ಪ್ರಾತಿನಿಧಿಕ ಚಿತ್ರ
ಹೆಣಭಾರದ ಎರಡು ಕಬ್ಬಿಣದ ಟ್ರಂಕುಗಳನ್ನು ಬಸ್ಸಿನಿಂದ ಕೆಳಗಿಳಿಸಿ ಉಸ್ಸಪ್ಪಾ ಎಂದು ಏದುಸಿರು ಬಿಡುತ್ತಾ ನಿಂತ ಗುಜ್ಜಪ್ಪನ ಸುಕ್ಕುಗಟ್ಟಿದ ಹಣೆಯ ಮೇಲೆ ಬೆವರ ಹನಿಗಳು ಮೆಲ್ಲನೆ ಜಾರುತ್ತಿತ್ತು.
ತನ್ನ ಕೆಲಸ ಮುಗಿಸಿ ಹಿಂದುರುಗಿ ನೋಡದಂತೆ ಡಾಂಬರು ಹಾಸಿನ ಮೇಲೆ ಹೊರಟ ಬಸ್ಸಿನ ಅಂಡಿನಿಂದ ದಟ್ಟ ಕಪ್ಪುಹೊಗೆ ಅಡರಿ ವಾತಾವರಣವನ್ನು ಕೆಲಕಾಲ ಕಲಕಿ ಮತ್ತೆ ತಿಳಿಯಾದಾಗ ಗುಜ್ಜಪ್ಪನಿಗೆ ರಸ್ತೆಯ ಎದುರು ಬದಿಯ ಅಂಗಡಿ ಸಾಲು ಮಬ್ಬುಮಬ್ಬಾಗಿ ಕಾಣಿಸಿತು. ಮಾಸಲು ಬಿಳಿಯ ಅಂಗಿ-ಪಂಚೆ ಮತ್ತು ಹೆಗಲ ಮೇಲಿನ ಬಣ್ಣದ ಟರ್ಕಿ-ಟವೆಲ್ಲನ್ನು ಹೊದ್ದ ಅರವತ್ತೈದರ ಹರೆಯದ ಗುಜ್ಜಪ್ಪ ಎತ್ತ ಹೋಗಬೇಕೆಂದು ತೋಚದೆ ಕಣ್ಣು ಕಿರಿದು ಮಾಡಿ ಸುತ್ತಲೂ ನೋಡುತ್ತಾ ನಿಂತ. ಮುಖದಲ್ಲಿ ಎಂಥದೋ ಆತಂಕ; ಊರಿಗೆ ಹೊಸಬನೇನೋ ಎನ್ನುವ ಹಾಗಿದ್ದ ಮುಗ್ಧ ಪ್ರಜ್ಞೆ.
ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಊರು ಬಿಟ್ಟಿದ್ದು. ಅಷ್ಟು ಸುದೀರ್ಘ ವರ್ಷಗಳಲ್ಲಿ ಒಂದು ದಪವೂ ಇತ್ತ ಕಾಲಿಟ್ಟಿರಲಿಲ್ಲ. ಹೇಗೆ ಇಟ್ಟಾನು? ಬಹಿಷ್ಕಾರ ಹಾಕಿದ್ದರಲ್ಲ! ಊರಿನಿಂದ ಹೊರಗೆ ಹೋಗುವಂತೆ ಹೊರಡಿಸಿದ ಬಹಿಷ್ಕಾರ ಠರಾವಲ್ಲ ಅದು, ಊರಿನ ಒಳಗೇ ಅನುಭವಿಸಬೇಕಾದ್ದ ಶಿಕ್ಷೆ! ಬಲಿತವರ ಬಹಿಷ್ಕಾರಕ್ಕೆ ಸೆಡ್ಡು ಹೊಡೆದು ತಾನೇ ಸಂಸಾರ ಸಮೇತ ಊರನ್ನು ಬಿಟ್ಟು ಹೋಗಿದ್ದವ ಈಗ ಮತ್ತೆ ಬಂದಿದ್ದಾನೆ; ಒಬ್ಬನೇ ಬಂದಿದ್ದಾನೆ!
ಗುಜ್ಜಪ್ಪನಿಗೆ ಊರು ಬದಲಾಗಿದೆ ಅನ್ನಿಸಿತು; ಆದರೆ ಗುರುತು ಸಿಗದಷ್ಟೇನೂ ಅಲ್ಲ. ನೆತ್ತಿಯ ಮೇಲೆ ಬಿಸಿಲ ಝಳ ನೇರ ಕುಕ್ಕುತ್ತಿತ್ತು. ಬಸ್ಸು ಕಪ್ಪುಹೊಗೆಯ ಜೊತೆಗೆ ಅಲ್ಲೆಲ್ಲಾ ಸೂತಕದ ನೀರವತೆಯನ್ನೂ ಬಿಟ್ಟು ಹೋಗಿತ್ತು.
‘ಯಾಂಡ್ಪೋಸ್ಟ್ ಜನ್ಗುಳೆಲ್ಲಾ ಗುಳೇ ಒಂಟೋಗೋವ್ರೋ ಏನೋ? ಊರು ಮಶಾಣ ಆಗ್ಬುಟ್ಟೈತೆ’ ಎಂದು ಯೋಚಿಸುತ್ತಲೇ ಗುಜ್ಜಪ್ಪ ಚೌಕವನ್ನು ತಲೆಗೆ ಸಿಂಬೆಯಂತೆ ಸುತ್ತಿ, ಒಂದು ಟ್ರಂಕನ್ನು ತಲೆ ಮೇಲೇರಿಸಿಕೊಂಡು, ಇನ್ನೊಂದರ ಹಿಡಿಕೆಯನ್ನು ಕೈನಲ್ಲಿ ಹಿಡಿದು ಸೋತ ಹೆಜ್ಜೆ ಹಾಕುತ್ತಾ ನಡೆದ.
ರಸ್ತೆ ಬದಿಯ ಅಲ್ಲಲ್ಲಿ ಇದ್ದ ಕೆಲ ಅಂಗಡಿಗಳ ಒಳಗಿದ್ದ ಜನರು ಗುಜ್ಜಪ್ಪನನ್ನೇ ಇಣುಕಿ ನೋಡುತ್ತಿದ್ದರು. ಅವರ್ಯಾರಿಗೂ ಇವನ್ಯಾರು ಎಂಬ ಸುಳಿವಿಲ್ಲ; ಬಹುಶಃ ಆ ಊರಿಗೂ ನೆನಪಿದ್ದಿರಲಿಲ್ಲ.
“ಆಗ ಮಗ ಇಸ್ಕೂಲೋ-ಕಾಲೇಜೋ ಓದ್ತಿದ್ದ. ವಂಸದಲ್ಲೇ ಮೊದ್ಲು ಓದಿನ್ ಮಕ ನೋಡ್ದೋನು. ಆಮೇಕಾಮ್ಯಾಕೆ ಅದೇನೇನೊ ಓರಾಟ-ಪಾರಾಟ, ಅಂಬೇಡ್ಕರ್ರು-ಪೆರ್ಯಾರು ಅಂತೆಲ್ಲಾ ಯೋಳ್ತಿದ್ದ. ‘ನೀವೆಲ್ಲಾ ಇಂಗೆಯ ನಾಯ್ಬಾಳ್ ಬದ್ಕಿ ಒಂದಿನ ಏಳ್ ಎಸ್ರಿಲ್ದಂಗೆಯ ಒರ್ಗೋಗ್ತಿರಾ...’ ಅಂತ ಇನ್ನೂ ಏನೇನೋ ಬಯ್ಯೋನು; ಬಡ್ಕೊಳೋನು. ನಂಗೊ ತಳ-ಬುಡ ಅರ್ಥ ಆಗ್ತಿರ್ನಿಲ್ಲ. ಅವತ್ತಿಂದವತ್ ಕೂಲಿ-ನಾಲಿ ಮಾಡಿ ಗಿಟ್ಟಿಸ್ಕೊಂಡ್ ಉಂಡ್ರೆ ಇತ್ತು, ಇಲ್ದಿದ್ರಿಲ್ಲ. ಒಂದಿನ ಉಡ್ಗುರ್ನೆಲ್ಲಾ ಒಟ್ಟಾಕ್ಕೊಂಡು ಸೋಮಪ್ಪನ್ ಗುಡಿ ಒಳ್ಗೆ ಒಂಟೋದ ಅಂತ ಊರ್ನೋರು ಪಂಚಾತ್ಗೆ ಮಾಡಿ ಬಯ್ಸ್ಕಾರ ಆಕುದ್ರು. ಯಾರೂ ಮಾತಾಡ್ತಿರ್ನಿಲ್ಲ, ಯಾರೂ ಕೂಲೀಗ್ ಸಯ್ತ ಕರೀನಿಲ್ಲ. ಒಂದಾಟ್ ದಿಸ ಉಪ್ವಾಸ ಸತ್ತೋ. ಇನ್ನೇನ್ ಒರ್ಗೇ ಓದ್ವು ಅನ್ವಾಗಲ್ವಾ, ಮಗನ್ ಮಾತ್ ಕಟ್ಕಂಡ್ ಇದ್ದುದ್ನೆಲ್ಲ ಗಂಟ್ಕಟ್ಕಂಡು ಬೆಂಗ್ಳೂರ್ಗೆ ಓಗಿದ್ದು. ಇಲ್ ಮಾಡೋ ಕೂಲಿ ಅಲ್ಲೇ ಮಾಡ್ದೊ. ಒಟ್ಟೆ ಒರೀತು. ಕೆಲ್ಸ-ಗಿಲ್ಸ ಬಿಟ್ಟು ಓರಾಟ-ಗೀರಾಟ ಅಂತ ಮಾಡ್ತಿದ್ ಮಗ ಇದ್ದಕ್ಕಿದ್ದಂಗ್ ಸತ್ತ. ಯಾರೋ ಸಾಯ್ಸಾಕಿದ್ದು ಅಂತಾನೂ ಯೋಳುದ್ರು. ಯಾರನ್ ಅಂತ ಕೇಳೂದು? ಏನಂತ ಕೇಳೂದು? ನಂಗ್ ಏನೂ ಗೊತ್ತಾಗ್ನಿಲ್ಲ. ಉಬ್ಸ ಬಂದು ಇವ್ಳೂ ದೊಡ್ಡಾಸ್ಪತ್ರೇಲಿ ಸತ್ತೋದ್ಲು. ಒಬ್ನೇ ಆ ದೊಡ್ಡೂರ್ನಾಗೆ ಏನ್ಮಾಡ್ಲಿ? ಅವ್ರಂಗೆ ಅನಾತ್ವಾಗಿ ಸಾಯಕಿಷ್ಟ ಇಲ್ಲ, ಸತ್ರೆ ಹುಟ್ದೂರ್ನಾಗೆಯ... ಅದಿನ್ನೆಶ್ಟ್ ದಿನ ಬಯ್ಸ್ಕಾರ ಆಕ್ಕೊಂಡ್ ಆರಾಡ್ತಾರೋ ನೋಡ್ಬಿಡ್ತೀನಿ...” ಹ್ಯಾಂಡ್ಪೋಸ್ಟ್ ಬಸ್-ಸ್ಟಾಪ್ನಿಂದ ತನ್ನೂರ ಕಡೆಗೆ ಹರಿಯುವ ಕಚ್ಚಾರಸ್ತೆಯನ್ನು ಹಿಡಿದು ಹೊರಟಾಗ ಗುಜ್ಜಪ್ಪನಿಗೆ ಆದ ತನ್ನದೇ ಜೀವನದ ಮೆಲುಕದು.
