟವೇ ಆಗಬಹುದೆಂದು ಆತಂಕದಲ್ಲಿ ಟಾಟಾ ಹೇಳಿ ತನ್ನ ಸೆರಗು ಮರೆಯೊಳಗೆ ಮುಖ ಮುಚ್ಚಿಕೊಂಡೇ ಒಳಗೆ ಓಡಿದ್ದಳು.

ಬೆಂಗಳೂರು ಮಹಾನಗರದ ಸೊಂಟಕೆ ಸರ್ಪ ಸುತ್ತಿನ ಹಾಗೆ ಬಿಗಿಯಾಗಿ ಬಳಸಿ ಹಿಡಿದ ಈ ನೈಸು ರಸ್ತೆಯ ಎಡಬದಿಗೆ ನರಸಿಂಹ ಈಗ ತನ್ನ ಮೊಬೈಕು ನಿಲ್ಲಿಸಿ ಸಣ್ಣ ಕಲ್ಲಿನ ಮೇಲೆ ದಿಕ್ಕೆಟ್ಟವನಂತೆ ಕುಳಿತಿದ್ದ. ಮಗ ದೀಪೂ ಇವನೆದಿರು ತನ್ನ ಎರಡೂ ಕೈ ಕಟ್ಟಿ ಸುರಿವ ಜಿರಿಮಳೆಯಲ್ಲಿ ನೆಂದು ಗಡ ಗಡ ನಡಗುತ್ತ ಮಳೆಗಿಂತ ಜೋರಾಗಿದ್ದ ಗಾಳಿಯ ಎದೆಗೆ ತನ್ನ ಬೆನ್ನು ನೀಡಿ ಅಪ್ಪನ ಕಣ್ಣುಗಳಲ್ಲಿ ತನ್ನ ದೈನೇಸಿ ದಿಟ್ಟಿ ನೆಟ್ಟು ಕಣ್ಣೀರಿಗೆ ಅವನ ಕಲ್ಲು ಎದೆ ಈಗ ಕರಿಗೀತು ಆಗ ಕರಗೀತೆಂದು ಕಾಯುತ್ತಿರುವಾಗ ಅರ್ಧ ಹಾರಿಸಿದ ಧ್ವಜದಂತೆ ಅವನ ಶರ್ಟು ಗಾಳಿಗೆ ಪಟ ಪಟನೆ ಬಡಿದು ಸದ್ದು ಮಾಡುತ್ತಿತ್ತು.

ಹೀಗೆ ಗುರುತು ಖೂನಿಲ್ಲದ ಲಾರಿ ಲೋಡಿಗೆ ಅಕ್ಕಿ ಮೂಟೆ ತುಂಬಿದಂತೆ ದೀಪೂನನ್ನು ಕಳಿಸುವ ಮನಸು ಇದ್ದಕ್ಕಿದ್ದಂತೆ ಬದಲಿಸಿದ ನರಸಿಂಹ ಈಗ ಮಗನನ್ನು ಮತ್ತೆ ಮೊಬೈಕು ಹತ್ತಿಸಿಕೊಂಡು ಮಾಗಡಿ ರಸ್ತೆಯಲ್ಲಿರುವ ಬಾಲೂವಿನ ಇಟ್ಟಿಗೆ ಗೂಡಿನ ಕಡೆಗೆ ಹೊರಟಿದ್ದ. ಮನೆ ಬಿಡುವಾಗ ಅಪ್ಪನಿಂದ ತುಸು ಅಂತರ ಕಾಯ್ದುಕೊಂಡೇ ಹಿಂದೆ ಕುಳಿತಿದ್ದ ದೀಪೂ ಈಗ ಮತ್ತಷ್ಟು ಮುಂದೆ ಸರಿದು ಅಪ್ಪನ ಹೊಟ್ಟೆಗೆ ತನ್ನ ನೀಳ ಕೈಗಳನ್ನು ಬಳಸಿ ಬಿಗಿಯಾಗಿ ಅಪ್ಪಿಕೊಂಡು ಕುಳಿತವನ ಬೆನ್ನಿಗೆ ಅಭಯ ನೀಡುತ್ತಿದ್ದುದು ಇನ್ನೂ ಬೆಚ್ಚಗೇ ಇರುವ ಬಿಸಿಬೇಳೆ ಬಾತ್ ಮಾತ್ರ.

ತಾನು ಇನ್ನೇನು ತಲುಪಲಿರುವ ಅಗೋಚರ ನರಕವ ನೆನೆ ನೆನೆದು ಕಂಗೆಟ್ಟಿ ಕುಳಿತವನ ಎದೆ ಬಡಿತ ಇನ್ನೂ ತುಸು ಜೋರಾಗಿ ಅಪ್ಪನ ಕಲ್ಲು ಬಿರುಸಿನ ಬೆನ್ನಿಗೂ ತಾಗಿ ಎಳೆಯ ಹೃದಯದ ಏರಿಳಿತದ ಲಯಬದ್ದ ಸದ್ದು ನರಸಿಂಹನ ಅನುಭವಕ್ಕೆ ಬರುವಂತಿತ್ತು. ನರಸಿಂಹ ಗಾಡಿ ಓಡಿಸುತ್ತಲೇ ಒಮ್ಮೆ ತನ್ನ ಎದುರಿನ ನೈಸು ರಸ್ತೆಯನ್ನು ಎವೆಯಿಕ್ಕದೇ ನೋಡಿದ. ತನ್ನ ಬಲಬದಿಗೆ ಓಡುವ ಲಾರಿ ಕಾರು ಬಸ್ಸುಗಳ ರಕ್ಕಸ ಗಾಲಿಗಳಂಚಿನಲ್ಲಿ ಇವನ ಮೊಬೈಕು ಸಾವು ಬದುಕಿನ ತೆಳುವಿನ ಗೆರೆಯ ಅಂತರದಲ್ಲೇ ಸಾಗುತ್ತಿತ್ತು. ಮೇಲೆ ಆಗಸದಲ್ಲಿ ಕರಿ ಮೋಡಗಳ ಮೇಳ. ಜುಲೈ ತಿಂಗಳ ಜಿರಿ ಮಳೆ ದೀಪೂವಿನ ಕಣ್ಣೀರಿನ ಹಾಗೆ ಮೈ ಮನ ತೋಯಿಸುತ್ತಿತ್ತು. ಮಳೆ ಮರೆಯಾದ ತುಸುವೇ ಹೊತ್ತಿಗೆ ಮತ್ತೆ ತಿಳಿ ಬಿಸಿಲು ಗಿಡ ಮರ ಸಣ್ಣ ಬೆಟ್ಟಗಳ ಮೇಲೆ ಮೂಡಿ ಮರೆಯಾಗುವ ಕಣ್ಣಾ ಮುಚ್ಚಾಲೆ ದಾರಿಯುದ್ದಕ್ಕೂ ನಡೆದೇ ಇತ್ತು. ರೇನು ಕೋಟು ಕೊಡೆ ಕರ್ಚೀಪು ಎಲ್ಲ ಮನೆಯಲ್ಲೇ ಮರೆತ ಬಂದ ಇಬ್ಬರೂ ಆಗಾಗ ಮಳೆಗೆ ನೆನೆಯುತ್ತ ಮತ್ತೆ ತಿಳಿಬಿಸಿಲಿಗೆ ಒಣಗುತ್ತ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಯಿಂದ ಒಲ್ಲದ ಮನಸಿನಿಂದಲೇ ನೈಸು ರಸ್ತೆಯ ಹಿಡಿದು ಹೊರಟು ನಡೆದಿದ್ದರು.

