ಕಥೆ
ಸಣ್ಣೂರು ಹೆಸರಿಗೆ ತಕ್ಕ ಹಾಗೆ ಸಣ್ಣ ಊರೇ ಆದರೂ ಕೋಮು ಸಾಮರಸ್ಯದಲ್ಲಿ ಅಲ್ಲಿಗೆ ಒಳ್ಳೆಯ ಹೆಸರಿತ್ತು. ತಮ್ಮ ಜಾತಿ ಧರ್ಮಕ್ಕಿಂತಲೂ ತಾವು ಮನುಷ್ಯರೆಂದು ತಿಳಿದು ಜನ ಬದುಕುತ್ತಿದ್ದರು. ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮ ಕಲಶ ನಡೆದಾಗ ಊರಿನ ಐವತ್ತು ಮುಸ್ಲಿಮರ ಮನೆಗಳಿಂದಲೂ ಅಕ್ಕಿ, ಬಾಳೆಕಾಯಿ, ತೆಂಗಿನಕಾಯಿಗಳ ಹೊರೆ ಕಾಣಿಕೆ ಸಂಗ್ರಹಿಸಿ ಎಲ್ಲರ ಜತೆಗೆ ಬ್ಯಾಂಡು ವಾಲಗದಲ್ಲಿ ಅದನ್ನು ಕಾಣಿಕೆಯಾಗಿ ದೇವಸ್ಥಾನಕ್ಕೆ ತಲುಪಿಸಿ ಬಂದಿದ್ದರು ಷರೀಫ್ ಸಾಹೇಬರು. ಹಾಗೆಯೇ ಹೊಸ ಮಸೀದಿ ಕಟ್ಟಡದ ಆರಂಭದ ದಿನವೇ ಚೆನ್ನಪ್ಪ ನಾಯ್ಕರು ಊರಿನ ರೈತರ ಹೊರೆ ಕಾಣಿಕೆ, ಅಕ್ಕಿ ಮುಡಿಗಳ ಮೆರವಣಿಗೆ ಮಾಡಿಸಿ ಅದನ್ನು ಮಸೀದಿಗೆ ಒಪ್ಪಿಸಿ ನಾವೂ ನಿಮ್ಮೊಂದಿಗೆ ಇದ್ದೇವೆಂದು ತೋರಿಸಿಕೊಂಡಿದ್ದರು. ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಪುತ್ತಮ್ಮ ಸಾವಿರಕ್ಕಿಂತ ಹೆಚ್ಚಿಗೆ ಹೆರಿಗೆ ಮಾಡಿಸಿದ್ದಳು. ನಡುರಾತ್ರಿ ಬಂದು ಕರೆದಾಗಲೂ ಆ ವಿಷಯದಲ್ಲಿ ಎದುರಾಡದೆ ಬಂದವನ ಧರ್ಮ ಬೇರೆ ಎಂದು ಪರಿಗಣಿಸದೆ ಹೆರಿಗೆ ಮಾಡಿಸಿ ಹೋಗಿದ್ದಳು. ಅವಳು ಮಕ್ಕಳನ್ನು ಅಂಗನವಾಡಿಯಲ್ಲಿ ಊಟಕ್ಕೆ ಕೂಡಿಸಿ 'ಸಹನಾವವತು' ಎಂದು ಉಪನಿಷತ್ತಿನ ಶ್ಲೋಕ ಹೇಳಿ ಕೊಡುವಾಗ ‘ಕೂಡದು’ ಎಂದು ಜಾತಿಯವರಾರೂ ನಿಷೇಧಿಸಿರಲಿಲ್ಲ. ಎಂಬತ್ತರ ಹರೆಯ ದಾಟಿದ ಮೊಯಿಲಾರ್ ಆದುಕುಞಿ, ‘ನಮ್ದೂಕೆ ದೇವ್ರು ಅಲ್ಲಾ ನಿಮ್ದೂಕೆ ದೇವು ಈಶ್ವರ ಇರಬಹುದು. ಆದ್ರೆ ದೇವ್ರು ಒಂದೇ, ನಾವೆಲ್ಲ ಒಂದೇ ಕಡೆಯಿಂದ ಬಂದಿದ್ದೇವೆ, ಒಂದೇ ಕಡೆ ನಾಳೆ ಹೋಗುತ್ತೇವೆ’ ಎಂದು ಅನುಭವದ ಕೊಡವಾಗಿ ಹೇಳುತ್ತಿದ್ದರು.
ಇಂಥ ಸಾಮರಸ್ಯದ ಊರಿನಲ್ಲೂ ಕಹಿ ಘಟನೆಯೊಂದು ನಡೆಯಿತು. ಕೊರಪ್ಪೋಳು ಹೆಂಗಸಿನ ಹದಿ ಹರೆಯದ ಮಗಳು ಒಂದು ದಿನ ರಾತ್ರಿ ಪರೀಕ್ಷೆಗೆ ಓದಲೆಂದು ಚಿಮಣಿ ದೀಪ ಉರಿಸಿಟ್ಟುಕೊಂಡು ಕುಳಿತವಳು ಬೆಳಿಗ್ಗೆ ನೋಡಿದರೆ ಮನೆಯಲ್ಲಿ ಇರಲಿಲ್ಲ. ಹೆಂಗಸು ಎದ್ದು ಹಿತ್ತಲಿನಲ್ಲಿ ಹುಡುಕಿದಳು. ಬಾವಿಗೆ ಬಗ್ಗಿ ನೋಡಿದಳು. ಜೋರಾಗಿ ಕರೆದಳು. ಪತ್ತೆ ಇಲ್ಲ. ಒಳಗೆ ಬಂದು ಇಣುಕಿದರೆ ಅವಳ ಚಪ್ಪಲಿಗಳು, ಧರಿಸುವ ಉಡುಪುಗಳು ಕಾಣಿಸಲಿಲ್ಲ. ಇಷ್ಟು ಬೇಗ ಎಲ್ಲಿಗೆ ಹೋಗಿರಬಹುದೆಂಬ ಜಿಜ್ಞಾಸೆಯಲ್ಲೇ ತುಂಬ ಹೊತ್ತು ಕಳೆದುಹೋಯಿತು. ಗಂಡನನ್ನು ಕಳೆದುಕೊಂಡು ಜೀವನಕ್ಕೆ ಗತಿ ಇಲ್ಲದಾಗಲೂ ದಾರಿ ತಪ್ಪದೆ ಕೆಲಸ ಮಾಡಿ ಹಣ ಸಂಪಾದಿಸಿ, ಇದ್ದ ಒಬ್ಬಳೇ ಮಗಳಿಗೆ ಟೀಚರ್ ಆಗುವಷ್ಟು ವಿದ್ಯೆ ಕಲಿಸಬೇಕೆಂಬ ಕನಸು ಹೊತ್ತಿದ್ದ ಕೊರಪ್ಪೋಳುವಿಗೆ ಮನೆಯಲ್ಲಿದ್ದ ಚಿಮಣಿ ದೀಪ ಆರಿ ಹೋಗಿ ಇಡೀ ಮನೆ ಕತ್ತಲಾದ ಅನುಭವವಾಗಿ ಎದೆ ಹೊಡೆದುಕೊಂಡು ಅಳತೊಡಗಿದಳು.