ಇಷ್ಟು ವರ್ಷದ ನಗರದ ಬದುಕು ಪ್ರತಿಭಟನೆಯ ಹುಮ್ಮಸ್ಸನ್ನು ಗಟ್ಟಿ ಮಾಡಿತ್ತು, ಮೌಢ್ಯ ಕೊಂಚ ಹರಿದಿತ್ತು ಅನ್ನುವುದನ್ನು ಬಿಟ್ಟರೆ ಅದೇ ಮುಗ್ಧತೆ-ಅಸಹಾಯಕತೆ-ಬಡತನ. ಎರಡ್ಮೂರು ಫರ್ಲಾಂಗ್ ದಾಟಿದ ಮೇಲೆ ಊರಿನ ಸೋಮಪ್ಪನ ಗುಡಿಗೋಪುರ ದೂರದಿಂದಲೇ ಕಾಣಿಸಿತು. ಗುಜ್ಜಪ್ಪ ಒಂದು ಕ್ಷಣ ದಿಗಿಲಾದಂತೆ ಅಲ್ಲೇ ನಿಂತ. ಪಕ್ಕದಲ್ಲೇ ತೇರಿನ ಮೇಲೆ ತುರಾಯಿಯಂತಿದ್ದ ಕೆಂಪು-ಬಾವುಟವೂ ಕಾಣಿಸಿತು. ಟ್ರಂಕನ್ನು ಕೆಳಗಿಳಿಸಿ, ಚಪ್ಪಲಿ ಪಕ್ಕಕ್ಕೆ ಬಿಟ್ಟು ಅಲ್ಲಿಂದಲೇ ಅಚಾನಕ್ಕಾಗಿ ದೇಹವನ್ನು ಸಡಿಲಿಸಿ ಅಡ್ಡಬಿದ್ದುಬಿಟ್ಟ. ಗಂಟಲುಬ್ಬಿ ಅಳು ಒತ್ತರಿಸಿ ಬಂದು ‘ಸಮಿಸ್ಬುಡು ನಮ್ಮಪ್ನೇ...’ ಎಂದು ನಡುಗುತ್ತಲೇ ಆಡಿದ. ‘ಅಷ್ಟೋ-ಇಷ್ಟೋ ಸಿಗುತ್ತಿದ್ದ ನಿನ್ನ ಸಾಮೀಪ್ಯ ಬಿಟ್ಟು ಇಷ್ಟು ವರ್ಷ ಬದುಕಿಬಿಟ್ಟೆ’ ಎಂದು ಹಲುಬಿದ. ವರ್ಷದ ಜಾತ್ರೆಯ ತೇರನ್ನು ತನ್ನ ನೆರಳೂ ತಾಕಿಸದಂತೆ ದೂರದಿಂದಲೇ ಕಣ್ಣಿಗೆ ಸಿಕ್ಕಷ್ಟು ಮಾತ್ರ ನೋಡಿ ಕೈಮುಗಿದು ಕೃತಾರ್ಥನಾಗುತ್ತಿದ್ದ ಕ್ಷಣಗಳು ಹಾಗೂ ಮಗ ಗುಡಿಯನ್ನು ಭೇದಿಸಿದ ಪ್ರಸಂಗ ತಲೆಯಲ್ಲಿ ಸುರುಳಿಯಂತೆ ಸುಳಿದು ಹೋದವು.
ಕೈಗೊಂದು ಟ್ರಂಕ್ ಹಿಡಿದು ಮತ್ತೆ ಊರ ಒಳಗೆ ನಡೆದ.
ಬಚ್ಚಲು ನೀರು ಹರಿದು ಕೊಚ್ಚೆಗುಂಡಿಯಾಗುತ್ತಿದ್ದ ಊರ ರಹದಾರಿ ಇದೀಗ ಕಾಂಕ್ರೀಟ್ ರಸ್ತೆಯಾಗಿತ್ತು, ಮಗ್ಗುಲಲ್ಲಿ ಕೊಚ್ಚೆನೀರು ಸರಾಗವಾಗಿ ಹರಿದುಹೋಗಲು ಚರಂಡಿಯೂ ಆಗಿತ್ತು. ಬಲಿಷ್ಠ ವರ್ಗದವರು ವಾಸವಿದ್ದ ರಾಜಬೀದಿ ಅದು. ಗುಜ್ಜಪ್ಪನಿದ್ದ ಸಿದ್ಧಾರ್ಥ ಕಾಲೋನಿಗಷ್ಟೇ ಅಲ್ಲ, ಗಾಣಿಗ-ಬೆಸ್ತ-ಈಡಿಗರ ಬೀದಿಗಳಿಗೂ ಕೂಡ ಅದೇ ದಾರಿಯನ್ನು ಹಿಡಿದೇ ಹೋಗಬೇಕು. ಚಿಕ್ಕೆರೆಯ ಬುಡದಲ್ಲಿದ್ದ ಗೋಮಾಳ ಮತ್ತು ಊರ-ಸ್ಮಶಾನಕ್ಕೂ ಅದೇ ದಾರಿ. ಕಾಲೋನಿಯವರು ಓಡಾಡಿದ ಮೇಲೆ ರಸ್ತೆಯ ಜಾಗಕ್ಕೆ ಆ ಬೀದಿ ಹೆಂಗಸರು ಎಷ್ಟೋ ಸಲ ಸಗಣಿ ನೀರೆರಚಿ ಶುದ್ಧ ಮಾಡಿಕೊಂಡದ್ದೂ ಇದೆ ಎಂಬ ನೆನಪಾಗಿ ಗುಜ್ಜಪ್ಪನಿಗೆ ಇನ್ನಷ್ಟು ಎದೆ ಬಿಗಿದ ಹಾಗಾಯ್ತು. ಗೌಡರ ಬೀದಿಯ ಕಪ್ಪು ಹೆಂಚಿನ ಮನೆಗಳನೇಕವು ಆರ್ಸಿಸಿ ಮನೆಗಳಾಗಿದ್ದವು. ಅಲ್ಲೊಂದು ಇಲ್ಲೊಂದು ಕಾರು-ಬೈಕುಗಳು ನಿಂತಿದ್ದವು. ಹಳ್ಳಿಗೆ ‘ಸಿರಿಯ-ನೆರೆ’ ಬಂದ ಹಾಗೆ ಕಾಣುತ್ತಿತ್ತು.
ರಸ್ತೆಗುಂಟ ಅಲ್ಲಲ್ಲಿ ಸಗಣಿಯ ತೊಪ್ಪೆ ಕಾಣಿಸಿದ್ದು ಗುಜ್ಜಪ್ಪನಿಗೆ ‘ಇನ್ನೂ ಇಲ್ಲಿ ಆರಂಬ ಮಾಡೋರು ಬದ್ಕವ್ರೆ’ ಅನ್ನಿಸಿತು.
