ADVERTISEMENT

ಶುರುವಾಗಿದೆ ಜಾವಾ ಹವಾ!

ನೇಸರ ಕಾಡನಕುಪ್ಪೆ
Published 20 ಡಿಸೆಂಬರ್ 2018, 4:33 IST
Last Updated 20 ಡಿಸೆಂಬರ್ 2018, 4:33 IST
ಶೋರೂಂನಲ್ಲಿ ಪ್ರದರ್ಶನಕ್ಕೆ ಇರಿಸಿರುವ ಜಾವಾ
ಶೋರೂಂನಲ್ಲಿ ಪ್ರದರ್ಶನಕ್ಕೆ ಇರಿಸಿರುವ ಜಾವಾ   

ಜಾವಾ ಬಿಡುಗಡೆಗೆ ಮುನ್ನ ಹೊಸ ಬೈಕು ಹೇಗಿರಬಹುದು ಎಂಬ ಕುತೂಹಲವೇ ಹೆಚ್ಚಿತ್ತು. ಬಿಡುಗಡೆಯ ಬಳಿಕ ನಾ ಮುಂದು ತಾ ಮುಂದು ಎಂದು ಬೈಕ್‌ ಕೊಳ್ಳಲು ಜಾವಾ ಪ್ರಿಯರು ಹಪಹಪಿಸುತ್ತಿದ್ದಾರೆ. ಏಕೆಂದರೆ, ಜಾವಾ ಬೈಕ್ ಯುವಕರ ಕುತೂಹಲ ತಣಿಸಲು ಯಶಸ್ವಿಯಾಗಿದೆ. ಈ ಮುಂಚೆ ಭಾರತದಲ್ಲಿದ್ದ ವಿಂಟೇಜ್ ಜಾವಾ ಶೈಲಿಯಲ್ಲೇ ಹೊಸ ಬೈಕ್‌ ಸಹಾ ಇರುವುದು ಇದಕ್ಕೆ ಮುಖ್ಯ ಕಾರಣ.

ಭಾರತದ ಮೊದಲ ಜಾವಾ ಶೋರೂಂ ಪುಣೆಯಲ್ಲಿ ಈಗಷ್ಟೇ ತೆರೆದಿದೆ. ಜಾವಾ ಶೋರೂಂಗಳು ಕೇವಲ ಜಾವಾ ಬೈಕುಗಳನ್ನು ಪ್ರದರ್ಶಿಸಿ ಮಾರಾಟ ಮಾಡುವ ಜಾಗವಲ್ಲ. ಇವು ಜಾವಾ ಅಭಿಮಾನಿಗಳಿಗೆ ದೇವಸ್ಥಾನವಿದ್ದಂತೆ. ಇಲ್ಲಿ ಜಾವಾ ಪರಂಪರೆ ಇದೆ. ಇತಿಹಾಸದ ಮೆಲುಕಿದೆ. ಜಾವಾ ಪ್ರಪಂಚವೇ ಈ ಶೋರೂಂಗಳಲ್ಲಿ ತೆರೆದುಕೊಳ್ಳಲಿದೆ.

ದೇಶದಲ್ಲಿ ಇದುವರೆಗೆ ಈ ರೀತಿಯ ಶೋರೂಂ ಇದ್ದದ್ದು ರಾಯಲ್‌ ಎನ್‌ಫೀಲ್ಡ್‌ಗೆ ಮಾತ್ರ. ಐಷರ್ ಕಂಪನಿ ಎನ್‌ಫೀಲ್ಡ್‌ ಉಸ್ತುವಾರಿ ವಹಿಸಿಕೊಂಡ ಮೇಲೆ ಎನ್‌ಫೀಲ್ಡ್‌ ಮಾರುಕಟ್ಟೆ ತಂತ್ರ ಸಂಪೂರ್ಣ ಬದಲಾಯಿತು. ಕತ್ತಲೆ ಕೋಣೆಗಳಂತಿದ್ದ ಶೋರೂಂಗಳು ಆಧುನಿಕ ಸ್ಪರ್ಶ ಪಡೆದವು.

ADVERTISEMENT

ಬೈಕ್ ಮಾರಾಟ ಮಾಡುವುದೆಂದರೆ ಕೇವಲ ವಾಹನದ ಮಾರಾಟವಲ್ಲ; ಅದು ಬೈಕ್‌ ಕಂಪನಿ ಹಾಗೂ ಗ್ರಾಹಕರ ನಡುವಿನ ಸಂಬಂಧವನ್ನು ಬೆಸೆಯುವ, ಕಂಪನಿ ಹಾಗೂ ಸಮಾಜದ ನಡುವೆ ಇರುವ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಕ್ರಿಯೆ. ಅಷ್ಟೇ ಅಲ್ಲದೇ, ಕಂಪನಿಗಿರುವ ಇತಿಹಾಸವನ್ನು ಬಂಡವಾಳದಂತೆ ಬಳಸಿಕೊಂಡು ಮಾರಾಟ ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ.