ಊರಿನಲ್ಲಿ ಯಾವುದೇ ಘಟನೆ ನಡೆದರೂ ಅದು ಕಾಲು ಬಾಲ ಜೋಡಿಸಿಕೊಂಡು ಬೆಳೆಯುವುದು ಚರ್ಡಪ್ಪ ಕಾಮತರ ಹೋಟೇಲಿನಲ್ಲಿ. ಮನೆಯಲ್ಲಿ ರುಚಿ ರುಚಿಯಾಗಿ ತಿಂಡಿ ಚಹಾ ಮಾಡಿಕೊಡಬಲ್ಲ ಹೆಂಡತಿ ಇದ್ದರೂ ಹಳ್ಳಿಯ ಗಂಡಸರಿಗೆ ಸಂಜೆ ಅವರ ಹೋಟೆಲಿಗೆ ಹೋಗಿ ಒಂದು ಸಿಂಗಲ್ ಚಹಾ ಕುಡಿದು ಬರದಿದ್ದರೆ ಏನನ್ನೋ ಕಳೆದುಕೊಂಡಿರುವ ಚಡಪಡಿಕೆ, ಮನೆಯಲ್ಲಿ ಏನೂ ಕೆಲಸ ಇಲ್ಲದವರು ಇಡೀ ದಿನ ಅಲ್ಲೇ ಬೆಂಚಿನಲ್ಲಿ ಕುಳಿತಿರುವುದುಂಟು, ಹಾಗೆ ಬರುವವರ ಮೇಲೆ ಕಾಮತರಿಗೂ ಒಂಚೂರು ಅಭಿಮಾನ ಜಾಸ್ತಿ. ಹೆಚ್ಚು ಹೊತ್ತು ಕುಳಿತವರು ಇನ್ನೊಂದು ಖಡಕ್ ಚಹಾ ಮಾಡಿ ಕಾಮತರೇ ಎಂದು ಹೇಳುವ ಗ್ಯಾರಂಟಿ ಇರುವುದರಿಂದ ವ್ಯಾಪಾರವೂ ಅಭಿವೃದ್ಧಿಯಾಗುತ್ತದೆಂದು ತಿಳಿದು ಅವರು ಬಂದವರಿಗೆ ಯಾರಿಗೆ ಹೇಗೆ ಬೇಕೋ ಹಾಗೆ ಮಾತನಾಡುವ ಕೌಶಲವನ್ನೂ ಬೆಳೆಸಿಕೊಂಡಿದ್ದರು. ರೈತರು ಬಂದರೆ ಅಡಿಕೆಗೆ ಬೆಲೆ ಇಳಿದ ವಿಚಾರ. ಮೊಯಿಲಾರರು ಬಂದರೆ ಬಂಗಾರಕ್ಕೆ ಬೆಲೆ ಏರಿದ ವಿಚಾರ.
ಕೊರಪ್ಪೋಳುವಿನ ಮಗಳು ನಾಪತ್ತೆಯಾದ ಸಂಗತಿ ಕಾಮತರ ಹೋಟೆಲು ತಲುಪುವುದು ತಡವಾಗಲಿಲ್ಲ. ನಾಲ್ಕಾರು ಮಂದಿ ಚಹಾ ಕುಡಿಯಲು ಕುಳಿತಿದ್ದ ಊರಿನವರಿಗೂ ಹರೆಯದ ಚಂದದ ಹುಡುಗಿಯೊಬ್ಬಳ ವಿಚಾರ ಮಾತಾಡುವುದಾದರೆ ತಾನಾಗಿ ಆಸಕ್ತಿ ಬಂದೇ ಬರಬೇಕಲ್ಲ. ಹುಡುಗಿ ಬೆಳ್ಳಗಾಗಿ ಚಂದ ಇದ್ದಳು. ಬಡ ಕೂಲಿಯವಳ ಮಗಳು ಅಂತ ಯಾರೂ ಹೇಳಲಿಕ್ಕಿಲ್ಲ. ವಯಸ್ಸಿಗೆ ಮೀರಿದ ಬೆಳವಣಿಗೆ ಇತ್ತು ಅವಳಲ್ಲಿ. ಪ್ರತಿಯೊಬ್ಬ ಗಂಡಸಿನ ಮನಸ್ಸಿನಲ್ಲೂ ಹರೆಯದ ಹುಡುಗಿಯ ಬಟ್ಟೆ ಕಳಚಿ ಒಳಗಿನ ಅಂಗಾಂಗ ಎಷ್ಟು ಪೊಗದಸ್ತಾಗಿರಬಹುದು, ತೊಡೆ ಎಷ್ಟು ನುಣುಪಾಗಿರಬಹುದು ಅಂತ ಲೆಕ್ಕ ಹಾಕುತ್ತಲೇ ಇತ್ತು.
ಮಾತು ಮಾತು ಮಾತು, ಹುಡುಗಿ ನಾಪತ್ತೆಯಾದ ಮಾತಿನದೇ ಮೆಲುಕು. ಹೀಗಾಗಿ ಕಾಮತರಿಗೆ ಬಾಕಿ ದಿನಗಳಿಗಿಂತ ಆ ಹೊತ್ತಿನ ವ್ಯಾಪಾರವೂ ಹೆಚ್ಚು. ‘ನಾವು ದಿವಸವೂ ಪೇಪರಲ್ಲಿ ಓದುತ್ತಿರುತ್ತೇವಲ್ಲ. ಹದಿನಾರರ ಹುಡುಗಿಯರು ನಾಪತ್ತೆಯಾದ ಸುದ್ದಿ ಬಾರದ ದಿನವೇ ಇಲ್ಲ ನೋಡಿ, ಹಿರಿಯರಿಗೆ ಹೆಣ್ಣು ಮಕ್ಕಳ ನಿಗಾ ಇಲ್ಲ. ಗಂಡುಮಕ್ಕಳಿಗೆ ಸುಖ ಬೇಕು. ಮದುವೆ ಬೇಡ. ಹೀಗಾಗಿ ಹುಡುಗಿಯರನ್ನು ಬುದ್ಧಿ ಕೆಡಿಸಿ, ಯಾವುದೋ ಊರಿಗೆ ಕರೆದುಕೊಂಡು ಹೋಗಿ ನಾಲ್ಕು ದಿನ ಮಜಾ ಮಾಡಿ ಉಂಡ ಬಾಳೆಲೆ ತಿಪ್ಪೆಗೆ ಎಸೆದ ಹಾಗೆ ಮಾಡ್ತಾರೆ. ಇದೂ ಹಾಗೆಯೇ ಅನಿಸುತ್ತದೆ’ ಎಂದು ಕಾಮತರು ವ್ಯಾಖ್ಯಾನ ಮಾಡಿದರು.
