
ಸಾಂದರ್ಭಿಕ ಚಿತ್ರ
ಮನುಷ್ಯನ ಮನೋ ವಲಯ ಬಹಳಷ್ಟು ಸಂಕೀರ್ಣವಾಗಿರುತ್ತದೆ. ಬೇಕಿರದಷ್ಟು ಧೈರ್ಯ, ಬೇಕಿರದಷ್ಟು ಅಧೈರ್ಯ ಆವರಿಸಬಹುದು. ಆತ್ಮವಿಶ್ವಾಸವೂ ಹೀಗೆಯೇ ಬೇಕಿರದಷ್ಟು ದಟ್ಟ ಆತ್ಮ ವಿಶ್ವಾಸವೂ ನಿಶ್ಚಿತವಾದ ಅಪಾಯ ತರಬಹುದು. ಹಾಗೆ ಆತ್ಮ ವಿಶ್ವಾಸದ ಕೊರತೆಯು ಬಹಳ ವಿಧ್ವಂಸಕ. ಹಾಗಾದರೆ ಸಮಾಧಾನಕರವಾದ ಸಮತೋಲನ ಹೇಗೆ ಹಾಗೂ ಎಲ್ಲಿಂದ? ಹಾಗೊಂದು ರೀತಿಯ ಸಮತೋಲನದಲ್ಲಿ ಹೊರಟಿದ್ದ ಬದುಕು ದಿಢೀರನೆ ಕುಸಿಯಲು ಕಾರಣವೇನು? ನಿನ್ನೆ ಉತ್ಸಾಹದಿಂದ ಒಂದು ಕೆಲಸ ಮಾಡೋಣ ಎಂದು ಮನಸ್ಸು ಗಟ್ಟಿಯಾಗಿ ನಿರ್ಧಾರ ಮಾಡಿದ್ದರೂ ಇಂದು ಯಾವುದೋ ನೆಪ ಮುಂದಿರಿಸಿಕೊಂಡು ಎಲ್ಲವನ್ನೂ ಮುಂದೂಡುತ್ತ ಹೋಗುವುದಾಗುತ್ತದೆ.
ಈ ರೀತಿಯ ಸಹಜವಲ್ಲದ, ನಿಶ್ಚಿತವಾಗಿ ಅಸಹಜ ಎಂದು ಮನಸ್ಸು ಲೊಚಗುಡುತ್ತಿರುತ್ತದೆ. ಹಾಗಾದರೆ ಸಹಜವಲ್ಲ, ಅಸಹಜ ಎಂಬ ಅನಿಸಿಕೆ ಸರಿಯೆ? ಹೌದು ಇದು ವಿಚಿತ್ರ. ಉತ್ತರ ತಿಳಿಯದೇ ಹೋಗುವ ಒದ್ದಾಟ ಎದುರಾಗುತ್ತದೆ. ಮೈಸೂರಿನ ಬಳಿಯ ಒಂದು ಊರು. ಗೋಪಾಲಕೃಷ್ಣ ಅಂತ ಒಬ್ಬರು ಚುರುಕಾದ ವ್ಯಕ್ತಿ. ಯಾವುದೋ ಕೆಲಸದ ನಿಮಿತ್ತ ಮೈಸೂರಿಗೆ ಹೋಗಿರುತ್ತಾರೆ.
