ಪುಸ್ತಕ
ಮುಸ್ಸಂಜೆ ವೇಳೆ, ಜನಾಬಾಯಿ ಸತ್ತಳೆಂಬ ಸುದ್ದಿ ಓಣಿ ತುಂಬೆಲ್ಲ ಹಬ್ಬಿತು. ಓಣಿಯ ತುಸು ಮಂದಿ ಅದೇ ಆಗ ತಮ್ಮ ಹೊಲ ಗದ್ದೆಗಳ ಕೆಲಸದಿಂದ ಹೈರಾಣಾಗಿ ಮನೆಗೆ ಬಂದು ನೆಲ ಹಿಡಿದಿದ್ದರು. ಹೆಂಗಸರು ತಂತಮ್ಮ ಮನೆಯಂಗಳ ಉಡುಗಿ ಮಾಡಿನ ದೇವರಿಗೆ ದೀಪ ಹಚ್ಚಿ ಸ್ವಯಂಪಾಕ ಸಿದ್ದ ಮಾಡಲು ಸಜ್ಜಾಗುತ್ತಿದ್ದರು. ವಯಸ್ಸಾದ ಮುದುಕರೋ ಮಾಬುಸೂಬಾನಿ ದರ್ಗಾ ಕಟ್ಟೆಯ ತಮ್ಮ ನಿತ್ಯದ ಭದ್ರಾಸನ ಹಿಡಿದು ಹರಟೆಯ ತೀಟೆಗಳಿಗೆ ಗಂಟಲು ಹದಗೊಳಿಸಿಕೊಳ್ಳುತ್ತಿದ್ದರು. ಜನಾಬಾಯಿಯ ಗುಡಿಸಲಿಂದ ಜೋರಾಗಿ ಅಳುವ ದನಿ ಕೇಳಿಸಿತು. ಓಣಿಯ ಮಂದಿ ತಡೆಯಲಿಲ್ಲ; ಬಡಬಡ ಎನ್ನುವಂತೆ ಸಾಬಣ್ಣನ ಗುಡಿಸಲ ಕಡೆಗೆ ಹೆಜ್ಜೆ ಕಿತ್ತರು.
ಹಳಬರ ಶಿವಗೌಡ ಮತ್ತು ಪಟೇಲರ ತಮ್ಮಣ್ಣ ತಮ್ಮ ಧೋತ್ರ ಕಚ್ಚೆಗಳನ್ನು ಏರಿಸಿಕಟ್ಟಿದರು. ಗುಡಿಸಲ ಮುಂದೆ ಜಮಾಯಿಸಿದ್ದ ಮಂದಿನೆಲ್ಲ ಒತ್ತಟ್ಟಿಗೆ ಸರಿಸಿ ಒಳಹೊಕ್ಕರು. ಮೂಲೆಯಲ್ಲಿ ಬಾಯಿತೆರೆದಂತೆ ಜೀವಬಿಟ್ಟಿದ್ದ ಜನಾಬಾಯಿಯ ಹೆಣದ ಬಾಯಿ ಮುಚ್ಚಿ ಅಡ್ಡಾಗಿದ್ದ ಹರಕು ಕಂಬಳಿ ಸಹಿತ ಎತ್ತಿ ಹೊರ ತಂದರು. ಜಗಲಿಯ ಮೇಲೆ ಚಕ್ಕಳ ಮಕ್ಕುಳಿ ಹಾಕಿಸಿ ಪತ್ತಲವೊಂದನ್ನು ಕುತ್ತಿಗೆಗೆ ಸುತ್ತಿ ಹೆಣವನ್ನು ಗೋಟು ಕೂಡ್ರಿಸಿದರು. ಹೆಣ ಜೋಲಿ ಬೀಳದಂತೆ ಛತ್ತಿನ ಗಳವೊಂದಕ್ಕೆ ಪತ್ತಲ ಬಿಗಿದು ಕಟ್ಟಿದರು. ಈಗ ಜಗುಲಿಯ ಮೇಲೆ ಧ್ಯಾನಕ್ಕೆ ಕುಳಿತಂತೆ ಜನಾಬಾಯಿಯ ಹೆಣ. ಸಾಬಣ್ಣನ ಹೆಂಡತಿ ಬಂಗಾರಿ ಹಣೆ ಹಣೆ ಬಡಿದುಕೊಂಡು ಅತ್ತಳು, ಸಾಬಣ್ಣ ಸಹಿತ ಬಾಯಿಗೆ ಧೋತ್ರದ ಅಂಚು ಸಿಕ್ಕಿಸಿಕೊಂಡು ಮುಸಿ ಮುಸಿ ಅತ್ತ.