ರಸಿಕ ಗಂಡಸೊಬ್ಬ ಖೆಕ್ ಎಂದು ನಕ್ಕ ‘ಅಲ್ಲದಿದ್ರೆ ಆ ಕೊರಪ್ಪೋಳು ಹೆಂಗಸಿಗೆ ಬುದ್ಧಿ ಉಂಟಾ? ಅವಳನ್ನು ದೊಡ್ಡವಳಾದ ಕೂಡಲೇ ಯಾರಿಗಾದರೂ ಮದುವೆ ಮಾಡುವುದು ಬಿಟ್ಟು ಟೀಚರ್ ಮಾಡ್ತೀನಿ ಅಂತ ಶಾಲೆಗೆ ಕಳುಹಿಸಿದಳಲ್ಲ, ಹಾಗೆಯೇ ಅಳಬೇಕು, ಆ ಹುಡುಗಿಯ ಸೇಳೆ, ಗತ್ತು ನೋಡುವಾಗಲೇ ಮನೆಯಲ್ಲಿ ನಿಲ್ಲುವವಳಲ್ಲ ಎಂದು ನಾನು ಅಂದಾಜು ಮಾಡಿದ್ದೆ, ನಾಲ್ಕು ದಿನ ಹಾಸಿಗೆಯಲ್ಲಿ ಹುಡಿ ಆದಾಗ ಚರ್ಬಿ ಇಳಿದು ಮನೆಗೆ ಬಂದವಳನ್ನು ನಾಯಿಯೂ ಮೂಸುವುದಿಲ್ಲ’ ಎಂದು ತೀರ್ಪು ಹೇಳಿದ.
‘ಅದಕ್ಕೆಲ್ಲ ಕಾರಣ ನೀವು ಜವ್ವನಿಗರು, ವರದಕ್ಷಿಣೆ, ಬಂಗಾರ ಅಂತ ಬಡ್ಕೊಳ್ತೀರಿ. ನಮಗೆ ಚಂದದ ಹೆಂಡತಿ ಇದ್ದರೆ ಸಾಕು ಅಂತ ಮದುವೆಗೆ ಮುಂದಾದರೆ ಇಂಥಾ ಪ್ರಸಂಗಗಳು ಬರುವುದೇ ಇಲ್ಲ’ ಎಂದು ಕಾಮತರು ಒಗ್ಗರಣೆ ಸೇರಿಸುವುದರ ಮೂಲಕ ಪ್ರಸಂಗವನ್ನು ಇನ್ನಷ್ಟು ಬೆಳೆಸುವ ಹೊತ್ತಿಗೆ ತಲೆಗೆ ಕೈ ಇಟ್ಟುಕೊಂಡು ಮುದುಕ ಮೂಸೆ ಬ್ಯಾರಿ ಅಲ್ಲಿಗೆ ಬಂದು, ‘ನಮ್ಮ ಕಿಡಾವು ಕಾಣಿಸ್ತಾ ಇಲ್ಲ. ಇಲ್ಲಿಗೇನಾದರೂ ಬಂದನೋ ಅಂತ ನೋಡಲು ಬಂದೆ’ ಎಂದು ಹೇಳಿದ.
‘ಕಿಡಾವು ಅನ್ನಲಿಕ್ಕೆ ಅವನೇನು ಹಾಲು ಕುಡಿಯುವ ಮಗುವಾ? ನಿನ್ನ ಮಗ ಅಬ್ದುಲ್ಲಾ ಅಲ್ಲವೇ?’ ಎಂದು ಕೇಳಿದ ಕಾಮತರು ಆಗಲೇ ಇನ್‌ವೆಸ್ಟಿಗೇಷನ್ ಆರಂಭಿಸಿದರು. ‘ನಿನ್ನೆ ರಾತ್ರಿ ಮನೆಯಲ್ಲಿ ಇದ್ದ. ನಾನು ಸ್ವಲ್ಪ ಜ್ವರ ಇದೆ ಅಂತ ಬೇಗನೇ ಮಲಗಿದ್ದೆ. ಅವನು ತುಂಬ ರಾತ್ರಿಯವರೆಗೆ ರೇಡಿಯೊ ಕೇಳಿಕೊಂಡು ಇದ್ದ. ಆಮೇಲೆ ಎಚ್ಚರವಾದಾಗ ಅವನ ಕೋಣೆಯಲ್ಲಿ ಟ್ರಂಕು ಪೆಟ್ಟಿಗೆ ದಡಬಡ ಮಾಡುವುದು ಕೇಳುತ್ತಾ ಇತ್ತು. ಯಾಕೆ ಅಂತ ನಾನು ಯೋಚಿಸಲಿಲ್ಲ. ಬೆಳಿಗ್ಗೆ ನೋಡಿದರೆ ಅವನು ಕಾಣಿಸ್ತಿಲ್ಲ. ಅಂಗಿ ಬಟ್ಟೆಗಳೂ ಇಲ್ಲ. ಗಾರೆ ಕೆಲಸಕ್ಕೆ ಯಾವಾಗಲೂ ಹೋಗುತ್ತಾನೆ. ಆದ್ರೆ ನನ್ನಲ್ಲಿ ಹೇಳದೆ ಇಷ್ಟು ಬೇಗ ಹೋಗುವುದಿಲ್ಲ. ಇತ್ಲಾಗಿ ಬಂದಿದಾನೋ ಅಂತ ನೋಡ್ಲಿಕ್ಕೆ ಬಂದೆ’ ಎಂದ ಮೂಸೆ.