ಒಂದು ಸರಕಾರಿ ಆಫೀಸಿನಲ್ಲಿ ಯಾವದೋ ಒಂದು ದಾಖಲೆ ಪತ್ರದ ಪ್ರತಿ ಪಡೆಯಲು ಹೋಗಿರುತ್ತಾರೆ. ‘ಒಂದು ಗಂಟೆ ಬಿಟ್ಟು ಬನ್ನಿ ನಿಮಗೆ ದಾಖಲೆಯ ಪ್ರತಿಯೊಂದನ್ನು ಕೊಡುತ್ತೇವೆ’ ಎಂದು ಸಂಬಂಧಿಸಿದ ಆಫೀಸಿನ ಒಬ್ಬ ವ್ಯಕ್ತಿ ಗೋಪಾಲಕೃಷ್ಣ ಅವರಿಗೆ ತಿಳಿಸಿಯೂ ಇದ್ದ. ಆದರೆ ಹಾಗೆ ಆಫೀಸಿನ ವ್ಯಕ್ತಿ ಒಂದು ಗಂಟೆ ಬಿಟ್ಟು ಬನ್ನಿ ದಾಖಲೆಯ ಪ್ರತಿಯನ್ನು ನಿಮಗೆ ಕೊಡುವೆ ಎಂಬುದನ್ನು ಗೋಪಾಲಕೃಷ್ಣ ಅವರು ಸಮಾಧಾನ ಚಿತ್ತದಲ್ಲಿ ತಿಳಿದು ಕೇಳಿಸಿಕೊಂಡು ಆ ಆಫೀಸಿನಿಂದ ಹೊರ ಬಿದ್ದು ಹೋದವರು ನಂತರ ಎಲ್ಲಿ ಹೋದರು ಎಂಬುದೇ ಯಾರಿಗೂ ತಿಳಿಯದೇ ಹೋಗಿತ್ತು. ನಂಬಲಾಗದ ಹಾಗೆ ಅವರು ಕಣ್ಮರೆಯಾಗಿದ್ದರು. 7 ವರ್ಷಗಳ ನಂತರ ತಾವೇ ಹಾಗೆ ಏನೂಂದೂ ನಡೆದೇ ಇಲ್ಲ ಎಂಬಂತೆ ಸಂಪೂರ್ಣ ಸುರಕ್ಷಿತವಾಗಿ ಮನೆಗೆ ಅಂದರೆ ಊರಿಗೆ ಬಂದಿದ್ದರು. ಆ ಎಲ್ಲಾ ಏಳು ವರ್ಷಗಳಲ್ಲಿ ಅವರಿಗೆ ತನ್ನ ಜೀವನದಲ್ಲಿ ಏನೆಲ್ಲ ನಡೆದಿತ್ತು ಎಂಬುದರ ಅರಿವೇ ಇರಲಿಲ್ಲ.
ತಾನು ಕಾಣೆ ಆಗಿದ್ದೆ ಎಂಬುದನ್ನು ಅರಿತರೇ ವಿನಾ ಕಣ್ಮರೆಯ ಸಂದರ್ಭದ ಯಾವುದೇ ನೆನಪೂ ಅವರಿಗೆ ಇರಲಿಲ್ಲ. ಹೌದು, ಮೈಸೂರಿನ ಆಫೀಸಿಗೆ ಹೋಗಿದ್ದೆ ಎಂಬುದು ಅವರಿಗೆ ನೆನಪಿತ್ತು. ನಂತರದ್ದು ಚಿತ್ತದ ಅರಿವಿಗೆ ಧಕ್ಕಿರದಿದ್ದ ಪೂರ್ತಿ 7 ವರ್ಷಗಳ ಅಜ್ಞಾತವಾಸ. ಸಂಪೂರ್ಣವಾದ ಏಳು ವರ್ಷಗಳ ಆ ಅವಧಿ ಅವರ ಜಾತಕ ಕುಂಡಲಿಯಲ್ಲಿನ ನೀಚ ಸ್ಥಿತಿಯ ಕುಜ ಮಹಾ ದಶಾದ ಅವಧಿಯಾಗಿತ್ತು.
