ADVERTISEMENT

ಚಮತ್ಕಾರಿ ಚಾಕ್ಲೇಟು

ಮಕ್ಕಳ ಕಥೆ

ಸೋಮು ಕುದರಿಹಾಳ ಗಂಗಾವತಿ
Published 22 ಡಿಸೆಂಬರ್ 2018, 19:30 IST
Last Updated 22 ಡಿಸೆಂಬರ್ 2018, 19:30 IST
ಚಿತ್ರ: ಶಶಿಧರ ಹಳೆಮನಿ
ಚಿತ್ರ: ಶಶಿಧರ ಹಳೆಮನಿ   

ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವುದಾಗಿ ಮುಖ್ಯಗುರುಗಳು ಪ್ರಾರ್ಥನಾ ಅವಧಿಯಲ್ಲಿ ತಿಳಿಸಿದರು. ಆಯಾ ವಿಷಯ ಶಿಕ್ಷಕರು ತರಗತಿಗಳಿಗೆ ಅನುಗುಣವಾಗಿ ಕಂಠಪಾಠ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಸರಳ ಪ್ರಯೋಗ, ಚಿತ್ರ ಕಲೆ, ಕ್ರಾಪ್ಟ್ ಹಾಗೂ ದೈಹಿಕ ಶಿಕ್ಷಕರು ರಂಗೋಲಿ ಸ್ಪರ್ಧೆ ಮತ್ತು ವಿವಿಧ ಆಟೋಟಗಳ ಸ್ಪರ್ಧೆಗಳ ಬಗ್ಗೆ ಹೇಳಿ ಉಳಿದ ವಿವರಗಳನ್ನು ಮತ್ತು ವೇಳಾಪಟ್ಟಿಯನ್ನು ಸೂಚನಾ ಫಲಕದಲ್ಲಿ ಹಾಕುವುದಾಗಿ ಹೇಳಿದರು.

ಒಂದೊಂದು ತರಗತಿಯಲ್ಲಿಯೂ ತೀರದ ಕುತೂಹಲ. ಗಿಜಿಗಿಜಿ ಮಾತು. ಪ್ರತಿ ಪೀರಿಯಡ್‌ ಮುಗಿದೊಡನೆ ಓಡಿಹೋಗಿ ನೋಟೀಸ್ ಬೋರ್ಡ್ ನೋಡುತ್ತಿದ್ದರು. ‘ಛೇ, ಇನ್ನೂ ಹಾಕಿಲ್ಲ’ ಅನ್ನುತ್ತಾ ಬೇಸರದಿಂದ ಸಪ್ಪೆ ಮುಖ ಮಾಡಿಕೊಂಡು ವಾಪಸ್ ಬರುತ್ತಿದ್ದರು. ಮಧ್ಯಾಹ್ನ ಊಟದ ವಿರಾಮದಲ್ಲಿ ಹೋಗಿ ನೋಡಿದರೂ ಹಾಕಿರಲಿಲ್ಲ. ಚಡಪಡಿಕೆಯನ್ನು ತಡೆದುಕೊಳ್ಳಲಾಗದೆ ಮುಖ್ಯಗುರುಗಳ ಹತ್ತಿರ ಶಾಲೆಯ ಪ್ರಧಾನಮಂತ್ರಿಯನ್ನು ಕಳಿಸಿದರು. ‘ಸಂಜೆ ನಾಲ್ಕು ಗಂಟೆಗೆ ಅಂತೆ’ ಎಂಬ ಸುದ್ದಿ ಬಂತು. ಅಲ್ಲಿಯವರೆಗೂ ಮತ್ತದೇ ಮಾತುಗಳು. ಕಳೆದ ವರ್ಷ ಗೆದ್ದವರು ‘ಈ ವರ್ಷವೂ ನಾನೇ ಗೆಲ್ಲುವುದು’ ಅನ್ನುತ್ತಿದ್ದರೆ ‘ಇಲ್ಲ ಈ ವರ್ಷ ಕಾಂಪಿಟೇಶನ್ ಬೇರೆ ಇದೆ. ನಿನಗಿಂತ ಸ್ಟ್ರಾಂಗ್ ಇರೋರಿದಾರೆ’ ಅನ್ನುವ ಪ್ರತಿಕ್ರಿಯೆ. ಕೆಲವರು ‘ಓದೋದು ಬರೆಯೋದೆಲ್ಲ ನಿಮ್ಮದಾದರೆ ನಮ್ಮದೇನಿದ್ದರೂ ಓಡೋದು ಆಡೋದು’ ಅನ್ನುತ್ತಿದ್ದರು.