ಮೂಸೆ ಅಲ್ಲಿಂದ ಹೊರಟ ಮೇಲೆ ನಾಪತ್ತೆಯಾದ ಹುಡುಗಿಯ ಪ್ರಕರಣಕ್ಕೆ ಒಂದು ಜೀವ ಕಳೆ ಬಂತು. ಕೊರಪ್ಪೋಳುವಿನ ಮನೆಯಿಂದ ನಾಲ್ಕು ಮಾರು ದೂರದಲ್ಲಿದೆ ಮೂಸೆಯ ಮನೆ. ಹುಡುಗನಿಂದ ಹುಡುಗಿ ಒಂದೆರಡು ವರ್ಷ ಚಿಕ್ಕವಳು. ‘ಓಡಿ ಹೋಗದೆ ಇನ್ನೇನಾಗುತ್ತೆ? ಗಾರೆ ಕೆಲಸಕ್ಕೆ ಹೋಗಿ ಕೈ ತುಂಬ ಸಂಬಳ ತರುತ್ತಾನೆ. ಹುಡುಗಿಗೆ ನೂರರ ನೋಟು ತೋರಿಸ್ತಾನೆ. ಆಮೇಲೆ ಪೌಡರು, ಫೇರ್ ಆ್ಯಂಡ್ ಲವ್‌ಲಿ ತಂದು ಕೊಡುತ್ತಾನೆ. ಹಳ್ಳಕ್ಕೆ ಬೀಳುತ್ತಾಳೆ. ಹುಡುಗಿಯನ್ನು ಲಪಟಾಯಿಸಿಕೊಂಡು ಕೇರಳಕ್ಕೋ ಬೊಂಬಾಯಿಗೋ ಹೋಗಿರುತ್ತಾನೆ. ತೀಟೆ ತೀರಿದ ಮೇಲೆ ಅವಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಇನ್ನೊಬ್ಬಳ ಬೆನ್ನು ಹತ್ತುತ್ತಾನೆ. ಹುಡುಗಿಯ ಬದುಕು ಭಗ್ನವಾಗಿ ಹೋಗುತ್ತದೆ’ ಹೀಗೆ ಬೆಳೆಯುತ್ತದೆ ಕಲ್ಪನೆಯ ಕಥೆ.
ಹಾಲಿನ ಹಾಗಿದ್ದ ಊರಿನ ಮೈತ್ರಿಯ ಪಾತ್ರೆಗೆ ಒಂದು ಹನಿ ಹುಳಿ ಬಿದ್ದು ಅದು ಮೊಸರಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಊರಿನ ಯುವಕರಲ್ಲಿ ಧರ್ಮಪ್ರಜ್ಞೆ ಜಾಗೃತವಾಯಿತು. ಅನ್ಯ ಧರ್ಮೀಯನ ಜತೆಗೆ ತಮ್ಮ ಊರಿನ ಹುಡುಗಿ ಓಡಿ ಹೋಗುವುದೆಂದರೆ ತಮ್ಮ ಧರ್ಮದ ಮೇಲಿನ ದಾಳಿಯೆಂದೇ ತೀರ್ಮಾನಿಸಿದರು. ಇವಳಿಗೆ ಓಡಿ ಹೋಗಲು ತಮ್ಮದೇ ಜಾತಿಯಲ್ಲಿ ಬೇರೆ ಯಾರೂ ಸಿಗಲಿಲ್ಲವೇ? ಎಂಬ ಪ್ರಶ್ನೆ ಬಂತು. ಮೊದಲು ಪೊಲೀಸರಿಗೆ ದೂರು ಹೋಯಿತು. ರಾಜಕೀಯದವರ ಬೇಳೆ ಬೇಯಲು ಅದೂ ಸಕಾಲವಾಗಿತ್ತು. ಮುದುಕ ಮೂಸೆಯನ್ನು ಎತ್ತಿಕೊಂಡು ಹೋಗಿ ಪೊಲೀಸರು ಚೆನ್ನಾಗಿ ಹೊಡೆದು ಬಿಟ್ಟರು. ಮೀನಿನ ಹೆಡಿಗೆ ಹೊತ್ತು ನಾಲ್ಕು ಮನೆ ತಿರುಗಿ ಸಂಜೆಯ ಕೂಳಿಗೆ ನಾಲ್ಕು ಕಾಸು ಸಂಪಾದಿಸುತ್ತಿದ್ದ ಮುದುಕ ಒಂದು ತಿಂಗಳು ಮಿಸುಕಾಡದಂಥ ಸ್ಥಿತಿಗೆ ತಲುಪಿದ. ‘‘ನಿನ್ನ ಮಗ ಎಲ್ಲಿಗೆ ಹೋದದ್ದು ಸತ್ಯ ಹೇಳು’’ ಎಂದು ಪೊಲೀಸರದ್ದು ಒಂದೇ ಪ್ರಶ್ನೆ. ಇಷ್ಟಾಯಿತು ಎನ್ನುವಾಗ ಮೂಸೆಯ ಧರ್ಮದವರೂ ಒಟ್ಟಾದರು. ತಮ್ಮವನೊಬ್ಬನನ್ನು ಅನ್ಯಾಯವಾಗಿ ಜೈಲಿನಲ್ಲಿ ಇಟ್ಟಿದ್ದಾರೆಂದರೆ ಅವರಿಗೂ ಅದು ಗೌರವಕ್ಕೆ ಧಕ್ಕೆ ತರುವ ವಿಚಾರ. ಹಣ ಸೇರಿಸಿ ಒಬ್ಬ ವಕೀಲರನ್ನು ಕಂಡು ಜಾಮೀನಿನಲ್ಲಿ ಮೂಸೆಯನ್ನು ಬಿಡಿಸಿಕೊಂಡು ಬಂದು ಮೀಸೆ ತಿರುಗಿಸಿಬಿಟ್ಟರು.