ಎಲ್ಲ ಸರಿಯಾಗಿಯೇ ಇದ್ದಿದ್ದರೆ ದೀಪೂ ಈಗ ಇಷ್ಟೊತ್ತಿಗೆಲ್ಲಾ ಬೆಳಗಿನ ತನ್ನ ಸ್ಕೂಲಿನ ಎರಡನೇ ಪಿರಿಯಡ್ಡು ಮುಗಿಸಿ ಸ್ನಾಕ್ಸ್ ಬ್ರೇಕ್‍ನಲ್ಲಿ ಅವ್ವ ಮಾಡಿ ಕೊಟ್ಟ ಶಾವಿಗೆ ಪಾಯಸ ಅವಲಕ್ಕಿ ಮೆಲ್ಲುತ್ತ ಮಳೆಗೆ ಒದ್ದೆಯಾದ ಪ್ಲೇ ಗ್ರೌಂಡಿನಲ್ಲಿ ಆಡುತ್ತ ತನ್ನ ಗೆಳೆಯರೊಟ್ಟಿಗೆ ಕುಣಿಯುತ್ತ ಮೋಜಿನಲ್ಲಿ ಇದ್ದಿರಬೇಕಾಗಿತ್ತು. ಆದರೆ ನಿನ್ನೆ ಇವನ ಸ್ಕೂಲಿನಲ್ಲಿ ನಡೆದಿದ್ದ ಇಂಟರ್ ಕ್ಲಾಸು ಬಾಸ್ಕೆಟ್ ಬಾಲ್ ಸ್ಪರ್ದೆಯಲ್ಲಿ ಸೋತಿದ್ದ ದೀಪೂವಿನ ತಂಡ ‘ಫಿಫ್ತ್’ ಬಿ ಕ್ಲಾಸ್ ಟೀಚರ್ ರೀಟಾಳಿಗೆ ದೀಪೂ ‘ಮಿಡಲ್ ಫಿಂಗರು’ ತೋರಿಸಿದನೆಂದು ಪ್ರಿನ್ಸಿಪಾಲರಿಗೆ ದೂರು ಕೊಟ್ಟ ಮೇಲೆ ದೀಪೂವನನ್ನು ಸ್ಕೂಲಿನಿಂದ ಶಾಶ್ವತವಾಗಿ ಸಸ್ಪೆಂಡ್ ಮಾಡಲಾಗಿತ್ತು.

ದೀಪೂ ತನ್ನ ಮೇಲಿನ ಸುಳ್ಳು ಆರೋಪವನ್ನು ಖಂಡತುಂಡವಾಗಿ ನಿರಾಕರಿಸಿ ತಾನು ತೋರಿಸಿದ್ದು ಎರಡು ಬೆರಳು ಎತ್ತಿ ತೋರಿಸುವ ‘ವಿ’ ಎಂಬ ವಿಕ್ಟರಿ ಸಿಂಬಲ್ಲು ಅಂತ ಅಳುತ್ತಲೇ ಎಲ್ಲರ ಬಳಿ ಅವಲತ್ತುಕೊಂಡಿದ್ದ. ಇವನ ಮಾತನ್ನು ಅನುಮೋದಿಸುವ ತರಹ ಫಿಫ್ತ್ ‘ಎ’ ಕ್ಲಾಸಿನ ಎಲ್ಲರೂ ಹೇಳುತ್ತಿದ್ದರೂ ಪ್ರಿನ್ಸಿಪಾಲರು ರೀಟಾಳ ಕಣ್ಣೀರಿಗೆ ಕರಗಿ ದೀಪೂವಿನ ಮೇಲೆ ಸಸ್ಪೆಂಡಿನ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದರು.

ಸಸ್ಪೆಂಡು ಎಂದರೆ ದೀಪೂವಿನ ಪೋಷಕರಿಗೆ ಇನ್ನೊಂದಿಷ್ಟು ಹೊಸ ಸ್ಕೂಲುಗಳ ಹುಡುಕಾಟ! ಮತ್ತಷ್ಟು ಲಕ್ಷಗಳ ಡೋನೇಷನ್ನು! ಹೊಸ ಸ್ಕೂಲಿನ ಫೀಜೂ ಹೊಸ ಯುನಿಫಾರ್ಮು ಬಟ್ಟೆ ಶಾಲಾ ವಾಹನದ ಫೀಜೂ ಪುಸ್ತಕ. ಅಷ್ಟಕ್ಕೂ ಈ ಜುಲೈ ತಿಂಗಳಿನಲ್ಲಿ ಹೊಸ ಅಡ್ಮಿಷನ್ ಯಾವ ಸ್ಕೂಲು ಕೊಟ್ಟೀತು?
‘ಹಳೆಯ ಸ್ಕೂಲಿನ ಹೆಸರೇನು?’
‘ಅಲ್ಲಿ ಯಾಕೆ ಬಿಟ್ಟಿರಿ?’
‘ಇವನ ಮಾರ್ಕ್ಸ್ ಕಾರ್ಡು ಎಲ್ಲಿ?’
‘ಕ್ಯಾರೆಕ್ಟರ್ ಸರ್ಟಿಫಿಕೇಟು ತರಬೇಕು!’
ಹೊಸ ಸ್ಕೂಲಿನ ಇಂತಹ ನೂರೆಂಟು ತರಲೆ ಪ್ರಶ್ನೆಗಳನ್ನೆಲ್ಲಾ ಇನ್ನು ಹೇಗೆ ಎದುರಿಸುವುದೆಂದು ಕಂಗಾಲಾಗಿ ಹೋಗಿದ್ದ ನರಸಿಂಹ.

ನರಸಿಂಹನ ಮೊಬೈಕು ಈಗ ನೈಸ್ ರೋಡಿನ ಮೂರು ಲೇನಿನ ಎಡಭಾಗದಲ್ಲಿ ಸಾವಧಾನದಲಿ ಸಾಗುತ್ತಿತ್ತು. ಸಣ್ಣ ಜಿರಿ ಮಳೆಯಿಂದಾಗಿ ಲಾರಿ ಬಸ್ಸುಗಳ ಚಕ್ರಕ್ಕೆ ಮೆತ್ತಿದ್ದ ಕೆಂಪು ಮಣ್ಣು ಏಕ ಕಾಲಕೆ ಇವರ ಮೈಗೂ ಮೊಬೈಕಿಗೂ ಮೆತ್ತಿ ಇವರಿಬ್ಬರ ಅಂಗಿಗಳ ಬಣ್ಣವನ್ನೇ ಬದಲಿಸಿ ಬಿಟ್ಟಿತ್ತು. ಇಡೀ ಭೂಮಂಡಲದ ಭಾರವ ತಾವೇ ಹೊತ್ತ ನರಳಿಕೆಯಲ್ಲಿ ನುಗ್ಗುತ್ತಿದ್ದ ವಾಹನಗಳಿಗೆ ಇವರ ಮೊಬೈಕಿನಂತಹ ಸಣ್ಣ ವಾಹನಗಳು ಯಾವ ಲೆಕ್ಕವೂ ಇಲ್ಲದೆ ಇವರ ಇರುವನ್ನೇ ಧಿಕ್ಕರಿಸಿದಂತಹ ಧಾವಂತದಲ್ಲಿದ್ದವು.

ಅದರ ಬಲಬದಿಗೆ ಮೂರನೆಯ ಲೇನಿನಲ್ಲಿ ಈಗಷ್ಟೇ ಶೋರೂಮಿನಿಂದ ಬಂದ ಹೊಚ್ಚ ಹೊಸ ಕಾರುಗಳು ರೊಂಯ್‍ಗುಡುತ್ತ ಕ್ಷಣದಲ್ಲೇ ಮಿಂಚಿ ಮಾಯವಾಗುತ್ತಿದ್ದವು. ನೇರವಾಗಿ ದಿಟ್ಟವಾಗಿ ಕೊರೆದಿಟ್ಟ ಬಿಳಿ ಸುಣ್ಣದ ಗುರುತಿನ ಗಡಿ ಗೆರೆಯ ಈ ಸರಭರದ ಚಲನೆಯಲ್ಲಿ ಒಂದು ದಾರದಳತೆಯಷ್ಟು ನರಸಿಂಹ ಆಚೀಚೆ ಕದಲಿದರೂ ಅವಘಡ ನಿಶ್ಚಿತ.