ಈ ಪ್ರಕ್ರಿಯೆಯನ್ನು ಎಲ್ಲ ಬೈಕ್‌ ಕಂಪನಿಗಳೂ ನಡೆಸಲು ಆಗದು. ಏಕೆಂದರೆ, ರಾಯಲ್‌ ಎನ್‌ಫೀಲ್ಡ್ ಬಿಟ್ಟರೆ ಭಾರತದ ಬೇರಾವ ಕಂಪನಿಗೂ ಬೈಕ್‌ ಉತ್ಪಾದನೆಯಲ್ಲಿ ಕನಿಷ್ಠ 50 ವರ್ಷ ಇತಿಹಾಸ ಇರಲಿಲ್ಲ. ಅದನ್ನು ಬಳಸಿಕೊಂಡ ಎನ್‌ಫೀಲ್ಡ್‌, ತನ್ನ ಶೋರೂಂಗಳಲ್ಲಿ ಎನ್‌ಫೀಲ್ಡ್‌ ಶುರುವಾದ ದಿನದಿಂದ ಹಿಡಿದು ಇಂದಿನವರೆಗಿನ ಹೆಜ್ಜೆಗಳನ್ನು ಪ್ರದರ್ಶಿಸಿತು. ಇಂಗ್ಲೆಂಡಿನಿಂದ ಆರಂಭವಾಗಿ, ಭಾರತದ ಯಶಸ್ಸುಗಳನ್ನು ಸಚಿತ್ರವಾಗಿ ತೋರಿಸಿತು. ಅಷ್ಟೇ ಅಲ್ಲ, ಬೈಕ್‌ ಶೋರೂಂನಲ್ಲಿ ಕೇವಲ ಬೈಕ್ ಮಾರಾಟ ಮಾಡಬೇಕು ಎಂದು ನಿಯಮವೇನೂ ಇಲ್ಲವಲ್ಲ.

ಹಾಗಾಗಿ, ತನ್ನ ಕಂಪನಿಯ ಲೋಗೊ ಇರುವ ಟೀ ಶರ್ಟ್‌, ಪ್ಯಾಂಟ್, ಹೆಲ್ಮೆಟ್, ಜರ್ಕಿನ್, ಕೀ ಚೈನ್‌ ಇತ್ಯಾದಿ ಉತ್ಪನ್ನಗಳನ್ನೂ ಮಾರಾಟಕ್ಕೆ ಇಟ್ಟಿತು. ಇದು ರಾಯಲ್‌ ಎನ್‌ಫೀಲ್ಡ್‌ ಗಟ್ಟಿಗೊಳ್ಳಲು ಸಾಕಷ್ಟು ಸಹಾಯ ಮಾಡಿತು.

ಜಾವಾ ಶೋರೂಂ ವಿಶೇಷ

ಜಾವಾಗೂ 50 ವರ್ಷ ಮೀರಿದ ಇತಿಹಾಸವಿದೆ. ಹಾಗಾಗಿ, ಇದೇ ಹೆಜ್ಜೆಯನ್ನು ಜಾವಾ ಇಡಲು ಹೊರಟಿದೆ. ಜಾವಾ ಶೋರೂಂಗಳಲ್ಲಿ ಕೇವಲ ಬೈಕ್‌ ಮಾರಾಟ ಮಾತ್ರ ಇರುವುದಿಲ್ಲ. ವಿಶಾಲವಾದ ಗಾಜಿನ ಕಿಟಕಿಗಳಲ್ಲಿ ಬೈಕ್‌ಗಳನ್ನು ಪ್ರದರ್ಶಿಸಲಾಗಿರುತ್ತದೆ. ಮಾರಾಟವಾಗುವ ಬೈಕ್‌ಗಳ ಜತೆಗೆ ತನ್ನ ಭವಿಷ್ಯದ ಬೈಕ್‌ಗಳ ಮಾದರಿಗಳನ್ನೂ ಪ್ರದರ್ಶನಕ್ಕೆ ಇಡಲಾಗಿರುತ್ತದೆ. ಈ ಮೂಲಕ ಗ್ರಾಹಕನ ಕುತೂಹಲವನ್ನು ಸದಾ ಜಾಗೃತವಾಗಿ ಇರಿಸಬಹುದು ಎಂಬ ಆಶಯ.

ಜಾವಾವೂ ರಾಯಲ್ ಎನ್‌ಫೀಲ್ಡ್ ಮಾದರಿ ಅನುಸರಿಸಿ ತನ್ನ ಉಪ ಉತ್ಪನ್ನಗಳನ್ನು ಮಾರಾಟ ಮಾಡಹೊರಟಿದೆ. ಇಲ್ಲಿ ಜಾವಾ ಹೆಲ್ಮೆಟ್, ಬಟ್ಟೆಗಳು, ಬೆಲ್ಟ್‌, ಪರ್ಸ್‌, ಕೀ ಚೈನ್‌ ಇರಲಿವೆ.

ಜನವರಿಯಲ್ಲಿ ಬೈಕುಗಳ ಬುಕ್ಕಿಂಗ್‌ ಶೋರೂಂಗಳಲ್ಲೂ ಶುರುವಾಗಲಿದೆ. ಈಗಾಗಲೇ ತನ್ನ ವೆಬ್‌ಸೈಟಿನಲ್ಲಿ ಬುಕ್ಕಿಂಗ್‌ ಶುರುವಾಗಿದೆ. ₹ 5 ಸಾವಿರ ನೀಡಿ ಬುಕ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.