ಮಟ್ಟಮಧ್ಯಾಹ್ನದ ಅವಧಿಯದು. ನರಪಿಳ್ಳೆಯಿರಲಿ, ಕೋಳಿಪಿಳ್ಳೆಗಳೂ ಸಹ ಹಾದಿ-ಬೀದಿಯಲ್ಲಿ ಸುಳಿಯಲಿಲ್ಲ. ‘ಯಾರಾದರೂ ಕಂಡರೆ ಆಪತ್ತು’ ಎಂಬ ಆತಂಕದಿಂದಲೇ ನಡೆಯುತ್ತಿದ್ದ ಗುಜ್ಜಪ್ಪನಿಗೆ ಆ ಸೋಮಪ್ಪ ದೈವವೇ ದಾರಿಯನ್ನು ಬರಿದು ಮಾಡಿಕೊಟ್ಟಂತೆ ಇತ್ತು.
ಗುಜ್ಜಪ್ಪ ಇನ್ನೂ ಯಾಕಾಗಿ, ಯಾರಿಗಾಗಿ ಅಂಜುತ್ತಿದ್ದನೋ?
ತನ್ನಪ್ಪ ಕಟ್ಟಿ ತಾನು ಬಾಳಿ-ಬದುಕಿದ್ದ ಕಪ್ಪುಹೆಂಚಿನ ಕೆಂಪುಮಣ್ಣಿನ ಮನೆ ಅದೆಂದೋ ಕಾಲದ ಹೊಡೆತಕ್ಕೆ ಸಿಕ್ಕಿ ಪಕ್ಕೆ ಮುರಿದಂತೆ ಒಂದು ಕಡೆಗೆ ವಾಲಿಕೊಂಡು ಕುಸಿದುಕೂತಿತ್ತು. ಕುಸಿದ ಆ ಪಾರ್ಶ್ವವನ್ನು ಕೊಂಚ ಒತ್ತರಿಸಿಕೊಂಡು ತನ್ನದೇ ಕುಲಬಾಂಧವರು ಹೊಸ ಮನೆಯನ್ನು ಕಟ್ಟಿಕೊಂಡಿದ್ದರು. ಗೆದ್ದಲು ತಿಂದು ಕರಗಿತ್ತೋ ಅಥವಾ ಕಳುವಾಗಿತ್ತೋ, ಬಾಗಿಲ ನಾಮಾಶೇಷವೂ ಅಲ್ಲಿರಲಿಲ್ಲ. ಎಕ್ಕ-ಸತ್ತೆ-ಕಳೆ ಎಲ್ಲಾ ಬೆಳೆದು ಪಾಳಾಗಿದ್ದ ಆ ಮನೆಯಂತಿರದ ಮನೆಯ ಮುಂದೆ ಟ್ರಂಕಿನ ಭಾರವನ್ನು ಇಳಿಸಿ ಒಳಗೆ ಕಾಲಿಟ್ಟ ಗುಜ್ಜಪ್ಪನ ಎದೆ ಭಾರವಾಯ್ತು!
“ಬೆಂಗ್ಳೂರು ಊರಲ್ಲ, ಅದು ದೇಸ. ನಂಗೇನರ ಆ ದೇಸ ಗೊತ್ತಿತ್ತ? ಆ ದೇಸದ್ಗಂಟ ಸುತ್ತಾಡಿಸ್ಬಿಟ್ಟ ನನ್ ಮಗ. ಎಲ್ಲೆಲ್ಲೋ ಅಲ್ದು ಯಾರ್ನ್ಯಾರೋ ಕೈಕಾಲ್ಕಟ್ಟಿದ್ಮ್ಯಾಕೆ ಅದ್ಯಾವ್ದೋ ಎಸ್ಸಿ ಆಶ್ಟ್ಲುನಾಗೆ ಕೆಲ್ಸ ಕೊಟ್ರು. ಇಲ್ಲಿಯಂಗೆ ಉತ್ತೋದು-ಬಿತ್ತೋದಲ್ಲ. ಗುಡ್ಸದು-ತೊಳ್ಯದು. ನಂಗಿದ್ದ ಗಂಡ್ ಆಂಕಾರ ವಸೀನಾ? ಮೊದ್ಲು ನಾ ಮಾಡ್ನಿಲ್ಲ, ಇವ್ಳೇ ಮಾಡುದ್ಲು. ಅಮೆಕಾಮೇಕೆ ನಾನೂ ಒಗ್ದೆ. ‘ಆಂಕಾರ ಮಾಡುದ್ರೆ ಒಟ್ಟೆಪಾಡ್ ಆಯ್ತದ’ ಅಂದ್ಲು. ಅಲ್ಲೇ ಒಂದ್ ರೂಮಲ್ಲಿ ನಾನು, ಇವ್ಳು ಇಪ್ಪತ್ವರ್ಸ ಅದ್ಯಂಗೆ ಬಾಳ್ವೆ ಮಾಡಿದ್ದು? ಅವ್ನು ಅದೆಲ್ ಮೆರಿತಿದ್ನೋ, ಅದೆಲ್ ಮಲ್ಕೋತಿದ್ನೋ, ಅದೆಲ್ ಉಣ್ತಿದ್ನೋ? ಅಮಾಸೆ-ಉಣ್ಮೆಗೆ ಮಕ ತೋರ್ಸೋನು. ಅದು ಪರ್ದೇಸಿ ಬದ್ಕು ಯಪ್ನೇ ಪರ್ದೇಸಿ ಬದ್ಕು... ನಾ ವಾಪಸ್ ಬತ್ತೀನಿ ಅಂದ್ರೂ ಬಿಡ್ನಿಲ್ಲ ಇವ್ರು. ‘ಒಟ್ಗೆ ಓಗುವ, ಸೀದಾ ಗುಡಿ ಒಳಕ್ ಓಗುವ’ ಅಂತಿದ್ದ ಅವ್ನು. ಇದಿಯಾಟ ಬ್ಯಾರೆನೆ ಐತೆ, ನಾ ಇಲ್ ಬರಾಕೆ ಅವ್ರು ಮೇಲ್ ಓಗ್ಬೇಕಾಯ್ತು...” ಕೈಗೆ ಸಿಕ್ಕ ಸತ್ತೆ-ಗಿಡಗಂಟೆಯನ್ನ ರೋಷದಿಂದ ಯರ್ರಾಬಿರ್ರಿ ಕಿತ್ತು ಬಿಸುಟುತ್ತಿದ್ದ ಗುಜ್ಜಪ್ಪನ ನೆನಪಿನ ಲಹರಿ ಮಾತ್ರ ಕ್ರಮಬದ್ಧವಾಗಿ ಹರಿಯುತ್ತಿತ್ತು..
ನೆರೆಯ ಹೆಂಗಸರು ಗುಜ್ಜಪ್ಪನ ಪಾಳುಮನೆ ಎದುರು ನಿಂತು ಹೊರಗಿದ್ದ ಟ್ರಂಕುಗಳ ಕಡೆ ಬೆರಳು ಮಾಡಿ ಗೌಜಿನ ಸಂತೆ ತೆರೆದಿದ್ದರು. ಅದ್ಯಾವ ಆಗಂತುಕ ಒಳಸೇರಿಕೊಂಡಿದ್ದಾನೋ ಎಂದು ಗುಸುಗುಸು ಮಾಡುತ್ತಿದ್ದರು. ಇಪ್ಪತ್ತು ವರ್ಷಗಳಲ್ಲಿ ಊರಿನ ಚಿಕ್ಕೆರೆಯಲ್ಲಿ ಅದೆಷ್ಟು ಹಳೇ ನೀರು ಹರಿದುಹೋಗಿ ಹೊಸ ನೀರು ಬಂದಿತ್ತೋ? ಆ ಬೀದಿಯಲ್ಲಿಯೂ ಹೊಸ ಹೆಣ್ಣುಮುಖಗಳೇ. ಒಳಗೆ ಎಷ್ಟು ಇಣುಕಿದರೂ ಗುಜ್ಜಪ್ಪ ಸ್ಪಷ್ಟವಾಗಿ ಕಾಣಲಿಲ್ಲವೋ ಅಥವಾ ಅಲ್ಲಿದ್ದ ಹೆಂಗಸರಿಗೆ ಗುಜ್ಜಪ್ಪನ ಗುರುತು ಸಿಗಲಿಲ್ಲವೋ ಗೊತ್ತಿಲ್ಲ? ನೆರೆದ ಗೌಜನ್ನು ಕೇಳಿ ದ್ಯಾಮಣ್ಣ ಹೊರಗೆ ಬಂದು,
"ಯಾನ ನೋಡ್ತಾ ಇರಾದು ಇಂಗ್ ಗುಂಪ್ಕಡ್ಕಂಡು..." ಎಂದು ತನ್ನ ನಡುಗುವ ಸ್ವರದಲ್ಲೇ ಗದರಿಸಿದ.
"ಒಳ್ಗ್ ಯಾರೋ ಸೇರ್ಕೊಂಡೋರೇ ಅಜ್ಜ..." ಒಂದಿಬ್ಬರು ಜೋರಾಗಿ ಕಿರುಚಿಯೇ ಹೇಳಿದರು.
