ADVERTISEMENT

ಕುಜ-ಕೇತು ಯುತಿ: ಸಿಂಹ ರಾಶಿಯ ಅಗ್ನಿ ತತ್ವ ಅಪಾಯಗಳಿಗೆ ಹೇತು

ವಿಠ್ಠಲ್ ಭಟ್
Published 13 ಜೂನ್ 2025, 13:39 IST
Last Updated 13 ಜೂನ್ 2025, 13:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗೋಚಾರ ರೀತ್ಯಾ ಕುಜ ಹಾಗೂ ಕೇತುಗ್ರಹಗಳು ಸಿಂಹರಾಶಿಯಲ್ಲಿ ಒಟ್ಟಿಗೆ ಇದ್ದಾರೆ. ಈ ಯುತಿ ಜುಲೈ 28 ತನಕ ಇರುತ್ತದೆ. ಆದುದರಿಂದ ಈ ಎರಡು ವಿಶೇಷ ಗ್ರಹಗಳ ಮಿಲನ ಸೃಷ್ಟಿಸಬಹುದಾದ ಅಪಾಯಗಳ ಬಗ್ಗೆ ಸ್ವಲ್ಪ ಚಿಂತಿಸೋಣ.

ಪ್ರಸ್ತುತ ಜಗತ್ತು ಯುದ್ಧ, ಅಸ್ಥಿರತೆ ಮತ್ತು ಆಕಸ್ಮಿಕ ದುರ್ಘಟನೆಗಳ ಭೀತಿಯಿಂದ ಕಂಪಿಸುತ್ತಿದೆ. ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್ ಸಂಘರ್ಷ, ಗುಜರಾತ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತ – ಇವೆಲ್ಲವೂ ಮಾನವೀಯ ದುಃಖದ ಕರಾಳ ಛಾಯೆಗಳು. ಜ್ಯೋತಿಷಶಾಸ್ತ್ರದ ದೃಷ್ಟಿಯಲ್ಲಿ ಈ ಘಟನೆಗಳ ಹಿನ್ನೆಲೆಯಲ್ಲಿ ಸಿಂಹರಾಶಿಯಲ್ಲಿ ಸಂಭವಿಸಿರುವ ಕುಜ (ಮಂಗಳ) ಮತ್ತು ಕೇತು ಗ್ರಹಗಳ ಅತ್ಯುಗ್ರ ಯುತಿ (ಸಂಯೋಗ) ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದರ ಪ್ರಭಾವವನ್ನು ಪ್ರಾಚೀನ ಜ್ಯೋತಿಷಗ್ರಂಥಗಳ ಆಧಾರದ ಮೇಲೆ ಪರಿಶೀಲಿಸೋಣ.

ADVERTISEMENT

ಕುಜ-ಕೇತು; ಅಗ್ನಿ ಮತ್ತು ವಿಕರಾಳ ಶಕ್ತಿಗಳ ಮಿಲನ:
ಕುಜನು (ಮಂಗಳ) ಅಗ್ನಿ, ಶೌರ್ಯ, ಆಕ್ರಮಣಶೀಲತೆ ಮತ್ತು ಶಸ್ತ್ರಾಸ್ತ್ರಗಳ ಕರ್ತೃ. ‘ಬೃಹತ್ ಸಂಹಿತೆ’ಯ 28ನೇ ಅಧ್ಯಾಯದಲ್ಲಿ ವರಾಹಮಿಹಿರರು ಹೀಗೆ ಹೇಳುತ್ತಾರೆ:

ಅಗ್ನಿಸ್ವರೂಪೋ ಮಹಾತೇಜಾ: ಕ್ಷಿಪ್ರಕಾರೀ ಕ್ರಿಯಾಪತಿಃ ।
ರಕ್ತಮಾಲ್ಯಾಂಬರಧರೋ ಭೂಮಿಪುತ್ರೋ ಭಯಂಕರಃ ।।

(ಅರ್ಥ: ಮಂಗಳನು ಅಗ್ನಿಸ್ವರೂಪಿ, ಮಹಾತೇಜಸ್ವಿ, ತ್ವರಿತ ಕ್ರಿಯೆಯುಳ್ಳವ, ಯುದ್ಧದ ಅಧಿಪತಿ, ರಕ್ತವರ್ಣದ ಮಾಲೆ-ವಸ್ತ್ರ ಧರಿಸಿದವ, ಭೂಮಿಯ ಪುತ್ರ ಮತ್ತು ಭಯಂಕರ.)