ಹೀಗೆಯೇ ಜಿರಿಮಳೆಯ ಒಂದು ದಿನ ನರಸಿಂಹ ಕೂಡ ರಾತ್ರೋ ರಾತ್ರಿ ಲಾರಿ ಹತ್ತಿ ತನ್ನ ಊರು ತೊರೆದು ಮಹಾನಗರಕ್ಕೆ ಬಂದು ಹಗಲಿರುಳು ಶ್ರಮಿಸಿ ತನ್ನ ಮುರುಕು ಬದುಕು ಕಟ್ಟಿಕೊಂಡಿದ್ದ. ಬಾಲ್ಯದಲ್ಲೇ ಕಳೆದುಕೊಂಡ ಕನಸುಗಳನ್ನು ಮಗ ದೀಪೂವಿನ ಕಣ್ಣುಗಳಲ್ಲಿ ಕಾಣುತ್ತ ಹಗಲು ರಾತ್ರಿ ದುಡಿಯುತ್ತ... ತಾನೂ ಒಂದು ದಿನ ಹೀಗೆ ಈ ಹೆದ್ದಾರಿಯ ಬಲಬದಿಯ ಲೇನಿನಲಿ ಸ್ವಂತ ಕಾರಿನಲಿ... ಆಹಾ! ನರಸಿಂಹನ ಕನಸು ಈಗ ನೇರವಾಗಿ ಎಡಗಡೆಯ ನಿಧಾನಗತಿಯ ಚಾಲನೆಯ ಲೇನಿನಿಂದ ಲಾರಿ ಲೇನಿಗೆ ಬಂದು ಒಮ್ಮೆಲೇ ವೇಗದ ಕಾರುಗಳು ಹಾಯುವ ಬಲ ಬದಿಯ ಮೂರನೇ ಲೇನಿಗೆ ಜಿಗಿಯಬಹುದಾದ ಬದುಕನ್ನು ನೆನೆಯುವುದೇ ಎಂಥ ರೋಮಾಂಚನ ಹುಟ್ಟಿಸಿತ್ತು ಅವನಿಗೆ...!!

ಮಳೆ ಬಿಸಿಲಿನ ನೆರಳು ಬೆಳಕಿನೆಡೆಯಲ್ಲಿ ಇವರಿಬ್ಬರ ದಾರಿ ಸಾಗುತ್ತಿತ್ತು. ದೀಪು ಈಗ ಅಪ್ಪನ ಹೊಟ್ಟೆಯನ್ನು ಮತ್ತಷ್ಟು ಬಿಗಿಯಾಗಿ ಅವುಚಿಕೊಂಡು ತೂಕಡಿಸುತ್ತಿದ್ದ. ಮೊನ್ನೆ ರಾತ್ರಿಯಷ್ಟೇ ದೀಪು ತನ್ನ ಹತ್ತನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡು ಮಧ್ಯರಾತ್ರಿಯವರೆಗೂ ಹೇಮಾ, ಅದಿತಿ, ಸುಲೇಖಾ ಪಿಂಟೂವಿನೊಂದಿಗೆ ‘ಜಿಲೆಲೇ ಜಿಲೆಲೇ’ ಹಾಡಿಗೆ ಕುಣಿಕುಣಿದು ಸುಸ್ತಾಗಿ ಕೇಕು ಮೆತ್ತಿದ ಕೆನ್ನೆಯನ್ನೂ ಒರೆಸಿಕೊಳ್ಳದೆ ಹಾಗೇ ಮಲಗಿದ್ದ. ಅದರ ಮಾರನೇ ದಿನದ ಸ್ಕೂಲಿನಲ್ಲಾಗಿದ್ದು ಮಾತ್ರ ಇವರ ಜೀವನದಲ್ಲೆಂದೂ ಅರಗಿಸಿಕೊಳ್ಳಲಾಗದ ಆಘಾತ.

ದೀಪೂ ಆಕ್ಸ್‌ಫರ್ಡ್ ಇಂಗ್ಲೀಷ್ ಮೀಡಿಯಮ್ ಸ್ಕೂಲು ಸೇರಿದಾಗಿನಿಂದ ಶಾಲೆಯಿಂದ ಪ್ರತಿನಿತ್ಯ ಕಂಪ್ಲೇಂಟುಗಳು ಬರುತ್ತಲೆ ಇದ್ದವು. ಅವನಿಗೆ ಅರ್ಥವಾಗದ ಗಣಿತದ ಲೆಕ್ಕಗಳು ಹೊಂದಿಸಿ ಬರೆಯಲಾಗದ ಪದಗಳು ಇಂಗ್ಲಿಷ್‍ನ ಕಠಿಣ ವ್ಯಾಕರಣದ ಸೂತ್ರಗಳಿಗೆ ಬೆಚ್ಚಿದ್ದ ದೀಪೂ ಒಮ್ಮೊಮ್ಮೆ ನಿದ್ದೆಯಲ್ಲಿ ವಿಚಿತ್ರವಾಗಿ ಕನಲಿ ಧಿಗ್ಗನೆದ್ದು ಕುಳಿತು ನೀರು ಕುಡಿದು ಮತ್ತೆ ಅಮ್ಮನ ಬಿಗಿಯಾಗಿ ಅವುಚಿಕೊಂಡು ಮಲಗುತ್ತಿದ್ದ. ಕನ್ನಡ ವಿಷಯದಲ್ಲಿ ಮಾತ್ರ ನೂರಕ್ಕೆ ನೂರು ಬಂದಾಗ ಹಿರಿಹಿರಿ ಹಿಗ್ಗಿ ಕುಣಿದಾಡುತ್ತಿದ್ದ. ಶಾಲ್ಮಲೆಗೆ ಅಷ್ಟಿಷ್ಟು ಇಂಗ್ಲೀಷ್ ಬರುತ್ತಿದ್ದರೂ ಮೇಲಿನ ತರಗತಿಗಳಿಗೆ ಹೋದಂತೆಲ್ಲಾ ಈ ವಿಷಯಗಳು ಅವಳಿಗೂ ಅರ್ಥವಾಗದೇ ಇವನನ್ನು ಟ್ಯೂಷನ್ನಿಗೆ ಸೇರಿಸುವ ವಿಚಾರ ಪ್ರಸ್ತಾಪವಾಗಿದ್ದರೂ ಖರ್ಚಿನ ಬಾಬತ್ತು ಎದುರಾಗಿ ಅದನ್ನು ಕೈ ಬಿಟ್ಟಿದ್ದರು.

‘ಹಾರ್ಡ್ ವರ್ಕ ಮಾಡಬೇಕು ಹಾರ್ಡ್ ವರ್ಕ್, ಯಾವುದೂ ಅಷ್ಟು ಸುಲಭಕ್ಕೆ ದಕ್ಕುವುದಿಲ್ಲ ಇಲ್ಲಿ- ತಿಕಾ ಬಗ್ಗಿಸಿ ಲಕ್ಷ್ಯ ಕೊಟ್ಟು ಓದು ಕತ್ತೆ ವಯಸಾಗ್ತ ಬಂತು ನಿಂಗೆ’ ನರಸಿಂಹನ ಇಂತಹ ಹತ್ಯಾರಿನಂತಹ ಮಾತುಗಳಂತೂ ದೀಪೂವಿನ ಪಾಲಿಗೆ ಇರುಳು ದುಸ್ವಪ್ನಗಳಾಗಿ ಕಾಡುತ್ತಿದ್ದವು. ನೈಸು ರೋಡಿನಂತಹ ಸ್ವಚ್ಛವಾಗಿ ಫಳಫಳ ಹೊಳೆಯುವಂತಹ ಕುದುರೆ ರೇಸಿನ ಈ ಶಾಲೆಯೆಂಬ ಆಖಾಡದಲ್ಲಿ ತಾನೊಂದು ಏನೂ ಪ್ರಯೋಜನಕ್ಕೆ ಬಾರದ ಕುಂಟ ಕುದುರೆಯೆಂಬಂತಹ ವಿಲಕ್ಷಣ ಕೀಳರಿಮೆಯಲ್ಲಿ ದೀಪೂ ಪ್ರತಿದಿನ ನರಳುವುದೇ ಆಗಿತ್ತು.