'ದ್ಯಾಮಣಜ್ಜನ್ ತ್ವಾಟ ದೂರ, ಕೇಳ್ಸಕ್ಕಿಲ್ಲ. ಕೂಗ್ಬೇಕು...' ಅವರವರೇ ಮೆಲ್ಲಗೆ ಮಾತಾಡಿಕೊಂಡರು.
"ಯಾರಾ ಅದು… ಪಾಳ್ ಮನ್ಯಾಗೆ?"
"ಯಾರೋ, ಗೊತ್ತಾಗ್ತಿಲ್ಲ. ಒಳಗ್ ಸೇರ್ಕೊಂಡು ಕಿಲೀನ್ಪಲೀನ್ ಮಾಡ್ತಿರಂಗದೆ"
ದ್ಯಾಮಣ್ಣನಿಗೆ ಗಾಬರಿಯಾಯ್ತು.
'ಬಯ್ಸ್ಕಾರ ಆಕಿದ್ ಮ್ಯಾಲೆ ನರ್ಮನ್ಸ ಅತ್ತಾಗಿರ್ಲಿ, ನಾಯ್ನರಿ ಕಿತಾ ಆಕಡೆ ವೋಗಿಲ್ಲ, ಇದ್ಯಾನಪ್ಪಾ ಈ ಕತೆ?' ಎಂದು ದ್ಯಾಮಣ್ಣ ಗೊಣಗುತ್ತಾ, ಹೆಂಗಸರ ಗುಂಪನ್ನು ಚದುರಿಸಿ ಮನೆ ಎದುರಿಗೆ ನಿಂತ. ಅವನೇನು ದೂರದವನಲ್ಲ, ಗುಜ್ಜಪ್ಪನ ಹತ್ತಿರದ ಸಂಬಂಧಿಯೇ.
"ಯಾರಾ ಅದು ಒಳ್ಗೆ?" ದ್ಯಾಮಣ್ಣನ ಗಟ್ಟಿ ಕೂಗು ಗಾಳಿಯನ್ನು ಭೇದಿಸಿದ ಬಾಣದ ಹಾಗಿತ್ತು, ಆದರೆ ಅತ್ತಲಿಂದ ಉತ್ತರ ಬರಲಿಲ್ಲ.
"ಏ, ಯಾರ್ಲಾ ಅದು ಮಳ್ನಂಗ್ ಒಳಗ್ ಸೇರ್ಕಂಡಿರದು?" ದ್ಯಾಮಣ್ಣ ಕೂಗುತ್ತಲೇ ಇದ್ದ; ಅಷ್ಟು ಸಲೀಸಾಗಿ ಬಿಡುವ ಮುದುಕನಲ್ಲ ಆತ.
“ಆವಾಗ ಎಲ್ಲಾ ಎದ್ರುಕೊಂಡ್ ಸತ್ರು, ನಾಮರ್ದ್ನನ್ಮಕ್ಳು! ನೆಂಟ್ರು-ಇಷ್ಟ್ರು-ನೆರೇವ್ರು ಅಂತ ಯಾರ್ಮುಂದುಕ್ ಬಂದ್ರು? ಒಡ್ವುಟ್ದೋರೆ ಮಾತಾಡ್ನಿಲ್ಲ ಅಂದ್ರೆ ಯಾವ್ ಪಾಳ್ಬಾವಿಗೆ ಬಿದ್ಸಾಯದು? ಯಾರೂ ಮಾತಾಡ್ನಿಲ್ಲ, ಊರೇ ಮಾತಾಡ್ನಿಲ್ಲ. ಮುಂಚಿಂದಲುವ ಆ ದೊಡ್ಜನ್ಗಳೇನೊ ಮುಟ್ಕಳಲ್ಲ, ನಮ್ಸರೀಕ್ರು ಸಯ್ತ ಇಂಗ್ಮಾಡ್ಬುಟ್ರಲ್ಲ? ಒಪ್ಪೊತ್ ಊಟಕ್ ಗತಿ ಇಲ್ದಂಗ್ಮಾಡುದ್ರು, ಕುಡ್ಯ ನೀರ್ಗು ತತ್ವಾರ ಮಾಡಿಟ್ರು ಲೌಡಿಮುಂಡೆ ಮಕ್ಳು. ಈಗ ಯಾವೋನೋ ಬಂದವ್ನೆ ಊರ್ಕೊತ್ವಾಲ ಪಂಚಾತ್ಗೆ ಮಾಡಕ್ಕೆ! ಅದ್ಯಾವುದೋ ಪರ್ದೇಸಕ್ ಹೋಗಿ ಹೆಡ್ತಿ-ಮಗನ್ ಸೀದಾಕ್ಬಂದೀವ್ನಿ, ಸಾಲ್ದಾ ಇವ್ಕೇ? ಇನ್ನು ನಾನೊಬ್ಬ ಉಳ ಇವ್ನಿ ಸೀಯೋಕೆ, ಬರ್ರೋಬರ್ರಿ... ಸಲೀಸಾಗಿ ಬಿಟ್ಟೇನ? ನಿಮ್ಮನ್ನೆಲ್ಲಾ ಉರ್ಸಿದ್ ಮ್ಯಾಕೆ ನಾ ಉರ್ದೋಗದು...” ಗುಜ್ಜಪ್ಪ ಜೋರು ಗೊಣಗುತ್ತಲೇ ಇದ್ದ.
ಅವನ ಇತಿಹಾಸ ಹೀಗೆಲ್ಲಾ ನೆನಪಿಗೆ ಬಂದು, ತನ್ನ ದೈನೇಸಿ ಸ್ಥಿತಿಗೆ ಕಾರಣರಾದ ಊರ ಜನರ ಮೇಲೆ ಆಕ್ರೋಶಗೊಂಡ ಅವನ ಅಂತರಂಗ ಅಗ್ನಿಪರ್ವತವಾಗಿ ಸಿಡಿಯುತ್ತಿತ್ತು.
ಗುಜ್ಜಪ್ಪನ ಸರಪರ ಸದ್ದು, ಗೊಣಗುವಿಕೆ ಮತ್ತು ನೆರೆದ ಜನರ ಗುಂಪಿನ ಗುಸುಗುಸು ಎಲ್ಲವೂ ಆ ನೀರವ ಮಧ್ಯಾಹ್ನದ ಹೊತ್ತಲ್ಲಿ ಅನುರಣಿಸಿ ಬೀದಿಯಲ್ಲೊಂದು ಗೊಂದಲ ಸೃಷ್ಟಿಸಿತು. ಉಂಡು ಮಲಗಿದ್ದ ಗಂಡಸರು, ಕೆಲಸ ಅರ್ಧಕ್ಕೇ ಬಿಟ್ಟುಬಂದ ಇನ್ನಷ್ಟು ಹೆಂಗಸರು ಸಂತೆಯನ್ನು ಸೇರಿದರು.
ಗುಜ್ಜಪ್ಪ ಹೊರಗೆ ಬಂದು ಆ ಸಂತೆಗೆ ಮುಖ ಮಾಡಿ ಯುದ್ಧಕ್ಕೆ ಸಿದ್ಧನಾದ ಸೈನಿಕನಂತೆ ಸೆಟೆದು ನಿಂತ. ದೇಹ ಬೆವರಿನ ತೊಪ್ಪೆಯಾಗಿತ್ತು; ಕಣ್ಣು ಬೆಂಕಿ ಉಂಡೆಗಳಾಗಿತ್ತು; ಹಲ್ಲುಗಳು ಕಟಕಟ ಮಸೆಯುತ್ತಿತ್ತು; ಮುಖದ ಮೇಲೆ ಅನಿರ್ವಚನೀಯವಾದೊಂದು ಸಿಟ್ಟು.
ಆಗಂತುಕ ವಿಕ್ಷಿಪ್ತ ಜೀವವೊಂದನ್ನು ಗರ ಬಡಿದಂತೆ ನಿಂತು ನೋಡುತ್ತಿದ್ದರು ಕಾಲೋನಿಯ ಜನರು.
“ಗುಜ್ಜಪ್ನಾ…!” ಬಾಯಿಯನ್ನು ಊರ ಬಾಗಿಲಂತೆ ತೆರೆದು ಉದ್ಗಾರ ಮಾಡಿದವನೇ ಕಲ್ಲಾಗಿ ನಿಂತುಬಿಟ್ಟ ದ್ಯಾಮಣ್ಣ.
ದ್ಯಾಮಣ್ಣನ ಕಣ್ಬೆಳಕು ಮಂದವಾಗಿದ್ದರೂ ಗುಜ್ಜಪ್ಪನ ಗುರುತು ಹಿಡಿದುಬಿಟ್ಟಿದ್ದ.
‘ಯಾರದು?’
‘ಯಾರು ಗುಜ್ಜಪ್ಪ ಅಂದ್ರೆ?’
‘ಇಲ್ಲಿತಂಕ ನಾವ್ ನೋಡೇ ಇಲ್ವಲ್ಲ?’
‘ಓಹ್, ಬಯ್ಸ್ಕಾರ ಆಕೀಸ್ಕೊಂಡ್ ಊರ್ಬಿಟ್ಟಿದ್ ಯಪ್ನಾ...?’
ಎಂಬೆಲ್ಲ ತರಾವರಿ ಮಾತುಗಳು ಜನಸಂತೆಯ ತುಂಬೆಲ್ಲಾ ಪರಸ್ಪರ ತಮ್ಮಲ್ಲೇ ತಗುಲಿ ಕರಗಿಹೋಗುತ್ತಿದ್ದ ಹೊತ್ತದು.
