ADVERTISEMENT

ದರ್ಜಿ ನಾಗೋಜಿ

ಕೆ.ಎಲ್.ಶ್ರೀವತ್ಸ
Published 18 ಫೆಬ್ರುವರಿ 2019, 12:17 IST
Last Updated 18 ಫೆಬ್ರುವರಿ 2019, 12:17 IST
ಚಿತ್ರ: ಎಸ್‌.ವಿ. ಹೂಗಾರ್
ಚಿತ್ರ: ಎಸ್‌.ವಿ. ಹೂಗಾರ್   

ಪ್ರತಿ ಬೆಳಿಗ್ಗೆ ಡಬ್ಬಿಯಲ್ಲಿಷ್ಟು ಊಟ ಕಟ್ಟಿಕೊಂಡು ವ್ಯಾನಿನ ಹಿತ್ತಲಿನ ಬಾಗಿಲು ತೆರೆದು ಒಳಹೊಕ್ಕ ತಡವೇ, ವ್ಯಾನಿನ ಕಬ್ಬಿಣದ ಕವಚ ತೊಟ್ಟ ಕಿಟಕಿಗೆ ಗಲ್ಲ ತಾಕಿಸಿ ವ್ಯಾನಿನ ಜೊತೆಗೇ ಓಡುವಂತೆ ಕಾಣುವ ಹೊರಗಿನ ಜಗತ್ತನ್ನು ನಿರ್ಭಾವದಿಂದ ನೋಡುತ್ತಾ, ಅಪಾರ ಹಣದ ಮಧ್ಯೆ ಕೂತನೆಂದರೆ ನಾಗೋಜಿ ದಿನಚರಿ ಆರಂಭವಾದಂತೆಯೇ. ಸುಮಾರು ನಲವತ್ತರ ನಾಗೋಜಿಗಿದ್ದುದು ಇಲಿ ತಿಂದಂತೆ ಕಾಣುವ ತಲೆಕೂದಲು, ಬೋಳಿಸಿದ ಮೀಸೆ, ಉಬ್ಬಲ್ಲುಗಳು, ಕಿವಿಯ ಕಕ್ಷೆಯಲ್ಲಿ ಹುಲ್ಲುಗಾವಲಿನಂತಿರುವ ಕೂದಲುಗಳು, ಕಣ್ಣು ಗುಡ್ಡೆಗಳನ್ನು ಹಿಗ್ಗಿಸುವಂತೆ ಢಾಳಾಗಿ ಕಾಣುವ ದಪ್ಪಂಚಿನ ಕನ್ನಡಕ. ಮೂಲಂಗಿ ಪ್ಯಾಂಟಿನ ಮೇಲೆ ದೊಗಲಂಬಗಲೆ ಶರ್ಟ್ ತಗಲಿಸಿಕೊಂಡು ಬರುತ್ತಿದ್ದವ ಈಗ ಕಂಪನಿಯ ಸಮವಸ್ತ್ರ ಧರಿಸುವುದರಿಂದ ಸ್ವಲ್ಪ ಸುಧಾರಿಸಿದ್ದಾನೆ.