‘ಕ್ಲಾಸಲ್ಲಿ ಲಕ್ಷ್ಯ ಕೊಟ್ಟು ಕೇಳು ಪುಟ್ಟಾ’ ಅಂತ ಶಾಲ್ಮಲೆ ಚುಟುಕಾಗಿ ಹೇಳುತ್ತಿದ್ದಳೇ ಹೊರತು ಅವನಿಗೆ ಹೇಗೆ ಅರ್ಥ ಮಾಡಿಸಿಕೊಡಬೇಕೆಂದು ಗೊಂದಲವಾಗಿ ಬಿಡಿಸಿದ ಲೆಕ್ಕ ಅರ್ಧಕ್ಕೇ ಬಿಟ್ಟು ಎದ್ದು ಒಲೆಯ ಮೇಲಿನ ಉಕ್ಕುವ ಹಾಲಿಗೆ ನೀರು ಬೆರೆಸಿ ಬತ್ತಿ ಕಡಿಮೆ ಮಾಡಲು ಹೋಗುತ್ತಿದ್ದವಳು ಮತ್ತೆ ಇತ್ತ ಬರುತ್ತಲೇ ಇರಲಿಲ್ಲ. ದೀಪೂವಿಗೆ ಈ ಲೆಕ್ಕಗಳೆ ಅರ್ಥವಾಗದೆ ಸೂತ್ರ ಕಿತ್ತ ಗಾಳಿಪಟದಂತೆ ಇತ್ತ ನೆಲಕೂ ತಾಗದ, ಮುಗಿಲಿಗೂ ದಕ್ಕದ ಒಂದು ಕ್ಷುದ್ರಗ್ರಹವಾಗಿ ಬಿಟ್ಟಿದ್ದ.
ಪೇರೆಂಟ್ಸ ಮೀಟಿಂಗುಗಳಲ್ಲಿ ವಾರ್ಷಿಕೋತ್ಸವದ ಸಮಾರಂಭಗಳಲ್ಲಿ ‘ಓಹ್! ನೀವು ದೀಪೂವಿನ ಪೇರೆಂಟ್ಸಾ...!?’ ಎಂಬ ಅವರಿವರ ಉದ್ಗಾರಗಳಲ್ಲಂತೂ ದೀಪೂವಿನ ದಡ್ಡತನ ಹಳಿಯುವ ಇರಿವ ಹತ್ಯಾರಗಳಂತಾದ ಹೊತ್ತಿನಲ್ಲಿ ಶಾಲ್ಮಲೆಗೆ ಅಲ್ಲಿಂದ ಓಡಿಹೋಗುವಷ್ಟು ಅವಮಾನವಾಗುತ್ತಿತ್ತು.

ಇಂತಹ ಕಾನ್ವೆಂಟ್ ಶಾಲೆಗೆ ದೀಪೂವಿನ ಹಾಜಾರಾತಿಯೊಂದು ಉಪಟಳ ಆದಂತಿತ್ತು. ವರ್ಷದಿಂದ ವರ್ಷಕ್ಕೆ ಈ ದೀಪೂವಿನ ಮಾರ್ಕುಗಳು ಸೊನ್ನೆ ಸುತ್ತುವಾಗ ಪ್ರಿನ್ಸಿಪಾಲರೊಮ್ಮೆ ಶಾಲ್ಮಲೆ ಹಾಗೂ ನರಸಿಂಹನನ್ನು ಶಾಲೆಗೆ ಕರೆದು ದೀಪೂವುನನ್ನು ಬೇರೆ ಶಾಲೆಗೆ ಸೇರಿಸುವ ಬಗ್ಗೆ ಯೋಚಿಸಿ. ಅವನಿಗೆ ಕನ್ನಡ ವಿಷಯದಲ್ಲಿ ಹಿಡಿತ ಇದೆ, ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನಂತ ಹೇಳಿದಾಗಲಂತೂ ಶಾಲ್ಮಲೆ ನರಸಿಂಹ ಇಬ್ಬರೂ ಅತ್ತೂ ಕರೆದು ಅವರ ಕೈ ಕಾಲಿಗೆ ಬಿದ್ದು ಅವನು ಸರಿಹೋಗುತ್ತಾನೆಂದು ಪ್ರಿನ್ಸಿಪಾಲರಿಗೆ ಮನವೊಲಿಸಿ ಬಂದಿದ್ದರು. ಅಷ್ಟಕ್ಕೂ ನಿಲ್ಲದೇ ಅವರಿವರ ಕಡೆಯಿಂದ ಮ್ಯಾನೇಜ್‍ಮೆಂಟಿಗೆ ಫೋನು ಮಾಡಿಸಿದಾಗ ಇವರ ಮೇಲೆ ಒತ್ತಡ ಹೇರಿದಂತೆನಿಸಿ ಪ್ರಿನ್ಸಿಪಾಲರಿಗೆ ಮತ್ತಷ್ಟು ಸಿಟ್ಟು ತರಿಸಿತ್ತು.

ಅಕ್ಯಾಡೆಮಿಕ್ ಪರ್ಫಾರ್ಮೆನ್ಸ್ ಇಲ್ಲದ ಈ ಹುಡುಗನನ್ನು ಹೇಗಾದರೂ ಮಾಡಿ ತಮ್ಮ ಶಾಲೆಯಿಂದ ಜಾಣ್ಮೆಯಿಂದ ಹೊರಗೆ ಹಾಕುವ ಹಠಕ್ಕೆ ಬಿದ್ದ ಶಾಲಾ ಮಂಡಳಿ ಈಗ ದೀಪೂ ಸಣ್ಣ ತಪ್ಪೊಂದನ್ನು ಮಾಡಲೆಂದೇ ಕಾಯುತ್ತಿದ್ದರು. ದೀಪೂವಿಗೆ ಅವಮಾನವಾಗಲೆಂದೇ ಅವನನ್ನು ಆನ್ಯುವಲ್ ಡೇ ಡ್ಯಾನ್ಸಿನಿಂದ ಭಾಷಣದ ಸ್ಪರ್ಧೆಯಿಂದ ಕೈ ಬಿಟ್ಟಿದ್ದರು. ತಪ್ಪೇ ಮಾಡಬಾರದೆಂಬ ಹಠಕ್ಕೆ ಬಿದ್ದಿದ್ದ ದೀಪೂ ತನ್ನ ಅವಮಾನದ ಉಗುಳು ತಾನೇ ನುಂಗಿ ಜೀರ್ಣಿಸಿಕೊಳ್ಳುವುದು ಈಗ ಸಹಜವೇ ಆಗಿ ಹೋಗಿತ್ತು.

‘ನಿನ್ನ ಕ್ಲಾಸ್ ಮೇಟ್ ಹೇಮಂತಾ ನೋಡೂ... ಅವ್ರ ಮನೇಲೂ ಕನ್ನಡಾನೇ ಮಾತಾಡೋದು! ಅವನಿಗೆ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ತೊಂಬತ್ತು... ನಿನಗೇನಾಗಿದೆ ಧಾಢಿ ತಿಂದುಂಡು ಕೊಬ್ಬು ಬೆಳೆಸಿಕೊಂಡಿದ್ದೀಯ...!’ ನರಸಿಂಹನ ಯಾವೊತ್ತಿನ ಆವೇಶದಲ್ಲಿ ಹೂಡುವ ಮಾತಿನ ಬಾಣಗಳಿವು.
‘ಸರಿ ಹೋಗುತ್ತಾನೆ.’
‘ಇನ್ನೂ ಹುಡುಗ ಬುದ್ಧಿ’
‘ಓದ್ತಾನೆ... ಓದ್ತಾನೆ’ ಅಂತ ಅಕ್ಕ ಪಕ್ಕದವರು ಬಂಧು-ಬಳಗದವರು ದಿನಬೆಳಗಾದರೆ ಇವರನ್ನು ಸಮಾಧಾನ ಮಾಡುವುದೇ ಆಯಿತು.
‘ಅಷ್ಟಕ್ಕೂ ತಾನು ಸರಿ ಹೋಗುವುದೆಂದರೆ ಏನು?’ ಎಂದು ಒಮ್ಮೊಮ್ಮೆ ದಿಗಿಲು ಬೀಳುತ್ತಿದ್ದ ದೀಪೂ.

ತಿರುಮಲನಿಗೆ ಮುಡಿ ಕೊಟ್ಟರು. ಊರ ಮಾರಮ್ಮನಿಗೆ ಕುರಿ ಬಲಿ ಕೊಟ್ಟರು. ಶೃಂಗೇರಿ ಧರ್ಮಸ್ಥಳ ಕುಕ್ಕೆ ಸ್ವಾಮಿ ಬೆಟ್ಟ ಹತ್ತಿ ಬೆಟ್ಟ ಇಳಿದರು.ಡಾಕ್ಟರ ಭೇಟಿ ಆಪ್ತ ಸಮಾಲೋಚಕರ ಚೀಟಿ ಎಕ್ಸಟ್ರಾ ಟ್ಯೂಷನ್, ಬ್ಯಾಕ್‍ಅಪ್ ಕ್ಲಾಸು... ಏನೇನೋ ಹರಸಾಹಸ ಬಿದ್ದರೂ ದೀಪೂವಿನ ಅಂಕಗಣಿತದ ಅಂಕಗಳು ಹತ್ತರ ಮೇಲೆ ಹತ್ತಲೇ ಇಲ್ಲ.