ಹೊತ್ತಿನ ಕೌನೆಳ್ಳು ಇಳಿಯುತ್ತಿತ್ತು. ಇಡೀ ಓಣಿ ಗುಡಿಸಲ ಮುಂದೆ ಜಮಾಯಿಸುತ್ತಿತ್ತು. ಹೆಂಗಸರೆಲ್ಲ ಬಂಗಾರಿಯ ಸುತ್ತುವರೆದು ಆಕೆಯ ದನಿ ಜೋಡಿ ಅವರು ದನಿಯಾದರು. ಅಷ್ಟರಲ್ಲಿ ಮುಸರ ಬಡೇಸಾಬ ಚುರುಮುರಿ ಚೀಲೊಂದನ್ನು ಹೊತ್ತು ತಂದ. ಬಿಚ್ಚಿ ಪಡಸಾಲೆಯಲ್ಲಿ ಕುಂತಿದ್ದವರ ಉಡಿ ಮತ್ತು ಬೊಗಸೆಗಳಲ್ಲಿ ನೀಡುತ್ತ ನಡೆದ. ಹೆಣಕ್ಕೆ ಬಂದವರೂ ಒಂದೊಂದೆ ಕಾಳು ಬಾಯಿಗಿಟ್ಟು ಮೇಲಕಾಡಿಸಲು ಹತ್ತಿದರು. ಆರೇರ ದಗಡು ಎದ್ದು ಸಾಬಣ್ಣನನ್ನು ಒಂದು ಬದಿಗೆ ಕರೆದ. “ಸಾಬ್ಯಾ, ಮತ್ತ್ ಮಂದಿ ಕುಂತ ಬಾಳೋತ್ತಾತು. ಚಹಾಪಾನೀ ಜೋಡ್ನಾ ಮಾಡ್ಬೇಕು. ಒಂತುಸು ಕೊಕ್ಕಾ ಕುಡ” ಅಂತಂದ.
ಸಾಬಣ್ಣ ಸರಕ್ಕೆನೆ ಗುಡಿಲ ಒಳ ನಡೆದ. ಒಂದೆರಡು ಗಳಿಗೆ ತಡಕಾಡಿ ಮತ್ತೇ ಹೊರಬಂದ. “ದಗಡು ಮನ್ಯಾಗ ರೊಕ್ಕಿಲ್ಲ, ಹೆಂಗಸಿನ ಬಟವೇದಾಗ ಬರೀ ಇಷ್ಟ ಸಿಕ್ಕುವು. ಈಗ ಹೆಂಗಾರೆ ಯವಸ್ಥಾ ಮಾಡ. ನಾಳಿ ನೋಡುಣು” ಅಂತಂದು ಒಂದೆರಡು ದುಡ್ಡು ಅವನ ಕೈಗಿತ್ತ.
“ಐ.. ಹೆಂಗಾರೆ ಅಂದ್ರ ಹ್ಯಂಗೋ ಸಾಬ್ಯಾ? ಮಂದಿ ನೋಡಿದ್ರ ಮೂರಿಪ್ಪತ್ರ ಮ್ಯಾಲ್ ಅದಾರ. ಈ ಯಾಡ್ಡ ದುಡ್ಡಿನ್ಯಾಗ ಜೋಡ್ನಾ ಅಂತಂದ್ರ ಹ್ಯಂಗಾತೀತಿ? ಯಲ್ಲಾರೂ ಯದ್ದ ಹೋಕ್ಕಾರ ನೋಡ ಮತ್ತ್, ಹಿಂದಿಗಡ್ಸೆ ಹಳಾಳ್ಸೀ” ಅಂದ ದಗಡು.
ಸಾಬಣ್ಣ ಕಡು ಬಡವ. ಅವನ ದಾರಿದ್ರ್ಯ ಮತ್ತು ದೀನತೆಗಳು ಅವನ ಕಣ್ಣು, ಮಾರಿಯ ಮೇಲೆ ಹುಟ್ಟು ಮಚ್ಚೆಯಂತೆ ಠಾಳವಾಗಿದ್ದವು. ಒಂದು ಕಡೆ ಅವ್ವ ಸತ್ತ ದುಃಖ, ಇನ್ನೊಂದು ಕಡೆ ಊರ ರಿವಾಜಿನ ಮುಲಾಜು. ‘ಅವ್ವ ಇಂಥಾ ಇಕ್ಕಟ್ಟಿನ ಹೊತ್ತಿನ್ಯಾಗ ನೀ ಯಾಕ್ ಸತ್ತಿಬೇ..?’ ಎನ್ನುತ್ತಿತ್ತು ಅವನ ಅಸಹಾಯಕ ಅಳು. ಸಾಬಣ್ಣನ ಪಾಲಿಗೆ ತನ್ನ ಅವ್ವ ಜೀವಂತ ಇದ್ದಿದ್ದೂ ಒಂದು ಸಾವು, ಸತ್ತಿದ್ದೂ ಇನ್ನೊಂದು ಸಾವಾಗಿತ್ತು.
‘‘ಯಪ್ಪಾ, ಜನಾ ಮುದಕಿಯ ಬಲಕಿನ ಮೇಂದೂಕ ಲಕ್ವಾ ಹಾದೇತಿ. ಇನ್ಮುಂದ ಅಕೀ ಯವಸ್ಥಾ ಯಲ್ಲಾ ಬಿದ್ದಲ್ಲೇ ನಡೀಬೇಕ. ತಿಂಗ್ಳ ತಿಂಗ್ಳ ಔಷಧ, ದೇಕರೇಕಿ ತಪ್ಪಲ್ದ ನಡೀಬೇಕ ಅಷ್ಟ. ನಿಲ್ಲಿಸಿದ್ರ ಮುಗ್ದ ಹೋತ ಅಂತಿಳಿ” ಅಂದಿದ್ದ ಗಾವಟೀ ಹಕೀಮ ಹಮ್ಮುಲಾಲ್.