ಅದೊಂದು ದಿನ ವ್ಯಾನಿನ ಕಿಟಕಿಗಾತು ಕೂತವನಿಗೆ ತನ್ನೂರಿನ ರಸ್ತೆಬದಿಯ ‘ಶಿವಾಜಿ ಟೈಲರಿಂಗ್ ಹಾಲ್’ನ ಹಳೆಯ ಸಿಂಗರ್ ಟೈಲರಿಂಗ್ ಯಂತ್ರದ ಮುಂದೆ ಕೂತ ಅಪ್ಪ ನಾಗೋಜಿ- ಸೀನಿಯರ್, ಗೋಡೆಯಲ್ಲಿ ನೇತಾಡುವ, ಅಮ್ಮನ ಕಪ್ಪು-ಬಿಳುಪಿನ ಫೋಟೊ ಎಲ್ಲ ಸ್ಫುಟವಾಗಿ ಕಣ್ಣೆದುರು ತೆರೆದುಕೊಳ್ಳುತ್ತಿದ್ದವು. ನಾಗೋಜಿ ಸೀನಿಯರ್ ಕುತ್ತಿಗೆಯಲ್ಲಿ ತೂಗಾಡುವ ಪಟ್ಟಿಯನ್ನು ಎಳೆದುಕೊಂಡು, ಬಟ್ಟೆ ಅಳತೆ ಮಾಡುವಾಗ, ಈ ನಾಗೋಜಿ ಜೂನಿಯರ್ ಸಣ್ಣ ಪುಸ್ತಕ ಹಿಡಿದುಕೊಂಡು ಜೀಬಿ, ಜೀಬಿ ತುಂಡಾದ ಪೆನ್ಸಿಲ್‌ನಲ್ಲಿ ಅಪ್ಪ ಹೇಳಿದ್ದನ್ನು ತನಗೆ ಬಂದ ಹಾಗೆ ಉದ(ಉದ್ದ) ಸೊಟ(ಸೊಂಟ) ಮಡಿ(ಮಂಡಿ) ಎಂದು ಬರೆದುಕೊಳ್ಳುವನು. ಮುಂದಿನ ಹಂತದಲ್ಲಿಯೇ ಅಪ್ಪನ ಕಸುಬುದಾರಿಕೆ ಇದ್ದುದು.

ಹೊಲಿಯುವ ಮುನ್ನ, ಅಪ್ಪ, ಅಂಗಡಿಯ ಹಿಂದೆಯಿದ್ದ ಅರೆಕತ್ತಲೆ ಕೋಣೆಯ ಪಾತ್ರೆಯೊಂದರಲ್ಲಿ ನೀರು ಸುರಿದು, ನೀರಿನಂತದೇ ಒಂದು ಪದಾರ್ಥವನ್ನು, ಬಿಳಿ ಬಾಟಲಿಯಿಂದ ತೊಟ್ಟಿಕ್ಕಿಸುವನು. ವಸ್ತ್ರಗಳನ್ನು ಅದರೊಳಗೆ ಅರ್ಧ ದಿನ ಸಂಸ್ಕರಿಸಿ, ಪಾಕೆಟ್ ರೇಡಿಯೊ ಹಚ್ಚಿ, ಪಕ್ಕಕಿಟ್ಟುಕೊಂಡು ಕೂರುವ ಅವನ ಕಾಲುಗಳು ಸಿಂಗರ್ ಮಷಿನನ್ನು ದಣಿವಿಲ್ಲದೆ ತುಳಿದರೆ ಹೊಸ ದಿರಿಸುಗಳು ಹುಟ್ಟಿಕೊಳ್ಳುತ್ತಿದ್ದವು. ಅವನ್ನು ಧರಿಸುವವರು ‘ನಾಗೋಜಿ ಹೊಲಿದ ಬಟ್ಟೆ ತೊಟ್ಟರೆ ಎಂಥದೋ ಸಂತೋಷ. ಜಾದೂ ಮಾಡತೀಯೇನೋ ನಾಗೋಜಿ!’ ಎಂದು ತಾರೀಫು ಮಾಡುವುದು, ಆಗೆಲ್ಲ, ಅಪ್ಪ, ಆ ಬಿಳಿ ಬಾಟಲಿಯನ್ನೊಮ್ಮೆ ಮುಟ್ಟಿ ನಮಸ್ಕರಿಸುತ್ತಿದ್ದ ದೃಶ್ಯಗಳೆಲ್ಲ, ವ್ಯಾನಿನಲ್ಲಿ ಕೂತ ನಾಗೋಜಿ- ಜೂನಿಯರ್ ಕಣ್ಣುಗಳನ್ನು ತುಂಬುತ್ತಿದ್ದವು.

