
ಮದುವೆ
ಯೇಜಸ್ ಪಾಷ ಅಜ್ಜಪನ ಹಳ್ಳಿ
ಈಗ ಎಲ್ಲಿ ಹೋದರೂ ಸ್ನೇಹಿತರಿಂದ ಹಿಡಿದು, ಬಂಧು ಬಳಗದವರು ಸೇರಿ ನಮ್ಮಿಬ್ಬರಿಗೆ ಕೇಳುವ ಒಂದೇ ಪ್ರಶ್ನೆ
‘ನಿಮ್ಮದು ಇಂಟರ್ ರಿಲೀಜಿಯನ್ ಮ್ಯಾರೇಜ್ ಅಲ್ವಾ?’
ಈ ಪ್ರಶ್ನೆ ಕೇಳುವಾಗ ನಾನು ಒಳ್ಳೆಯ ಗಂಡನಾ, ಜವಾಬ್ದಾರಿಯುತ ಮನುಷ್ಯನಾ, ಜೀವನ ಚೆನ್ನಾಗಿದೆಯಾ, ಅವಳು ಹೇಗಿದ್ದಾಳೆ ಇದ್ಯಾವುದು ಅವರಿಗೆ ಮುಖ್ಯವಲ್ಲ.
ಅವಳು ಹಿಂದೂ, ನಾನು ಮುಸ್ಲಿಂ ಅಷ್ಟೇ ಅವರಿಗೆ ಮುಖ್ಯ.
ಈ ಎರಡು ಪದಗಳ ಅಗತ್ಯ ನಮಗಿರಲಿಲ್ಲ.
ಗುಡಿ ಮಸೀದಿ ಚರ್ಚುಗಳ ಬಿಟ್ಟು ಹೊರಬನ್ನಿ ಎಂಬ ಕುವೆಂಪುರವರ ಮಾತುಗಳಷ್ಟೇ ನಮಗೆ ಈಗಿನ ದ್ವೇಷ ಸಮಾಜದಲ್ಲಿ ಮುಖ್ಯವಾಗಿತ್ತು.
ಇವುಗಳ ಹೊರತಾಗಿ ನಮಗೆ ಏನು ಕಾಣಲಿಲ್ಲ.
ಪ್ರೀತಿಯನ್ನು ಮನೆಗೆ ಹೇಳಿದ ದಿನ ನನ್ನ ಮನೆಯೊಳಗೆ ಮೌನ ಮಾತನಾಡುತ್ತಿತ್ತು.
ಆ ಮೌನ ಒಪ್ಪಿಗೆ ಇಲ್ಲದ-ನಿಷೇಧಕ್ಕೆ ಸ್ಪಷ್ಟವಾಗಿತ್ತು.
ನಿನ್ನಿಂದ ನಮ್ಮ ಕುಟುಂಬದಲ್ಲಿ ತಲೆ ಎತ್ತಿ ಮಾತನಾಡಲು ಸಾಧ್ಯವಿಲ್ಲ ಅಮ್ಮನ ಮಾತು.
ಆದರೆ ನಾನು ತಲೆ ಎತ್ತಿದ್ದೇನೆ. ಸಮಾಜದ ಬದಲಾವಣೆ ಶುರುವಾಗಲಿ ನಮ್ಮಿಂದಲೇ ಎನ್ನುತ್ತ.
ಅವಳ ಮನೆಯಲ್ಲಿ ಕೂಡ ಇದೇ ಕಥೆ. ಅವಳ ಕಣ್ಣೀರ ಪ್ರೀತಿಯ ಕಥೆಗಳಿಗೆ ಬೆಲೆ ಇರಲಿಲ್ಲ.
ಆಕೆಯ ಭಯ, ಒತ್ತಡ, ಅವಳ ಕೈ ಹಿಡಿದ ಕ್ಷಣದಲ್ಲಿ ಅರ್ಥವಾಗಿತ್ತು.
ಇಬ್ಬರ ಮನಸ್ಸಲ್ಲಿ ಒಂದೇ ಗುರಿ ಈ ದಾರಿಯಲ್ಲಿ ಕಷ್ಟ ಇರಬಹುದು, ಸುಖ ಬರಬಹುದು ಆದರೆ ಹಿಂದೆ ಸರಿಯುವುದು ಬೇಡ.