ಅಂದಿನಿಂದ ಸಾಬಣ್ಣನಿಗೆ ಧರ್ಮ ಸಂಕಟ ಸುರುವಾಗಿತ್ತು. ತನ್ನ ಹಡೆದವ್ವ ಜೀವವಾಗಿ ಇರಬೇಕಾದರೆ ಪ್ರತಿ ತಿಂಗಳಿಗೆ ಹತ್ತಾರು ದುಡ್ಡಿನ ಖರ್ಚು. ತನ್ನ ದಿನಗೂಲಿ ದುಡಿಮೆಗೆ ಹೆಂಡತಿ ಮತ್ತು ಒಬ್ಬಾಕೆ ಹೆಣ್ಣು ಹುಡಿಗಿಯ ಸಂಸಾರ ತೂಗುವುದೇ ಹೊಯ್ಕಾಗಿತ್ತು. ಅಂತದ್ರಲ್ಲಿ ಜಡ್ಡು ಬಿದ್ದು ಮೂಲೆ ಹಿಡಿದಿದ್ದ ಅವ್ವನ ಉಸಾಬರಿ ಅವನ ನಿದ್ದೆಯನ್ನು ಕಸಿದುಕೊಂಡಿತ್ತು. ಅವ್ವನ ಮಾರಿ ನೋಡಿದರೆ ಅವನ ಕರಳು ಕಿವಿಚಿದಂತಾಗುತ್ತಿತ್ತು. ಸಾಕಷ್ಟು ಸರ್ತಿ ಅವ್ವನ ಮೈಗೆ ಹಕೀಮನ ಎಣ್ಣೇ ತೀಕ್ಕುವಾಗ ಆಕೆಯ ಸಂಕಟ ನೋಡಲಾಗದೇ ಸಾಬಣ್ಣನ ಅಂತರಾತ್ಮ, ‘‘ಅವ್ವಾ, ನೀ ಸತ್ತಿದ್ದರ ಛಲೋ ಇತ್ತಬೇ..’ ಎಂದು ಮೊರೆಯಿಟ್ಟಿತ್ತು.
ಸಾಬಣ್ಣನ ದೀನ ಪರಿಸ್ಥಿತಿಯ ಒಳ ನೋವು ಜನಾಬಾಯಿಯ ಆತ್ಮಕ್ಕೂ ಕೇಳಿಸಿದಂತಿತ್ತು. ‘ಈ ಇಳಿ ವಯಸ್ಸಿನ್ಯಾಗ ನಾ ಬದುಕಿ ಸಾಧಿಸೋದಾದ್ರೂ ಯಾನೇತಿ?’ ಎಂದು ನೊಂದುಕೊಂಡು ಅವಳ ಆತ್ಮ ಮೇಲಿನವನ ಕರುಣಾ ದಿಟ್ಟಿಗಾಗಿ ಮೊರೆಯಿಟ್ಟಿತ್ತೇನೋ ಬಹುಶಃ? ಲಕ್ವ ಹೊಡೆದಿದ್ದು ಬರೀ ನೆಪವಾಯಿತು. ಮೂರು ತಿಂಗಳ ತ್ರಾಸುಂಡು ಮರು ಕ್ಷಣವೇ ಆಕೆಯ ಸೆಟೆದಿದ್ದ ಅಂಗಾಂಗಗಳೆಲ್ಲ ಸಡಿಲಗೊಂಡಿದ್ದವು. ಎದೆಯ ನಳಿಕೆಯಲ್ಲಿ ಕೊಸರಾಡುತ್ತಿದ್ದ ಉಸಿರುಹಕ್ಕಿ ಮುಕ್ತವಾಗಿತ್ತು.
ದಗಡುನಿಗೆ ಬೇಜಾರು. “ಸಾಬ್ಯಾ..! ನಮ್ಮ ಮುದುಕಿ ಸತ್ತಾಗ ನಿಂತ ಜಾಗಾದಾಗ ಜಡದ ರೊಕ್ಕಾ ವಸೂಲಿ ಮಾಡಿ ನಾಕ್ ಬುಡ್ಡಿ ದಾರೂ ತರ‍್ಸಿ ಯಾಡ್ಡ ದಿವ್ಸಿನ ತನಕ ಕುಡದ್ರಿ. ಮುದುಕಿ ಸತ್ತ ವರ್ಷ ಮ್ಯಾಲ್ ಆತ್ ಇನ್ನಾ ದೇನೇ ತರ‍್ವಾತು. ನೀ ಬರೀ ಬಂದಾವ್ರ ಚಹಾಪಾನಿ ಸಲ್ವಾಗಿ ನಾಕ್ ದುಡ್ಡ್ ಬಿಚ್ಚಾಕ್ ಅಳಾಕ ಹತ್ತೀ. ಈಗ ಹ್ಯಂಗ ಮಾಡೂಣು ಅಂದಿ?” ಅಂಗಳದಲ್ಲೇ ಬಾಯಿ ಮಾಡಿದ.
