ADVERTISEMENT

ಅಪಾಯ ಬಂದಾಗ ಉಪಾಯ ಮಾಡಿ

ಭಾನುಶ್ರೀ
Published 19 ಜುಲೈ 2019, 19:45 IST
Last Updated 19 ಜುಲೈ 2019, 19:45 IST
ಮೀನಿನ ಕಥೆ
ಮೀನಿನ ಕಥೆ   

ಒಂದು ನದಿ; ಅದರಲ್ಲೊಂದು ಹಳ್ಳ. ಅಲ್ಲಿ ಮೂರು ಮೀನುಗಳು ವಾಸವಾಗಿದ್ದವು.

ಒಂದು ದಿನ ಮೀನುಗಾರನೊಬ್ಬ ಆ ನದಿಯ ಸಮೀಪಕ್ಕೆ ಬಂದ. ಇದನ್ನು ಆ ಮೂರು ಮೀನುಗಳಲ್ಲಿ ಒಂದು ಕೂಡಲೇ ಗಮನಿಸಿತು. ಆ ಮೀನು ಉಳಿದ ಎರಡು ಮೀನುಗಳಲ್ಲಿಗೆ ಹೋಗಿ ಹೇಳಿತು: ‘ನಮಗೆ ಅಪಾಯ ಬಂದಿದೆ. ಮೀನುಗಾರ ಬಂದಿದ್ದಾನೆ. ಅವನು ಇನ್ನೇನು ಬಲೆಯನ್ನು ಬೀಸಲಿದ್ದಾನೆ. ನಾವು ಈ ಕೂಡಲೇ ಬೇರೆ ಜಾಗಕ್ಕೆ ಹೋಗಿಬಿಡೋಣ, ನಡೆಯಿರಿ’.

ಅದಕ್ಕೆ ಎರಡನೆಯ ಮೀನು ಹೀಗೆಂದಿತು: ‘ಅಯ್ಯೋ! ಅವನು ಬಲೆ ಹಾಕಿದ ಮೇಲೆ ತಪ್ಪಿಸಿಕೊಂಡರೆ ಆಯ್ತಾ! ಈಗಲೇ ಚಿಂತ ಯಾಕೆ?’

ADVERTISEMENT

ಆಗ ಮೂರನೆಯ ಮೀನು ‘ನನ್ನ ಪ್ರಕಾರ ನಮಗೆ ಇಲ್ಲಿ ಯಾವುದೇ ಅಪಾಯ ಇಲ್ಲ; ನೆಮ್ಮದಿಯಾಗಿ ಇರೋಣ, ಅನಗತ್ಯವಾಗಿ ಚಿಂತೆ ಮಾಡುವುದೇಕೆ?’ ಎಂದು ವಿಶ್ರಾಂತಿಗೆ ಜಾರಿತು.

‘ನೀವು ಏನಾದರೂ ಮಾಡಿಕೊಳ್ಳಿ’ ಎನ್ನುತ್ತ ಮೊದಲನೆಯ ಮೀನು ಅಲ್ಲಿಂದ ಜಾಗ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗಿ ತಲಪಿತು.

ಸ್ವಲ್ಪ ಸಮಯದಲ್ಲೇ ಮೀನುಗಾರ ಬಲೆಯನ್ನು ಬೀಸಿದ. ಆ ಎರಡು ಮೀನುಗಳು ಬಲೆಯಲ್ಲಿ ಸಿಕ್ಕಿಬಿದ್ದವು. ಆಗ ಎರಡನೆಯ ಮೀನು ಮೂರನೆಯ ಮೀನನ್ನು ಉದ್ದೇಶೀಸಿ ‘ಬಾ ಈಗಲಾದರೂ ತಪ್ಪಿಸಿಕೊಳ್ಳೋಣ; ಮೀನುಗಾರ ಬಲೆಯನ್ನು ತೆಗೆಯುವುದರೊಳಗೆ ಹೋಗೋಣ ಬಾ’ ಎಂದಿತು.

ಆದರೆ ಮೂರನೆಯ ಮೀನು ಮಾತ್ರ ಕದಲಲಿಲ್ಲ. ‘ಅಯ್ಯೋ, ಬಿಡಯ್ಯಾ! ಅವನು ಬಂದಾಗ ನೋಡಿಕೊಂಡರಾಯಿತು’ ಎಂದು ಮತ್ತೆ ನಿದ್ರೆಗೆ ಜಾರಿತು.

