ADVERTISEMENT

ಕ್ರಾಂತಿ ಮಾಡಲಿದೆ ‘ರಿವೋಲ್ಟ್‌’; ಹೊಸ ವಿದ್ಯುಚ್ಚಾಲಿತ ಮೋಟರ್‌ ಸೈಕಲ್‌ ಬಿಡುಗಡೆ

ನೇಸರ ಕಾಡನಕುಪ್ಪೆ
Published 30 ಆಗಸ್ಟ್ 2019, 12:09 IST
Last Updated 30 ಆಗಸ್ಟ್ 2019, 12:09 IST
   

ನಮ್ಮಲ್ಲಿ ವಿದ್ಯುಚ್ಛಾಲಿತ ಸ್ಕೂಟರ್‌ಗಳು ಸಾಕಷ್ಟಿವೆ. ಆದರೆ, ವಿದ್ಯುಚ್ಛಾಲಿತ ಮೋಟರ್ ಸೈಕಲ್ ಒಂದೂ ಇಲ್ಲ. ಈ ಸಾಲಿಗೆ ಸೇರುತ್ತಿರುವ ಇ–ಬೈಕ್‌ ಎಂಬ ಹೆಗ್ಗಳಿಕೆಗೆ ‘ರಿವೋಲ್ಟ್‌’ ಇದೀಗ ಸೇರಿದೆ.

ಆರಂಭಿಕವಾಗಿ ನವದೆಹಲಿ ಹಾಗೂ ಪುಣೆಯಲ್ಲಿ ಮಾತ್ರ ಬಿಡುಗಡೆಗೊಂಡಿರುವ ರಿವೋಲ್ಟ್‌ ಬೈಕ್‌, ವಿಶಿಷ್ಟ ಲಕ್ಷಣಗಳ ಮೂಲಕ ಗಮನ ಸೆಳೆದಿದೆ. ಇದು ನೋಡಲು ಆಧುನಿಕ ಸ್ಪೋರ್ಟ್ಸ್‌ ಬೈಕ್‌ಗಳ ಮಾದರಿಯ ವಿನ್ಯಾಸ ಹೊಂದಿದೆ. ವಿದ್ಯುಚ್ಛಾಲಿತ ಸ್ಕೂಟರ್‌ ಆದರೂ ಸಾಂಪ್ರದಾಯಿಕ ಪೆಟ್ರೋಲ್‌ ಎಂಜಿನ್‌ ಉಳ್ಳ ಬೈಕ್‌ಗಳಂತೆ ಶಬ್ದ ಹೊರಡಿಸುವ ಅನುಕರಣೆ ತಂತ್ರಜ್ಞಾನವನ್ನು ಹೊಂದಿರುವುದು ಈ ಬೈಕಿನ ವಿಶೇಷ.

ಕ್ರಿಯಾಶೀಲ ಮೆಕ್ಯಾನಿಕ್‌ಗಳು ಸೇರಿ ಆರಂಭಿಸಿದ ಕಂಪನಿಯೇ ‘ರಿವೋಲ್ಟ್‌’. ಭಾರತದಲ್ಲಿ ವಿದ್ಯುಚ್ಛಾಲಿತ ವಾಹನಗಳಿಗೆ ಇರುವ ಉಜ್ವಲ ಭವಿಷ್ಯವನ್ನು ಅರಿತುಕೊಂಡ ಉತ್ಸಾಹಿ ಯುವಕರ ತಂಡವು ಈ ಕಂಪನಿ ಹುಟ್ಟುಹಾಕಿತು. ಪೆಟ್ರೋಲ್‌ ಚಾಲಿತ ವಾಹನಗಳ ಮೇಲೆ ಗ್ರಾಹಕರಿಗೆ ಉತ್ಸಾಹ ಕಡಿಮೆಯಾಗಿರುವುದು, ಏರುತ್ತಿರುವ ಇಂಧನ ಬೆಲೆಯಿಂದ ಆತಂಕ ಹೆಚ್ಚುತ್ತಿರುವುದನ್ನು ಗಮನಿಸಿದ ಈ ತಂಡವು ಈ ಕಂಪನಿಯನ್ನು ಶುರು ಮಾಡಿ ಎರಡು ಉತ್ತಮ ವಿದ್ಯುತ್‌ ಬೈಕ್‌ಗಳನ್ನು ನಿರ್ಮಿಸಿದೆ.



‘ರಿವೋಲ್ಟ್‌ 300’ ಹಾಗೂ ‘ರಿವೋಲ್ಟ್‌ 400’. ಒಮ್ಮೆ ಚಾರ್ಜ್‌ ಮಾಡಿದರೆ ಗರಿಷ್ಠ 150 ಕಿಲೋಮೀಟರ್‌ ದೂರ ಕ್ರಮಿಸಬಹುದಾದ ಅವಕಾಶ ಇದೆ. ‘ರಿವೋಲ್ಟ್‌ 300’ ಗರಿಷ್ಠ 45 ಕಿಲೋಮೀಟರ್‌ ವೇಗ ತಲುಪಬಲ್ಲದು. ಇದರ ಮೈಲೇಜ್‌ ಸಹ ಹೆಚ್ಚು. ‘ರಿವೋಲ್ಟ್‌ 400’ ಗರಿಷ್ಠ 80 ಕಿಲೋಮೀಟರ್‌ ವೇಗ ಮುಟ್ಟಬಲ್ಲದು. ಆದರೆ, ಮೈಲೇಜ್‌ ಕೊಂಚ ಕಡಿಮೆ. ಒಟ್ಟಾರೆಯಾಗಿ ಕನಿಷ್ಠ 80 ರಿಂದ 150 ಕಿಲೋಮೀಟರ್‌ವರೆಗೆ ಈ ಬೈಕ್‌ಗಳು ಕ್ರಮಿಸಬಲ್ಲವು.