ಅಲ್ಲಿಂದ ಮುಂದೆ ಸಾಮರಸ್ಯ ಮುರಿದು ಹೋಯಿತು. ಸಾರ್ವಜನಿಕ ಸತ್ಯನಾರಾಯಣ ಪೂಜೆಗೆ ಚಪ್ಪರ ಹಾಕುವುದರಿಂದ ಆರಂಭಿಸಿ ಎಲ್ಲರ ಒಟ್ಟಿಗೆ ಎಲ್ಲ ಕೆಲಸ ಮಾಡುತ್ತಿದ್ದ ಮುಸ್ಲಿಮರು ಅರ್ಚಕರ ಮುಂದೆ ಪ್ರಸಾದಕ್ಕೆ ಕೈ ಒಡ್ಡುವಾಗಲೂ ದೇವರು ಎಲ್ಲರಿಗೂ ಒಂದೇ ಅಲ್ಲವೇ ಎನ್ನುತ್ತಿದ್ದವರು ಈ ಸಲ ಆ ಕಡೆಗೆ ಸುಳಿಯಲೇ ಇಲ್ಲ. ಈದ್ ಮೆರವಣಿಗೆಯ ತುದಿಯಲ್ಲಿ ನಿಂತು ಹಿಂದೂಗಳ ಮನೆ ಮನೆಗೂ ಹೋಗಿ ಚಾಕಲೇಟ್ ಹಂಚುತ್ತಿದ್ದ ರಸೂಲ್‌ನಿಗೆ ಅಂಗಳಕ್ಕಿಳಿಯಲು ಹಿಂದೂಗಳು ಬಿಡಲಿಲ್ಲ. ದುಗ್ಗಣ್ಣ ಮೇಲಾಂಟರ ತಂದೆ ಕಾಲದಲ್ಲಿ ಮೂಸೆಯ ಅಪ್ಪನಿಗೆ ಇರಲೊಂದು ಮನೆ ಕೊಟ್ಟಿದ್ದರು. ತೋಟದ ಕೆಲಸ ಏನಿದ್ದರೂ ಅವನಿಗೆ ಕಂತ್ರಾಟು, ಅವನು ಕೂಡ ಭೂ ಸುಧಾರಣೆ ಕಾನೂನಿನ ಪ್ರಕಾರ ಎಲ್ಲರೂ ಅವರವರ ಜಾಗಕ್ಕೆ ಡಿಕ್ಲರೇಷನ್ ಸಲ್ಲಿಸಿ ಉಳುವವನಿಗೆ ಹೊಲದ ಒಡೆತನ ಬಂದಾಗ ಮೂಸೆ ಮಾತ್ರ ಅದಕ್ಕೆ ಹೋಗಲಿಲ್ಲ. ಧಣಿಗಳು ದೇವರಿದ್ದ ಹಾಗೆ, ಯಾವತ್ತಿಗೂ ಮನೆ ಬಿಟ್ಟು ಹೋಗು ಅನ್ನಲಿಕ್ಕಿಲ್ಲ ಎಂಬ ನಂಬಿಕೆ ಪ್ರದರ್ಶಿಸುವ ಮೂಲಕ ಒಂದು ಮೆಟ್ಟಿಲು ಮೇಲೇರಿದ್ದ. ಮೇಲಾಂಟರೂ ಅಷ್ಟೇ, ಎಲ್ಲಾದರೂ ದಿನಗಟ್ಟಲೆ ಹೋಗಬೇಕಾದಾಗ ಇಡೀ ಮನೆಯ ಜವಾಬ್ದಾರಿ ವಹಿಸುತ್ತಿದ್ದುದು ಮೂಸೆಗೆ. ಅವನು ಒಂದು ಸೊತ್ತು ಮುಟ್ಟಲಿಕ್ಕಿಲ್ಲ, ಬೇರೊಬ್ಬನನ್ನು ಒಳಗೆ ಬರಲು ಬಿಡಲಿಕ್ಕಿಲ್ಲ ಎಂಬ ವಿಶ್ವಾಸ ಅವರಿಗಿತ್ತು.
ಆದರೆ ನಂಬಿಕೆಯ ಸೌಧ ಬುಡದಿಂದಲೇ ಕಳಚಿ ಬಿದ್ದಿತು. ಸ್ವತಃ ಮೇಲಾಂಟರೇ ನಾಲ್ಕು ಮಂದಿ ಕಟ್ಟುಮಸ್ತಾದ ಯುವಕರೊಂದಿಗೆ ಬಂದು, ಮೂಸೆಗೆ ಕಟು ದನಿಯಿಂದ ಹೇಳಿದರು ‘ಇವತ್ತು ಸಂಜೆಯೊಳಗಾಗಿ ಮನೆ ಖಾಲಿ ಮಾಡಿ ಹೋಗಬೇಕು’. ಮೂಸೆಗೆ ನೆತ್ತಿಗೆ ಸಿಡಿಲೆರಗಿದ ಅನುಭವ. ‘ಎಂಥಾ ಮಾತು ಧನಿಗಳೇ, ಮಳೆಗಾಲ, ಇದ್ದಕ್ಕಿದ್ದ ಹಾಗೆ ಮನೆ ಬಿಡು ಅಂದ್ರೆ ಎಲ್ಲಿ ಹೋಗಲಿ? ಬೀಬಿಯೂ ಕಾಯಿಲೆಯಿಂದ ಮಲಗಿದಲ್ಲೇ ಇದ್ದಾಳೆ, ಮಗ ಮನೆಯಲ್ಲಿ ಇಲ್ಲ’ ಯಾತನೆಯಲ್ಲೇ ಯಾಚಿಸಿಕೊಂಡ.
ಮೇಲಾಂಟರಿಗೆ ಸಂಕಟವಾಯಿತು. ಒಂದು ಸಲ ಪೇಟೆಯಿಂದ ಬರುವಾಗ ಮೇಲಾಂಟರನ್ನು ಕಡಿದು ಕೊಲ್ಲುತ್ತೇನೆಂದು ದಾಯಾದಿಯೊಬ್ಬ ಕತ್ತಿ ಹಿಡಿದು ಮೇಲೆರಗಿದ್ದ. ಜತೆಗಿದ್ದ ಮೂಸೆ ಸಾವಿನ ಹಂಗು ತೊರೆದು ಅವನನ್ನು ಇದಿರಿಸಿ ಓಡಿಸುವಾಗ ಕೈ ತುಂಬಾ ಗಾಯವಾಗಿ ಸಾವು ಬದುಕಿನೊಂದಿಗೆ ಹೋರಾಡಿದ್ದ. ಆಗ ಅವನನ್ನು ತಬ್ಬಿಕೊಂಡು ಕಣ್ಣೀರು ಹರಿಸಿ ತೋಯಿಸಿದ್ದ ಮೇಲಾಂಟರು, ‘ಮೂಸೆ, ನನ್ನ ಧರ್ಮದವರು ಕಣ್ಣಿಗೆ ಕಂಡು ಕೂಡಾ ನನ್ನ ರಕ್ಷಣೆಗೆ ಧಾವಿಸಲಿಲ್ಲ. ಬೇರೆ ಧರ್ಮದವನಾದರೂ ನನ್ನ ಜೀವ ಉಳಿಸಿದೆ. ಯಾವತ್ತಿಗೂ ನನಗೆ ನಿನ್ನ ಋಣ ತೀರಿಸಲು ಸಾಧ್ಯವಾಗಲಿಕ್ಕಿಲ್ಲ’ ಎಂದು ಹೇಳಿದರು. ಮೂಸೆಗೆ ಅಗತ್ಯವಿದ್ದಾಗಲೆಲ್ಲಾ ಸಹಾಯ ಮಾಡುತ್ತಾ ಋಣ ಭಾರವನ್ನು ತಗ್ಗಿಸಿಕೊಂಡಿದ್ದರು. ಇವತ್ತು ಏಕಾಏಕಿ ಮನೆ ಬಿಟ್ಟು ಹೋಗುವಂತೆ ಕೇಳಬೇಕಾದ ಸಂದರ್ಭ ಬಂದಾಗ ಅವರು ಮನಸ್ಸಿನಲ್ಲೇ ಮರುಗಿದ್ದರು. ಆದರೆ ಊರಿನ ಒಗ್ಗಟ್ಟು ಅವರನ್ನು ಸುಮ್ಮನಿರಲು ಬಿಡಲಿಲ್ಲ. ‘ಇವತ್ತು ಕೊರಪ್ಪೋಳುವಿನ ಮಗಳನ್ನು ಓಡಿಸಿಕೊಂಡು ಹೋದುದಕ್ಕೆ ಪ್ರಾಯಶ್ಚಿತ್ತ ಆಗದಿದ್ದರೆ ನಾಳೆ ನಿಮ್ಮ ಮಗಳಿಗೂ ಇದೇ ಗತಿ ಬರುತ್ತದೆ. ನಾವೆಲ್ಲ ಒಂದಾಗಿ ಪ್ರತಿಭಟಿಸಲೇಬೇಕು. ನೀವು ಅವನನ್ನು ಓಡಿಸಲೇಬೇಕು’ ಎಂದು ಒತ್ತಡ ಹಾಕಿದ್ದರು.
