ADVERTISEMENT

ಮೊಲ ತೋರಿದ ಮಾರ್ಗ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಫೆಬ್ರುವರಿ 2019, 19:45 IST
Last Updated 9 ಫೆಬ್ರುವರಿ 2019, 19:45 IST
ಚಿತ್ರ: ಶಶಿಧರ ಹಳೆಮನಿ
ಚಿತ್ರ: ಶಶಿಧರ ಹಳೆಮನಿ   

ಬೇಟೆಗಾರ ಭದ್ರಯ್ಯ ಯಾವಾಗಲೂ ಬಿಲ್ಲು- ಬಾಣ, ಈಟಿ- ಭರ್ಜಿ, ಕತ್ತಿ-ಮಚ್ಚುಗಳನ್ನು ಹಿಡಿದುಕೊಂಡು ಕಾಡಿನಲ್ಲಿರುವ ಪ್ರಾಣಿ- ಪಕ್ಷಿಗಳನ್ನು ಬೇಟೆಯಾಡುತ್ತಾ ಅಟ್ಟಹಾಸಗೈಯುತ್ತಿದ್ದ. ಅವನನ್ನು ಕಂಡರೆ ಸಾಕು, ಕಾಡಿನಲ್ಲಿರುವ ಪ್ರಾಣಿ- ಪಕ್ಷಿಗಳೆಲ್ಲಾ ಹೆದರಿ ಥರಥರನೆ ನಡುಗುತ್ತಾ ಓಡಿ ಹೋಗುತ್ತಿದ್ದವು. ಹೀಗೆ ಕಾಡಿನ ಪ್ರಾಣಿ- ಪಕ್ಷಿಗಳಿಗೆಲ್ಲಾ ಯಮದೂತನಂತಿದ್ದ ಬೇಟೆಗಾರ ಭದ್ರಯ್ಯ, ಒಂದುದಿನ ಇದ್ದಕ್ಕಿದ್ದಂತೆ ತನ್ನ ಆಯುಧಗಳನ್ನು ತ್ಯಜಿಸಿ ಒಂದು ಮರದ ಕೆಳಗೆ ತಲೆ ಮೇಲೆ ಕೈಹೊತ್ತು ಚಿಂತಾಕ್ರಾಂತನಾಗಿ ಸನ್ಯಾಸಿಯಂತೆ ಕುಳಿತುಕೊಂಡಿದ್ದ. ಇಂಥ ಸ್ಥಿತಿಯಲ್ಲಿ ಅವನನ್ನು ನೋಡಿದ ಕಾಡಿನ ಪ್ರಾಣಿ- ಪಕ್ಷಿಗಳೆಲ್ಲಾ ಆಶ್ಚರ್ಯಗೊಂಡು, ‘ಇವನೇನೋ ನಾಟಕ ಮಾಡುತ್ತಿದ್ದಾನೆ’ ಎಂದು ಮಾತನಾಡಿಕೊಂಡವು. ಯಾವುದಕ್ಕೂ ತಾವು ಎಚ್ಚರಿಕೆಯಿಂದಿರಬೇಕು ಎಂದುಕೊಂಡು ಭಯದಿಂದ ಅವನ ಹತ್ತಿರಕ್ಕೆ ಹೋಗದೆ ದೂರ ದೂರ ಹೊರಟವು.

ನರಿಯೊಂದು ಬಹುದೂರದಲ್ಲೇ ನಿಂತು, ‘ಈ ಬೇಟೆಗಾರ ಭದ್ರಯ್ಯ ಸಾಮಾನ್ಯನಲ್ಲ. ಜೀವ ತೆಗೆಯುವ ರಾಕ್ಷಸ. ಇಂದು ಏನೋ ಆಟ ಕಟ್ಟುತ್ತಿದ್ದಾನೆ. ನಂಬಬೇಡಿ ಎಚ್ಚರಿಕೆಯಿಂದಿರಿ’ ಎಂದು ಕೂಗಿ ಎಚ್ಚರಿಸಿತು. ದೊಡ್ಡ ಆಲದ ಮರದ ತುದಿಯಲ್ಲಿ ಕುಳಿತಿದ್ದ ರಣಹದ್ದು ಸಹ ನರಿಯ ಎಚ್ಚರಿಕೆಯ ಕೂಗಿಗೆ ದನಿಗೂಡಿಸಿ, ‘ನರಿ ಹೇಳುತ್ತಿರುವುದು ನಿಜ. ಈ ಕೊಲೆಗಡುಕ ಬೇಟೆಗಾರ ಭದ್ರಯ್ಯ ಸನ್ಯಾಸಿಯಂತೆ ನಟಿಸುತ್ತಾ ಏನೋ ಮಸಲತ್ತು ಮಾಡುತ್ತಿದ್ದಾನೆ. ಜೋಕೇ’ ಎಂದು ಜೋರಾಗಿ ಕಿರುಚಿತು.