ಅದಕ್ಕೂ ಹಿಂದಿನ 10 ವರ್ಷಗಳ ಚಂದ್ರ ಮಹಾ ದಶಾದಲ್ಲಿ ವ್ಯಾವಹಾರಿಕ ವಿಷಯಗಳಲ್ಲಿ ಚತುರರು ಯಾರಿಗೂ ತೊಂದರೆಯಾಗದಂತೆ ಬದುಕಿದವರು. ಹಾಗಾದರೆ ಗೋಪಾಲಕೃಷ್ಣ ಅವರನ್ನು ಯಾರು ಕಾಡಿದರು? ಯಾವ ಶೂನ್ಯದ ಸರಪಳಿಯಲ್ಲಿ ಬಂಧಿಯಾಗಿ ನಿಷ್ಕ್ರಿಯವಾದ ಜೀವನ ನಡೆಸಿ ಯಾವುದೋ ಬಗೆಯಲ್ಲಿ ಬಿಡುಗಡೆಗೊಂಡು ತಿರುಗಿ ಕ್ರಿಯಾಶೀಲ ಬದುಕಿಗೆ ಬಂದು ತಲುಪಿದರು? ಇವತ್ತಿಗೂ ಇದು ವಿಸ್ಮಯವೇ. ವಾಸ್ತವವಾಗಿ ಕುಜ ದೋಷದ ಜಾತಕ ಅವರದು. ಎಲ್ಲರಿಗೂ ತೊಂದರೆ ಕೊಡುವ ರಾಹು ಗ್ರಹ ಬಿಗಿಯಾಗಿ ಬಿಗಿಯಲ್ಪಟ್ಟಿದ್ದ ಜಾಗೆಯಿಂದ ಇವರನ್ನು ಬಿಡುಗಡೆಗೊಳಿಸಿ ಅಮೃತವೇ ಆಗಿದ್ದಾನೆ. ಈಗ ಹತ್ತು ವರ್ಷಗಳಿಂದಲೂ ಅವರು ಆರಾಮವಾಗಿಯೇ ಇದ್ದಾರೆ.
ಇದು ಇವರ ಕತೆಯಾದರೆ, ರಾಹು ಮಹಾ ದಶಾ ಕಾಲದಲ್ಲಿ ಸಂಪೂರ್ಣವಾಗಿ ಮನದ ನಿಯಂತ್ರಣವನ್ನೇ ಕಳೆದುಕೊಂಡಿದ್ದ ಮಹದೇವಪ್ಪನವರ ಕಥೆ ನೋಡೋಣ. ಕಾರವಾರದ ಹತ್ತಿರದ ಊರೊಂದರಲ್ಲಿ ಪೂರ್ತಿ ಹುಚ್ಚನಾಗಿಯೇ 18 ವರ್ಷಗಳ ಕಾಲ ಬದುಕಿದ್ದ ವ್ಯಕ್ತಿ ಈತ. ಇಂತಹ ಮಹಾದೇವಪ್ಪನಿಗೆ ಏನೋ ಒಂದು ಪವಾಡ ಸದೃಶ ಸ್ವರೂಪದಲ್ಲಿ ಹುಚ್ಚು ಇದ್ದಿದ್ದೇ ಸುಳ್ಳು ಎಂಬಂತೆ ಮಹಾ ಪರಿವರ್ತನೆ ಬೌದ್ದಿಕ ಪರಿಧಿಗೆ ಒದಗಿ ಆ ನಂತರದಲ್ಲಿ ದೊಡ್ಡ ವಾಣಿಜ್ಯ ವ್ಯವಹಾರಗಳಲ್ಲಿ ಕುಶಲಿಗನಾಗಿ ಸಾಹುಕಾರ ಮಹಾದೇವಪ್ಪನವರು ಎಂದು ಜನ ಗುರುತಿಸುವ ಯಶಸ್ಸು ಒದಗಿ ಬರುತ್ತದೆ. ರಾಹು ಮಹಾ ದಶಾ ಕಾಲದ ಕೆಟ್ಟ 18 ವರ್ಷಗಳು ಮುಗಿದು ರಾಹು ಬೃಹಸ್ಪತಿ ಸಂಧಿ ಕಾಲದ ಘಟ್ಟದಲ್ಲಿ ಸಹಜ ಹಾಗೂ ಯಶಸ್ಸಿನ ಬದುಕಿಗೆ ಮಹಾದೇವಪ್ಪ ಬಂದು ತಲುಪುತ್ತಾರೆ.