ಸಾಯಂಕಾಲವಾದರೂ ಮೂಸೆಗೆ ಬೇರೆ ಮನೆಯ ವ್ಯವಸ್ಥೆ ಆಗಿರಲಿಲ್ಲ. ತಲೆಗೆ ಕೈ ಹೊತ್ತು ಕುಳಿತಾಗ ಯುವಕರ ದಂಡೊಂದು ಅವನ ಮನೆಗೆ ಬಂದು, ಒಳಗೆ ಹೊಕ್ಕಿತು. ಅಲ್ಯುಮಿನಿಯಂ ತಟ್ಟೆ ಬಟ್ಟಲುಗಳನ್ನು ಎತ್ತಿ ಎತ್ತಿ ಅಂಗಳಕ್ಕೆಸೆದು, ಹಸೆ ಹಿಡಿದು ಮಲಗಿದ್ದ ಬೀಬಿಯನ್ನು ದರದರನೆ ಎಳೆಯುತ್ತ ಅಂಗಳದ ಕೆಸರಿನಲ್ಲಿ ಮಲಗಿಸಿ ಮನೆಯ ಬಾಗಿಲಿಗೆ ದೊಡ್ಡದೊಂದು ಬೀಗ ಜಡಿದು ಹೊರಟೇ ಹೋಯಿತು. ಮೇಲಾಂಟರು ಇಂಥ ಕೆಲಸ ಮಾಡಿಸಿಯಾರೆಂದು ಕನಸಿನಲ್ಲೂ ಎಣಿಸದ ಮೂಸೆ ಅಪ್ರತಿಭನಾದ. ಆಗಲೂ ಅವನ ಧರ್ಮದವರು ಬಿಟ್ಟು ಹಾಕಲಿಲ್ಲ. ಹಾಜಿ ಸಾಹೇಬರ ಹರಕು ಬಿಡಾರದಲ್ಲಿ ವ್ಯವಸ್ಥೆ ಮಾಡಿದರು.
ಮರುದಿನ ಎಂದಿನಂತೆ ಮೀನಿನ ಹೆಡಿಗೆ ಹೊತ್ತು ಮನೆಗಳಿಗೆ ಹೊರಟ ಮೂಸೆಗೆ ಯಾವ ಮನೆಯಲ್ಲೂ ವ್ಯಾಪಾರವಾಗಲಿಲ್ಲ, ಹೆಡಿಗೆಯ ಭಾರ ಕುಗ್ಗಲಿಲ್ಲ. ಕಾರಣ ತಿಳಿಯದೆ ಮೂಸೆ ಒಂದು ಮನೆಯ ಹೆಂಗಸಿನೊಂದಿಗೆ, ‘‘ನಿನಗೆ ಏನಾಯ್ತಕ್ಕ, ಪ್ರತಿದಿನ ನನ್ನಲ್ಲಿ ಮೀನು ತಗೊಳಿದ್ದೆ. ಎಷ್ಟೋ ಸಲ ಹಣವಿಲ್ಲ ಅಂತ ನೀನು ಮುಖ ಸಣ್ಣದು ಮಾಡಿದಾಗ ನಾನು ಧರ್ಮಕ್ಕೆ ಕೊಟ್ಟದ್ದೂ ಉಂಟು. ಇವತ್ತು ಬೋಣಿ ಕೂಡ ಆಗಿಲ್ಲ. ಆದರೂ ಕೊಡ್ತೇನೆ ತಗೋ’’ ಎಂದು ಹೆಡಿಗೆ ಕೆಳಗಿಳಿಸಲು ಪ್ರಯತ್ನಿಸುವಾಗ ಅವಳು ಕೈ ಮುಗಿದು ಕಣ್ಣೀರು ತುಂಬಿ, ‘ದಮ್ಮಯ್ಯ ಸಾಹುಕಾರರೇ, ನೀವಿನ್ನು ಇಲ್ಲಿಗೆ ಬರಬೇಡಿ, ನಿಮ್ಮ ಧರ್ಮದರಲ್ಲಿ ಇನ್ನು ಯಾರೂ ಯಾವುದೂ ವ್ಯಾಪಾರ ಮಾಡಬಾರದೆಂದು ಹಳ್ಳಿಯ ಯುವಕರು ನಿರ್ಣಯ ಮಾಡಿದ್ದಾರೆ. ಪ್ರತೀ ಮನೆಗೂ ಬಂದು ಹೇಳಿ ಹೋಗಿದ್ದಾರೆ. ನೀವು ವಾಪಾಸು ಹೋಗಿ’ ಎಂದು ವಿಷಯವನ್ನು ಬಹಿರಂಗ ಮಾಡಿದ್ದಳು.