ADVERTISEMENT

ಇವೆಲ್ಲದರ ಮಧ್ಯೆ ಅಪ್ಪನ ಕೈಕಾಲುಗಳು ಸ್ವಾಧೀನ ಕಳೆದುಕೊಂಡದ್ದು, ಆ ಆರೈಕೆಗೆ- ಔಷಧೋಚಾರಕ್ಕೆ ಅಪ್ಪ ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣವೂ ಕರಗುತ್ತ ಬಂದು ಹೊಟ್ಟೆಪಾಡಿಗೆ ಪೆಟ್ಟು ಬಿದ್ದಾಗ ನಾಗೋಜಿ ಜೂನಿಯರ್, ಹಾಸಿಗೆಯ ಮೇಲೆ ಕೊರಡಾಗಿ ಬಿದ್ದಿದ್ದ ಅಪ್ಪನ ಕಾಲಿಗೆ ನಮಸ್ಕರಿಸಿ, ದರ್ಜಿ- ನಾಗೋಜಿಯಾದದ್ದು-ನಾಗೋಜಿಯ ಮನಸ್ಸನ್ನು ಜೇಡಿಮಣ್ಣು ಮಾಡಿಕೊಂಡು ತುಳಿಯತೊಡಗಿತ್ತು. ಹೊಸ ‘ದರ್ಜಿ-ನಾಗೋಜಿ’, ಅಪ್ಪನಂತೆ ಬಿಳಿ ಬಾಟಲಿಯಲ್ಲಿದ್ದ ದ್ರವ ಹಾಕಿಯೇ ಹೊಲಿಯುತ್ತಿದ್ದ. ಎಷ್ಟೇ ಚೆನ್ನಾಗಿ ಹೊಲಿದು ಕೊಟ್ಟರೂ ಜನ ಅದಕ್ಕೊಲಿಯಲಿಲ್ಲ. ಮುಂದಿನ ದಿನಗಳಲ್ಲಿ, ಪರಿಸ್ಥಿತಿ ಹದಗೆಟ್ಟು, ಗಿರಾಕಿಗಳು ಬರುವುದೇ ನಿಂತಿತು-ಅಪ್ಪನ ಆಯಸ್ಸೂ ಮುಗಿದಿತ್ತು.

ಊರ ಜನ ನಾಗೋಜಿಯನ್ನು ದೈನ್ಯತೆಯಿಂದ ನೋಡುವುದಕ್ಕಾರಂಭವಾಗಿ ಒಂದು ದಿನ ಅಗ್ರಹಾರದ ರಾಮಾಚಾರ್ರು ‘ಮಾತಾಡಬೇಕು ಬಾ’ ಎಂದು ಕರೆದು, ನಗರದಲ್ಲಿದ್ದ ಅವರ ಮಗನ ಕಂಪನಿಯಲ್ಲಿ ಕೊಡಿಸಿದ ಕೆಲಸದಲ್ಲಿ ಈಗ ನಾಗೋಜಿ ಮೂರು ತಿಂಗಳು ಕಳೆದಿರುವುದು.

ಒತ್ತರಿಸಿಕೊಂಡು ಬಂದ ನೆನಪುಗಳ ಉತ್ಸಾಹದಲ್ಲಿ, ವ್ಯಾನಿನಲ್ಲಿರುವ ಎಲ್ಲರಿಗೂ ಕೇಳುವಂತೆ ‘ಇವತ್ತಿಗೆ ಮೂರು ತಿಂಗಳು’ ಎಂದು ನಾಗೋಜಿ ಕೂಗಿದ್ದ. ಅವರೆಲ್ಲ ಗೊಳ್ಳನೆ ನಕ್ಕು ‘ಹೌದೇನೋ ಶುಭಾಶಯಗಳು ಅಂತೂ ಅಪ್ಪ ಆಗ್ಬಿಟ್ಟೆ’ ಎಂದಾಗ, ನಾಗೋಜಿ ಪೆದ್ದು ನಗುವನ್ನು ಚೆಲ್ಲಿ ‘ಇಲ್ಲ ನನಗೆ ಮದುವೆನೇ ಆಗಿಲ್ಲ. ನಾನು ಹೇಳಿದ್ದು ಈ ಕೆಲಸದಲ್ಲಿ ಮೂರು ತಿಂಗಳು’ ಎಂದಾಗ ಅಲ್ಲಿದ್ದವರಲ್ಲೊಬ್ಬ ‘ಹೌದು ನಾಗೋಜಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ಹೇಳಿದ್ದ, ಅವನ ಮದುವೇದೂ ಒಂದು ತಮಾಷೆ ಇದೆ ಕೇಳಿ’ ಎಂದು ದರ್ಜಿ ನಾಗೋಜಿಯ ವಿವಾಹ ಪ್ರಸಂಗವನ್ನು ಸಾದರಪಡಿಸಿದ್ದ.