ಆ ದಿನ ಬೆಳಿಗ್ಗೆ ನನ್ನ ಮೊಬೈಲ್‌ಗೆ ಬಂದ ಸಂದೇಶ ನನಗೆ ಭಯ ಮೂಡಿಸಿತ್ತು.
ಮನೆಯಲ್ಲಿ ಏನಾಗುತ್ತದೆ ಎಂಬ ಕಲ್ಪನೆಯೂ ನನಗಿಲ್ಲ, ಎಲ್ಲವನ್ನೂ ತೊರೆದು ಬರುತ್ತಿದ್ದೇನೆ.
ನಾನಿದ್ದೇನೆ, ಬಾ ಅಷ್ಟೇ ನನ್ನ ಉತ್ತರವಾಗಿತ್ತು.
ವಿಶೇಷ ವಿವಾಹ ಕಾಯಿದೆ ನಮಗೆ ಸಂವಿಧಾನ ಕೊಟ್ಟಿರುವ ಶಕ್ತಿ, ಕಾನೂನು ಕೊಟ್ಟ ದಾರಿ.
ನಾವಿಬ್ಬರೂ ಸೀದಾ ನಡೆದದ್ದು ವಿವಾಹ ನೋಂದಣಿ ಕಚೇರಿಗೆ, ಆ ಕಚೇರಿಯಲ್ಲಿ ಕಾನೂನು ಮಾತ್ರ ಇರಲಿಲ್ಲ. ಸಮಾಜವು ಕುಳಿತಿತ್ತು.
‘ಇಂಟರ್ ರಿಲೀಜಿಯನ್ ಅಲ್ವಾ?’
ನೋಂದಣಿ ಅಧಿಕಾರಿ ಕೇಳಿದರು.
ಅದು ಕಾನೂನಿನ ಪ್ರಶ್ನೆಯಲ್ಲ. ಅನುಮಾನದ ಧ್ವನಿಯಾಗಿತ್ತು.
‘ನಾಳೆ ಜಗಳ ಗಿಗಳ ಆದರೆ ಕೋರ್ಟ್‌ಗೆ ಬರಬೇಡಿ. ಇವತ್ತು ಪ್ರೀತಿ ಗೀತಿ ಅಂತೀರ, ನಾಳೆ ದೂರು ತರುತ್ತೀರ’ ಎಂದರು.
ಇವು ಸಲಹೆಗಳಂತೆ ಕಾಣಬಹುದು.
ಆದರೆ ಅವು ಪ್ರೀತಿಗೆ ಹಾಕಿದ ಗಡಿ, ಗಡಿಗಳ ಮೀರಿ ಗೆಳೆತನ ಮಾಡೋಣ ಎನ್ನುವವರು ನಾವು, ಇದಕ್ಕೆಲ್ಲ ಅಂಜುವವರಲ್ಲ ಎಂದು ನನ್ನ ಮಾತು ಮುಂದುವರೆಸಿದೆ.
ಸರ್, ನಿಮ್ಮ ಅಮೂಲ್ಯವಾದ ಸಲಹೆಗಳಿಗೆ ಧನ್ಯವಾದಗಳು. ನಮ್ಮ ಬದುಕಿನ ಹೊಣೆ ನಾವು ಹೊರುತ್ತೇವೆ ಎಂದು ಹೇಳಿದಾಗ ನನ್ನ ಧ್ವನಿ ನಡುಗಲಿಲ್ಲ.
ಸಹಿ ಹಾಕಿದಾಗ ಖಡ್ಗ ಹಿಡಿದು ಯುದ್ಧಕ್ಕೆ ಹೊರಟ ರಾಜಕುಮಾರನಂತೆ ಕೈ ಲೇಖನಿಯನ್ನು ಗಟ್ಟಿಯಾಗಿ ಹಿಡಿದಿತ್ತು. ನನ್ನ ಬಾಯಿ ಬಿಟ್ಟೊಡನೆ ಅಧಿಕಾರಿಯ ಬಾಯಿ ಕಟ್ಟಿತ್ತು.
ಆ ಸಹಿ ನನಗೆ ಗಂಡನ ಸ್ಥಾನ ಮಾತ್ರ ಕೊಡಲಿಲ್ಲ, ಓರ್ವ ಹೆಣ್ಣಿನ ಬದುಕಿನ ಹೊಣೆಯನ್ನು ಕೊಟ್ಟಿತ್ತು.