ಮೂಸೆ ದಾರಿಯಲ್ಲಿ ಹೋಗುತ್ತಿದ್ದರೆ ಕಂಡವರು ಕ್ಯಾಕರಿಸಿ ಉಗಿದು ತಮ್ಮ ಕ್ರೋಧ ಪ್ರಕಟಿಸುತ್ತಿದ್ದರು. ವ್ಯಾಪಾರವೇ ಇಲ್ಲದೆ ಮನೆಯಲ್ಲಿ ಒಲೆ ಉರಿಸಲಾಗದ ಸ್ಥಿತಿ ತಲುಪಿದ ಮೂಸೆ ಬೀಬಿಯೊಡನೆ, ‘ಈ ನಾಯಿಂಡೆ ಮೋನುವಿಗೆ ನಿಕಾ ಆಗಬೇಕಂತ ಒಂದು ಮಾತು ಹೇಳಿದ್ರೆ ನಮ್ಮ ಧರ್ಮಯಲ್ಲೇ ಹೆಣ್ಣು ಇರಲಿಲ್ಲವಾ? ಆ ಹುಡುಗಿಯನ್ನು ಹಾರಿಸಿಕೊಂಡು ಹೋಗಿ ಅಣ್ಣ ತಮ್ಮರ ಹಾಗೆ ಬದುಕುತ್ತಿದ್ದ ನಮಗೆ ವಿಷ ಹಾಕಿದನಲ್ಲ. ಇದರ ಬದಲು ಅವನಿಗೆ ನಮ್ಮನ್ನು ಕೊಂದು ಹೋಗಬಹುದಿತ್ತು’ ಎಂದು ಅತ್ತಿದ್ದ.
ಹದಿನಾರು ಮಕ್ಕಳನ್ನು ಹೆತ್ತು, ಹುಟ್ಟಿದ ಕೂಡಲೇ ಮಕ್ಕಳು ಸಾಯುತ್ತಿದ್ದ ಬೀಬಿಗೆ ಇದೊಂದು ಮಗುವಿಗೆ ತಾನು ಮೊಲೆಯೂಡಿಸಿ ಬದುಕಿಸಿ ಕೊಟ್ಟವರು ಮೇಲಾಂಟರ ಹೆಂಡತಿ. ಅವರ ಮನೆಯ ಮಗನಂತೆ ಅವನು ಅಲ್ಲಿ ಓಡಾಡಿ ಬೆಳೆದವನು. ಎರಡನೇ ಕ್ಲಾಸಿಗೆ ಶಾಲೆ ಮುಗಿಸಿ ಗಾರೆ ಕೆಲಸದವರೊಟ್ಟಿಗೆ ಸಹಾಯಕ್ಕೆ ಹೊರಟ ಅಬ್ದುಲ್ಲಾನಿಗೆ ಕಣ್ಣುಂಬ ಕನಸುಗಳಿದ್ದವು. ‘ಹುಮ್ಮ, ನಾನು ಕೈ ತುಂಬಾ ಸಂಪಾದಿಸಿ ದೊಡ್ಡ ಮನೆ ಕಟ್ಟುತ್ತೇನೆ. ಮೋಟಾರು ಕಾರು ತೆಗೆದು ನಿನ್ನನ್ನು ಆಸ್ಪತ್ರೆಗೆ ಅದರಲ್ಲೇ ಕರಕೊಂಡು ಹೋಗ್ತೇನೆ’ ಹೀಗೆಲ್ಲ ಹೇಳುವಾಗ ಬೀಬಿ ಗದರಿ, ‘ಸುಮ್ನಿರು. ಮರ್ಯಾದೆಯಲ್ಲಿ ಕೆಲಸ ಮಾಡಿ ಊಟದ ಅಕ್ಕಿಯನ್ನಾದರೂ ತಾ. ಇಲ್ಲದ್ದನ್ನೆಲ್ಲ ಹರಟಬೇಡ’ ಎನ್ನುವಳು. ಅಪ್ಪ ಅಮ್ಮನನ್ನು ಶ್ರದ್ಧೆಯಿಂದಲೇ ಅವನೂ ನೋಡಿಕೊಂಡ, ನಿಕಾಹದ ಸುದ್ದಿ ತೆಗೆದರೆ, ‘ಎರಡು ವರಷಕ್ಕೆ ಯಾವುದೂ ಬೇಡ. ಒಂದು ಮನೆ ಕಟ್ಟಿಸಿ ಒಂದು ಅಂಗಡಿ ಹಾಕುವಷ್ಟು ಹಣ ಆಗಬೇಕು. ಉಳಿದದ್ದೆಲ್ಲ ಆಮೇಲೆ’ ಎನ್ನುತ್ತಿದ್ದವನು ಇದ್ದಕ್ಕಿದ್ದ ಹಾಗೆ ಹುಡುಗಿಯನ್ನು ಯಾಕೆ ಹಾರಿಸಿಕೊಂಡು ಹೋದನೆಂಬುದೇ ಒಡೆಯಲಾಗದ ಒಗಟಾಗಿತ್ತು. ಆದರೆ ಇದೊಂದು ಘಟನೆಯಿಂದ ಊರಿನಲ್ಲಿ ಧರ್ಮಗಳೆರಡೂ ಒಡೆದವು. ದ್ವೇಷ ವಿಜೃಂಭಿಸಿತು. ಒಬ್ಬರ ಮುಖ ಇನ್ನೊಬ್ಬರು ನೋಡಲಾಗದ ಕಿಚ್ಚು ಹಬ್ಬಿತು. ಒಬ್ಬರ ಕಾಲು ಇನ್ನೊಬ್ಬರು ಎಳೆಯುವಷ್ಟು ಹಗೆಯ ಕಾವು ತಲೆಯೆತ್ತಿತು.
ಸಣ್ಣೂರಿನಲ್ಲಿ ಈ ದ್ವೇಷ ವರ್ಷಗಳಾದರೂ ತಣ್ಣಗಾಗಿಲ್ಲ. ಮೂಸೆಯ ಹೆಂಡತಿ ಮಗ ಊರು ಬಿಟ್ಟು ಹೋದ ದುಃಖದಲ್ಲೇ ಕರಗಿ ಕೊರಗಿ ಸತ್ತು ಹೋಗಿದ್ದಾಳೆ. ಮೂಸೆಯು ಪೊಲೀಸರ ಹೊಡೆತದಿಂದ ನಡೆಯಲಾಗದ ಸ್ಥಿತಿ ತಲುಪಿ ಕುಳಿತಲ್ಲೇ ಯಾರದೋ ಮನೆಯ ಅಡಿಕೆ ಸುಲಿದು ದಿನ ತಳ್ಳುತ್ತಿದ್ದಾನೆ.
ಮಗಳು ಟೀಚರಾಗುತ್ತಾಳೆಂಬ ಕನಸು ಹೊತ್ತು ದುಡಿಮೆಯಲ್ಲೇ ಆಯುಷ್ಯ ಕಳೆದ ಕೊರಪ್ಪೋಳುವಿನ ಬದುಕು ಮಾತ್ರ ಕಣ್ಣೀರಿನ ಕೊಳದಲ್ಲಿ ತೇಲುತ್ತಾ ಇದೆ. ಅವಳ ಮಗಳು ಓಡಿ ಹೋದುದನ್ನೇ ಪ್ರತಿಷ್ಠೆಯಾಗಿ ಬೆಳೆಸಿದರೇ ವಿನಃ ಅವಳಿಗೊಂದು ನಿಶ್ಚಿಂತ ಬದುಕು ಕಲ್ಪಿಸಲು ಯಾರೂ ಮುಂದಾಗಲಿಲ್ಲ. ಸರ್ಕಾರ ತಿಂಗಳಿಗೆ ಕೊಡುವ ಎಂಟುನೂರು ರೂಪಾಯಿ ಮಾಸಾಶನದಲ್ಲೇ ಉಸಿರು ಹಿಡಿದುಕೊಂಡಿದ್ದಾಳೆ.