ಇದನ್ನೆಲ್ಲಾ ಬಹಳ ಹೊತ್ತಿನಿಂದಲೂ ಸೂಕ್ಷ್ಮವಾಗಿ ಒಂದು ಮೊಲ ಗಮನಿಸುತ್ತಿತ್ತು. ಅದಕ್ಕೆ ಬೇಟೆಗಾರ ಭದ್ರಯ್ಯ ನಾಟಕವಾಡುತ್ತಿದ್ದಾನೆ ಎಂದು ಎನಿಸಲಿಲ್ಲ. ಬದಲಿಗೆ ಅವನು ಯಾವುದೋ ಕಷ್ಟಕ್ಕೆ ಸಿಲುಕಿಕೊಂಡಿರಬಹುದು ಎನಿಸಿತು. ಏನಾದರೂ ಸರಿ, ಅವನನ್ನೇ ವಿಚಾರಿಸಿಬಿಡೋಣವೆಂದು ಮೊಲವು ಧೈರ್ಯ ತಂದುಕೊಂಡು ಭದ್ರಯ್ಯನ ಬಳಿಗೆ ಹೋಯಿತು. ಅವನು ಸುಮ್ಮನೆ ಮೊಲವನ್ನು ನೋಡಿದನೇ ಹೊರತು ಅದಕ್ಕೆ ತೊಂದರೆ ಮಾಡಲಿಲ್ಲ. ಮೊಲ ಅವನ ಮೈಮೇಲೆಲ್ಲಾ ಹತ್ತಿ ಕುಣಿಯಿತು. ಆದರೂ ಅವನು ಸಾಧುವಿನಂತೆ ಸುಮ್ಮನಿದ್ದ. ಚಿಂತಾಕ್ರಾಂತನಾಗಿದ್ದ ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಮುಖ ದುಃಖದಿಂದ ಮುದುಡಿಕೊಂಡಿತ್ತು. ಅವನ ಸ್ಥಿತಿ ಕಂಡು ಮೊಲ ಮರುಗಿತು. ಬಹಳ ಒತ್ತಾಯ ಮಾಡಿ ಅವನ ಈ ಸ್ಥಿತಿಗೆ ಕಾರಣವೇನೆಂದು ಮೊಲ ಕೇಳಿತು. ಬಹಳ ಹೊತ್ತು ಸುಮ್ಮನಿದ್ದ ಅವನು, ಮೊಲದ ಒತ್ತಾಯಕ್ಕೆ ಮಣಿದು ತನ್ನ ಕಷ್ಟದ ಕಥೆ ಹೇಳಿದ.

ADVERTISEMENT

‘ಕೇಳು ಮೊಲವೇ, ನೀವೆಲ್ಲಾ ತಿಳಿದುಕೊಂಡಿರುವಂತೆ ನಾನು ಕ್ರೂರಿಯಲ್ಲ. ನಿಜವಾದ ಕ್ರೂರಿ ನನ್ನ ಹೆಂಡತಿ. ಅವಳನ್ನು ತೃಪ್ತಿ ಪಡಿಸಲು ಈ ಬೇಟೆಗಾರ ವೃತ್ತಿಯಲ್ಲಿ ತೊಡಗಿದ್ದೇನೆ. ನಾನು ಬೇಟೆಯಾಡಿ ಎಷ್ಟು ತಂದು ಸುರಿದರೂ ಅವಳಿಗೆ ಸಾಲದು. ಮರ ಕಡಿಯುವ ನಮ್ಮ ಹಾಳು ಮನುಷ್ಯರ ದುರಾಸೆಯಿಂದಾಗಿ ಕಾಡು ಕಡಿಮೆಯಾಗಿದೆ. ಪ್ರಾಣಿ- ಪಕ್ಷಿಗಳೂ ಕಡಿಮೆಯಾಗಿವೆ. ಹಾಗಾಗಿ ನನ್ನ ಬೇಟೆಗೂ ಕುತ್ತು ಬಂದಿದೆ. ಒಂದು ವಾರದಿಂದ ನನಗೆ ಸರಿಯಾಗಿ ಬೇಟೆಯೇ ಸಿಕ್ಕಿಲ್ಲ. ಇದು ನನ್ನ ಹೆಂಡತಿಗೆ ಅರ್ಥವಾಗುವುದಿಲ್ಲ. ಸರಿಯಾದ ಬೇಟೆ ಹೊಡೆದು ಕೊಂಡು ಬರುವ ತನಕ ನೀನು ಮನೆಗೆ ಬರಬೇಡವೆಂದು ನನ್ನ ಹೆಂಡತಿ ನನ್ನನ್ನು ಮನೆಯಿಂದ ಹೊರದಬ್ಬಿದ್ದಾಳೆ. ಜೀವ ತೆಗೆಯುವ ಈ ಬೇಟೆಗಾರ ವೃತ್ತಿಯೇ ನನಗೆ ಬೇಸರ ತಂದಿದೆ. ಹಾಗಾಗಿ ನಿಮ್ಮನ್ನೆಲ್ಲಾ ಕೊಲ್ಲುವುದಕ್ಕಿಂತ ನನ್ನನ್ನು ನಾನು ಕೊಂದುಕೊಳ್ಳಬೇಕೆಂದು ತೀರ್ಮಾನಿಸಿದ್ದೇನೆ’ ಎಂದು ಬೇಟೆಗಾರ ಭದ್ರಯ್ಯ ಮೊಲದ ಮುಂದೆ ತನ್ನ ಕಷ್ಟ ಹೇಳಿಕೊಂಡು ಗೋಳಾಡಿದ.