ಸಾಬಣ್ಣನಿಗೆ ದಿಕ್ಕೇ ತೋಚುತ್ತಿಲ್ಲ. ಬೆಳಕು ಹರಿಯುವ ತನಕ ಹೆಣ ಜಗುಲಿಗೆ ಜೋಕಾಗಿರಬೇಕು. ಇಡೀ ರಾತ್ರಿ ಜಾಗರಣೆ, ಪಾರಾಯಣ, ಭಜನೆ ಮಾಡುವ ಟೋಳಿಗೆ ಸೆರೆ, ಊಟದ ವ್ಯವಸ್ಥೆ ನಡೆಯಬೇಕು. ಕುಂತವರಿಗೆಲ್ಲ ಬೀಡಿ, ಎಲೆ ಅಡಿಕೆ, ಆಗಾಗ ಚಹಾದ ಮೇಜವಾನಿ ನಡೀಬೇಕು. ಹತ್ತಾರು ಹರದಾರಿ ದೂರದ ಬೀಗರ ಮನೆಯಿಂದ ಸಾಬಣ್ಣನ ದೊಡ್ಡ ಮಗಳನ್ನು ಕರೆತರಬೇಕು. ಎತ್ತಿನಗಾಡಿ ಜೊತೆ ಕುರುಬರ ನಿಂಗನಿಗೊಂದು ದಾರೂಪಾಕೀಟಿನ ಸೇವೆಯಾಗಬೆಕು. ಬೀಗರು ಬರುವ ತನಕ ಹೆಣ ಮಣ್ಣು ಮಾಡುವಂತಿಲ್ಲ. ಬರುವುದಕ್ಕೆ ತಡವಾದಷ್ಟು ಹೆಣಕ್ಕೆ ಬಂದವರ ಮೇಜವಾನಿ ನಡಿಲೇಬೇಕು.
ಅವ್ವ ಸತ್ತ ದುಃಖಕ್ಕಿಂತ ಊರ ರಿವಾಜಿನ ಚಿಂತೆಯಲ್ಲಿ ಸಾಬಣ್ಣ ಕುಸಿದು ಕುಳಿತ. ಅವ್ವ ಸಾಯದೆ ನರಳಾಡುತ್ತ ಮೂಲೆ ಹಿಡಿದಿದ್ದರೂ ಚೆನ್ನಾಗಿರುತ್ತಿತ್ತೇನೋ? ಅಂತನ್ನಿಸಿತು ಅವನಿಗೆ. ಅವನ ಪಾಲಿಗೆ ಜನಾಬಾಯಿ ಸತ್ತ ಬಳಕ ಸತ್ತಾಳ; ಖರೇ ಅವನು ಜೀವಂತ ಇರೂ ತನಕ ಸಾಯುವ ಪರಿಸ್ಥಿತಿ ಬರುತ್ತೇನೋ? ಎಂದು ಹಳಾಳಿಸಿ ಗೋಳಾಡಿ ಅತ್ತ.
ಅಷ್ಟರಲ್ಲಿ ಭಜನಾ ಮೇಳ ತನ್ನ ಟೋಳಿಯೊಂದಿಗೆ ಗುಡಿಸಲ ಮುಂದೆ ಹಾಜರಾಯಿತು. ಮರಾಠರ ಶಿವಾಜಿನೋ ತಡ ಮಾಡದೇ ಎದ್ದ. “ಸಾಬ್ಯಾ, ಮ್ಯಾಳ್ ಬಂದೇತಿ. ದಾರೂ ಬುಡ್ಡಿ ತರ‍್ಸುನುಲಾ?” ಕೇಳಿದ. ಸಾಬಣ್ಣ ಬರೀ ದಿಟ್ಟಿಸಿ ನೋಡಿದ. ಅವನ ಕೈಕಾಲುಗಳೇ ಆಡುತ್ತಿಲ್ಲ. ಮತ್ತೇ ದಗಡು ಅಂದ, “ಶಿವಜ್ಯಾ, ಚಹಾಪಾನಿಗೇ ರೊಕ್ಕಿಲ್ಲಂತ ಕುಂತಾನ, ಇನ್ನ ದಾರೂದ ಹೆಂಗಂತ ಕೇಳ್ತಿ?” “ಹ್ಯಂಗಂದ್ರ ಯಾಂವಾರೆ ಒಬ್ಬ ಸಾವ್ಕಾರ ಆಗ್ತಾನಲಾ!”
ಪಟೇಲರ ಪೋಪಟಲಾಲ್ ಅಂದ, “ಸಾವ್ಕಾರ ಆಗಾಕ ನಾ ತಯ್ಯಾರ ಅದುನಪಾ, ಖರೇ ಸಾವ್ಕಾರನ ರೊಕ್ಕಿನ ಕಿಮ್ಮತ ತೀರೋದ ಹೆಂಗ?”