ಕೆಲಸ ಕೊಡಿಸಿದ್ದ ರಾಮಾಚಾರ‍್ರು, ನಾಗೋಜಿಯ ಲಗ್ನ ಮಾಡುವುದಕ್ಕೂ ಯೋಜನೆ ರೂಪಿಸಿ, ಅವನ ಸ್ವಭಾವಕ್ಕೆ ಮತ್ತು ಅಭಾವಕ್ಕೆ ಒಪ್ಪುವಂತಿರುವ ಪಕ್ಕದೂರಿನ ಹುಡುಗಿಯೊಬ್ಬಳನ್ನು ನಿಶ್ಚಯಿಸಿದರೂ ಮುಂದೆ ನಡೆದದ್ದೇ ಬೇರೆ. ಅದೊಂದು ರಾತ್ರಿ, ನಾಗೋಜಿಗೆ ಕೆಟ್ಟ ಕನಸು: ಅವನು ಆ ಹುಡುಗಿಗೆ ತಾಳಿ ಕಟ್ಟಿ ವೈವಾಹಿಕ ಬದುಕು ಆರಂಭವಾದಂತೆ, ಹುಡುಗಿಯಾಗಿದ್ದವಳು ಮಗುವಿನ ತಾಯಿಯಾದಂತೆ. ಆ ಮಗುವನ್ನು ಕುರಿತು ‘ನಾಗೋಜಿ ಥರ ಸ್ವಲ್ಪ ಬುದ್ಧಿ ಮಂದ ಅಂತೆ, ಮದುವೆ ಬೇರೆ ಕೇಡು’ ಎಂದು ಊರ ಜನರೆಲ್ಲ ತನ್ನ ಮೇಲೆ ಮುಗಿಬಿದ್ದ ಹಾಗೆನಿಸಿ ದಿಗಿಲಿನಿಂದೆದ್ದ. ಎದ್ದವನೇ ಆ ತಡರಾತ್ರಿಯಲ್ಲೇ ಒಂದೇ ಸಮನೆ ಓಡಿ, ಓಡಿ ಹುಡುಗಿಯ ಮನೆ ತಲುಪಿ ಮಲಗಿದ್ದ ಅವರನ್ನೆಲ್ಲ ಎಬ್ಬಿಸಿ ಏದುಸಿರುಬಿಡುತ್ತ ‘ನನಗೆ ಈ ಮದುವೆ ಬೇಡ. ನಂಗೆ ಮದುವೆ ಮಾಡ್ಕೊಳಕ್ಕೆ ಭಯ’ ಎಂದು ಅಂಗಲಾಚಿ ತನ್ನ ಮದುವೆಯನ್ನು ತಾನೇ ತಪ್ಪಿಸಿಬಿಟ್ಟಿದ್ದ.

ಊರಿನ ನೆನಪುಗಳಲ್ಲಿ ಮುಳುಗುತ್ತ ನಾಗೋಜಿ, ವ್ಯಾನಿನ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳತೊಡಗಿದ್ದ ಸಮಯದಲ್ಲಿ, ನಾಗೋಜಿಗೆ ಮತ್ತೆ ಉತ್ಸಾಹ ಚಿಗುರಿತ್ತು. ಅದಕ್ಕೆ ಕಾರಣವೆಂದರೆ ಅವನಿಗೆ ಬಾಸ್‌ ಕೊಟ್ಟಿದ್ದ ಹೊಸ ಜವಾಬ್ದಾರಿ!