ಹೀಗೆ ಓಡುವ ಆಡುವ ಆಟಗಾರರಲ್ಲೊಬ್ಬ ತಿಮ್ಮ. ಅವನಿಗೆ ಓದು ಬರಹ ಅಂದರೆ ಅಷ್ಟಕಷ್ಟೆ. ರನ್ನಿಂಗ್ ರೇಸ್‍ಗೆ ಅವನಿದ್ದ ಅಂದರೆ ಯಾರೂ ಓಡುತ್ತಿರಲಿಲ್ಲ. ‘ಹೇ ಬಿಡ್ರೊ ಅವನೇ ಗೆಲ್ಲೋದು ನಾವೇಕೆ ಸುಮ್ಮನೆ ಓಡೋದು’ ಅನ್ನುತ್ತಿದ್ದರು. ತಿಮ್ಮಾನೂ ಕೂಡ ‘ನಾನು ಚಿರತೆ ಇದ್ದಂಗೆ. ನಮ್ಮ ಶಾಲೆಯ ಉಸೇನ್ ಬೋಲ್ಟ್ ಕಣ್ರೋ. ಯಾಕಪ್ಪಾ ಕೈಕಾಲು ನೋವು ಮಾಡ್ಕೋಬೇಕು ನೀವು’ ಅಂದು ರೇಗಿಸುತ್ತಿದ್ದ. ಅಷ್ಟೊತ್ತು ಸುಮ್ಮನಿದ್ದ ಚೆನ್ನ ‘ತಿಮ್ಮ ಈ ವರ್ಷ ನಿನ್ನ ಸೋಲಿಸ್ತೀನಿ ಕಣೋ ನಾನು’ ಅಂದು ಸವಾಲು ಹಾಕಿದ. ತಿಮ್ಮನೂ ಸೇರಿಕೊಂಡು ಉಳಿದ ಗೆಳೆಯರೆಲ್ಲ ನಕ್ಕು

ADVERTISEMENT

‘ಓಡ್ತಾನಂತೆ ಚೆನ್ನ ಗೆಲ್ತಾನಂತೆ ಚಿನ್ನ/ನೋಡ್ರಪ್ಪೋ ಇವನನ್ನ ಗೆದ್ದಂಗಾತು ತಿಮ್ಮನನ್ನ’ ಎಂದು ಹಾಡುತ್ತಾ ಗೇಲಿ ಮಾಡಿದರು. ಚೆನ್ನನಿಗೆ ಅವಮಾನವಾದರೂ ಸಹಿಸಿಕೊಂಡ. ಅಷ್ಟೊತ್ತಿಗೆ ಯಾರೋ ‘ಲಿಸ್ಟ್ ಹಾಕಿದ್ರು’ ಅಂತ ಕೂಗಿದರು. ಎಲ್ಲರೂ ‘ಹೋ..’ ಅಂತಾ ಓಡಿಹೋದರು. ತಮಗಿಷ್ಟವಾದ ಸ್ಪರ್ಧೆಗಳು ಅದರ ವಿಷಯಗಳು ದಿನಾಂಕ ಸಮಯ ಎಲ್ಲವನ್ನೂ ಬರೆದುಕೊಂಡರು. ಎಲ್ಲಾ ಸ್ಪರ್ಧೆಗಳಿಗೆ ತಯಾರಾಗಲು ಒಂದು ವಾರದ ಸಮಯವಕಾಶ ಇತ್ತು.