ಎಂಆರ್‌ಪಿ ವಿಶೇಷ:

ಇವು ಕೇವಲ ತಾಂತ್ರಿಕವಾಗಿ ಶ್ರೇಷ್ಠವಾದ ಬೈ‌ಕ್‌ಗಳು ಮಾತ್ರವಲ್ಲ. ಎಂಆರ್‌ಪಿ ಎಂಬ ವಿಶೇಷ ಯೋಜನೆಯನ್ನು ಕಂಪನಿ ಪರಿಚಯಿಸಿದೆ. ‘ಎಂಆರ್‌ಪಿ’ ಎಂದರೆ ‘ಮೈ ರಿವೋಲ್ಟ್‌ ಪ್ಲಾನ್‌’. ಈ ಯೋಜನೆಯ ಅಡಿಯಲ್ಲಿ ಗ್ರಾಹಕ ಪ್ರತಿ ತಿಂಗಳಿಗೆ ನಿಗದಿತ ಹಣವನ್ನು ಕಂತಿನ ರೂಪದಲ್ಲಿ ಕಟ್ಟಿದರೆ ಆಯಿತು. ಬೈಕ್ ಹೊಂದಬಹುದು. ಒಂದು ರೀತಿ ಇಎಂಐ (ಈಸಿ ಮಂತ್ಲಿ ಇನ್‌ಸ್ಟಾಲ್‌ಮೆಂಟ್) ಇದ್ದಂತೆ. ಆದರೆ, ಇಲ್ಲಿ ಡೌನ್‌ಪೇಮೆಂಟ್‌ ಇರುವುದಿಲ್ಲ. ರಿವೋಲ್ಟ್ 300 ಬೈಕಿಗೆ ಮಾಸಿಕ ₹ 2,999 ಹಾಗೂ ರಿವೋಲ್ಟ್‌ 400 ಬೈಕಿಗೆ ಮಾಸಿಕ ₹ 3,499 ರಿಂದ ₹ 3,999 ಕಟ್ಟಿದರೆ ಆಯಿತು. ಒಟ್ಟು 37 ತಿಂಗಳುಗಳ ಕಾಲ ಕಟ್ಟಬೇಕು.

ADVERTISEMENT

ಒಟ್ಟಾರೆಯಾಗಿ ₹ 1.11 ಲಕ್ಷದಿಂದ ₹ 1.44 ಲಕ್ಷ ಪಾವತಿಸಿದಂತೆ ಆಗುತ್ತದೆ. ಈ ಯೋಜನೆಯು ವಾಹನದ ವಿಮೆ, ನೋಂದಣಿ ಶುಲ್ಕವನ್ನು ಒಳಗೊಂಡಿರುವುದು ವಿಶೇಷ.



ಮಿಕ್ಕಂತೆ ಬೈಕಿನಲ್ಲಿ ಉತ್ತಮ ಸೌಲಭ್ಯಗಳಿವೆ. 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ ಬ್ಯಾಟರಿ ಇದೆ. ಮುಂದಿನ ಹಾಗೂ ಹಿಂದಿನ ಚಕ್ರಗಳಲ್ಲಿ ಡಿಸ್ಕ್‌ ಬ್ರೇಕ್‌ ಇವೆ.

ರೇಸ್‌ ಬೈಕಿನಂತೆ ಶಬ್ದ:

ರೇಸ್‌ ಬೈಕ್‌ಗಳಂತೆ ಇದು ಶಬ್ದ ಹೊರಡಿಸುತ್ತದೆ! ಆದರೆ, ಇದು ಕೃತಕ ಶಬ್ದ. ಇದರ ಎಂಜಿನ್‌ನಿಂದ ಈ ಶಬ್ದ ಬರುವುದಿಲ್ಲ. ಬದಲಿಗೆ ಬೈಕಿನಲ್ಲಿರುವ ಸ್ಪೀಕರ್‌ನಿಂದ ಹೊಮ್ಮುತ್ತದೆ. ರಿವೋಲ್ಟ್‌, ರೇಜ್‌, ರೆಬೆಲ್ ಹಾಗೂ ರೋರ್‌ ಎಂಬ ನಾಲ್ಕು ಬಗೆಯ ಶಬ್ದ ಬರುತ್ತದೆ. ವಿದ್ಯುಚ್ಛಾಲಿತ ಬೈಕೇ ಆದರೂ, ರಸ್ತೆಯಲ್ಲಿ ಸಂಚರಿಸುವಾಗ ಮಾತ್ರ ಸ್ಪೋರ್ಟ್ಸ್‌ ಬೈಕಿನ ಹಾಗೆ ಶಬ್ದ ಹೊಮ್ಮುತ್ತದೆ. ಇದು ‘ರಿವೋಲ್ಟ್‌ 400’ ಬೈಕಿನಲ್ಲಿ ಮಾತ್ರ ಲಭ್ಯ. ಇಷ್ಟವಾಗದಿದ್ದಲ್ಲಿ ಶಬ್ದವನ್ನು ಬಂದ್ ಮಾಡಿ ನಿಶ್ಬಬ್ದವಾಗಿ ಸಂಚರಿಸಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.