ಇಂಥ ಪರಿಸ್ಥಿತಿಯಲ್ಲಿ ವರ್ಷಗಳು ಸಂದು ಹೋದವು. ಒಂದು ದಿನ ಕೊರಪ್ಪೋಳು ತನ್ನ ಮನೆಗೆ ಎಲುಬುಗೂಡಾಗಿದ್ದ ಹುಡುಗಿಯೊಬ್ಬಳು ಪ್ರಯಾಸದಿಂದ ಬರುವುದನ್ನು ನೋಡಿದಳು. ನಿಧಾನವಾಗಿ ಅವಳಿಗೆ ಗುರುತು ಹತ್ತಿತು. ಅವಳು ಓಡಿ ಹೋದ ತನ್ನ ಮಗಳು, ಚಂದ ಚಂದವಾಗಿ ನೋಡಿದವರ ಕಣ್ಣು ತಾಗುವಂತಿದ್ದ ಅವಳಿಂದು ಬದುಕಿರುವ ಶವದಂತಿದ್ದಾಳೆ. ‘ಮಗಳೇ’ ಎಂದು ಚೀರಿ ಬಳಿಗೆ ಬಂದ ತಾಯಿಯನ್ನು ಅವಳೇ ಎಚ್ಚರಿಸಿದಳು. ‘ನಾನು ಮಾರಕ ರೋಗವೊಂದಕ್ಕೆ ತುತ್ತಾಗಿದ್ದೇನೆ. ನಿನ್ನನ್ನು ಕಂಡು ಕ್ಷಮಾಪಣೆ ಕೇಳಬೇಕಂತಲೇ ಬಂದಿದ್ದೇನೆ. ಹೆಚ್ಚು ದಿನ ನಾನಿನ್ನು ಬದುಕುವುದಿಲ್ಲ. ನಿನಗೆ ದ್ರೋಹ ಮಾಡಿ ಹೋದ ನನ್ನನ್ನು ಕ್ಷಮಿಸಮ್ಮಾ’ ಅವಳ ಕಂಠ ಬಿಗಿದು ಬಂತು.
‘ಆ ಬಿಕನಾಸಿ ಅಬ್ದುಲ್ಲ ಎಲ್ಲಿ ಹೋದನೆ? ನಿನ್ನನ್ನು ಈ ದುಸ್ಥಿತಿಗೆ ತಲುಪಿಸಿದವ ಬರಲಿಲ್ಲವೇ? ಹಾಳಾಗಿ ಹೋಗಲಿ ಅವನು’ ಕೊರಪ್ಪೋಳು ಮುಷ್ಟಿ ಬಿಗಿದು ಆಕ್ರೋಶ ತೋರಿಸಿದಳು.
‘ಅಬ್ದುಲ್ಲನೆ? ನನಗೆ ಈ ಗತಿ ತಂದವ ಅವನು ಅಂತ ನಿನಗೆ ಯಾರು ಹೇಳಿದ್ದು? ನಿನ್ನ ತಮ್ಮನ ಮಗ ನನ್ನ ಭಾವ ರಾಘವ ಇಲ್ಲದ ಆಸೆ ತೋರಿಸಿ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮುಂಬೈಗೆ ಕರೆದುಕೊಂಡು ಹೋಗಿ ಮಾರಾಟ ಮಾಡಿದ, ನೋಡು ಈ ಸ್ಥಿತಿಗೆ ಬಂದ ಮೇಲೆ ಊರಿಗೆ ಹೋಗು ಅಂತ ಬಸ್ಸು ಹತ್ತಿಸಿ ಬಿಟ್ಟಿದ್ದಾರೆ’ ಅವಳೊಂದು ಹೊಸ ಕತೆ ತೆರೆದಿಟ್ಟಳು.
ಕೊರಪ್ಪೋಳು ತೆರೆದ ಬಾಯಿ ಮುಚ್ಚಲು ಮರೆತು ನಿಂತೇ ಇದ್ದಳು. ಅದೇ ಸಮಯ ಮೂಸೆಗೂ ಒಂದು ಕಾಗದ ಬಂದಿತು. ಅವನಿಗೆ ಓದಲು ಗೊತ್ತಿಲ್ಲ ಅಂತ ಪೋಸ್ಟ್‌ಮ್ಯಾನ್ ಓದಿ ಹೇಳಿದ. ‘ನಿನ್ನ ಮಗ ಅಬ್ದುಲ್ಲನ ಕಾಗದ ಇದು. ಲಿಬಿಯಾಕ್ಕೆ ಹೋಗಿ ಕೆಲಸಕ್ಕೆ ಸೇರಿದನಂತೆ, ಅಲ್ಲಿ ಒಂದು ಮನೆ ಕಟ್ಟಿಸಲು, ಕಾರು ಕೊಳ್ಳಲು ಬೇಕಾದಷ್ಟು ಹಣ ಸಂಪಾದಿಸುವಾಗ ಯುದ್ಧ ಶುರುವಾಯಿತಲ್ಲ. ಎಲ್ಲವನ್ನೂ ಅಲ್ಲಿಯೇ ಬಿಟ್ಟು ಬರುತ್ತಾ ಇದ್ದಾನಂತೆ. ಯಾರಿಗೂ ಹೇಳದೆ ಹೋದುದಕ್ಕೆ ಕ್ಷಮಿಸು. ಇನ್ನು ಮುಂದೆ ಸರಿಯಾಗಿ ಇರ‍್ತೀನಿ ಅಂತ ಬರೆದಿದ್ದಾನೆ’ ಮೂಸೆ ಆಕಾಶಕ್ಕೊಮ್ಮೆ ನೋಡಿದ ‘ಏನು ಸರಿಯಾಗ್ತಾನೆ ಅಂತೆ? ಇಷ್ಟು ದೊಡ್ಡ ಬಿರುಕು ಉಂಟಲ್ಲ, ಯಾರಿಂದಲೂ ಮುಚ್ಚಲಿಕ್ಕೆ ಆಗ್ತದಾ?’ ಕೇಳಿದ.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.