ಚೆನ್ನ ಈ ಮುಂಚೆ ಕೆಲವು ಓಟದ ಸ್ಪರ್ಧೆಗಳಲ್ಲಿ ಗೆದ್ದಿದ್ದ. ಆದರೆ ತಿಮ್ಮನನ್ನು ಸೋಲಿಸಿರಲಿಲ್ಲ. ತಲೆಯ ತುಂಬಾ ಅದೇ ಯೋಚನೆ. ‘ತಿಮ್ಮನಿಗಿಂತ ಜೋರಾಗಿ ಓಡೋದು ಹೇಗಪ್ಪ? ಯಾಕಾದರೂ ಎಲ್ಲರ ಮುಂದೆ ಹೇಳಿದ್ನೊ? ಇಲ್ಲ, ಚೆನ್ನಾಗಿ ಪ್ರಾಕ್ಟೀಸ್ ಮಾಡಿದರೆ ಗೆಲ್ಲಬಹುದು’ ಎಂಬ ಗೊಂದಲದ ನಡುವೆ ತನಗೆ ತಾನೇ ಧೈರ್ಯ ಹೇಳಿಕೊಂಡ. ಶಾಲೆಯಿಂದ ಮನೆಗೆ ಬಂದು ಸಂಜೆ ಒಂದು ಸುತ್ತು ಓಡಿದ. ದಿನವೂ ಓಡುವುದಕ್ಕಿಂತ ಜಾಸ್ತಿನೇ ಓಡಿ ಬಂದ. ಸುಸ್ತೋ ಸುಸ್ತು ಕಾಲುನೋವು ಶುರುವಾಯಿತು. ಮರುದಿನ ಬೆಳಗ್ಗೆ ಸೈಕಲ್ ತುಳಿಯಲಾರದೆ ಶಾಲೆಗೆ ನಡೆದುಕೊಂಡೇ ಹೋದ. ಅಷ್ಟೊತಿಗೆ ತಿಮ್ಮ ದೈಹಿಕ ಶಿಕ್ಷಕರ ಹತ್ತಿರ ಪ್ರಾಕ್ಟೀಸ್ ಆರಂಭಿಸಿದ್ದ. ‘ಓಹ್! ತಿಮ್ಮನ ಗೆಲುವಿನ ಗುಟ್ಟು ಇಲ್ಲಿದೆ!’ ಅನಿಸಿತು ಚೆನ್ನನಿಗೆ. ನೇರವಾಗಿ ಶಿಕ್ಷಕರ ಹತ್ತಿರ ಹೋಗಿ ‘ಸರ್ ನಾನು ತಿಮ್ಮನಿಗೆ ಚಾಲೆಂಜ್ ಮಾಡಿದೀನಿ. ಗೆಲ್ಲೋದು ಹೇಗೆ ಹೇಳಿಕೊಡಿ ಸರ್’ ಅಂತ ಕೇಳಿದ. ‘ತಿಮ್ಮನಿಗೆ ತಿಮ್ಮನೇ ಸಾಟಿ. ಯಾಕೆ ಆಗದ ಕೆಲಸಕ್ಕೆ ಆಸೆಪಡ್ತೀಯಾ’ ಅಂದುಬಿಟ್ಟರು. ನಿರಾಸೆ ಆಯಿತಾದರೂ ‘ಇಲ್ಲ ಸರ್ ನಾನೂ ಚೆನ್ನಾಗಿ ಪ್ರಾಕ್ಟೀಸ್ ಮಾಡ್ತೀನಿ. ಹೇಳಿ ಕೊಡಿ’ ಅಂತ ಅಲವತ್ತುಕೊಂಡ. ‘ಸರಿ, ಗೆಲ್ಲಬೇಕು ಅಂತ ಓಡಬೇಡ. ನಿನ್ನ ಪ್ರಯತ್ನ ಮತ್ತು ಪ್ರಾಕ್ಟೀಸ್ ಮುಂದುವರಿಸು. ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಅಭ್ಯಾಸ ಕೂಡ ತುಂಬಾ ಮುಖ್ಯ. ಒಳ್ಳೆಯ ಆಹಾರ ಸೇವಿಸುವುದು ಒಳ್ಳೆಯದು’ ಅಂದರು. ಶಾಲೆಯಲ್ಲಿ ಉಳಿದ ಎಲ್ಲಾ ವಿದ್ಯಾರ್ಥಿಗಳು ಅವರವರ ಆಸಕ್ತಿಯ ಸ್ಪರ್ಧೆಗಳಲ್ಲಿ ಸಿದ್ಧತೆ ನಡೆಸಿದ್ದರು. ಆದರೆ ಈ ವರ್ಷ ಓಟದ ಸ್ಪರ್ಧೆ ಪ್ರಮುಖ ಆಕರ್ಷಣೆಯಾಗಿತ್ತು. ಅವತ್ತು ಕಾಲು ನೋವಾಗಿದ್ದರಿಂದ ತಕ್ಕಮಟ್ಟಿಗಿನ ಪ್ರಾಕ್ಟೀಸ್ ಮಾಡಿ ಮನೆಗೆ ಬಂದ.