ಬಾಲು ಅಂಕಲ್ ಅಲಿಯಾಸ್ ಬಾಲರಾಜ್ ನರಸಿಂಹನ ಗೆಳೆಯ. ಮಾಗಡಿ ರೋಡಿನ ಕಲಬಾಳುವಿನಲ್ಲಿ ಇವನದ್ದೇ ಇಟ್ಟಿಗೆ ಕಾರ್ಖಾನೆ ಇದೆ. ಉತ್ತರ ಭಾರತದ ನಾಲ್ಕಾರು ಕುಟುಂಬಗಳೊಂದಿಗೆ ಅವರ ಮಕ್ಕಳೂ ಇಲ್ಲಿ ಮಣ್ಣು ಎಳೆದು ಬುಟ್ಟಿ ಹೊತ್ತು ಹಸಿ ಮಣ್ಣಿನ ಇಟ್ಟಿಗೆಯ ಅಚ್ಚಿಗೆ ಹಾಕಿ ಗೂಡಿನ ಸುತ್ತ ಇಟ್ಟಿಗೆ ಸುಡುವ ಮಕ್ಕಳೊಂದಿಗೆ ಇವನಿದ್ದರೆ ಬುದ್ದಿ ಕಲಿಯುತ್ತಾನೆಂದು-ನರಸಿಂಹ ಶಾಲ್ಮಲೆ ನಂಬಿದ್ದಾರೆ.

‘ಕಣ್ಣು ಕಿತ್ತು ಕಾಲು ಮುರಿದು ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ದೇವಾಲಯದ ಹೊರಗೆ ಮೈ ಕೈಗೆ ಗಾಯ ಮಾಡಿ ಬ್ಯಾಂಡೇಜು ಸುತ್ತಿ ಭಿಕ್ಷೆಗೆ ತಳ್ಳುತ್ತಾರೆ ನಿನ್ನ ಇಲ್ಲೇ ಬಿಟ್ಟು ಬಿಡ್ತೀನಿ ಹುಷಾರು’ ಎಂದು ಪ್ರತಿ ಬಾರಿ ಮೆಜೆಸ್ಟಿಕ್‍ನ ಕತ್ತಲೆಯ ಸುರಂಗ ಮಾರ್ಗಗಳ ಹಾಯುವಾಗ ಶಾಲ್ಮಲೆ ದೀಪೂವನನ್ನು ಹೆದರಿಸುತ್ತಿದ್ದಳು. ಆಗ ಅವನು ತನ್ನ ಅವ್ವನ ಬೆರಳನ್ನು ಇನ್ನಷ್ಟು ಬಿಗಿ ಹಿಡಿದು ಆ ಬಾಲ ಭಿಕ್ಷುಕರು ಕಣ್ಣಿಂದ ಮರೆಯಾಗುವವರೆಗೂ ನೋಡುತ್ತಿದ್ದ.

ನರಸಿಂಹ ಈಗ ತನ್ನ ಮನೆಗೂ ಗೆಳೆಯ ಬಾಲುವಿನ ಮನೆಗೂ ನಡುವಿನ ಅಂತರದ ನೈಸ್ ರಸ್ತೆಯ ಮೇಲಿದ್ದ. ಬಸ್ಸು ಲಾರಿ ಟೆಂಪೋ ಕಾರುಗಳು ಭರ್ರೋ ಎಂದು ಇವನ ಮೊಬೈಕನ್ನು ಓವರ್‍ಟೇಕು ಮಾಡಿ ಹೋದಾಗಲೆಲ್ಲಾ ತನ್ನ ಬಡತನವನ್ನು ಅಸಹಾಯಕತೆಯನ್ನು ಹಂಗಿಸಿ ಹೋದಂತಾಗುತ್ತಿತ್ತು. ಬದುಕಿನ ಈ ರೇಸಿನಲ್ಲಿ ತಾನೆಲ್ಲೋ ಬಹಳ ಹಿಂದೆ ಬಿದ್ದುಬಿಟ್ಟೆ ಎಂಬ ಕಳವಳದಲ್ಲೇ ನರಸಿಂಹನ ದಾರಿ ಸಾಗುತ್ತಿತ್ತು. ಈಗ ಇವನ ಮುಂದೊಂದು ಯಾವುದೋ ಉತ್ತರ ಭಾರತದ ಪಾಸಿಂಗ್ ಇರುವ ಸಾವಿರ ಸಾವಿರ ಟನ್ನು ಲೋಡು ಹೊತ್ತ ಲಾರಿಯೊಂದು ಮುಂದಿನ ಏರು ಹತ್ತಲಾಗದೆ ತಿಣುಕಾಡುತ್ತಿತ್ತು.

ಇದ್ದಕ್ಕಿದ್ದಂತೆ ನರಸಿಂಹನ ಗಮನ ಲಾರಿಯ ಹಿಂಬದಿಯಲ್ಲಿ ಹರಿದು ಹೋದ ಬಣ್ಣಬಣ್ಣದ ಪತಾಕೆಗಳಂತಹ ರಿಬ್ಬನುಗಳ ನಡುವೆ ವಾಕ್ಯಗಳು ಕಣ್ಣಿಗೆ ಬಿದ್ದವು. ‘‘Horn ok please,, ಮೇರಾ ಭಾರತ ಮಹಾನ್’ ಬರಹದ ನಡುವೆ Deepu, Sanvi ಎಂಬ ಬರಹ ಓದಿ, ಓಹ್! ಈ ಲಾರಿಯವನ ಮಗನ ಹೆಸರೂ ದೀಪೂವೇ ಎಂದು ಅಚ್ಚರಿಪಟ್ಟ. ಅವನಿಗೊಬ್ಬ ಸಾನ್ವಿ ಎಂಬ ಮಗಳೂ ಇದ್ದಾಳೆ. ಆತನ ಇಬ್ಬರೂ ಮಕ್ಕಳೂ ಈಗ ಎಷ್ಟನೇ ತರಗತಿಯಲ್ಲಿ ಓದುತ್ತಿರಬಹುದು? ತನ್ನ ಮಗನಂತೆ ಡ್ರೈವರನ ಮಗ ಕೂಡ ದಡ್ಡನೇ? ಉಢಾಳನೇ? ಮುಠ್ಠಾಳನೇ? ದಾರಿ ತಪ್ಪಿದವನೇ? ದಾರಿ ತಿಳಿಯದವನೇ?... ಯೋಚಿಸುತ್ತಾ ಗಾಡಿ ಓಡಿಸುತ್ತಿದ್ದ ನರಸಿಂಹ.

ಹಿಂದೆ ಕುಳಿತ ದೀಪೂ ಈಗಷ್ಟೇ ನಿದ್ದೆಯಿಂದ ಎದ್ದಂತಿದ್ದ. ಅವನ ಎದೆಯ ಬಡಿತ ಹೆದ್ದಾರಿ ವೇಗದಷ್ಟೇ ಇದ್ದಿದ್ದು ಈಗ ನರಸಿಂಹನ ಬೆನ್ನಿನಿಂದ ಹಾಯ್ದು ಅವನ ಎದೆಯೊಳಗೂ ನುಗ್ಗಿತ್ತು. ಈ ಲಾರಿಯವನಿಗೂ ಕೂಡ ತನ್ನ ಮಗನ ಈ ಹೆಸರು ನೋಡಿದಾಗಲೆಲ್ಲಾ ಅವನ ಎದೆಬಡಿತ ಕೇಳಿಸುತ್ತಿರಬಹುದಾ? ಅದೆಷ್ಟು ರಾಜ್ಯದ ಗಡಿ ಗೆರೆ ದಾಟಿ ಟೋಲು ಸಿಗ್ನಲ್ಲುಗಳ ಹಾದು ಹೊತ್ತು ತಂದಿರಬೇಕು ಪುಟ್ಟ ಮಕ್ಕಳ ಹೆಸರು ಹೊತ್ತ ಲಾರಿ?