ಸಾಮಾನ್ಯವಾಗಿ ರಾಹು, ಕೇತು, ಶನೈಶ್ಚರ, ಮಂಗಳ ಹಾಗೂ ಸೂರ್ಯ ಗ್ರಹಗಳನ್ನು ಪಾಪ ಗ್ರಹಗಳೆಂದು ಗುರುತಿಸಲಾಗಿದೆ. ಈ ಪಾಪ ಗ್ರಹಗಳು ಸಹಿಸಲು ಅಸಾಧ್ಯವಾದ ಕೆಟ್ಟ ಸ್ಥಿತಿಯನ್ನು ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ನಿರ್ಮಿಸಲು ಮುಂದಾಗಿ ಬಿಡುತ್ತವೆ. ಈ ಮೇಲೆ ವಿವರಿಸಿದ ಮೈಸೂರು ಸಮೀಪದ ಗೋಪಾಲಕೃಷ್ಣ ಅವರ ವಿಚಾರವಾಗಿರಲಿ ಅಥವಾ ಕಾರವಾರ ಸಮೀಪದ ಮಹಾದೇವಪ್ಪನವರ ವಿಚಾರವೇ ಇರಲಿ. ಇದು ಪಾಪ ಗ್ರಹಗಳ ಕರಾಮತ್ತಿನಿಂದ ಸಂಭವಿಸಿದ ಅತಿರೇಕಗಳಾಗಿವೆ. ಇಷ್ಟಾದರೂ ಪಾಪ ಗ್ರಹಗಳು ತಮ್ಮ ಆಡಳಿತದ ಸಂದರ್ಭ ಮುಗಿದು ಒಳ್ಳೆಯ ಕಾಲ ಘಟ್ಟ ಒದಗುವಾಗ ಒಬ್ಬ ವ್ಯಕ್ತಿಯ ಜಾತಕದಲ್ಲಿ ಇದೆಯಾದರೆ ಕಂದಕದಿಂದ ಮೇಲೆತ್ತಿ ತರುವ ತಾಯ್ತನವನ್ನೂ ಈ ದುಷ್ಟ ಗ್ರಹಗಳು ಪ್ರದರ್ಶಿಸುತ್ತವೆ.
ಆದರೆ ಜಾತಕ ಕುಂಡಲಿಯೊಳಗಿನ ಶಕ್ತಿಯು ಇಲ್ಲಿವರೆಗಿನ ಒಳಿತಿಗಾಗಿನ ಹೆದ್ದಾರಿಯನ್ನು ತಾನು ಹೊಂದಿರಬೇಕಾದ ಅದೃಷ್ಟವನ್ನು ಪಡೆದಿರಬೇಕಾಗುತ್ತದೆ. ಒಟ್ಟಿನಲ್ಲಿ ಪಾಪ ಗ್ರಹಗಳ ಮೊನಚು ಸೂಜಿ ಚುಚ್ಚುವ ಒಂದು ಕೊಂಡಿ ವರ್ತಮಾನದಲ್ಲಿ ಶುಭ ಗ್ರಹಗಳ ಸ್ವಾದಿಷ್ಟ ಸ್ಥಿತಿಯನ್ನು ತುಕ್ಕು ಹಿಡಿಸಿತು ಅಂತಾದರೆ, ಶುಭ ಗ್ರಹಗಳು ಹೇಗೆ ಒಗ್ಗೂಡಿ, ಶಕ್ತಿ ತುಂಬಿಕೊಂಡು ಎಷ್ಟೇ ಶುಭದಾಯಕವಾಗಿದ್ದರೂ ಶುಭವನ್ನು ಕೊಡುವುದಕ್ಕೆ ಈ ಪಾಪ ಗ್ರಹಗಳ ಕಾರಣದಿಂದಾಗಿ ದಿಕ್ಕೆಟ್ಟು ನಿಷ್ಕ್ರಿಯತೆ ಪಡೆಯುತ್ತವೆ.