ಹುಟ್ಟಿನಿಂದಲೇ ಅಂಗವೈಕಲ್ಯಕ್ಕೀಡಾಗಿದ್ದ ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಸ್ ಮಗಳನ್ನು, ಪುಟ್ಟ ತಳ್ಳುಗಾಡಿಯಲ್ಲಿ ಶಾಲೆಗೊಯ್ದು ಕರೆತರುವ ಕೆಲಸವದು. ಇದಕ್ಕೆ ನಾಗೋಜಿ ಸೂಕ್ತ ಎಂದು ಬಾಸ್ ದಂಪತಿ ನಿರ್ಧರಿಸಲು ಬಲವಾದ ಕಾರಣವೆಂದರೆ, ನಾಗೋಜಿಯ ಮಂದಬುದ್ಧಿ. ಮನೆಗೆ ಕರೆಸಿ ಪುಸಲಾಯಿಸಿ ತಳ್ಳುಗಾಡಿಯಲ್ಲಿದ್ದ ಮಗಳನ್ನು ನಾಗೋಜಿಗೊಪ್ಪಿಸಿದ್ದರು. ಅವನೂ ಅತೀವ ಹುರುಪಿನಲ್ಲಿ ಒಪ್ಪಿದ್ದ.

...ಅವಳೀಗ ಅವನ ಮೆಚ್ಚಿನ ಪುಟ್ಟಿ! ಶಾಲೆಗವಳನ್ನು ಬಿಟ್ಟ ನಂತರ, ಮುಗಿಯುವವರೆಗೂ ಶಾಲೆಯಲ್ಲೇ ಕಾದಿದ್ದು, ಪುಟ್ಟಿಯನ್ನು ಹೊರಗೆತ್ತಿಕೊಂಡು ಬಂದು ಮನೆ ಕಡೆಗೆ ಗಾಡಿ ತಳ್ಳಲು ಅವನಿಗೆ ಖುಷಿಯೋ ಖುಷಿ.

ಒಮ್ಮೆ ಹೀಗೇ ಬಂದವನಿಗೆ ಏನೆನ್ನಿಸಿತೋ, ಪಕ್ಕದಲ್ಲಿಯೇ ಕೂತು ಅವಳನ್ನೇ ಎವೆ ಇಕ್ಕದೆ ನೋಡುತ್ತಿರಲು, ತಾನೇ ತಪ್ಪಿಸಿದ ಮದುವೆಯ ನೆನಪಲ್ಲಿ ಕರಗಿದ. ಆ ದಾಂಪತ್ಯದಿಂದ ಮತ್ತೊಂದು ಮಂದಬುದ್ಧಿಯ ಮಗುವಿನ ಜನನವಾದೀತೆಂಬ ಭಯಕ್ಕಲ್ಲವೇ ಹಿಂಜರಿದಿದ್ದು? ಅರೆ ಅದರಿಂದ ಏನಾಗುತ್ತಿತ್ತು, ಹುಟ್ಟಿದ್ದರೆ ಹೀಗೆ ಪುಟ್ಟಿಯಂತೆ ಇರುತ್ತಿತ್ತೇನೋ. ಏನೇ ವೈಕಲ್ಯ ಇದ್ದರೂ ಮಗುವಿನಿಂದ ಸಿಕ್ಕಬಹುದಾಗಿದ್ದ ಪ್ರೀತಿಗೆ ವೈಕಲ್ಯವೆಲ್ಲಿಯದು?

ಅಂದು ಪುಟ್ಟಿಯ ಹುಟ್ಟುಹಬ್ಬ. ಬಾಸ್ ದಂಪತಿ ನಾಗೋಜಿಯಂತಹ ಸಂಪೂರ್ಣ ನಂಬಿಕಸ್ತ ಸಿಕ್ಕಿದ್ದು ತಮ್ಮ ಭಾಗ್ಯವೆಂದು, ಅವನಿಗೆ ಚಿಕ್ಕ ಸನ್ಮಾನವನ್ನೂ ಮಾಡಿದ್ದರು. ಆಗವನು, ಪ್ರೀತಿಯ ಪುಟ್ಟಿಯ ಹಣೆಗೆ ಮುತ್ತಿಟ್ಟು ನೆರೆದಿದ್ದ ಜನಸಮೂಹದಿಂದ ಜಾರಿಕೊಂಡಿದ್ದ.