ಅಲ್ಲೇ ಕುಂತಿದ್ದ ಜಾಡರ ಅಂಬಣ್ಣ ಗಸಕ್ಕನೆ ಅಂದ, “ಐ.., ಹೆಂತಾ ಹುಚ್ರ ಅದರ‍್ಯೋ? ಅದ್ಯಾನ ಅಂತರ‍್ಲಾ, ಬಗ್ಲಾಗ ಕೂಸ್ನಾ ಇಟ್ಕೊಂಡ ಊರೆಲ್ಲ ಹುಡಿಕ್ಯಾಡಿದ್ರಂತ ಹಂಗಾತ ನಿಮ್ಮ ಮಾತ. ಅಲ್ಲಿ ನೋಡ ಜನಾಬಾಯಿ ಕೊಳ್ಳಾಗ ಸಣ್ಣದೊಂದ ಏಕಸರ ಮಿಂಚಾಕ ಹತ್ತೇತಿ, ಕಾಣ್ಸುಲ್ಲ. ಅದಕ್ಕಿಂತ ಬ್ಯಾರೇ ಕೆಂಪಿನ ಕಿಮ್ಮತ್ತ ಬೇಕ?’’
ಅಂಬಣ್ಣನ ಮಾತಿಗೆ ಸಾಬಣ್ಣನ ಎದೆ ಜಲ್ಲೆಸೆಯಿತು. ನಿನ್ನೆಯಷ್ಟೇ ಅವ್ವ ನಿದ್ದೆಯಲ್ಲಿದ್ದಾಗ ಹೆಂಡತಿ ಹವುರಕೆ ಅತ್ತೆಯ ಕುತ್ತಿಗೆಯ ಏಕಸರ ಬಿಚ್ಚಿಕೊಳ್ಳುವ ಹುನ್ನಾರ ಮಾಡಿದ್ದಳು. ಸಾಬಣ್ಣ ಸಹಿತ ಅವ್ವನಿಗೆ ಜಬರಿ ಮಾಡಿ ಕೇಳಿದ್ದ. “ಅವ್ವಾ, ಪಾರೀ ಮದ್ವಿ ಖರ‍್ಚಿಗಿ ಒತ್ತೇ ಇಡಬೇಕಾಗತೈತಿ ಕುಡಬಾರದ್ಯಾಕ?” ಅಂದಿದ್ದ.
“ಐ..ನಾ ಸತ್ತ ಬಳಕ ನಿಮ್ದ ಏತ್ಯೋ! ನಾ ಇರೂ ತನಾ ಅರೆ ಇರ‍್ಲಿಲಾ?” ಅಂದಿದ್ದಳು. ಅವ್ವನ ಮಾತಿಗೆ ಸಾಬಣ್ಣ ಸಹಿತ ತಲೆಯಾಡಿಸಿ ಸುಮ್ಮಾಗಿದ್ದ. ಬಂಗಾರಿ ಮಾತ್ರ ಮಾರಿ ಸಿಂಡರಿಸಿಕೊಂಡಿದ್ದಳು. ‘ಗೋರಿಗಿ ಹೋಗು ಮುದೊಡಿಗಿ ಆಸೇ ಅರೆ ಹೆಂಥಾದ್ದ ಯವ್ವಾ, ಪೂರಾ ಸೆಟದ್ ಅರೆ ಹೋಗ್ವಾತ್ ಅಕಾಡಿ ಖೋಡಿ’ ಅಂತ ಶಪಿಸಿದ್ದಳು.
ಇದಾದ ಮರುದಿನವೇ ಬಂಗಾರಿಯ ಶಾಪ ಫಲಿಸಿತ್ತು. ತನ್ನ ಅತ್ತೆಯನ್ನು ನೋಡಲು ಬಂದಿದ್ದ ಜೋಗತೇರ ನೀಲವ್ವ ಮತ್ತು ಚಂಪವ್ವ ಆಕೆಯ ಮೈ ಮುಟ್ಟಿ ಮಾತಾಡಿಸಿದ ಬಳಿಕವೇ ಗೊತ್ತಾಗಿತ್ತು, ಜನಾಬಾಯಿ ಸತ್ತ ಸುದ್ದಿ. ನೀಲವ್ವಳೋ ಹೆಣದ ಬದಿಯ ತಳ ಅಲುಗಾಡಿಸಿರಲಿಲ್ಲ, ಚಂಪವ್ವ, “ಐ, ಪಾಪ್ ಜನಾ ಮುದಿಕಿ ಸತ್ತಿತ ಯವ್ವಾ..!” ಅಂತಂದು ಓಣಿ ಕೂಡಿಸಿದ್ದಳು. ಮಂದಿ ಬರುವ ಗೊಂದಲದಲ್ಲಿ ಬಂಗಾರಿಗೆ ಏಕಸರದ ಅವಕಾಶ ಸಹಿತ ಸಿಗಲಾರದೆ ಒದ್ದಾಡಿದ್ದಳು. ಈಗ ಹೆಣ ಹೊರ ತಂದು ಜಗುಲಿಗೆ ಸ್ಥಾಪಿಸಿದ್ದರು. ತುಸು ಕೌನೆಳ್ಳು ಜಾರಿದ ಬಳಿಕ ಕೈಯಾಡಿಸಬೇಕೆಂದು ಬಂಗಾರಿ ಹೊಂಚಾಕಿ ಕುಂತಿದ್ದಳು.