ಮರುದಿನ ಬೆಳಿಗ್ಗೆ ಬೇಗ ಎದ್ದು ಪ್ರಾಕ್ಟೀಸ್‍ಗೆ ಹೊರಟ. ಆಗ ಇನ್ನೂ ಐದು ಗಂಟೆ. ಚನ್ನನಿಗೆ ಗೆಲ್ಲುವ ಛಲ. ಕಾಲು ನೋವಿನಲ್ಲಿಯೂ ಓಡತೊಡಗಿದ. ಎರಡು ಕಿಲೋ ಮೀಟರ್‍ನಷ್ಟು ಓಡಿ ಕೊಂಚ ವಿರಮಿಸಿ ಉಳಿದ ವ್ಯಾಯಾಮಗಳಲ್ಲಿ ತೊಡಗಿಕೊಂಡ. ಅಷ್ಟರಲ್ಲೇ ಅದೇ ಸ್ಥಳಕ್ಕೆ ಬಂದ ಚೆನ್ನನ ಮನೆಯ ಪಕ್ಕದ ಶಾಂತಜ್ಜ ಚೆನ್ನನನ್ನು ನೋಡಿ ‘ಏನು ಚೆನ್ನ ಇವತ್ತು ನನಗಿಂತ ಬೇಗ ಬಂದಿದಿಯಾ?’ ಎಂದು ಕೇಳಿದರು. ಚೆನ್ನ ತಮ್ಮ ಶಾಲೆಯ ಸ್ಪರ್ಧೆ, ತಿಮ್ಮನಿಗೆ ಮಾಡಿದ ಚಾಲೆಂಜು, ಗೆಲ್ಲುವ ಆಸೆ ಎಲ್ಲಾ ಹೇಳಿದ. ‘ಸರಿ ಓಡಿ ಓಡಿ ಅಭ್ಯಾಸ ಮಾಡು. ಶಾಲೆಗೆ ಹೋಗುವ ಮೊದಲು ನಮ್ಮನೆಗೆ ಬಾ. ತಿನ್ನೋಕೆ ಏನೋ ಕೊಡ್ತೀನಿ. ಓಡೋಕೆ ಎನರ್ಜಿ ಬರುತ್ತೆ’ ಅನ್ನುತ್ತಾ ಮುಂದೆ ಸಾಗಿದರು ಶಾಂತಜ್ಜ. ಚೆನ್ನನಿಗೆ ಒಂಚೂರು ಖುಷಿ ಆಯ್ತು. ಯಾಕೆಂದರೆ ಶಾಂತಜ್ಜ ಒಬ್ಬ ಒಳ್ಳೆಯ ಕುಸ್ತಿಪಟು. ಕೊನೆ ಟೈಮಲ್ಲಿ ಗೆಲ್ಲೋದು ಹೇಗೆ ಎಂಬುದರಲ್ಲಿ ಎಕ್ಸ್‍ಪರ್ಟ್ ಅಂತ ಫೇಮಸ್ ಆಗಿದ್ದ.