ಹೊರಬಂದು ಟ್ರಂಕನ್ನು ಬಿಚ್ಚಿ ಕೈನಲ್ಲಿ ಎಂಥದೋ ಕಾಗದವನ್ನು ಹಿಡಿದುಕೊಂಡ ಗುಜ್ಜಪ್ಪ ನೆರೆದ ಗುಂಪನ್ನು ಸೀಳಿ, ಬಿರಬಿರನೆ ಹೆಜ್ಜೆ ಹಾಕುತ್ತಾ, ಚೌಕದಿಂದ ಮುಖವನ್ನು ಒರೆಸಿಕೊಳ್ಳುತ್ತಾ ಹಳ್ಳಿಪಂಚಾಯ್ತಿ ಕಚೇರಿಯ ಕಡೆ ನಡೆದ.
ಮರುದಿನ ಸಂಜೆ, ಚಿಕ್ಕೆರೆಯ ಗೋಮಾಳದ ದಿಗಂತದಲ್ಲಿ ಸೂರ್ಯಪ್ಪ ಆಗಸಕ್ಕೆ ಕೇಸರಿ ಬಣ್ಣ ಬಳಿಯುವ ಕೆಲಸ ಮುಗಿಸಿ ನಿಧಾನಕ್ಕೆ ಕಂದುತ್ತಿದ್ದ. ಅತ್ತಲಿಂದ ದನಕರುಗಳೆಲ್ಲಾ ನಡೆದು ಬಂದು ಕೊಟ್ಟಿಗೆಗೆ ಸೇರಿಕೊಳ್ಳುತ್ತಿದ್ದವು. ಮೊದಲಿದ್ದಂತೆ ನೆಲದಿಂದ ಧೂಳೆದ್ದು ಮಣ್ಣುಬಣ್ಣದ ಹೋಳಿಯ ಚೆಲುವಿರಲಿಲ್ಲ. ಸೋಮಪ್ಪನ ಗುಡಿಯ ಪೌಳಿಯ ಮುಂದಿನ ಮರ್ಕ್ಯುರಿ ದೀಪಗಳು ಮೆಲ್ಲನೆ ಹೊತ್ತಿಕೊಂಡು ದೇವರಿಗೆ ಬೆಳಕಾದವು. ಗುಡಿಯ ಎದುರಿನ ಅರಳಿಕಟ್ಟೆಯ ಮೇಲೆ ಕುಕ್ಕರುಗಾಲಿನಲ್ಲಿ ಕೂತಿದ್ದ ಗುಜ್ಜಪ್ಪನಿಗೂ ಅದರ ಬೆಳಕು ಕೊಂಚ ತಗುಲಿತು.
ಈಗಾಗಲೇ ವಿಷಯ ಊರಿಗೆಲ್ಲಾ ಗೊತ್ತಾಗಿ ಎಲ್ಲರೂ ಸೋಮಪ್ಪನ ಗುಡಿಯ ಹತ್ತಿರ ದಂಡುದಂಡಾಗಿ ಬಂದು ಸೇರುತ್ತಿದ್ದರು.
‘ಆ ಪೋಲಿ ಬಡ್ಡೆತದ್ದು ಮಾಡ್ದಂಗೆ ಅವ್ನಪ್ಪನೂ ಗುಡಿ ಒಳ್ಗೆ ನುಗ್ಗಿ ಅಂಟು-ಗಿಂಟು ತಗ್ಲಿಸಿಬಿಟ್ರೆ ಏನ್ ಗತಿನಪ್ಪಾ, ದ್ಯಾವ್ರೆ? ಮತ್ತಿನ್ಯಾವ ಗರ ಬಡೀಬೇಕೋ ಊರ್ಗೆ?’ ಎಂಬ ಆತಂಕ ಊರಿನ ದೊಡ್ಡ ಜನಕ್ಕೆ.
ಬಹಿಷ್ಕಾರದ ಶಿಕ್ಷೆ ಕೊಟ್ಟಿದ್ದ ಸಿಂಗ್ರೇಗೌಡ ಎಂಭತ್ತಾದರೂ ಬದುಕಿದ್ದ. ಪಂಚಾಯ್ತಿ ಅಧ್ಯಕ್ಷನಾಗಿದ್ದ ಮಗ ರಾಮಿ ಅಪ್ಪನನ್ನು ಕಾರಿನಲ್ಲಿ ಕರೆದುಕೊಂಡು ಬಂದ. ಅಂದಿದ್ದ ಪಟೇಲ, ಶಾನುಭಾಗರ್ಯಾರೂ ಬದುಕಿರಲಿಲ್ಲ. ಆ ವೃತ್ತಿಗಳು ಈಗ ಸರಕಾರಿ ಗ್ರಾಮಾಧಿಕಾರಿಯ ಕೈನಲ್ಲಿತ್ತು. ವಿಷಯ ಸೂಕ್ಷ್ಮ ತಿಳಿದಿದ್ದ ಗ್ರಾಮಾಧಿಕಾರಿ, ತಹಸೀಲ್ದಾರ್ ಸಾಹೇಬರನ್ನೂ ಕರೆಸಿದ್ದ. ತಹಸೀಲ್ದಾರ್ ಸಾಹೇಬರು ಪೊಲೀಸ್ ಪಡೆಯನ್ನೂ ಕರೆಸಿದ್ದರು.
“ನೋಡಿ ಸ್ವಾಮ್ಯಾವ್ರ, ಈ ಗುಜ್ಜನ್ ಮಗ ಪೋಲಿ-ಮುಂಡೇದು, ಗುಡಿಗ್ನುಗ್ಗಿ ದಾಂದ್ಲೆ ಮಾಡ್ದ ಅಂತ ಊರೆಲ್ಲಾ ಸೇರಿ ನಾಕ್ದಿನ ಬಯಿಸ್ಕಾರ ಅಂತ ಸಣ್ಣದಾಗಿ ಸಿಕ್ಸೆ ಕೊಟ್ಟಿತ್ತು, ಆಟೆಯ... ಆ ಕಾಲ್ದಾಗೆ ಎಲ್ಲಾ ಅಳ್ಳಿಲೂ ಆಗೋ ಇಸ್ಯನೇ ಅಲ್ಲುವ್ರಾ? ಊರ್ನೆ ಬಿಟ್ ಒಂಟ್ವೋಗೋ ದಾಸಪ್ನೇ ಅಂತ ನಾವೇನ್ ಯೋಳಿದ್ವ ಇವ್ನ್ಗೆ? ಒಳ್ಗೆ ಸರಿಮಾಡ್ಕಳೋ ಮನೆ ಇಸ್ಯನಾ ಬೀದಿಗ್ ತಂದಂಗೆ ಈ ಗುಜ್ಜ ಈಗ ನಿಮ್ಮನ್ನೆಲ್ಲಾ ಕರ್ಸವ್ನೆ. ಆದದ್ದಾಯ್ತು, ಈಗ ನೀವ್ ಏನ್ ಯೋಳ್ತೀರಾ ಯೋಳ್ಬುಡಿ...” ಸಿಂಗ್ರೇಗೌಡರ ರಾಜತಾಂತ್ರಿಕ ಮಾತುಗಳಿಗೆ ಎಲ್ಲರೂ ದನಿಗೂಡಿಸಿದರು; ‘ಹೂಂ, ಹೌದು, ಸರಿ, ನಿಜ’ ಅಂದರು.
“ಸಾಮಿ, ನನ್ಮಗ ಗುಡಿಲಿ ಪೂಜೆ ಮಾಡ್ಸುಕ್ಕೆ ನಮ್ಗು ಅವ್ಕಾಸ ಕೊಡ್ರೋ ಯಪ್ನೇ ಅಂದ, ನಾವೂ ನಿಮ್ಗೊಳಂಗೆ ಮನುಸ್ರೇ ಅಂದ. ಸುಮ್ಕೆ ಸುಳ್ ಆಡ್ಬಾರ್ದು, ದಾಂದ್ಲೆ-ಗೀಂದ್ಲೆ ಮಾಡ್ನಿಲ್ಲ; ಅವ್ನೇ ಇಡ್ಕೊಂಡ್ ಒಡುದ್ರು ದೊಡ್ಜನ್ಗಳು! ನಾಕ್ ದಿನದ್ ಸಿಕ್ಸೆ ಅಲ್ಲಾ ಸಾಮಿ ಅದು, ಸಾಯೋತಂಕ ಅನ್ನನೀರಿಲ್ದೆ ಸಾಯ್ಸೋ ಸಿಕ್ಸೆ! ಊರ್ಬಿಟ್ಟೋ… ಪರ್ದೇಸಿಯಂಗ್ ಅವ್ನು ಎಲ್ಲೋ ಸತ್ತ, ಅವ್ನವ್ವನೂ ಸತ್ಲು, ನಾನೊಬ್ನು ಇನ್ನೂ ಬದ್ಕೀವ್ನಿ ಬಡ್ಪಾಯಿ! ಮನ್ಸ್ರಾದೋರು ಯಾರಿಗ್ಯಾರು ಬಯ್ಸ್ಕಾರ ಆಕಂಗಿಲ್ಲ ಅಂತ ಕಾನೂನೈತಂತೆ. ಸರ್ಕಾರನೇ ಬಂದೈತೆ ಇಲ್ಗೀಗ. ನಂಗೆ, ನಮ್ಮವ್ರ್ಗೆ ಗುಡಿ ಪೂಜೆ ಮಾಡ್ಸಕ್ ಅವ್ಕಾಸ ಮಾಡ್ಕೊಟ್ಬಿಡಿ; ನಮ್ನು ಮನುಸ್ರಂಗೆ ಕಾಣಿ; ಸತ್ನನ್ಮಗನ್ ಜೀವ ತಣ್ಗಾಗ್ತೈತೆ. ಬೇಕಾರೆ ನಿಮ್ ಕಾಲುಗ್ ಬಿದ್ಬುಡ್ತೀನಿ ಸಾಮ್ಯೋರ...” ಗುಜ್ಜಪ್ಪನ ಮಾತು ನೇರವೂ, ಮುಗ್ಧವೂ ಹಾಗೂ ಪ್ರೌಢವೂ ಆಗಿತ್ತು.