ಕೇತುವು ಆಕಸ್ಮಿಕ, ವಿಘ್ನ, ರಹಸ್ಯ ಶತ್ರುತ್ವ ಮತ್ತು ಅಪಮಾರ್ಗದ ಸೂಚಕ. 'ಫಲದೀಪಿಕಾ" ಗ್ರಂಥದಲ್ಲಿ ಮಂತ್ರೇಶ್ವರರು ಎಚ್ಚರಿಸುತ್ತಾರೆ:

ಕೇತುಃ ಕರ್ಕಶಕೃತ್ ಪಾಪೋ ವಿಕೃತಾಕಾರೋ ಭಯಪ್ರದಃ ।
ವ್ಯಾಧಿವ್ಯಸನದಾತಾ ಚ ನಾನಾ ದುಃಖಸಮನ್ವಿತಃ ।।

ಅರ್ಥ: ಕೇತುವು ಕಠೋರಕರ್ಮಿ, ಪಾಪಕಾರಿ, ವಿಕೃತಸ್ವರೂಪಿ, ಭಯದಾಯಕ, ರೋಗ-ವ್ಯಸನಗಳನ್ನು ನೀಡುವವ (ಪ್ರಸಕ್ತ ಗಮನಿಸಿದಲ್ಲಿ ಕೋವಿಡ್‌ ಹೆಚ್ಚುತ್ತಿದೆ) ಮತ್ತು ನಾನಾ ದುಃಖಗಳಿಂದ ಕೂಡಿದವ.

ಸಿಂಹರಾಶಿಯಲ್ಲಿ ಯುತಿ; ರಾಜಕೀಯ, ಸೇನಾ ಮತ್ತು ಅಗ್ನಿ ಅಪಾಯ:
ಸಿಂಹರಾಶಿಯು ರಾಜ್ಯಾಡಳಿತ, ನಾಯಕತ್ವ, ಸೇನಾಶಕ್ತಿ ಮತ್ತು ಅಗ್ನಿಯೊಂದಿಗೆ ಸಂಬಂಧಿಸಿದೆ. ಇಲ್ಲಿ ಕುಜ-ಕೇತುಸಂಯೋಗವು (ಯುತಿ) ಈ ಕ್ಷೇತ್ರಗಳಲ್ಲಿ ತೀವ್ರ ಅಸಮತೋಲನವನ್ನು ಸೂಚಿಸುತ್ತದೆ.

ಯುದ್ಧೋನ್ಮುಖ ವಾತಾವರಣ:
ಕುಜನ ಸೈನಿಕ ಪ್ರವೃತ್ತಿ ಮತ್ತು ಕೇತುವಿನ ಅನಿಶ್ಚಿತತೆ ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಹೆಚ್ಚಿಸುತ್ತವೆ. ‘ಬೃಹತ್ ಸಂಹಿತೆ’ ಹೇಳುತ್ತದೆ:

ಮಂಗಳೇ ಭೂಮಿಪುತ್ರೇ ಚ ಸಂಯುಕ್ತೇ ಚಾತ್ಯಗ್ನಿಕೇತುನಾ ।
ಜಾಯತೇ ಜಾಗತೀ ದಾವೋ ರಾಷ್ಟ್ರಭಂಗೋ ದ್ವಿಜಕ್ಷಯಃ ।।


ಅರ್ಥ: ಮಂಗಳ ಮತ್ತು ಕೇತು ಸೇರಿದಾಗ, ಪ್ರಪಂಚವ್ಯಾಪಿ ಅಗ್ನಿಕಾಂಡಗಳು, ರಾಷ್ಟ್ರಭಂಗ, ವಿದ್ವಾಂಸರ ನಾಶದಂಥವು ಸಂಭವಿಸಬಹುದು.

ಕೇತುವಿಗೂ ವಿಮಾನ (ಆಗಸ) ಯಾನಕ್ಕೂ ಸಂಬಂಧವಿದೆ. ವಿಮಾನ ಅಪಘಾತಗಳು ಸಂಭವಿಸಬಹುದು. ಗುಜರಾತ್‌ನಲ್ಲಿ ಮೊನ್ನೆಯಷ್ಟೆ ಆಗಿದೆ. ಸಿಂಹರಾಶಿಯ ಅಗ್ನಿತತ್ವ ಈ ಅಪಾಯವನ್ನು ಹೆಚ್ಚಿಸುತ್ತದೆ.

ನಾಯಕರ ಆರೋಗ್ಯ-ಸವಾಲುಗಳು:

ಈ ಯುತಿಯು ರಾಷ್ಟ್ರನಾಯಕರಿಗೆ ರಾಜಕೀಯ ಅಥವಾ ದೈಹಿಕ ಸಂಕಷ್ಟಗಳನ್ನು ತರಬಹುದು. ದೇಶದ ನಾಯಕರು ಯುದ್ಧೋತ್ಸಾಹವನ್ನು ತೋರಿಸಿ ಚಿತ್ರ–ವಿಚಿತ್ರ ತೀರ್ಮಾನಗಳನ್ನು ತೆಗೆದುಕೊಳ್ಳುವರು.

ಜಾಗತಿಕ ಪರಿಣಾಮ:
ಕುಜ-ಕೇತುಗಳ ಗ್ರಹಯುತಿಯು ಅಸಾಮಾನ್ಯವಲ್ಲ, ಪ್ರತಿ 12–18 ತಿಂಗಳಿಗೊಮ್ಮೆ ಸಂಭವಿಸುತ್ತದೆ. ಆದರೆ ಸಿಂಹದಲ್ಲಿ ಸಂಭವಿಸಿದಾಗ ಅದರ ತೀವ್ರತೆ ಹೆಚ್ಚು.