ಹಾಗೆ ಜಾರಿಕೊಂಡವನು, ಬಸ್ಸು ಹಿಡಿದು ಊರು ತಲುಪಿದವನೇ ನೇರ ‘ಶಿವಾಜಿ ಟೈಲರಿಂಗ್ ಹಾಲ್‌’ನ ಬಾಗಿಲುಗಳನ್ನು ತೆಗೆದು ದೂಳು ಕೊಡವಿ ಬಟ್ಟೆಗಳ ಗಂಟೊಂದನ್ನು ತಡಕಾಡಿದ. ಜರತಾರಿ ವಸ್ತ್ರವೊಂದು ಸಿಕ್ಕೊಡನೆ ಅವನ ಮುಖ ಅರಳಿತು. ಮತ್ತೆ ದರ್ಜಿ ನಾಗೋಜಿಯಾಗಿ ಪುಟ್ಟಿಗೊಂದು ಜರತಾರಿ-ಲಂಗ ಹೊಲೆದು ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡುವ ಅವನ ಆಸೆ ಪೂರೈಸಿದ ಕ್ಷಣವದು. ಜರತಾರಿ ಬಟ್ಟೆಯ ಮೇಲೆ ಕತ್ತರಿ ಆಡಿಸುತ್ತಾ ಬಂದಾಗ ಅವನಿಗೆ ಅಪ್ಪನ ಬಿಳಿ ಬಾಟಲಿ ನೆನಪಾಯಿತು. ತಕ್ಷಣ, ಬಿಳಿ ಬಾಟಲಿ ಹುಡುಕಿ ಮುಚ್ಚಳ ತೆರೆದು, ಇದ್ದಷ್ಟು ದ್ರವವನ್ನು ಸಿಂಪಡಿಸಿ ಲಂಗ ಹೊಲೆದೇ ಬಿಟ್ಟ.

ಪುಟ್ಟಿ ಆ ಜರತಾರಿ- ಲಂಗ ತೊಟ್ಟದ್ದನ್ನು ನೋಡುವ ಕಾತುರದಲ್ಲಿ ಮುಂಜಾನೆಯ ಮೊದಲ ಬಸ್ಸು ಹಿಡಿದು ಮತ್ತೆ ಬಾಸ್‌ ಮನೆ ಮುಟ್ಟಿದ್ದ. ಲಂಗವನ್ನು ಸುತ್ತಿಟ್ಟುಕೊಂಡಿದ್ದ ಪೊಟ್ಟಣ ಹಿಡಿದು ಪುಟ್ಟಿಯ ಕೋಣೆಯೊಳಗೆ ಹೋದವನಿಗೆ ಅವಳು ಬಳಸುವ ಕುರ್ಚಿ ಮತ್ತವಳ ತಳ್ಳುಗಾಡಿ ಎರಡೂ ಖಾಲಿಯಾಗಿದ್ದು ಕಂಡಿತು. ಮನೆಯನ್ನಾವರಿಸಿದ್ದ ಮೌನವನ್ನು ಕದಡುವಂತೆ ನಾಗೋಜಿ, ‘ಸಾರ್ ನಾಗೋಜಿ ಪುಟ್ಟಿ ಎಲ್ಲಿ ಕಾಣ್ತಿಲ್ಲ’ ಎಂದಾಗ, ಮೇಲಿನ ಕೋಣೆಯಿಂದ ‘ಬಂದೆ ಇರಪ್ಪ’ ಎನ್ನುತ್ತಾ, ಬಾಸ್‌ ದಂಪತಿ ಮೆಟ್ಟಿಲಿಳಿಯುವುದು ಕಂಡಿತು.