ಕಾಲೋನಿಯ ಜನರೆಲ್ಲರೂ ‘ಹೂಂ...ಗುಜ್ಜಪ್ತಾತ ಯೋಳದ್ರಲ್ಲಿ ನಿಜಾಯ್ತಿ ಐತೆ ತಕ್ಕಾ...’ ಎಂದು ಗೊಣಗಿದರು.
ತನ್ನ ಅಧಿಕಾರದ ಅಹಂಕಾರಕ್ಕೆ ಪೆಟ್ಟುಬಿದ್ದದ್ದಕ್ಕೆ ಸಿಂಗ್ರೇಗೌಡರು ಆ ಇಳಿವಯಸ್ಸಲ್ಲೂ ಬುಸುಗುಡುತ್ತಾ, ಗೂರಲುಗೆಮ್ಮು ಹಿಡಿದು ಕೂತಿದ್ದರು. ಅಪ್ಪನ ಅಸಹಾಯಕ ಕ್ರೋಧ ಕಂಡು ರಾಮಿ “ಯಾರನ್ ಯೊಲ್ಲಿಡ್ಬೇಕು ಅಲ್ಲಿಟ್ರೇ ಸಂದಾಕಿರ್ತದೆ...” ಎಂದು ಅಸಹನೆಯ ರೇಗನ್ನು ಉಸುರಿದ.
ಗುಂಪಿಗೆ ಗೌಜನ್ನು ಮತ್ತಷ್ಟು ಹೆಚ್ಚು ಮಾಡುವ ವಿಷಯ ಸಿಕ್ಕಿತ್ತು. ಎಲ್ಲೆಲ್ಲೂ ತಾಳ-ಮೇಳವಿಲ್ಲದ ಗುಜುಗುಜು ಮಾತು, ಗೊಂದಲ ಶುರುವಾಯ್ತು.
“ಗುಜ್ಜಪ್ಪ ಹೇಳೋದ್ಸರಿ ಇದೆ, ಸಂವಿಧಾನ ಎಲ್ರಿಗೂ ಸಮಾನ ಹಕ್ಕು ಕೊಟ್ಟಿದೆ. ಯಾರಿಗೂ ದೇವಸ್ಥಾನ ಪ್ರವೇಶದ ಹಕ್ಕನ್ನು ತಡ್ಯೋ ಅಧಿಕಾರ ಇಲ್ಲ. ಬಹಿಷ್ಕಾರ ಆಚರಣೆ ಕಾನೂನ್ಗೆ ವಿರುದ್ಧ, ಶಿಕ್ಷಾರ್ಹ ಅಪರಾಧ!” ತಹಸೀಲ್ದಾರ್ ಗುಂಡು ಹೊಡೆದಂತೆ ತಮ್ಮ ತೀರ್ಮಾನ ಹೇಳಿದರು.
“ಅಂಗೆಲ್ಲಾ ಆಗಕಿಲ್ಲ ಬುದ್ಧಿ, ನಿಮ್ ಕಾನೂನು ನಿಮ್ ಆತ್ರಾನೆ ಇಟ್ಕೊಳ್ಳಿ, ದಮ್ಮಯ್ಯ ನಮ್ಮಳ್ಳಿ ತಂಟೆಗ್ಬರ್ಬೇಡಿ ಆಟೆಯ...” ಅಧ್ಯಕ್ಷ ರಾಮಿ ತೀವ್ರ ಉದ್ವೇಗಗೊಂಡು ಪ್ರತಿಭಟನೆಯ ಮಾತನಾಡಿದ.
“ಚುನಾಯಿತ ಜನಪ್ರತಿನಿಧಿ ಹೀಗೆಲ್ಲಾ ಮಾತಾಡ್ಬಾರ್ದು ಗೌಡ್ರೇ” ಎಂದು ತಹಸೀಲ್ದಾರ್ ರೇಗಿದರು.
ಮಾತಿನ ತೀವ್ರ ಚಕಮಕಿಯಾಯ್ತು; ‘ಮುಟ್ಟು-ಮೈಲ್ಗೆ-ಕೇಸು-ಕಾನೂನು-ಕೋರ್ಟು-ಜೈಲು-ಶಿಕ್ಷೆ-ಹೊಡ್ದಾಟ-ಬಡ್ದಾಟ’ ಎಂಬೆಲ್ಲಾ ಮಾತುಗಳು ಬಂದು ಹೋದವು. ಆ ಉದ್ವೇಗದ ಪರಿಸ್ಥಿತಿಯ ಕೊನೆಯಲ್ಲಿ ತಹಸೀಲ್ದಾರ್ ಕರೆತಂದಿದ್ದ ಪೊಲೀಸರು ಬಂದೂಕುಗಳನ್ನು ಭದ್ರ ಮಾಡಿಕೊಂಡು ಸಿದ್ಧರಾಗಿ ನಿಂತರು.
ಆಗಬಹುದಾದ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿತ್ತು. ಮೊದಲಾದ ಎಲ್ಲರ ಕೈ-ಬಾಯ್ಗಳು ಪೊಲೀಸರ ಮಧ್ಯ ಪ್ರವೇಶದಿಂದ ತಣ್ಣಗಾಯ್ತು. ಕಾಲೋನಿಯ ಜನ ನಮ್ಮ ಮುಂದೆಯೇ ಗುಡಿಯ ಪ್ರವೇಶ ಮಾಡಬೇಕೆಂದು ತಹಸೀಲ್ದಾರ್ ಆದೇಶ ಹೊರಡಿಸಿದರು. ಯಾರ ಮರ್ಜಿಗೂ ಕಾಯದೆ ಗುಜ್ಜಪ್ಪ ಎದ್ದು ನೇರ ಗುಡಿಯ ಒಳಗೆ ಹೋಗಿಯೇಬಿಟ್ಟ!
ಅವನ ಬಾಂಧವರು ಮಾತ್ರ ಕಣ್ಕಣ್ ಬಿಟ್ಟು ನೋಡುತ್ತಾ ನಿಂತರು.
“ಬರ್ರಲಾ, ಎದ್ರುಕೊಂಡ್ ಸಾಯ್ಬೇಡಿ ಏಡ್ಗೋಳ್ ತಂದು. ನಾಯ್ಬಾಳು ಬಾಳ್ಕೊಂಡ್ ಇಂಗೆಯ ವರ್ಗೋಗ್ತೀರ...” ಗುಜ್ಜಪ್ಪ ಸಮುದಾಯದ ನಾಯಕನಂತೆ, ಥೇಟ್ ತನ್ನ ಮಗನೇ ತನ್ನಲ್ಲಿ ಆವಾಹಿಸಿಬಿಟ್ಟಂತೆ ಮಾತನ್ನಾಡುತ್ತಿದ್ದ!
ಇಷ್ಟು ವರ್ಷಗಳಾದ ಮೇಲೆ ತಮ್ಮದೇ ಹಕ್ಕನ್ನು ಧೈರ್ಯ ಮಾಡಿ ಕೇಳುವ ನಾಯಕನೊಬ್ಬ ಅಲ್ಲಿದ್ದ. ಅಬಲ ಸಮುದಾಯದ ಜನಕ್ಕೆ ಇದೀಗ ಆನೆಬಲ ಬಂದಂತೆನಿಸಿ ಗುಜ್ಜಪ್ಪನ ಹಿಂದೆ ನಡೆದರು.
ಪೂಜಾರಪ್ಪ ಪೂಜೆ ಮಾಡಲಿಲ್ಲ. ‘ಮುಜುರಾಯಿ ಸಂಬಳ ನಿಮಗೆ ಸಿಗೋಲ್ಲ, ಕೆಲಸಕ್ಕೆ ಕುತ್ತು’ ಎಂದು ಬೆದರಿಸಿದರೂ ಜಗ್ಗದೆ, ‘ಗುಡಿ ಮೈಲಿಗೆಯಾಯ್ತು’ ಎಂದು ತಲೆಮೇಲೆ ಕೈಹೊತ್ತು ಕೂತನಷ್ಟೇ.