ಈಗ ಅಂಬಣ್ಣನ ಮಾತಿಗೆ ಒಮ್ಮಿಂದೊಮ್ಮೆಗೆ ಎಚ್ಚರಾದಂತೆ ಬಂಗಾರಿ ಅತ್ತೆಯ ಕುತ್ತಿಗೆಗೆ ತೆಕ್ಕಿಬಿದ್ದಳು. ಅತ್ತೆಯ ಮೇಲಿನ ಅಕ್ಕರತೆಯ ದುಃಖವೇನೋ ಎಂದು ಸುತ್ತುವರೆದು ಕುಂತಿದ್ದ ಹೆಂಗಸರು ಆಕೆಯ ರಟ್ಟೆ ಹಿಡಿದು ಹಿಂದೆಳೆದಳು. ಬಂಗಾರಿ ಸಿಟ್ಟಿನ ಹುಕಿಯಲ್ಲಿ ‘ಬಿಡ್ರೇ..ಯವ್ವಾ!’ ಎಂದು ಏರುದನಿ ಮಾಡಿ ಕೊಸರಾಡುತ್ತ ಗೊತ್ತಿಕುಡಿದಳು. ಆದರೂ ಪ್ರಯೋಜನವಾಗಲಿಲ್ಲ.
ಅಂಬಣ್ಣ ತಾಬ್ಡತೋಬ ಎದ್ದು ಬಂದು ಹೆಣದ ಕುತ್ತಿಗೆಯಲ್ಲಿದ್ದ ಏಕಸರ ಬಿಚ್ಚಿ ಪಟೇಲನಿಗೆ ಕೊಟ್ಟ. ಅಲ್ಲಿಗೆ ಕಥೆ ಮುಗಿಯಿತು. ಪಟೇಲನೋ ಖುಷಿಯಾಗಿ ತಕ್ಷಣ ಯಾಡ್ಡು ಬುಡ್ಡಿ ದಾರೂ ತರಲು ಹುಕುಂ ಕೊಟ್ಟ. ಅಡವಿ ದುಡಿತದ ಮಂದಿಯ ಖರೇ ಅಮೃತವಾಗಿದ್ದ ದಾರೂ ಗುಡಿಸಲ ಅಂಗಳಕ್ಕೆ ಬಂದಿದ್ದೇ ತಡ ಅಷ್ಟೊತ್ತು ಹೆಣದ ಮಾರಿ ನೋಡಿ ನೋಡಿ ತಾವೇ ಹೆಣವಾದಂತೆ ಆಗಿದ್ದ ಮಂದಿಯ ಜೀವದಲ್ಲಿ ಜೀವ ಬಂದಿತು. ಒಣಗಿದ್ದ ತುಟಿಗಳ ಮೇಲೆ ರಸ ಜಿಣುಗಿತು. ಕೈ ಮಾಡಿದವಗೆ ಒಂದೊಂದು ಮಾಪು ಅಮೃತ ದಕ್ಕಿದ ತೃಪ್ತಿಯಾಯಿತು. ಅದೇ ಹುರುಪಿನಲ್ಲಿ ಭಜನಾ ಮೇಳವೂ ಗುಂಗು ಹಿಡಿಸಿತು.
ಇಡೀ ರಾತ್ರಿ ಭಜನಾ ಪದಗಳು ಆಲಾಪನೆ ಮಾಡಿದವು. ಅವರ ಹಾಡಿನ ಬಾಯಿಗಳು ಆರಿ ಬರದಂತೆ ನಡು ನಡುವೆ ದಾರೂ ಬಟ್ಟಲಗಳು ತುಳುಕುತ್ತಿದ್ದವು. ಆಗ ಜನಾಬಾಯಿಯ ಹೆಣಕ್ಕಾಗಿ ಅಳಲು ಒಂದು ದನಿ ಸಹಿತ ಒಡೆಯಲಿಲ್ಲ. ಬೆಳ್ಳಿ ಚುಕ್ಕಿ ಕಾಣಿಸುವ ಹೊತ್ತಿಗೆ ಐದು ಬುಡ್ಡಿ ದಾರೂ ಖಾಲಿಯಾಗಿತ್ತು. ಬರೀ ಗಂಡಸರಷ್ಟೇ ಅಲ್ಲದೇ ಸಾಕಷ್ಟು ಹೆಂಗಸರೂ ಸಹಿತ ಬಾಡಿದ್ದ ತಮ್ಮ ನಾಲಿಗೆಯನ್ನು ಹಸಿ ಮಾಡಿಕೊಂಡಿದ್ದರು. ಸಾಬಣ್ಣ ಮತ್ತು ಬಂಗಾರಿಯ ಪಾಲಿಗೆ ನೆಲ ಕುಸಿದು ತಲೆ ಮೇಲೆ ಮುಗಿಲು ಕತ್ತರಿಸಿ ಬಿದ್ದಿತ್ತು.
ಹರೇವತ್ತಿನ ಸೂರ್ಯ ಕೈ ಮಾರು ಏರಿದ್ದ. ಆದರೂ ಜನಾಬಾಯಿಯ ಮುಂದಿನ ವಿಧಿಗಳ ಯೋಚನೆ ಯಾರಿಗೂ ಇಲ್ಲ. ಸಾಬಣ್ಣನ ದೊಡ್ಡ ಮಗಳು ಇನ್ನೂ ಬಂದಿಲ್ಲ ಎನ್ನುವುದಕ್ಕೆ ಹೆಣ ಜಗುಲಿಯ ಮೇಲೆ ಮೇರೆಯುತ್ತಿತ್ತು. ಎದ್ದು ಅಡ್ಡಾಡುವವರು ಅಡ್ಡಾಡುತ್ತಿದ್ದರು. ತಿಂದು ಕುಡಿದು ಅಲ್ಲೇ ಅಡ್ಡಾಗಿದ್ದವರಯ ಎಚ್ಚರವಾಗಿ ಕೆರೆ ಕಡೆಗೆ ಹೋಗಿ ಬಂದು ಮತ್ತೇ ತಂತಮ್ಮ ಜಾಗೇಯಲ್ಲಿ ತಳವೂರುತ್ತಿದ್ದರು.