ಬೇಟೆಗಾರ ಭದ್ರಯ್ಯನ ಗೋಳಿನ ಕಥೆ ಕೇಳಿ ಮೊಲದ ಮನಸ್ಸು ಕರಗಿತು. ‘ನೀನೇನೂ ಸಾಯಬೇಕಾಗಿಲ್ಲ. ಬದುಕಲು ಸಾವಿರಾರು ದಾರಿಗಳಿವೆ. ಬೇಟೆಯಾಡುವ ವೃತ್ತಿ ನಿನಗೆ ಬೇಡವೆಂದರೆ ಅದನ್ನು ಬಿಟ್ಟುಬಿಡು. ನನಗೆ ಮೂರು ಮರಿಗಳಿವೆ. ಅವುಗಳಲ್ಲೊಂದು ಮರಿ ಪ್ರತಿದಿನ ಒಂದೊಂದು ಚಿನ್ನದ ನಾಣ್ಯವನ್ನು ಉಗುಳುತ್ತದೆ. ಅದು ಬಹಳ ಮಹಿಮೆಯುಳ್ಳದ್ದು. ಆ ಮರಿಯನ್ನು ನಿನಗೆ ಕೊಡುತ್ತೇನೆ. ಅದು ಪ್ರತಿದಿನ ನೀಡುವ ಚಿನ್ನದ ನಾಣ್ಯಗಳಿಂದ ನಿನ್ನ ಹೆಂಡತಿಯೂ ಸಂತೋಷಪಡುತ್ತಾಳೆ. ಆ ಚಿನ್ನದ ನಾಣ್ಯಗಳನ್ನು ಶೇಖರಿಸಿ ಮಾರಿ ಅದರಿಂದ ಬಂದ ಹಣವನ್ನು ಬಂಡವಾಳ ಮಾಡಿಕೊಂಡು ಏನಾದರೂ ವ್ಯಾಪಾರ ಮಾಡಿಕೊಂಡು ನೀನು ಚೆನ್ನಾಗಿ ಬದುಕು’ ಎಂದು ಹೇಳಿ ಮೊಲವು ತನ್ನ ಮರಿ ಚಿನ್ನದ ಮೊಲವನ್ನು ಅವನಿಗೆ ನೀಡಿತು.

ಮೊಲ ಹೇಳಿದಂತೆ ಪ್ರತಿದಿನ ಚಿನ್ನದ ನಾಣ್ಯಕೊಡುವ ಅದರ ಮರಿ ಮೊಲವನ್ನು ತೆಗೆದುಕೊಂಡು ಮನೆಗೆ ಹೋದ ಬೇಟೆಗಾರ ಭದ್ರಯ್ಯ ಮೊಲ ತೋರಿದ ಮಾರ್ಗದಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡನು. ಚಿನ್ನದ ನಾಣ್ಯ ನೀಡುವ ಮೊಲದ ಮರಿಯನ್ನು ಕಂಡು ಅವನ ಹೆಂಡತಿಗೂ ಸಂತಸವಾಗಿತ್ತು. ಅವಳು ಪರಿವರ್ತನೆಯಾಗಿ ಅವನನ್ನು ಪ್ರೀತಿಯಿಂದ ಕಾಣತೊಡಗಿದಳು. ಕಾಲಾನಂತರ ಮೊಲದ ಮಹಿಮೆಯಿಂದಾಗಿ ಶ್ರೀಮಂತರಾದ ಅವರು ಪ್ರಾಣಿ- ಪಕ್ಷಿಗಳನ್ನೂ ತಮ್ಮ ಮಕ್ಕಳಂತೆ ಸಾಕಿ ಸಲಹುತ್ತಾ ಸುಖವಾಗಿ ಬಾಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.