ಮದುವೆ ನೋಂದಣಿ ನಂತರ ಎಲ್ಲವೂ ಸರಿಯಾಗುತ್ತದೆ ಎಂದುಕೊಂಡಿದ್ದೆ ಆದರೆ ಅದಾಗಲಿಲ್ಲ.
ಮನೆ ಹುಡುಕುವಾಗ ನಿಮ್ಮ ಹೆಸರೇನು, ಜಾತಿ ಯಾವುದು, ಧರ್ಮ ಯಾವುದು, ನೀವು ಸಸ್ಯಹಾರಿಯಾ, ಮಾಂಸಹಾರಿಯಾ, ನಿಮ್ಮ ಹೆಸರು ಹೀಗೆ? ಅವರ ಹೆಸರು ಹಾಗೇ? ನಿಮ್ಮದು ಇಂಟರ್ ರಿಲೀಜಿಯನ್ ಮ್ಯಾರೇಜ? ಇದೇ ಪುನರಾವರ್ತನೆ ಪ್ರಶ್ನೆಗಳು
ಆಸ್ಪತ್ರೆಯಲ್ಲಿ ‘ಹಸ್ಬೆಂಡ್ ಮುಸ್ಲಿಂನಾ’
ಕಾನೂನು ನಮ್ಮನ್ನು ಗಂಡ -ಹೆಂಡತಿ ಎಂದು ಒಪ್ಪಿದೆ. ಸಮಾಜ ಇನ್ನೂ ಅನುಮಾನದಲ್ಲೆ ಇದೆ.
ಇದು ಕೇವಲ ಪ್ರೀತಿಯ ಕಥೆಯಲ್ಲ.
ಇದು ಸಂವಿಧಾನ ಕೊಟ್ಟ ಹಕ್ಕು ಮತ್ತು ಸಮಾಜ ಹೇರಿದ ಭಯ ಇವೆರಡರ ಮಧ್ಯೆ ನಿಂತ ಬದುಕು.
ಈಗ ಎಲ್ಲಿ ಹೋದರು ಒಂದೇ ಪ್ರಶ್ನೆ ಕೇಳುತ್ತಾರೆ .
‘ನಿಮ್ಮದು ಇಂಟರ್ ರಿಲೀಜಿಯನ್ ಮ್ಯಾರೇಜಾ?’
ಹೌದು, ನಾನು ಉತ್ತರ ಕೊಡುತ್ತೇನೆ.
ಅದು ನನ್ನ ನಿಲುವು,
ಅದೇ ನನ್ನ ಬದುಕು
‘ಹೌದಾ? ಹಾಗಾದರೇ ಮಗುವಿನ ಶಾಲೆಯ ಮಾತು ಬಂದಾಗ ಧರ್ಮದ ಕಾಲಮಿನಲ್ಲಿ ಏನು ಬರೆಯುತ್ತೀರಾ’
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ತ್ವದೆಲ್ಲೇ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ!
ವಿಶ್ವಮಾನವ ಧರ್ಮ ಎಂದು ಬರೆಯುತ್ತೇನೆ ಎಂದೇ.
ಏಕೆಂದರೆ ಬದಲಾಗದಿದ್ದರೆ ನಾವಿಂದು ಜಗವ ಬದಲಾಯಿಸುವೆವೆಂದು ಹಾಡುಗಳೊಂದಿಗೆ ಬೆಳೆದವನು ನಾನು. ಕಟುತ್ತೇವೆ ಹೊಸ ನಾಡೊಂದನ್ನು, ಜಾತಿಯಿಲ್ಲದ ಭೀತಿಯಿಲ್ಲದ ನಾಡ ಕಟ್ಟುತ್ತೇನೆ, ಹೊಸ ಕನಸ ಕಟ್ಟುತ್ತೇವೆ ಹೊಸ ಸಮಾಜದೊಂದಿಗೆ ಕುಲವೆನ್ನದ ಮನುಜಕುಲದ ಹೊಸ ಹಾಡ ಬರೆಯುತ್ತ ಬದಲಾವಣೆಯೊಂದಿಗೆ ಸಾಗುತ್ತ.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.