ADVERTISEMENT

ವ್ಯಾಗನ್‌–ಆರ್‌, ಸ್ಯಾಂಟ್ರೊಗೆ 2 ಸ್ಟಾರ್‌ ರೇಟಿಂಗ್‌

ಡಟ್ಸನ್‌ ರೆಡಿ ಗೊ– 1 ಸ್ಟಾರ್‌, ಎರ್ಟಿಗಾ– 3 ಸ್ಟಾರ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:30 IST
Last Updated 20 ನವೆಂಬರ್ 2019, 19:30 IST
ಕ್ರ್ಯಾಶ್‌ ಟೆಸ್ಟ್‌
ಕ್ರ್ಯಾಶ್‌ ಟೆಸ್ಟ್‌   

ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿಯ ಜನಪ್ರಿಯ ಹ್ಯಾಚ್‌ಬ್ಯಾಕ್‌ ಕಾರು ವ್ಯಾಗನ್‌– ಆರ್‌ ಹಾಗೂ ಇದರ ಪ್ರತಿಸ್ಪರ್ಧಿ ಹುಂಡೈ ಕಂಪನಿಯ ಸ್ಯಾಂಟ್ರೊ ಕಾರುಗಳುಜಾಗತಿಕ ಎನ್‌ಸಿಎಪಿ (global NCAP) ನಡೆಸುವ ಸುರಕ್ಷತಾ ಪರೀಕ್ಷೆಯಲ್ಲಿ (ಕ್ರ್ಯಾಶ್ ಟೆಸ್ಟ್‌) ಎರಡು ಸ್ಟಾರ್‌ ರೇಟಿಂಗ್‌ ಪಡೆದಿವೆ.

ನಿಸಾನ್‌ನ ಅಂಗಸಂಸ್ಥೆ ಡಟ್ಸನ್‌ನ ‘ರೆಡಿ–ಗೊ’ ಕಾರು ಸುರಕ್ಷತೆಯಲ್ಲಿ ಒಂದು ಸ್ಟಾರ್‌ ಪಡೆದಿದೆ. ಮಾರುತಿ ಸುಜುಕಿಯ ಮತ್ತೊಂದು ಎಂಪಿವಿ ಎರ್ಟಿಗಾ ಮೂರು ಸ್ಟಾರ್‌ ರೇಟಿಂಗ್‌ ಗಳಿಸಿ, ತಕ್ಕಮಟ್ಟಿಗಿನ ಸದೃಢ ಕಾರು ಎಂಬ ಹೆಗ್ಗಳಿಕೆ ಪ‍ಡೆದಿದೆ.

ಮೂರೂ ಕಂಪನಿಗಳು ಕೆಲವು ತಿಂಗಳುಗಳ ಹಿಂದೆಯಷ್ಟೇ ತಮ್ಮ ಜನಪ್ರಿಯ ಹ್ಯಾಚ್‌ಬ್ಯಾಕ್‌ ಕಾರುಗಳಾದ ವ್ಯಾಗನ್‌ ಆರ್‌, ಸ್ಯಾಂಟ್ರೊ ಹಾಗೂ ಗೊಗಳನ್ನು ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದವು.

ADVERTISEMENT

‘ಭಾರತಕ್ಕಾಗಿ ಸುರಕ್ಷಿತ ಕಾರು’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಇತ್ತೀಚೆಗೆ ಈ ಪರೀಕ್ಷೆ ನಡೆಸಲಾಗಿದೆ. ಇದು ಆರನೇ ಸುತ್ತಿನ ಪರೀಕ್ಷೆಯಾಗಿತ್ತು.

ಕ್ರ್ಯಾಶ್‌ ಟೆಸ್ಟ್‌ಗಾಗಿ ಎರ್ಟಿಗಾ, ವ್ಯಾಗನ್‌–ಆರ್‌, ಸ್ಯಾಂಟ್ರೊ ಹಾಗೂ ರೆಡಿ ಗೊ ಕಾರುಗಳ ಎಂಟ್ರಿ ಲೆವೆಲ್‌ (ಮೂಲ) ಮಾದರಿಗಳನ್ನು ಆಯ್ಕೆ ಮಾಡಲಾಗಿತ್ತು.ಎರ್ಟಿಗಾದ ಎಂಟ್ರಿ ಲೆವೆಲ್‌ ಮಾದರಿಯಲ್ಲಿ ಎರಡು (ಚಾಲಕ ಹಾಗೂ ಪ್ರಯಾಣಿಕ) ಏರ್‌ ಬ್ಯಾಗ್‌ಗಳಿದ್ದು, ಉಳಿದ ಮೂರೂ ಕಾರುಗಳಲ್ಲಿ ಚಾಲಕನಿಗೆ ಮಾತ್ರ ಏರ್‌ ಬ್ಯಾಗ್‌ ಇದೆ.