ಈಗ ಮತ್ತೆ ಮಳೆ ಬರುವ ಮುನ್ಸೂಚನೆಯ ಹಾಗೆ ಸುತ್ತ ಕತ್ತಲು ಕವಿಯಿತು. ರಸ್ತೆ ಬದಿಯುದ್ದಕ್ಕೂ ಸಾಲಾಗಿ ನೆಟ್ಟ ತೇಗದ ಮರಗಳು ಹಸಿರುಬಣ್ಣದ ಯುನಿಫಾರ್ಮು ತೊಟ್ಟ ಶಾಲೆಯ ಮಕ್ಕಳು ಪ್ರಾರ್ಥನೆಗೆ ನಿಂತಂತೆ ಸಾಲಾಗಿ ನಿಂತಿದ್ದವು. ಇನ್ನು ಇಪ್ಪತ್ತು ವರ್ಷಕ್ಕೆ ಈ ಮರಗಳನ್ನೆಲ್ಲಾ ಕತ್ತರಿಸಿ ‘ಸಾ’ಮಿಲ್ಲಿಗೆ ಸಾಗಿಸಿ ತಮಗೆ ಬೇಕಾದ ಆಕಾರಕ್ಕೆ ಸೀಳಿ ಮೇಲೊಂದಿಷ್ಟು ಪಾಲಿಶ್ ಮಾಡಿದ ಈ ತೇಗಿನ ತುಂಡುಗಳು ಯಾರದ್ದೋ ಮನೆಯ ಪೀಠೋಪಕರಣಗಳಾಗಿ ಬದಲಾಗಿ ಬಿಡುತ್ತವೆ.

ಇವರ ಮುಂದಿದ್ದ ಲಾರಿಯನ್ನು ಓವರು ಟೇಕು ಮಾಡಿ ಸಾಗಿದ ನರಸಿಂಹನಿಗೆ ರಸ್ತೆ ಏರಿನಿಂದ ಇಳಿಯುವ ಹಾದಿಯಲ್ಲಿ ಕಣ್ಣು ಹಾಯುವವರೆಗೂ ಉದ್ದೋ ಉದ್ದಕ್ಕೆ ನಿಂತ ವಾಹನಗಳ ಸಾಲುಗಳು ಕಂಡವು. ಮುಂದೆ ಏನಾಗಿತ್ತೋ ಏನೆಂಬುದು ಯಾರಿಗೂ ಗೊತ್ತಿಲ್ಲದೆ ಡ್ರೈವರುಗಳೆಲ್ಲಾ ತಮ್ಮ ತಮ್ಮ ಗಾಡಿಗಳಿಗೆ ದಾರಿ ಮಾಡಿಕೊಳ್ಳಲು ಕಿವಿಯ ತಮಟೆ ಹರಿದು ಹೋಗುವ ಹಾಗೆ ‘ಪೋಂವ್, ಪೋಂವ್’, ಕೀಂ... ಕೀ...’ ಎಂದು ಕರ್ಕಶ ಹಾರ್ನು ಬಾರಿಸುತ್ತಲೇ ಇದ್ದರು. ಇನ್ನು ಕೆಲವರು ತಮ್ಮ ವಾಹನಗಳಿಂದ ಇಳಿದು ತಮ್ಮ ಮುಂದಿನ ದಾರಿ ಏನಾಗಿರಬಹುದೆಂದು ಕತ್ತೆತ್ತಿ ನೋಡಿದಷ್ಟೂ ಉದ್ದವಾಗುತ್ತಿರುವ ಕಿಕ್ಕಿರಿದ ಟ್ರಾಫಿಕ್ಕು ನೋಡಿ ಸುಸ್ತಾಗಿ ಸ್ಟೇರಿಂಗಿನ ಮೇಲೆ ಹಣೆಯೂರಿ ನಿದ್ದೆಗೆ ಜಾರಿದ್ದರು.

ನರಸಿಂಹ ಒಂದು ಕ್ಷಣ ತನ್ನ ಗಾಡಿ ನಿಲ್ಲಿಸಿ ತನ್ನ ಮೊಬೈಲು ತೆರೆದು ನೋಡಿದ. ತನ್ನ ಆಫೀಸಿನಿಂದ ಹತ್ತು ಹದಿನೈದು ಮಿಸ್ಡ್ ಕಾಲುಗಳಿದ್ದವು. ಇತ್ತ ಹೊರಡುವ ಅವಸರದಲ್ಲಿ ತನ್ನ ಆಫೀಸಿಗೊಂದು ಮಾತೂ ಹೇಳದೆ ಬಂದು ಈಗ ಈ ಜನದಟ್ಟಣೆಯಲ್ಲಿ ಸಿಕ್ಕು ಫಜೀತಿಗೊಳಗಾಗಿದ್ದ. ಇನ್ನು ತಡ ಮಾಡಿದರೆ ಆಗದೆಂದು ಮತ್ತೆ ಗಾಡಿ ಶುರು ಮಾಡಿ ಟ್ರಾಫಿಕ್ಕಿನ ಮಧ್ಯ ತೂರುತ್ತ ಕಾರು ಲಾರಿಯ ಸಂದಿಗೊಂದಿಗಳನ್ನೆಲ್ಲಾ ಒಂದೊಂದೇ ದಾಟುತ್ತ ನಡೆದ.

ಕೆಲವೇ ಗಳಿಗೆಗಳ ಹಿಂದೆ ತನ್ನ ನಿಧಾನ ಗತಿಯ ಚಾಲನೆಗೆ ಹಂಗಿಸಿದಂತೆ ಓವರು ಟೇಕು ಮಾಡಿದ ವಾಹನಗಳೆಲ್ಲಾ ನಿರ್ವಾಹವಿಲ್ಲದೆ ಈಗ ನಿಂತಲ್ಲೇ ನಿಂತಿದ್ದವು. ರಸ್ತೆಯ ಮೇಲಿನ ಈ ಸಣ್ಣಗೆಲುವನ್ನೇ ತನ್ನ ಬದುಕಿನ ದೊಡ್ಡಗೆಲುವೆಂದು ಬಗೆದು ರೋಮಾಂಚಿತನಾದವನ ಹಾಗೆ ದೊಡ್ಡ ದೊಡ್ಡ ಲಾರಿ ಪುಟ್ಟ ಪುಡಿ ಕಾರು ಮೋಟಾರುಗಳನ್ನು ನಿರ್ದಾಕ್ಷಿಣ್ಯವಾಗಿ ಹಿಂದಿಕ್ಕುತ್ತ ಇವರ ಮೇಲಿನ ಸೇಡು ತೀರಿಸಿಕೊಳ್ಳಲೆಂಬಂತೆ ಸಂದಿ ಗೊಂದಿಯನ್ನು ನುರಿತ ಚಾಲಕನಂತೆ ತೂರುತ್ತ ಹೋದ... ಮುಂದೆ ಮುಂದೆ ಹೋದಂತೆ ಇವನ ದಾರಿ ತೆರೆಯುತ್ತ ಹೋಯಿತು. ನೂರು... ಇನ್ನೂರು... ಮುನ್ನೂರು... ಮೀಟರು... ಅರ್ಧ ಕಿಲೋ ಮೀಟರು... ಕಿಲೋ ಮೀಟರು... ದಾಟಿದ ಮೇಲೆ ಮಾಗಡಿ ರೋಡಿನ ಟೋಲಿಗೆ ಎಡಕ್ಕೆ ತಿರುವಿ ನಿಂತಾಗ ಒಂದು ದೀರ್ಘ ಉಸಿರು ಎಳೆದು ನಿರಾಳನಾದ. ಮುಂದೆ ಇನ್ನೂ ಎಷ್ಟೋ ದೂರದವರೆಗೆ ಟ್ರಾಫಿಕ್ಕು ನಿಂತೇ ಇತ್ತು. ಈ ಒಂದು ಕ್ಷಣ ತನ್ನ ಹಿಂದೆ ಸಾಲಾಗಿ ನಿಂತ ವಾಹನ ಚಾಲಕರ ಕಂಗೆಟ್ಟ ಮುಖ ನೋಡಿ ವಿಚಿತ್ರವಾದ ಗೆಲುವಿನ ನಗೆ ನಕ್ಕು ಮತ್ತೆ ಗಾಡಿ ಶುರು ಮಾಡಿದ.