ಬೆಳಕು ಹರಿಯುವುದೇ ತಡ ಆಗುತ್ತಿದೆ ಎಂಬ ಅವಸರದಲ್ಲಿದ್ದ ಚೆನ್ನ ಶಾಂತಜ್ಜನ ಮನಗೆ ಹೋದ. ಚೆನ್ನನ ನಿರೀಕ್ಷೆಯಲ್ಲಿದ್ದ ಶಾಂತಜ್ಜ ಒಂದು ಪುಟ್ಟ ಡಬ್ಬಿಯನ್ನು ಕೊಟ್ಟು ‘ದಿನಾಲೂ ತಿನ್ನು. ಅದರ ಜೊತೆಗೆ ಪ್ರಾಕ್ಟೀಸ್ ಮಾಡೋದು ಮರೆಯಬೇಡ’ ಎಂದು ಎಚ್ಚರಿಸಿದರು. ಕುತೂಹಲದಿಂದ ಓಡೋಡಿ ಬಂದ ಚೆನ್ನ ಡಬ್ಬ ತೆರೆದು ನೋಡಿದರೆ ಚಾಕ್ಲೇಟುಗಳಿದ್ದವು! ಅಚ್ಚರಿಯಾಗಲಿಲ್ಲವಾದರೂ ಶಾಂತಜ್ಜನ ಮಾತು ಮೀರಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡ. ಅದಕ್ಕೂ ಮುಖ್ಯವಾಗಿ ತಿಮ್ಮನನ್ನು ಸೋಲಿಸಬೇಕೆಂಬ ಅರಿವು ಜಾಗೃತವಾಗಿತ್ತು. ಶಾಂತಜ್ಜ ಹೇಳಿದಂತೆಯೇ ಮಾಡಿದ. ಪ್ರತಿದಿನವೂ ಚಾಕ್ಲೇಟು ತಿಂದು ಅಭ್ಯಾಸ ಮಾಡಿದ. ದಿನದಿಂದ ದಿನಕ್ಕೆ ವೇಗ ಹೆಚ್ಚಾಗಿದೆ ಅನಿಸತೊಡಗಿತ್ತು. ಆಕಡೆ ತಿಮ್ಮನ ಅಭ್ಯಾಸವೂ ಜೋರು ನಡೆದಿತ್ತು. ಈ ವರ್ಷವೂ ಗೆಲ್ಲಲೇಬೇಕೆಂಬ ಆಸೆ ಗರಿಗೆದರಿತ್ತು.