ವ್ಯಾಗನ್‌–ಆರ್‌ ಮತ್ತು ಸ್ಯಾಂಟ್ರೊ ಕಾರುಗಳು,ವಯಸ್ಕ ಪ್ರಯಾಣಿಕರ ರಕ್ಷಣೆ ಮತ್ತು ಮಕ್ಕಳ ರಕ್ಷಣೆ ವಿಚಾರದಲ್ಲಿ ತಲಾ ಎರಡು ಸ್ಟಾರ್‌ ರೇಟಿಂಗ್‌ ಸಂಪಾದಿಸಿವೆ. ಈ ಎರಡೂ ಕಾರುಗಳ ಒಟ್ಟಾರೆ ರಚನೆ (ಚೌಕಟ್ಟು) ಸದೃಢವಾಗಿಲ್ಲ ಎಂದೂ ‘ಎನ್‌ಸಿಎಪಿ‘ ಹೇಳಿದೆ.

ರೆಡಿ ಗೊ ಕಾರು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಒಂದು ಸ್ಟಾರ್‌ ರೇಟಿಂಗ್‌ ಪಡೆದರೆ, ಮಕ್ಕಳ ರಕ್ಷಣೆಯಲ್ಲಿ ಎರಡು ಸ್ಟಾರ್‌ ರೇಟಿಂಗ್‌ ಗಳಿಸಿದೆ. ಈ ಕಾರು ಕೂಡ ಸದೃಢವಾಗಿಲ್ಲ ಎಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ.

‘ವಯಸ್ಕ ಪ್ರಯಾಣಿಕರ ಸುರಕ್ಷತೆ ವಿಷಯದಲ್ಲಿ ಪ್ರಮುಖ ವ್ಯತ್ಯಾಸಗಳಿರುವುದು ಕ್ರ್ಯಾಶ್‌ ಟೆಸ್ಟ್‌ನ ಫಲಿತಾಂಶದಿಂದ ಗೊತ್ತಾಗಿದೆ. ಸುರಕ್ಷತಾ ವಿಚಾರದಲ್ಲಿ ಮಿಶ್ರ ಫಲಿತಾಂಶ ಬಂದಿದೆ. ನಾಲ್ಕು ಕಾರುಗಳಲ್ಲಿ ಒಂದು ಕಾರು ಕೂಡ ಐದು ಸ್ಟಾರ್‌ ರೇಟಿಂಗ್‌ ಪಡೆಯದಿರುವುದು ನಿರಾಸೆ ತಂದಿದೆ’ ಎಂದು ಗ್ಲೋಬಲ್‌ ಎನ್‌ಸಿಎಪಿಯ ಸಿಇಒ ಮತ್ತು ಅಧ್ಯಕ್ಷ ಡೇವಿಡ್‌ ವಾರ್ಡ್‌ ಹೇಳಿದ್ದಾರೆ.

‘ಭಾರತ ಸರ್ಕಾರದ ಕ್ರ್ಯಾಶ್‌ ಟೆಸ್ಟ್‌ ಮಾನದಂಡಗಳಿಂದಾಗಿ, ಹೆಚ್ಚೆಚ್ಚು ಸುರಕ್ಷಿತವಾದ ಕಾರುಗಳ ತಯಾರಿಕೆಗೆ ಅನುಕೂಲವಾಗಿದೆ. ಸುರಕ್ಷತಾ ಮಾನದಂಡಗಳ ಜಾರಿಗೆ, ಹೆಚ್ಚು ಸುರಕ್ಷತೆಯ ಕಾರುಗಳ ನಿರ್ಮಾಣಕ್ಕೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ನಾವು ಸರ್ಕಾರದೊಂದಿಗೆ ಕೈಜೋಡಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಎರ್ಟಿಗಾಗೆ ಮೂರು ಸ್ಟಾರ್‌ ರೇಟಿಂಗ್‌

ಎಂಟ್ರಿಲೆವಲ್‌ನಲ್ಲೇ ಎರಡು ಏರ್‌ ಬ್ಯಾಗ್‌ಗಳನ್ನು ಹೊಂದಿರುವ ಎರ್ಟಿಗಾ, ವಯಸ್ಕ ಪ್ರಯಾಣಿಕರ ಸುರಕ್ಷತೆ ಹಾಗೂ ಮಕ್ಕಳ ಸುರಕ್ಷತೆಯಲ್ಲಿ ತಲಾ ಮೂರು ಸ್ಟಾರ್‌ ರೇಟಿಂಗ್‌ ಪಡೆದಿದೆ.

ಕಾರಿನ ಚೌಕಟ್ಟು (ಫ್ರೇಮ್‌)ಸ್ವಲ್ಪ ಮಟ್ಟಿಗೆ ಭದ್ರವಾಗಿದ್ದು, ಇದನ್ನು ಇನ್ನಷ್ಟು ಉತ್ತಮ ಮಾಡಿಸಲು ಅವಕಾಶ ಇದೆ ಮತ್ತು ಅದಕ್ಕೆ ಕಂಪನಿಯು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ಲೋಬಲ್‌ ಎನ್‌ಸಿಎಪಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.