ಗುಜ್ಜಪ್ಪನೇ ಆರತಿ ತಟ್ಟೆ ಹಿಡಿದು ಕರ್ಪೂರ ಬೆಳಗಿ ಎಲ್ಲರಿಗೂ ಕೊಟ್ಟು ತಾನೂ ತೆಗೆದುಕೊಂಡು ಸೋಮಪ್ಪನಿಗೆ ಉದ್ದುದ್ದಕ್ಕೆ ಅಡ್ಡಬಿದ್ದ, ಎಲ್ಲರೂ ಅಡ್ಡಬಿದ್ದರು.
ಅತ್ತ, ಬಲಿತ ಜನರು ಅಗ್ನಿಕುಂಡಗಳಾಗಿ ಆಹುತಿ ಬೇಡುತ್ತಿದ್ದರು!
ಕಾಲೋನಿಯ ಜನಕ್ಕೆ ಆ ರಾತ್ರಿ ನಿದ್ದೆ ಹತ್ತಲಿಲ್ಲ. ಒಂದು ಕಡೆ ಸ್ವಾತಂತ್ರ್ಯ ಸಿಕ್ಕ ಹಬ್ಬದ ಕಳೆ, ಮತ್ತೊಂದೆಡೆ ತಮ್ಮ ಮೇಲೆ ದಾಳಿಯಾಗಬಹುದೆಂಬ ಅನುಮಾನ. ಪೊಲೀಸ್ ಪಡೆ ಹಳ್ಳಿಯಿಂದ ಚದುರಿರಲಿಲ್ಲ. ಉತ್ತೇಜಿತರಾಗಿದ್ದ ಹೈಕಳೆಲ್ಲಾ ಒಂದಾಗಿ ಗುಜ್ಜಪ್ಪನ ಪಾಳುಮನೆಯನ್ನು ಒಪ್ಪ ಮಾಡಿಟ್ಟರು; ಗುಜ್ಜಪ್ಪನ ಮನೆಯ ಮುಂದೆ ಗುಂಪುಗೂಡಿ ಅವನ ಪ್ಯಾಟೆ ಕಥೆ ಕೇಳುತ್ತಾ ಕೂತರು.
“ಪ್ಯಾಟೆಲಿ ಜನ ನಿನ್ ಜಾತಿ-ಗೀತಿ ಏನೂ ಕೇಳಕಿಲ್ಲ, ಬದ್ಕಕ್ಕೆ ಮಾತ್ಮಾತ್ಗೂ ಉಸ್ರು ಕಟ್ಟಕಿಲ್ಲ. ನೀನ್ ದುಡಿ, ನೀನ್ ತಿನ್ನು ಆಟೆಯ. ನಿನ್ ಸುದ್ದಿಗ್ಯಾರು ಬರಕಿಲ್ಲ. ಏಟೊಂದ್ ಗುಡಿಗಳೈತೆ ಅಲ್ಲಿ! ಓದ್ರೆ ನೀ ಯಾರಾ ಅಂತ ಯಾವಾನು ಕೇಳಕಿಲ್ಲ. ಜನ ಅಳ್ಳಿ ಬಿಟ್ ಪಟ್ನ ಸೇರ್ಕಬೇಕು ಕಣ್ರಲಾ...” ಹುಡುಗರಿಗೆ ಗುಜ್ಜಪ್ಪ ಸಲಹೆ ಕೊಡುತ್ತಿದ್ದ.
“ಮತ್ ನೀನ್ಯಾಕ್ ವಾಪಿಸ್ ಬಂದೆ?”
“ಗುಡಿ ಒಳಕ್ ಓಗಕ್ಕೆ, ಎಲ್ರೂ ಸಮ್ಸಮ ಅಂತ ಯೋಳಕ್ಕೆ, ಸತ್ಮಗನ್ ಜೀವುಕ್ ತಂಪ್ಮಾಡಕ್ಕೆ, ನಾನ್ ನನ್ನೂರಲ್ಲೇ ಮಣ್ಮೇಲ್ ಆಕೀಸ್ಕೊಳೋಕೆ...” ಗುಜ್ಜಪ್ಪ ಪಟ್ಟಿ ಮಾಡುತ್ತಲೇ ಇದ್ದ.
“ಅಂದ್ರೆ ಸಾಯಕ್ ಮಾತ್ರ ವಾಪಸ್ ಬರೂದು ಅಂತನಾ ನೀನ್ ಯೋಳೋ ಲೆಕ್ಕ?”
“ಊ ಕನ್ಲಾ, ರೆಕ್ಕೆ ಬಲುತ್ಮೇಲೆ ಎತ್ರುಕ್ ಆರ್ಬೇಕು, ಆದ್ರೆ ಬೇರ್ನ ಮರಿಬ್ಯಾರ್ದು... ರೆಕ್ಕೆನೂ ಬ್ಯಾಕು, ಬೇರೂ ಬ್ಯಾಕು...”
ಆ ಹೊತ್ತಿಗೆ ಗುಜ್ಜಪ್ಪನ ಅನುಭವ ವಿಸ್ತಾರವಾಗಿತ್ತು. ಮಾತುಗಳು ಆ ಅನುಭವದ ಮೂಸೆಯಿಂದ ಹೊರಡುತ್ತಿತ್ತು.
“ಅದೇನ್ ಕಾಗ್ಜ ಇತ್ತಲ್ಲ ನಿನ್ ಕೈನಾಗೆ?”
“ಕೋಲ್ಟ್ ಆಡ್ರು, ನಮ್ ಅಕ್ಕು...!”
“ಭಲೇ ಮುದ್ಕ ನೀನು, ಎಲ್ಲಾ ತಯಾರಿ ಮಾಡ್ಕೋಂಡ್ ಬಂದೀಯೇ...”
ಎಲ್ಲರೂ ಬಾಯ್ತುಂಬ ನಕ್ಕು ಹಗುರಾದರು; ತಿಳಿಯಾಕಾಶದಲ್ಲಿ ಚುಕ್ಕೆಗಳ ಜೊತೆ ಚಂದಿರನೂ ಫಳ್ಳನೆ ನಕ್ಕ ಹಾಗಾಯ್ತು!
ಮರುದಿನ ಮುಂಜಾನೆ ಊರ ರಾಜಬೀದಿಗೆ ಮಾತ್ರ ಸೂರ್ಯಪ್ಪ ಮೈಲಿಗೆಯ ಕಿರಣಗಳನ್ನು ರಾಚುತ್ತಿದ್ದ. ಸೋಮಪ್ಪನಿಗೆ ಅಭಿಷೇಕ-ಸಿಂಗಾರ-ಪೂಜೆ ಏನೂ ಆಗಲಿಲ್ಲ. ಪೂಜೆಗಾಗಿಯೇ ಬಂದ ಗುಜ್ಜಪ್ಪ ಗುಡಿಯಲ್ಲಿ ಬಿಮ್ಮನೆ ಕೂತಿದ್ದ. ಪೂಜಾರಿಯೂ ಸೇರಿದಂತೆ ಬಲಿತರೆಲ್ಲರೂ ಗುಡಿಗೆ ಅಘೋಷಿತ ಬಹಿಷ್ಕಾರ ಹಾಕಿದ್ದರು. ಗುಡಿಯ ಮುಂದೆ ಪೊಲೀಸರು ಕಾವಲಿಗೆ ನಿಂತಿದ್ದರು. ಎಷ್ಟು ಹೊತ್ತಾದರೂ ಪೂಜಾರಿ ಸುಳಿಯದ್ದನ್ನು ಕಂಡು ಗುಜ್ಜಪ್ಪ ಅವ್ಯಕ್ತ ವ್ರತಕ್ಕೆ ಅಂಟಿದವನಂತೆ ಪಟ್ಟಾಗಿ ಅಲ್ಲಿಯೇ ಕೂತ.
'ಊರ್ ಜನಕ್ಕೆಲ್ಲಾ ಬಯ್ಸ್ಕಾರ ಆಕಿದ್ ಸಾಲಕ್ಕಿಲ್ಲಾ ಅಂತಾ ಊರ್ದ್ಯಾವ್ರ್ಗೂ ಬಯ್ಸ್ಕಾರ ಆಕ್ಬುಟ್ಟಾವ್ರೆ...?' ಎಂದು ತನ್ನೊಳಗೇ ನೊಂದುಕೊಂಡ.
‘ಈ ನನ್ಕೇರಿ ಜನ ಆವತ್ತು ನನ್ಕೇಡ್ನೋಡಿ ಅರ-ಸಿವ ಅಂದ್ರಾ? ಇಲ್ಲ! ನಂಗೀಗ್ ಬ್ಯಾಡದ್ ಉಸಾಬ್ರಿ ಯಾಕಾ? ನಾ ಇಲ್ಗ್ ಬಂದ್ ತಪ್ಗಿಪ್ ಮಾಡ್ಬಿಟ್ನಾ? ಈ ಜಾಡ್ಯನೆಲ್ಲಾ ಒದ್ದು ಮತ್ ಪಟ್ಣುಕ್ ಒಂಟೋಗ್ಲಾ? ನನ್ ಸಲ್ವಾಗಿ ಊರ್ಗೇ ಬೆಂಕಿ ಬಿದ್ರೆ ಏನ್ ಗತಿನಪ್ಪಾ ದ್ಯಾವ್ರೇ?’ ಎಂಬೆಲ್ಲಾ ಸೂಕ್ಷ್ಮ ಆಲೋಚನೆಗಳು ಗುಜ್ಜಪ್ಪನನ್ನು ಕಾಡಹತ್ತಿದ್ದವು.