‘ನಾಗೋಜಿ ಹುಟ್ಟುಹಬ್ಬ ಮುಗೀತಿದ್ದಂತೆ ಯಾಕೋ ತುಂಬಾ ಹೊಟ್ಟೆ ನೋವು ಅಂದ್ಲು. ನಾವು ತುಂಬ ಹೆದರಿದ್ವಿ. ಆಮೇಲೆ ತಿಳೀತು ಅವಳು ದೊಡ್ಡೋಳಾಗಿದ್ದಾಳೆ ಇನ್ಮೇಲೆ ಪುಟ್ಟಿ ಅಲ್ಲ’ ಹೀಗೆನ್ನುತ್ತ ಬಾಸ್, ಭುಜದ ಮೇಲೆ ಕೈ ಇಟ್ಟು ಅವನನ್ನು ಮೆಲ್ಲಗೆ ಸಾಗಹಾಕಲು ಯತ್ನಿಸುವಂತೆ: ‘ಇಷ್ಟು ದಿನ ನೀನವಳಿಗೆ ಒಳ್ಳೆ ರಕ್ಷಣೆ ಕೊಟ್ಟೆ, ನೀನು ತುಂಬಾ ನಂಬಿಕಸ್ತ ಕಣೋ ಎಟಿಎಂ ಕೆಲಸ ಮಾಡೋವಾಗ ಅಷ್ಟೊಂದು ದುಡ್ಡು ನಿನ್ಕಣ್ಮುಂದೆ ಇದ್ದರೂ ನೀನು ಒಮ್ಮೆ ಕೂಡ ಹಣ ಕದೀಲಿಲ್ಲ’ ಎಂದಿದ್ದರು. ಅದಕ್ಕೆ ದನಿಗೂಡಿಸುವಂತೆ ಬಾಸ್‌ ಹೆಂಡತಿಯ ಮಾತುಗಳೂ ತೂರಿ ಬಂದಿದ್ದವು. ‘ಆದ್ರೆ ನಾಗೋಜಿ ಎಟಿಎಂ ವಿಷಯ ಬೇರೆ. ನಿನ್ನ– ಪುಟ್ಟಿಯ ವಿಷಯ ಬೇರೆ. ಮೊದಲೇ ಅವಳು ಹಾಗೆ, ಈಗ ದೊಡ್ಡೋಳಾಗಿರೋವಾಗ ರಿಸ್ಕ್ ತೊಗೊಳೋದು ಬೇಡ ಅಂತ...’ ಆಕೆಯ ಮಾತುಗಳಿಗೆ ಅಧೀರನಾಗಿ, ಕ್ಷೀಣ ದನಿಯಲ್ಲಿ ನಾಗೋಜಿ, ‘ಹಾಗಾದ್ರೆ ಇವತ್ತಿಂದ ನಾನು ಬೇಡವಾ’ ಎಂದು ಕೇಳಿದ್ದಕ್ಕೆ ದಂಪತಿ ‘ಬೇಡ ಅಂತ ಅಲ್ಲ ಬೇಕಾದಾಗ ಹೇಳಿಕಳಿಸ್ತೀವಿ. ಆಗಷ್ಟೇ ಬಾ’ ಎಂದು ಬೆನ್ನುಹಾಕಿ ಮೆಟ್ಟಿಲೇರತೊಡಗಿದ್ದರು. ನಾಗೋಜಿ ಇಳಿದು ಹೋಗುತ್ತಿದ್ದ.

ಪುಟ್ಟಿಯನ್ನು ಕಾಣದೆ ಸೊರಗಿದ ನಾಗೋಜಿ, ಭಾರವಾದ ಹೆಜ್ಜೆಗಳನ್ನಿಡುತ್ತಾ ಪುಟ್ಟಿಯ ಕೋಣೆಗೆ ಹೋಗಿ, ಜರತಾರಿ ಲಂಗದ ಪೊಟ್ಟಣವನ್ನಿಟ್ಟು ಮನೆಯಿಂದ ಹೊರಟು ಮೆಲ್ಲನೆ ಓಡಲು ಪ್ರಾರಂಭಿಸಿದ. ಒಳಗಿದ್ದ ದುಗುಡದ ವೇಗೋತ್ಕರ್ಷಕ್ಕೆ ಸಿಕ್ಕವನಂತೆ ಇನ್ನೂ ವೇಗವಾಗಿ ಓಡಿ, ಓಡಿ ಬಸ್ ಸ್ಟ್ಯಾಂಡ್ ತಲುಪಿದ.

ಊರಿನ ಬಸ್ಸು ಅವನಿಗಂತಲೇ ಕಾಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.