ಕುಜನ ಆಕ್ರಮಣಶೀಲತೆ ಮತ್ತು ಕೇತುವಿನ ಅನಿಶ್ಚಿತತೆಯು ಸಾರಿಗೆ, ಇಂಧನ ವ್ಯವಸ್ಥೆಯಲ್ಲಿ ವಿಘ್ನಗಳನ್ನು ತರುತ್ತದೆ. ಅಗ್ನಿಕಾಂಡಗಳು ಮತ್ತು ಭೂಕಂಪಗಳ ಅಪಾಯ ಹೆಚ್ಚು. ಜನಸಾಮಾನ್ಯರಲ್ಲಿ ಕೋಪ, ಆತಂಕಗಳು ಹೆಚ್ಚುವುದು.

ಪರಿಹಾರೋಪಾಯಗಳು:
ಈ ಯುತಿಯು ಈ ವರ್ಷದ ಜುಲೈ 28ರವರೆಗೆ ಸಿಂಹದಲ್ಲಿಯೇ ಮುಂದುವರಿಯುತ್ತದೆ. ಆದರೆ, ಜ್ಯೋತಿಷ್ಯವು ಫಲಿತಾಂಶವನ್ನು ನಿಯಂತ್ರಿಸುವ ಸಾಧನವಲ್ಲ; ಮಾನವಪ್ರಯತ್ನದ ಪ್ರಾಮುಖ್ಯವನ್ನು ಶಾಸ್ತ್ರಗಳು ಒತ್ತಿಹೇಳುತ್ತವೆ.

ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳು:

ವಿಮಾನಗಳ ಸುರಕ್ಷತೆಯ ಬಗ್ಗೆ ಗಮನ ಕೊಡಬೇಕು; ಸಂಘರ್ಷಗಳ ನಿಗ್ರಹಕ್ಕೆ ಕೂಟೋಪಾಯಗಳಿಗೆ ಪ್ರಾಧಾನ್ಯ ನೀಡಬೇಕು.

ವ್ಯಕ್ತಿಗತ ಮಟ್ಟದಲ್ಲಿ

ಕುಜ ಹಾಗೂ ಕೇತು ಶಾಂತಿ ಪೂಜೆ, ಮಂಗಳ-ಕೇತುವಿಗೆ ಸಂಬಂಧಿಸಿದ ‘ಓಂ ಕೇತವೇ ನಮಃ’ ಮತ್ತು ‘ಓಂ ಭೂಮಿಪುತ್ರಾಯ ಅಂಗಾರಕಾಯ ನಮಃ’ ಮಂತ್ರಗಳ ಜಪವನ್ನು ಮಾಡಬಹುದು. ನಮ್ಮಲ್ಲಿ ನೆಲೆಸಿರುವ ಮಹಾಗಣಪತಿ ಕ್ಷೇತ್ರಗಳಲ್ಲಿ ಹಾಗೂ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಶಾಂತಿ–ಹೋಮಗಳನ್ನು ಲೋಕರಕ್ಷಣೆಗಾಗಿ ಮಾಡಬೇಕು.

ಸಾರ್ವಜನಿಕ ಜಾಗೃತಿ:

ಅಗ್ನಿ-ವಿದ್ಯುತ್ ವಿಚಾರಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು, ಪ್ರವಾಸಗಳನ್ನು ಮುಂದೂಡುವುದು.

ವಿವೇಕದ ದೀಪದಿಂದ ಕತ್ತಲೆಯನ್ನು ದಾಟೋಣ. ಕುಜ-ಕೇತು ಯುತಿಯು ಸವಾಲುಗಳನ್ನು ತಂದಿದೆ; ಆದರೆ ಇದೇನೂ ಶಾಶ್ವತವಲ್ಲ. ವಿಷ್ಣುಧರ್ಮೋತ್ತರ ಪುರಾಣವು ನೆನಪಿಸುತ್ತದೆ: ‘ಗ್ರಹಾಃ ಪ್ರೇರಕಾಃ ಕರ್ಮಣಾಂ, ನಿಯತಾಃ ಫಲದಾತಾರಃ’. ಎಂದರೆ ಗ್ರಹಗಳು ಕರ್ಮಗಳ ಪ್ರೇರಕರು, ಫಲದಾಯಕರು ಅಲ್ಲ; ಮಾನವ ಪ್ರಯತ್ನ, ವಿವೇಕ ಮತ್ತು ಪರಸ್ಪರ ಸಹಕಾರದಿಂದ ಈ ಕಾಲವನ್ನು ಎದುರಿಸಬಹುದು. ಪ್ರಪಂಚ ನಾಯಕರು ಶಾಂತಿಮಾರ್ಗವನ್ನು ಆಯ್ದುಕೊಳ್ಳುವುದು ಮತ್ತು ನಾಗರಿಕರು ಎಚ್ಚರಿಕೆಯನ್ನು ವಹಿಸುವುದು – ಇದು ಜ್ಯೋತಿಷದ ನಿಜವಾದ ಸಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.