ಅದೇನನ್ನಿಸಿತೋ? ಇದ್ದಕ್ಕಿದ್ದ ಹಾಗೆ ಫಟ್ಟನೆ ಕಣ್ಮುಚ್ಚಿ ಕೂತ. ಅರೆನಿಮಿಷವಾಯ್ತಷ್ಟೇ! ದಿಗ್ಗನೆ ಕಣ್ತೆರೆದು ಸೋಮಪ್ಪನನ್ನೇ ತದೇಕವಾಗಿ ನೋಡಲಾರಂಭಿಸಿದ; ತನ್ನ ಮಗ ಸೋಮಪ್ಪನ ಒಳಗೇ ಕೂತಿದ್ದಾನೆ ಎನ್ನುವ ಭ್ರಾಮಕವಾಯ್ತು; ತನಗೀಗ ಏನೋ ಸ್ಪಷ್ಟವಾದಂತೆ ಗೆಲುವಿನ ನಗೆನಕ್ಕ.
ಸೂರ್ಯ ನೆತ್ತಿ ಮೇಲೆ ಬಂದರೂ ಗುಜ್ಜಪ್ಪ ಮರಳಿ ಬಾರದ್ದಿದ್ದುದು ಯಾವುದೋ ಕೇಡಿಗಾಗಿ ಎಂದು ಭಾವಿಸಿದ ಕಾಲೋನಿಯ ಜನ ಭೀತರಾದರು. ಯಾವುದಕ್ಕೂ ಇರಲಿ ಎಂದು ಕೈಗೆ ಸಿಕ್ಕ ಕುಡುಗೋಲು, ಮಚ್ಚುಗಳನ್ನು ಒಳಗೆ ಸಿಕ್ಕಿಸಿಕೊಂಡು ಸೋಮಪ್ಪನ ಗುಡಿಯ ಬಳಿ ಬಂದು ನೋಡಿದೊಡನೆ ಒಮ್ಮೆಗೇ ದಿಗ್ಭ್ರಾಂತರಾಗಿ ಹೋದರು! ಎಲ್ಲರ ಕೈ-ಕಾಲುಗಳು ನಡುಗಲು ಶುರುವಾಯ್ತು. ಇನ್ನೇನು ಕೇಡು ಕಾದಿದೆಯೋ ಏನೋ ಎಂದು ಜನ ಅಕ್ಷರಶಃ ತರಗುಟ್ಟಿ ಹೋದರು.
ಗುಜ್ಜಪ್ಪ ತನ್ಮಯತೆಯಿಂದ ಸೋಮಪ್ಪನ ಲಿಂಗಶರೀರಕ್ಕೆ ಅಭಿಷೇಕ ಮಾಡುತ್ತಿದ್ದ!
ಹೀಗೇ ವಾರಗಳಾಯ್ತು. ಎಲ್ಲವೂ ಶಾಂತವಾದಂತಾಗಿ ಪೊಲೀಸ್ ತುಕಡಿ ಊರು ಬಿಟ್ಟು ಹೋಗಿತ್ತು. ಊರಿನ ರಾಜಬೀದಿ ಬೂದಿ ಮುಚ್ಚಿದ ನಿಗಿನಿಗಿ ಕೆಂಡದಂತಿದ್ದದ್ದು ಯಾರಿಗೂ ಗೊತ್ತಾಗಲಿಲ್ಲವೆಂದರೆ ಅದು ಬರಿಯ ಸೋಗಷ್ಟೇ! ಗುಜ್ಜಪ್ಪ ಸೋಮಪ್ಪನ ಪೂಜಾರಿಯಾಗಿದ್ದ, ಕಾಲೋನಿಯ ಜನರೆಲ್ಲಾ ಭಕ್ತರಾಗಿದ್ದರು. ತಮ್ಮ ಭಕ್ತಿ ‘ಸೋಮಪ್ಪನಿಗೋ? ಗುಜ್ಜಪ್ಪನಿಗೋ?’ ಅವರಿಗೂ ಗೊಂದಲವಿತ್ತು. ಪೂಜೆ-ಪುನಸ್ಕಾರ ಸಾಂಗವಾಗಿ ನಡೆಯುತ್ತಿತ್ತು. ವೇದ ಮಂತ್ರಗಳಿರದಿದ್ದರೂ ಘಂಟೆ-ಜಾಗಟೆಯ ನಾದವಿತ್ತು, ಬೆಚ್ಚನೆಯ ಮುಗ್ಧತೆ ಇತ್ತು, ಅತೀವ ಭಯ-ಭಕ್ತಿ ಇತ್ತು.
ಗುಜ್ಜಪ್ಪ ಮೂರು ಹೊತ್ತೂ ತಪ್ಪದೆ ತನಗೆ ತಿಳಿದಂತೆ ಪೂಜೆ ಮಾಡುತ್ತಿದ್ದ. ಅದು ಅವನ ಜೀವನದ ಉತ್ಕೃಷ್ಟ ಘಟ್ಟವೆಂದೇ ಅವನ ನಂಬಿಕೆ. ಗುಜ್ಜಪ್ಪನಿಗೆ ಗುಡಿಯೇ ಮನೆಯಾಯ್ತು.
ಆದರೂ ಊರ ಬಹುಪಾಲು ಜನ ಗುಡಿಯ ಹತ್ತಿರ ಸುಳಿಯದಿದ್ದುದು ಮಾತ್ರ ಅವನಿಗೆ ನಿರ್ವಾತವೆನಿಸುತ್ತಿತ್ತು; ಕೆಟ್ಟ ಕೇಡೆನಿಸುತ್ತಿತ್ತು!
ಪೊಲೀಸ್ ತುಕಡಿ, ಜಿಲ್ಲಾ ಮಾಜಿಸ್ಟ್ರೇಟ್, ತಹಸೀಲ್ದಾರ್, ಗ್ರಾಮಾಧಿಕಾರಿ, ಪತ್ರಕರ್ತರು ಎಲ್ಲರೂ ಗರ್ಭಗುಡಿಯ ಸುತ್ತಲೂ ನಿಂತಿದ್ದರು. ಗುಡಿಯ ಹೊರಗೆ ಊರಿನ ಜನ ಜಾತ್ರೆಯಂತೆ ಸೇರಿ ಗೌಜು-ಗದ್ದಲ ಎದ್ದಿತ್ತು. ಪೋಲಿಸ್ ನಾಯಿ ಸೋಮಪ್ಪನ ಗರ್ಭಗುಡಿಯ ಜಾಗವನ್ನು ಕಾಲಿನಲ್ಲಿ ಕೆರೆದು ಮೂಸುತ್ತಿತ್ತು. ಲಿಂಗವಿದ್ದ ಜಾಗದಲ್ಲಿ ಹಳ್ಳ ಬಿದ್ದಿತ್ತು. ಲಿಂಗವನ್ನು ಕಿತ್ತು, ಅಲ್ಲಿ ಉಂಟಾದ ಹಳ್ಳದೊಳಗೆ ಗುಜ್ಜಪ್ಪನನ್ನು ಮುರಿದು ಮುದುಡಿ ಎಸೆದು ಅವನ ಮುಖದ ಮೇಲೆ ಮಣ್ಣು ಎಳೆದಿದ್ದರು!
ಬಹಿಷ್ಕಾರ ತೆರವಾಗಿದ್ದ ಗುಜ್ಜಪ್ಪ ಸೋಮಪ್ಪನ ಅಡಿಯಲ್ಲಿ ಮಡಿದು ಮಣ್ಣಾಗಿ ಕೊನೆಗೂ ಮಡಿಯಾದ.
ಗುಜ್ಜಪ್ಪನ ಬಹಿಷ್ಕಾರವನ್ನು ತನ್ನ ತಲೆಯ ಮೇಲೆ ಎಳೆದುಕೊಂಡಿದ್ದ ಸೋಮಪ್ಪ ಮೈಲಿಗೆಯಾಗಿದ್ದ; ಮತ್ತೆ ಮಡಿಯಾಗಲೋ ಏನೋ ಊರ ಹೊರಗಿನ ಚಿಕ್ಕೆರೆಯಲ್ಲಿ ಮುಳುಗಿ ನೀರಾದ.
ಊರಿನ ತುಂಬೆಲ್ಲಾ ಸಮಾನತೆ ಎಂಬ ‘ಬಿಸಿಲುಗುದುರೆ-ಯಕ್ಷ’ ಅಂಡು ಬಡಿದುಕೊಂಡು ನಕ್ಕು ಕೇಕೆ ಹಾಕುತ್ತಿತ್ತು!
ಮಂಜುನಾಥ್ ಕುಣಿಗಲ್
ವಿಳಾಸ:
ಫ್ಲಾಟ್ ಬಿ 702
ಫೌಂಡೇಷನ್ ಸಿಲ್ವರ್ ಸ್ಪ್ರಿಂಗ್ಸ್
ಹೂಟಗಳ್ಳಿ, ಮೈಸೂರು – 570018
ಫೋನ್: 7899315930
ಈಮೇಲ್: manjunath_kunigal@yahoo.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.