ಕೆಟ್ಟ ಕನಸುಗಳ ಮೂಲಕ ನಿದ್ದೆಯನ್ನು ಕೂಡಾ ಸರಿಯಾಗಿ ಮಾಡಲಾಗದ ಅಸಹಜ ಸ್ಥಿತಿಯನ್ನು ತಂದುಬಿಡುತ್ತವೆ. ಜೀವನದ ಸಂದರ್ಭದಲ್ಲಿ ಕೇವಲ ಕೀಳರಿಮೆಯನ್ನೇ ಬಿತ್ತಲು ಮುಂದಾದ ವಿಕೃತ ಶಿಕ್ಷಕರು ದೊರಕಿ ತೊಂದರೆ ಎದುರಿಸುವ ವರ್ತಮಾನವನ್ನು ನಿರ್ಮಿಸಬಹುದು. ಎಷ್ಟೇ ಉತ್ತಮವಾಗಿ ಏಕಾಗ್ರತೆಯಿಂದ ಪ್ರಯತ್ನಿಸಿದರೂ ಯಾವುದೋ ಸಕಾರಾತ್ಮಕ ರೀತಿಯಲ್ಲಿ ಹೆಜ್ಜೆ ಇರಿಸಿ ನಿಶ್ಚಿತ ಒಳಿತಿನ ಬದುಕನ್ನು ರೂಪಿಸಿಕೊಳ್ಳುತ್ತೇನೆ ಎಂದರೂ ಮನೆಯ ಒಳಗೂ ಹೊರಗೂ ಶಾಂತಿಯಿಂದ ಬದುಕಲು ಸಾಧ್ಯವಾಗದೇ ಹೋಗಬಹುದು. ಜತೆಗೆ ಸಂಬಳ ಒದಗುತ್ತದೆ ಎಂಬುದಕ್ಕೆ ಅನಿವಾರ್ಯವಾಗಿ ದುಡಿಯಲೇಬೇಕಾದ ಆಫೀಸಿನ ಸ್ಥಳದಲ್ಲೂ ಅಡೆತಡೆಗಳೇ ತುಂಬಿದ ದುರ್ಭರ ದುಮ್ಮಾನ ಆವರಿಸಿಕೊಂಡಿರಬಹುದು.
ಹೀಗಾಗಿ ಅಸಹಾಯಕತೆಯನ್ನು ಹೇಗೆ ಮಾಡಿದರೂ ತಪ್ಪಿಸಿಕೊಳ್ಳಲಾಗದ ವಿಚಾರ ಅಸಹನಿಯವೇ ಆಗಿ ಹೋಗುತ್ತದೆ. ಏನೋ ಒಂದು ದುಷ್ಟ ಶಕ್ತಿಯು ವಾಸಿಸುವ ಮನೆಯಲ್ಲಿ ನೆಲೆಯೂರಿದೆ. ಈ ಶಕ್ತಿಯ ಕಾರಣದಿಂದಾಗಿ ಮುಂದೆ ಅಥವಾ ಹಿಂದೆ ಇಲ್ಲಾ ಇನ್ನೇನೋ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳೋಣ ಎಂದರೆ ಜಪ್ಪಯ್ಯ ಅಂದರೂ ಏನೂ ಮಾಡಲಾಗದ ಶೂನ್ಯ ಕಣ್ಣೆದುರಿಗೆ ಎದ್ದು ನಿಲ್ಲುತ್ತದೆ ಎಂಬ ಭಾವನೆ ಮನದಲ್ಲಿ ಮೂಡಿಕೊಳ್ಳುತ್ತದೆ.
ಬಹುವಾದ ರೀತಿಯಲ್ಲಿ ಪ್ರಯತ್ನಪಟ್ಟರೂ ಒಳ್ಳೆಯ ಕಡೆ ಒಂದು ಸೈಟ್ ಖರೀದಿಸಿಕೊಂಡು ಇಟ್ಟುಕೊಂಡಿದ್ದರೂ ಮನೆಯನ್ನು ಕಟ್ಟಲು ಪರದಾಡಬೇಕಾದ ಬಿಕ್ಕಟ್ಟುಗಳು ಎದುರಾಗುವ ದುರವಸ್ಥೆ ಹರಳುಗಟ್ಟಿ ಬಿಡಬಹುದು. ಕೆಲವರಿಗೆ ಇವ್ಯಾವುದೂ ತೊಂದರೆಯಾಗದೆ ಹುಣ್ಣಿಮೆ ಅಮಾವಾಸ್ಯೆಗಳಂದು ಮಾನಸಿಕ ಜಂಜಡಗಳು ಎದ್ದೇಳಬಹುದು. ಯಾರಿಗೂ ಕಾಣಿಸದ ಆಕೃತಿ ಅಥವಾ ಯಾವುದೋ ಅದೃಶ್ಯ ವ್ಯಕ್ತಿಯ ಅಸ್ತಿತ್ವ ಅಡೆತಡೆಗಳನ್ನು ನಿರ್ಮಿಸುತ್ತಿರುವ ಅನಾವಶ್ಯಕ ಭಯಭೀತ ಸ್ಥಿತಿ ಎದುರಾಗಬಹುದು. ಎಲ್ಲವೂ ಸರಿ ಹೋಗುತ್ತಿದೆ ಎಂಬ ನೆಮ್ಮದಿಯಲ್ಲಿ ಮನಸ್ಸು ಖುಷಿಯಿಂದ ದಾರ್ಢ್ಯತೆ ಹೊಂದಿದಾಗಲೂ ಮಕ್ಕಳಿಗೆ ಯಾವುದೋ ಒಂದು ತೊಂದರೆ ನಿರ್ಮಾಣವಾಗಿ ಸುಡು ಕೆಂಡಗಳು ಸುತ್ತಲೂ ಆವರಿಸಿದೆ ಎಂಬ ಕಾಲ ಧುತ್ ಅಂತ ಎದ್ದು ವಿಷದ ಹೆಡೆ ಎತ್ತಿ ಎದುರಿಗೇ ನಿಲ್ಲಬಹುದು.