ನರಸಿಂಹನ ಮೊಬೈಕು ಈಗ ಮಾಗಡಿ ರೋಡಿನಲ್ಲಿ ಕಲಬಾಳುವಿನ ಕಡೆಗೆ ಹೋಗುವ ಕಿರಿದಾದ ಹಾದಿಯನ್ನು ಸೀಳುತ್ತ ಜನರ ನಡುವೆ ಕರಗುತ್ತ ಒಂದಾಗುವ ಹೊತ್ತಿಗೇ ಸರಿಯಾಗಿ ಬಿರುಸಾದ ಮಳೆ ಸುರಿಯತೊಡಗಿತು. ನರಸಿಂಹ ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲೇ ಹತ್ತಿರದ ದುರ್ಗಾ ಕ್ಯಾಂಟಿನೊಳಗೆ ತೂರಿದ. ಅವನ ಹಿಂದೆ ಹಿಂದೆಯೇ ದೀಪೂ ಕೂಡ ಅಪ್ಪನ ಬೆರಳು ಬಿಗಿಯಾಗಿ ಹಿಡಿದುಕೊಂಡೇ ನುಸುಳಿದ. ಪ್ರಯಾಣದ ಸುಸ್ತಿಗೋ ದಾರಿಯಲಿ ಕಂಡ ಚಿತ್ರಗಳಿಗೋ ನರಸಿಂಹನ ಕಣ್ಣುಗಳಲ್ಲಿ ಈಗ ಒಂಥರದ ವಿಚಿತ್ರ ಬಳಲಿಕೆಯಿತ್ತು. ಕ್ಯಾಂಟೀನಿನ ಮೂಲೆಯೊಂದರ ಟೇಬಲಿನೆದಿರು ಅಪ್ಪ ಮಗ ಎದಿರಾ ಬದಿರು ಕುಳಿತರು. ನರಸಿಂಹ ದೀಪೂವಿನ ಕಣ್ಣೊಳಗೊಮ್ಮೆ ಇಣುಕಿದ. ದೀಪೂವಿನ ಮುಖ ಈಗಷ್ಟೇ ಕಡಿದ ತೇಗದ ಮರದ ಎಲೆಯಂತೆ ಬಾಡಿ ಹೋಗಿತ್ತು. ಸುರಿದ ಕಣ್ಣಿನೊಳಗಿನ್ನೂ ತೇಲುವ ಕರಿ ಮೋಡಗಳ ಸಾಲು ಇತ್ತು. ಕಡಿದ ಮರದ ಗಂಧದ ಹಾಗೆ ಬೆವರು ಪರಿಮಳದ ದೀಪೂ ತನ್ನ ಬ್ಯಾಗ್ ಪ್ಯಾಕನ್ನು ತೆಗೆದು ಬದಿಯಲ್ಲಿರಿಸಿ ಎರಡೂ ಕೈ ಕಟ್ಟಿ ಜೋಡಿಸಿ ಟೇಬಲಿನ ಮೇಲಿಟ್ಟ. ಆ ಅರೆ ಬೆತ್ತಲು ನೀಳ ಕೈಗಳ ಮೇಲೆ ನಿನ್ನೆ ರಾತ್ರಿ ನರಸಿಂಹ ಬೀಸಿದ ಬೆಲ್ಟಿನ ಬರೆಗಳ ಗುರುತು ಕಂಡ ಅವನ ಕರಳು ಚುರ್ರೆಂದು ಕಣ್ಣು ತುಂಬಿಬಂದವು. ಆದರೂ ಅವನ ಮೇಲೆ ಕರುಣೆ ತೋರುವುದೊಳಿತಲ್ಲವೆಂದು ಅವನೆದಿರು ಹುಸಿ ಗಂಭೀರತೆ ನಟಿಸುತ್ತ ಎದೆ ಸೆಟೆಸಿ ಕುಳಿತ.

‘ಏನ್ ತಿಂತಿಯೋ? ಹೊಟ್ಟೆ ತುಂಬ ಉಣ್ಣು’ ಇನ್ನು ನನ್ನ ನಿನ್ನ ಭೇಟಿ ಯಾವಾಗಲೋ ಏನೋ? ಬೇಗ ಬೇಗ ತಿಂದು ಎದ್ದೇಳು’ ದೀಪೂ ತನಗೇನೂ ಬೇಡವೆಂಬಂತೆ ತಲೆಯಲ್ಲಾಡಿಸಿದ. ಈ ಕ್ಷಣಕೆ ತಲೆ ತಗ್ಗಿಸಿ ಮೊಬೈಲಿನಲ್ಲಿ ಮುಳುಗಿದ್ದ ನರಸಿಂಹನ ಕಣ್ಣುಗಳಲ್ಲಿ ಮೊನ್ನೆಯಷ್ಟೇ ನಗುನಗುತ್ತ ಸಂಭ್ರಮದಲ್ಲಿ ಬರ್ತಡೇ ಕೇಕು ಕಟ್ ಮಾಡಿದ ದೀಪೂವಿನ ಬಗೆ ಬಗೆಯ ಭಂಗಿಯ ಫೋಟೋಗಳು ಸ್ಕ್ರೋಲಾಗತೊಡಗಿದ್ದವು.
ಅಷ್ಟರಲ್ಲಿ ವೇಟರು ಬಂದು ನಿಂತಿದ್ದ ಗಮನಿಸಿದ ನರಸಿಂಹ-
‘ಬೇಗ ಬೊಗಳೋ ಏನು ತಿಂತೀಯಾ ?’
ದೀಪೂವಿನದು ಮತ್ತದೇ ಮೌನ.
ಜಿರಿ ಮಳೆ ಕಣ್ಣು, ಅದದೇ ಭಾವ.
‘ಹಾಳಾಗಿ ಹೋಗು’ ಎಂದವನೇ ‘ಒಂದು ಕಾಫಿ’ ಎಂದಷ್ಟೇ ಹೇಳಿ ನರಸಿಂಹ ಎದ್ದು ಕ್ಯಾಂಟೀನಿನ ಹಿಂದಿನ ಬಯಲಿನಲ್ಲಿದ್ದ ವಾಷ್ ರೂಮಿನೆಡೆಗೆ ನೆಗೆದ. ಕ್ಯಾಂಟೀನಿನ ಆ ಬಯಲು ಶೌಚಾಲಯದ ಪಕ್ಕ ನಿಂತ ನರಸಿಂಹ ಒಂದು ಸಿಗರೇಟು ಎಳೆದು ಭುಸಭುಸನೇ ಹೊಗೆ ಬಿಡತೊಡಗಿದ್ದ. ಇನ್ನೇನು ಕೊನೆಯ ಪಫ್ಫು ಎಳೆಯಬೇಕೆನ್ನುವಷ್ಟರಲ್ಲಿ ಬಾಗಿಲಿನ ಸಂದಿಯಿಂದ ದೀಪೂ ತನ್ನನ್ನೇ ತದೇಕ ಚಿತ್ತದಿಂದ ನೋಡಿದ್ದು ನರಸಿಂಹನ ಅರಿವಿಗೆ ಬಂದು ಒಂಥರದ ಗಿಲ್ಟ್‍ನಲ್ಲಿ ನರಳಿದ.

‘ಇಲ್ಯಾಕೆ ಬಂದೆ ನೀ ಅಲ್ಲೇ ಕೂತ್ಕೊಳ್ಳಲೇನು ಧಾಡಿ ನಿಂಗೆ?’

‘ಪಪ್ಪಾ ಪ್ಲೀಸ್ ಪಪ್ಪಾ ಮನೆಗೆ ಹೋಗೋಣ ಬಾ ಪಪ್ಪಾ’ ಮತ್ತದೇ ದೀಪೂವಿನ ರೋದನೆ.