ಗೌಡರ ಧರ್ಮಣ್ಣ ಗುಡಿಸಲ ಅಂಗಳಕ್ಕೆ ಬಂದ. ನಿನ್ನೆಯಿಂದ ಉಪವಾಸ ಜಾಗರಣೆ ಮಾಡಿದ್ದ ಮಂದಿಗೆಲ್ಲ ಊಟದ ಜವಾಬ್ದಾರಿ ಹೊತ್ತು ತನ್ನ ಹೊಲದ ಆಳುಗಳಿಗೆ ಹುಕುಂ ಮಾಡಿದ. ಅವರೊ ಕಚ್ಚೆ ಎತ್ತಿಕಟ್ಟಿದರು. ತಾಸೆರಡು ತಾಸಿನಲ್ಲಿ ಬಿಸಿ ಬಿಸಿ ಅನ್ನ ಸಾಂಬಾರು ಸಿದ್ದವಾಯಿತು. ಎಲ್ಲರೂ ಸಾಲು ಪಂಕ್ತಿ ಕುಳಿತು ಕಹಿಬಾಯಿ ತೊಳೆದುಕೊಂಡರು. ಹೆಚ್ಚೂ ಕಡಿಮೆ ಐವತ್ತು ರೂಪಾಯಿ ಖರ್ಚಾಯಿತು. ಗೌಡನು ಸಾಬಣ್ಣನ ಖಾತೆಯ ಧಪ್ತರಿನಲ್ಲಿ ಖರ್ಚು ನಮೂದಿಸಿಕೊಂಡ. ಸಾಬಣ್ಣನಿಗಂತೂ ಸತ್ತಿದ್ದು ತನ್ನ ಅವ್ವನೋ ಇಲ್ಲಾ ತನ್ನಿಡೀ ಪರಿವಾರವೋ ಒಂದೂ ತಿಳಿಯುತ್ತಿಲ್ಲ. ಅವ್ವ ಸತ್ತಿದ್ದಕ್ಕೆ ನೂರಾರು ರೂಪಾಯಿ ಸಾಲ ಅವನ ಹೆಗಲೇರಿತು. ಸಾಬಣ್ಣನ ಪಾಲಿಗೆ ಅವ್ವನ ಸಾವು ಶಾಪವಾಗಿ ಬಡಿಯಿತು.
ಮಧ್ಯಾಹ್ನ ನಾಲ್ಕರ ಸುಮಾರಿಗೆ ಸಾಬಣ್ಣನ ದೊಡ್ಡ ಮಗಳು ತನ್ನ ಗಂಡನ ಜೊತೆ ಬಂದಳು. ಅವಳು ಆಯಿಯ ಹೆಣ ನೋಡಿ ಲಬೋ ಲಬೋ ಹೊಯ್ಕೊಂಡು ಹಾಡ್ಯಾಡಿ ಅತ್ತಳು. ಬಂಗಾರಿ ಹೆಡಕು ಚೆಲ್ಲಿ ಕುಂತಿದ್ದಳು. ಅವಳಿಗೆ ತನ್ನ ಮಗಳು ಆಯಿಯ ಸಲ್ವಾಗಿ ಅಲ್ಲ ಬದಲಾಗಿ ತನ್ನ ಹಡೆದವರ ಬದುಕು ಬೀದಿಗೆ ಬಂತಲ್ಲ ಎಂದು ಅಳುತ್ತಿದ್ದಾಳೆ ಅಂತನ್ನಿಸಿತು.
ಗೌಡ ತನ್ನ ಆಳುಗಳಿಗೆ ಸೂಚಿಸಿದ. ಅವರೂ ತಾಬ್ಡತೋಬ ಬಿದಿರಿನ ಗೊಂಗಡಿ ತಯಾರು ಮಾಡಿದರು. ಜೋಳದ ಕಣಿಕೆಯಿಂದ ಕಟ್ಟಿ ಹೆಣ ಎತ್ತಿ ಮಲಗಿಸಿದರು. ಬಿಳಿ ಅರಿವೆ ಸುತ್ತಿ ಗುಲಾಲು ಸವರಿದರು. ಎಲ್ಲವೂ ಸಜ್ಜಾಯಿತು. ಮಾದಿಗ ಸೋಮಣ್ಣ ಒಂಟಲಿಗೆ ಸದ್ದು ಮಾಡುವ ಮುಂಚೆ ಎರಡು ಪಾಕೀಟಿ ಇಳಿಸಿದ. ನಾಕೈದು ಕೆಳಗೇರಿ ಹುಡುಗರು ‘ಟಂಟ್ ನಕ್ ನಕ್’ಗೆ ಹೆಜ್ಜೆ ಹಾಕುತ್ತು ಹೊಳೆ ಹಾದಿ ಹಿಡಿದರು. ಕೈಯಲ್ಲಿ ಮರ‍್ಕೂಳಿನ ಅಗ್ಗಿಷ್ಟಿಕೆ ಹಿಡಿದಿದ್ದ ಸಾಬಣ್ಣ ಅವ್ವನ ಹೆಣದ ಮುಂದಾಗಿ ನಡೆದ.