ಚಂದ್ರ ಜೀವಿಗಳ ಮನೋ ಸ್ಥಿತಿಯ ಆರೋಗ್ಯಕರ ಅಥವಾ ಅನಾರೋಗ್ಯಕರ ಘಟಕಗಳ ನಿರ್ಮಾಣಕ್ಕೆ ಕಾರಣ ಎಂಬುದನ್ನು ಭಾರತೀಯ ಜ್ಯೋತಿಷ ವಿಜ್ಞಾನ ಬಲವಾಗಿ ಪ್ರತಿಪಾದಿಸುತ್ತದೆ. ಆಧುನಿಕ ವಿಜ್ಞಾನ ಈ ಅಂಶವನ್ನು ಒಪ್ಪಿಕೊಳ್ಳುತ್ತದೆ. ನಮ್ಮ ಪರಂಪರೆಯಲ್ಲಿ ದಾಸರ ವಾಣಿಗಳೂ ಕೂಡಾ ಈ ವಿಷಯದಲ್ಲಿ ‘ಮನಸು ಕಾರಣವಯ್ಯ ಪಾಪ ಪುಣ್ಯಕ್ಕೆಲ್ಲ’ ಎಂಬ ವಿಚಾರವನ್ನು ನಂಬುತ್ತವೆ. ದೃಢವಾದ ನಂಬಿಕೆಯೇ ಹಲವು ಅನಿಷ್ಟಗಳನ್ನು ದೂರಗೊಳಿಸುತ್ತವೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಸಮಾಜದ ಸಕಾರಾತ್ಮಕ ಶಕ್ತಿ ಈ ನಂಬಿಕೆಯಿಂದಲೂ ಗಟ್ಟಿಯಾಗುತ್ತದೆ .ಈ ನಂಬಿಕೆಯ ಮೂಲವಾದ ಒಂದು ಪರಾತ್ಪರ ಶಕ್ತಿಯನ್ನು ನಾವು ಒಪ್ಪಿಕೊಳ್ಳಬೇಕು.
ನಿರಾನಂದಮಾನಂದ ನಿರಾಕಾರ ಸ್ವರೂಪದ ಒಂದು ದಿವ್ಯ ಶಕ್ತಿ ನಮ್ಮನ್ನು ಸದಾ ಕಾಪಾಡುತ್ತದೆ ಎಂಬುದು ನಮ್ಮ ಆಸ್ತಿಕ ಭಾವದ ಮೂಲಕವೇ ಚಿಗುರಿಕೊಳ್ಳುತ್ತದೆ. ಹಾಗೆಯೆ ನಮ್ಮನ್ನು ಕಾಪಾಡುತ್ತದೆ ಕೂಡ. ಹೀಗಾಗಿ ಮನಸ್ಸನ್ನು ನಿಗ್ರಹಿಸಿ ಆಗಲೇ ಅನೇಕ ನಿಷ್ಕ್ರಿಯತೆ ದೂರಾಗಿ ಜೀವನದ ಹೃದ್ಯ ಸಂಪನ್ನತೆಗೆ ಅದು ವೇದಿಕೆ ನಿರ್ಮಿಸಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.