ಮೊಬೈಲಿನಲ್ಲೇ ಸಮಯ ನೋಡಿಕೊಂಡ ನರಸಿಂಹ ಮತ್ತೆ ಮರಳಿ ಮನೆ ತಲುಪುವುದು ತಡವಾಗುತ್ತದೆಯೆಂದು ಒಳಗೆ ಬಂದು ಸೊರಸೊರನೆ ಆರಿದ ಕಾಫೀ ಹೀರಿ ಬಿಲ್ಲು ಕೊಟ್ಟು ಮತ್ತೆ ಛಂಗನೇ ನೆಗೆದು ಮೊಬೈಕು ಏರಿ ಕುಳಿತು ವೇಗವಾಗಿ ಸಾಗುತ್ತಿದ್ದ. ಈಗಾಗಲೇ ಇವನ ಮೊಬೈಲಿಗೆ ಬಾಲುವಿನ ಎರಡು ಮೂರು ಮಿಸ್ಡ್ ಕಾಲುಗಳು ಬಂದಿದ್ದು ಗಮನಿಸಿ ಅವನಿಗೆ ವಾಪಸು ಕರೆ ಮಾಡದೇ ಇನ್ನೇನು ತಲುಪಿಯೇ ಬಿಡುತ್ತೇವೆಂಬ ಅವಸರದಲ್ಲಿ ರಸ್ತೆಯ ಮೇಲಿನ ತಗ್ಗು ದಿಣ್ಣೆ ಹಂಪ್ಸು ಗುಂಡಿಗಳನ್ನು ಹಾರಿಸುತ್ತ ನಡೆದ. ಗಾಳಿಯ ವೇಗದಲ್ಲಿ ಚಲಿಸುತ್ತಿದ್ದ ಗಾಡಿಗೂ ನರಸಿಂಹನ ರೋಷ ಅರ್ಥವಾದವರಂತೆ ಅಷ್ಟೇ ವೇಗವಾಗಿ ಹಾರುತ್ತ ನಡೆದಿತ್ತು. ಹೀಗೆ ಹಾರುವಾಗಲೆಲ್ಲಾ ಕುಲುಕಾಟಕೆ ದೀಪೂವಿನ ಬ್ಯಾಗಿನಲ್ಲಿದ್ದ ತಟ್ಟೆ ಲೋಟಗಳ ‘ಟಳ್ ಟಳಾರ್’ ಸದ್ದಾಗುತ್ತಿತ್ತು. ಬಿಸಿ ಬೇಳೆ ಬಾತೂ ಕೂಡ ಈಗ ಆರಿ ಹೋಗಿತ್ತು.
ಹೀಗೆ... ಇದೇ ವೇಗದಲ್ಲಿ ಸಾಗುತ್ತಿರುವಾಗ ಒಂದು ತಿರುವಿನಲ್ಲಿ ರಸ್ತೆಯ ಮೇಲಿದ್ದ ಸಣ್ಣ ಮರಳು ಗುಡ್ಡೆಗೆ ಮೊಬೈಕು ಗಾಲಿ ಸಿಲುಕಿ ಒಮ್ಮೆಲೇ ಸ್ಕಿಡ್ಡಾಗಿ ಬಿದ್ದು ಹೋ... ಹೋ..., ಎನ್ನುವಷ್ಟರಲ್ಲೇ ನರಸಿಂಹ ಗಾಡಿಯ ಜೊತೆಗೆ ಎದುರಿನ ಕಲ್ಲು ಕಂಪೌಂಡಿಗೆ ಹೊಡೆದು ಬಿದ್ದು ಬಿಟ್ಟಿದ್ದ. ದೀಪೂ ಗಾಡಿ ಸ್ಕಿಡ್ಡಾಗುವ ಗಳಿಗೆಯಲ್ಲೇ ಆಯತಪ್ಪಿ ಗಾಡಿಯಿಂದ ನಡುರಸ್ತೆಯ ಹೊಂಡದಲ್ಲೇ ಬಿದ್ದಿದ್ದ. ಇಲ್ಲಿ ಏನಾಗುತ್ತಿದೆಯೆಂದು ಎದ್ದು ನೋಡುವಷ್ಟರಲ್ಲಿ ಕಂಪೌಂಡಿನ ಕಲ್ಲಿಗೆ ನರಸಿಂಹನ ತಲೆ ತಾಗಿ ಅವನ ತಲೆಯಿಂದ ವಿಪರೀತ ರಕ್ತವೊಸರಿ ಪ್ರಜ್ಞೆ ತಪ್ಪಿ ಬಿದ್ದಿದ್ದ.

ಪಪ್ಪಾ... ಪಪ್ಪಾ... ಎಂದು ಚೀರುತ್ತಲೇ ದೀಪೂ ಅಪ್ಪನ ಎಬ್ಬಿಸಲು ನೋಡಿದ. ಅಜಾನುಬಾಹು ನರಸಿಂಹನ ದೇಹ ಚೂರೂ ಮಿಸುಕಾಡಲಿಲ್ಲ. ಅವನ ಜೇಬಿನಲ್ಲಿದ್ದ ಮೊಬೈಲು ರಿಂಗಣಿಸುತ್ತಿತ್ತು. ಮತ್ತದೇ ಆ ಕಡೆಯಿಂದ ಬಾಲುವಿನ ಫೋನು. ನಡುಗುವ ಕೈಗಳಲ್ಲೇ ಕರೆ ಸ್ವೀಕರಿಸಿದ ದೀಪೂ-ಆ ಕಡೆಯಿಂದ ದನಿ ಉಲಿಯುವ ಮೊದಲೇ ಅಂಕಲ್... ಅಂಕಲ್ ಆಕ್ಸಿಡೆಂಟು... ಪಪ್ಪಾ... ಇಲ್ಲೇ ನಿಮ್ಮ ಮನೆಯಿಂದ ತುಸು ಹತ್ತಿರವೇ... ದೀಪೂವಿನ ಕಣ್ಣೊಳಗೆ ನಿಲ್ಲದ ಜಿರಿ ಮಳೆ.
***
ನರಸಿಂಹನಿಗೆ ಪ್ರಜ್ಞೆ ಮರಳಿ ಒಂದು ಕ್ಷಣ ಕಣ್ಣು ಬಿಟ್ಟು ಸುತ್ತ ನೋಡಿದ. ಮದ್ದಿನ ಮಂಪರಿನ ಕಣ್ಣುಗಳಲ್ಲಿ ಕಾವೇರಿ ಆಸ್ಪತ್ರೆ ಎಂದು ತಮ್ಮ ಎದೆಯ ಮೇಲೆ ಬರೆದುಕೊಂಡಿದ್ದ ನರ್ಸು ಡ್ರಿಪ್ಪು ಬದಲಿಸುತ್ತಿದ್ದಳು. ಅತ್ತ ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಆಸ್ಪತ್ರೆಯ ಕೋಣೆಯ ತುಂಬ ಬಿಳಿಚಿನ ಬೆಳಕು.

ಶಾಲ್ಮಲೆ ಚೇರಿನ ಮೇಲೆ ಕುಳಿತೇ ತೂಕಡಿಸುತ್ತಿದ್ದಳು. ದೀಪೂ ಬಿಟ್ಟ ಕಣ್ಣು ಬಿಟ್ಟೇ ಈಗಷ್ಟೇ ತೆರೆದ ಅವನ ಅಪ್ಪನ ಕಣ್ಣುಗಳಲ್ಲಿ ಹೊಸ ಅಪ್ಪನ ಹುಡುಕುತ್ತಿದ್ದ.
ಇದ್ದಕ್ಕಿದ್ದಂತೆ ದೀಪೂವಿನ ಕೈಯೊಳಗಿದ್ದ ನರಸಿಂಹನ ಮೊಬೈಲು ರಿಂಗಾಯಿತು. ಮೊಬೈಲಿನ ಪರದೆಯ ಮೇಲೆ ‘ಬಾಲರಾಜ್’ ಎಂಬ ಹೆಸರು ನೋಡಿದವನೆ, ಕರೆ ಸ್ವೀಕರಿಸಿ ‘ಅಂಕಲ್, ಅಪ್ಪಾ ಈಗಷ್ಟೇ ಕಣ್ಣು ಬಿಟ್ಟು ಮಾತಾಡಿದ್ರು ಅಂಕಲ್, ನಾಳೆ ನಾನು ಒಬ್ಬನೇ ನಿಮ್ಮ ಬಳಿ ಬಂದು ಸೇರುವೆ ಅಂಕಲ್’ ಎಂದು ಹೇಳಿ ಕರೆ ತುಂಡರಿಸಿದವನೇ ಅವ್ವನ ಕೈಲಿ ಮೊಬೈಲು ಕೊಟ್ಟು ಕೋಣೆಯಿಂದ ಹೊರಗೆ ಓಡಿ ಬಂದು ಬಾಲ್ಕನಿಯ ಕಂಬಿ ಹಿಡಿದು ನಿಂತ.
ತುಸುವೇ ದೂರದ ನೈಸ್ ಹೆದ್ದಾರಿಯಲಿ ರೊಂಯ್‍ಗುಡುತ್ತಿರುವ ವಾಹನಗಳ ಸದ್ದು. ಬಾಲ್ಕನಿಗೆ ತಾಗಿಕೊಂಡೇ ಇದ್ದ ತೇಗದ ಮರದ ಎಲೆಗಳ ಮೇಲೆ ಪತರುಗುಟ್ಟುತಿರುವ ಆಷಾಢದ ಜಿರಿ ಕಣ್ಣಿನ ಮಳೆ.

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.