ಹೆಣ ಚಿತೆಯೇರಿತು. ಬೆಂಕಿ ಮುಟ್ಟಿ ಸುಟ್ಟು ಬೂದಿಯಾಯಿತು. ಆ ಬೂದಿಯೊಡನೆ ಸಾಬಣ್ಣನ ಕನಸುಗಳೆಲ್ಲವೂ ಸೇರಿಕೊಂಡವು. ತನ್ನ ಎರಡನೇ ಮಗಳ ಮದುವೆಗಾಗಿ ದೇನಿಸಿಟ್ಟಿದ್ದ ಅವ್ವನ ಏಕಸರ ಚಿತೆಯ ಜ್ವಾಲೆಯ ತುದಿಗೆ ಪುರ ಪುರನೇ ಉರಿಯುತ್ತಿತ್ತು. ಮಗಳ ಮದುವೆಯ ಕನಸು ಸಹಿತ ಸತ್ತ ಅವ್ವನ ಜೊತೆ ಚಿತೆಯೇರಿತ್ತು.
ಊರಿನ ರಿವಾಜಿಗೆ ಮಾತ್ರ ಜನಾಬಾಯಿಯ ಸಾವಿನ ಸೂತಕ ಕಳೆದಿತ್ತು. ಸಾಬಣ್ಣನ ಪರಿವಾರಕ್ಕೆ ಆ ಸೂತಕದ ಮೈಲಿಗೆ ಬದುಕಿಗೇ ಅಂಟಿಕೊಂಡಿತ್ತು. ಅವನು ಆತಂಕಿಸಿ ಕಾಯುತ್ತ ಕುಳಿತಂತೆ ಮರುದಿನವೇ ಗೌಡರ ಆಳು ರಂಜಾನ ಗುಡಿಸಲ ಅಂಗಳಕ್ಕೆ ಬಂದ. “ಸಾಬಣ್ಣ, ಗೌಡರ ವಾಡೇದಾಗ ಪಂಚಾಯ್ತಿ ಕೂಡೇತಿ. ಸದ್ಯ ನಿಂಗ ಬರಬೇಕ ಅಂತ ನಿರೂಪ ಕೊಟ್ಟಾರ” ಅಂತಂದು ಹೊರಟು ಹೋದ.
ಸಾಬಣ್ಣ ಬಂಗಾರಿಯ ಕಡೆಗೆ ಕುತ್ತಿಗೆ ಹೊಳ್ಳಿಸಿ ನೋಡಿದ. ಕಂಠ ಬಿಗಿದಿತ್ತು, ಅವನ ಕಣ್ಣುಗಳಲ್ಲಿ ಅಪ್ರಂಪಾರ ನೀರು ತುಂಬಿತ್ತು. ಅದು ತಂತಾನೆ ಧುಮ್ಮಿಕ್ಕಿ ಭೋರ್ಗರೆಯುತ್ತಿತ್ತು. ಆ ರಾಶೀ ರಾಶೀ ನೀರಿನ ಭೀಕರ ಪಾತ ಬರೀ ಗಂಡ ಹೆಂಡತಿಗೆ ಮಾತ್ರ ಗೋಚರಿಸಿತು.
ಗೌಡರ ವಾಡೇದ ಪಂಚಾಯಿತಿ ತೀರ್ಮಾಸಿತ್ತು; ಜನಾಬಾಯಿಯ ಒಟ್ಟು ಖರ್ಚಿನ ಲೆಕ್ಕ ಇನ್ನೂರು ಐವತ್ತು. ಸಾಬಣ್ಣ ಸಹಿತ ಅವನ ಹೆಂಡತಿ ಮತ್ತು ಮಗಳು ಪಾರೀ ಎರಡು ವರ್ಷದ ತನಕ ಗೌಡನ ಮನೆಯ ಚಾಕರಿ ಮಾಡಬೇಕು. ಅಲ್ಲಿಯ ತನಕ ಸಾಬಣ್ಣನ ಮನೆ ಗೌಡನ ಹೆಸರಿಗೆ ದಾಖೀಲು ಆಗುತ್ತದೆ. ಆಗಾಗ ಗೌಡನ ಖಾಸಗೀ ದೇಕರೇಕಿಗೆ ಜರೂರಿದ್ದರೆ ಪಾರಿಯನ್ನು ಕಳುಹಿಸಿ ಕೊಡಬೇಕು ಎಂದಾಗಿತ್ತು. ಕುಲ್ಕರ್ಣಿ ಬರೆದಿದ್ದ ಧಪ್ತರಿನ ಹಾಳೆಯ ಮೇಲೆ ಸಾಬಣ್ಣ ತನ್ನ ಎಡಗೈ ಹೆಬ್ಬಟ್ಟಿನ ಮುದ್ರೆ ಒತ್ತಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.