ಶಾಲೆಯಲ್ಲಿ ವೇಳಾಪಟ್ಟಿಯಂತೆ ಎಲ್ಲಾ ಸ್ಪರ್ಧೆಗಳು ನಡೆಯುತ್ತಿದ್ದವು. ಕೆಲವು ಸ್ಪರ್ಧೆಗಳಲ್ಲಿ ಸಮಯ ವ್ಯತ್ಯಾಸವಾಗಿ ಕ್ವಿಜ್ ಮತ್ತು ಓಟದ ಸ್ಪರ್ಧೆಯನ್ನು ಕಾರ್ಯಕ್ರಮದ ದಿನವೇ ನೆಡೆಸುವುದಾಗಿ ಪರಿಷ್ಕøತ ವೇಳಾಪಟ್ಟಿಯನ್ನು ಪ್ರಕಟಿಸಿದರು. ಅದರಂತೆ ಕಾರ್ಯಕ್ರಮದ ದಿನ ಬಂದೇಬಿಟ್ಟಿತು. ಎಲ್ಲರ ಕಣ್ಣು ತಿಮ್ಮ ಚೆನ್ನನ ಮೇಲೆಯೇ ನೆಟ್ಟಿತ್ತು. ಭಾರೀ ತುರುಸಿನಿಂದ ನಡೆದ ಪಂದ್ಯದಲ್ಲಿ ತಿಮ್ಮ..ಚೆನ್ನ.. ಚೆನ್ನ.. ತಿಮ್ಮ.. ಎಂಬ ಹಿಂದುಮುಂದಾಗುವ ಓಟದಲ್ಲಿ ರೋಮಾಂಚನಕಾರಿಯಾಗಿ ಚೆನ್ನ ಗೆದ್ದುಬಿಟ್ಟ. ಶಾಲೆಗೇ ಶಾಲೆಯೇ ಅಚ್ಚರಿಯಲ್ಲಿ ಮುಳುಗಿತು. ಚೆನ್ನನಿಗೆ ಸಂಭ್ರಮವೋ ಸಂಭ್ರಮ. ಗೆದ್ದ ಗೆಳೆಯನನ್ನು ತಿಮ್ಮ ಅಭಿನಂದಿಸಿದ. ಕಾರ್ಯಕ್ರಮದ ಉದ್ಘಾಟಕರಾಗಿ ಶಾಂತಜ್ಜ ಅವರನ್ನೇ ಅಹ್ವಾನಿಸಲಾಗಿತ್ತು. ಅವರ ಭಾಷಣದಲ್ಲಿ ಚೆನ್ನನ ಗೆಲುವಿನ ಗುಟ್ಟು ಹೊರಬಿತ್ತು ‘ಚೆನ್ನನ ಇವತ್ತಿನ ಗೆಲುವಿನ ಹಿಂದೆ ಚಮತ್ಕಾರಿ ಚಾಕ್ಲೇಟುಗಳಿವೆ. ಅವು ಅಂತಿಂಥ ಚಾಕ್ಲೇಟಲ್ಲ...’ ಅನ್ನುತ್ತಿದ್ದಂತೆ ಚೆನ್ನ ಮೋಸದಿಂದ ಗೆದ್ದಿದ್ದಾನೆ. ಹೀಗೆ ಮಾಡಬಾರದಿತ್ತು. ಪಾಪ ತಿಮ್ಮನಿಗೆ ಅನ್ಯಾಯವಾಯಿತು ಎಂಬ ಗುಸುಗುಸು ಶುರುವಾಯಿತು. ಮಾತು ಮುಂದುವರಿಸಿದ ಶಾಂತಜ್ಜನವರು ‘ಚೆನ್ನನ ಮನಸ್ಸಿಗೆ ಬಲ ನೀಡಿದ ಚಾಕ್ಲೇಟು. ಅವನ ಸಾಮಥ್ರ್ಯವನ್ನು ಇಮ್ಮಡಿಗೊಳಿಸಿದ ಚಾಕ್ಲೇಟು. ವಿಶೇಷ ಅಂದರೆ ನೀವೆಲ್ಲರೂ ದಿನವೂ ತಿನ್ನು ಚಾಕ್ಲೇಟುಗಳೆ, ಆದರೆ ಚೆನ್ನನಿಗೆ ಹಾಗೆ ಹೇಳಿ ಕೊಟ್ಟಿದ್ದೆ ಅಷ್ಟೇ. ಅದರಿಂದ ಅವನ ಮನಸ್ಸಿನಲ್ಲಿ ಗೆಲ್ಲುವ ಛಲ ಮೂಡಿತು. ಹಾಗಾಗಿ ಗೆದ್ದ. ಗೆಲ್ಲುವುದಕ್ಕೆ ದೈಹಿಕ ಶಕ್ತಿ ಎಷ್ಟು ಮುಖ್ಯವೋ ಮನಸ್ಸಿನ ಛಲವೂ ಅಷ್ಟೇ ಮುಖ್ಯ’ ಎಂದು ಹೇಳಿದರು. ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟುತ್ತಾ ನಿರಾಳರಾದರು. ಬಹುಮಾನ ವಿತರಿಸಲಾಯಿತು. ರುಚಿಯಾದ ಊಟ ಸವಿದರು. ಶಾಲೆಯ ಎಲ್ಲಾ ಮಕ್ಕಳು ಮತ್ತು ಗುರುಗಳು ಕಾರ್ಯಕ್ರಮದ ಯಶಸ್ಸಿನ ಖುಷಿಯಲ್ಲಿ ತೇಲಾಡತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.