ಎರಡನೆಯ ಮೀನು ಹೇಗೆ ತುಂಬ ಕಷ್ಟ ಪಟ್ಟು ಬಲೆಯಿಂದ ತಪ್ಪಿಸಿಕೊಂಡಿತು. ಮೂರನೆಯ ಮೀನು ಅಲ್ಲೇ ಮಲಗಿತ್ತು. ಮೀನುಗಾರ ಬಲೆಯನ್ನು ಹೊರಕ್ಕೆ ಎಳೆದ. ಬಲೆಯಲ್ಲೇ ಇದ್ದ ಆ ಮೀನು ಅವನಿಗೆ ಆಹಾರವಾಯಿತು.

* * *

ಮಹಾಭಾರತದಲ್ಲಿ ಒಂದು ಶ್ಲೋಕವಿದೆ:

ಅನಾಗತವಿಧಾತಾ ಚ ಪ್ರತ್ಯುತ್ಪನ್ನಮತಿಶ್ಚ ಯಃ I

ದ್ವಾವೇವ ಸುಖಮೇಧೇತೇ ದೀರ್ಘಸೂತ್ರೋ ವಿನಶ್ಯತಿ I I

ಇದರ ತಾತ್ಪರ್ಯ: ‘ಅಪಾಯ ಸಂಭವಿಸುವುದಕ್ಕೆ ಮೊದಲೇ ಎಚ್ಚರದಿಂದಿರುವವನೂ, ಅದು ಸಂಭವಿಸಿದಾಗ ಸರಿಯಾದ ಬುದ್ಧಿಯಿಂದ ತಪ್ಪಿಸಿಕೊಳ್ಳಬಲ್ಲ ಸಮರ್ಥನೂ – ಇವರಿಬ್ಬರು ಮಾತ್ರವೇ ಸುಖದಿಂದ ಇರಲು ಸಾಧ್ಯ; ನಿಷ್ಕ್ರಿಯನಾಗಿ ತುಂಬ ಸಮಯ ಕಾಲವನ್ನು ತಳ್ಳುವವನು ನಾಶ ಹೊಂದುತ್ತಾನೆ.’

ಮೊದಲ ಮೀನು ಅಪಾಯವನ್ನು ಕೂಡಲೇ ಗ್ರಹಿಸಿತು; ತತ್‌ಕ್ಷಣ ಕಾರ್ಯಶೀಲವಾಗಿ ಅಪಾಯದ ಕಣ್ಣಿಗೂ ಬೀಳಲಿಲ್ಲ. ಎರಡನೆಯ ಮೀನು ಅಪಾಯ ಎದುರಾದಾಗ ಎಚ್ಚರಗೊಂಡಿತು;‍ಪ್ರಾಣವನ್ನು ಉಳಿಸಿಕೊಂಡಿತು. ಮೂರನೆಯ ಮೀನು ಮಾತ್ರ ಜಡತೆಯಲ್ಲೇ ಬದುಕುತ್ತಿತ್ತು. ಅಪಾಯದ ಯಾವ ಸೂಚನೆಗೂ ಅದು ಸ್ಪಂದಿಸಲಿಲ್ಲ. ಹೀಗಾಗಿ ಪ್ರಾಣವನ್ನು ಕಳೆದುಕೊಂಡಿತು.

ನಮ್ಮೊಳಗೂ ಈ ಮೂರು ಮೀನುಗಳ ಮನೋಧರ್ಮ ಇರುತ್ತದೆ. ಅಪಾಯವನ್ನು ಮೊದಲೇ ಗ್ರಹಿಸಿ, ಅದರಿಂದ ಪಾರಾಗುವ ಕ್ರಿಯಾಶೀಲತೆಯನ್ನೂ ಬುದ್ಧಿವಂತಿಕೆಯನ್ನೂ ಅಳವಡಿಸಿಕೊಂಡರೆ ಮಾತ್ರವೇ ಸುಖವನ್ನು ಪಡೆಯಲು ಸಾಧ್ಯ. ಜಡತೆಯಲ್ಲೇ ಮುಳುಗಿದ್ದರೆ ಅಪಾಯ ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.