ADVERTISEMENT

ಸದೃಢ ಎಸ್‌ಯುವಿ ಫಾರ್ಚುನರ್‌

ಯತೀಶ್ ಕುಮಾರ್ ಜಿ.ಡಿ
Published 9 ಮಾರ್ಚ್ 2016, 19:35 IST
Last Updated 9 ಮಾರ್ಚ್ 2016, 19:35 IST
ಸದೃಢ ಎಸ್‌ಯುವಿ ಫಾರ್ಚುನರ್‌
ಸದೃಢ ಎಸ್‌ಯುವಿ ಫಾರ್ಚುನರ್‌   

ಟೊಯೊಟೊ ವಿಶ್ವದ ವಾಹನ ಮಾರುಕಟ್ಟೆಯಲ್ಲಿ ನಂಬಿಕೆಗೆ ಅರ್ಹವಾದ ಬ್ರಾಂಡ್‌. ಭಾರತದಲ್ಲಿ ಕ್ವಾಲಿಸ್‌ನಿಂದ ಆರಂಭವಾದ ಬ್ರಾಂಡ್‌ ಯಶೋಗಾಥೆ ಎಂಯುವಿ ಇನೋವಾ ಮತ್ತು ಎಸ್‌ಯುವಿ ಫಾರ್ಚುನರ್‌ ಮೂಲಕ ದಾಪುಗಾಲು ಇಡುತ್ತಿದೆ.

ಹಲವು ಬದಲಾವಣೆಯ ಮೂಲಕ ಎರಡೂವರೆ ವರ್ಷದ ಹಿಂದೆ ಮಾರುಕಟ್ಟೆಗೆ ಪ್ರವೇಶ ಮಾಡಿದ ಫಾರ್ಚುನರ್‌ ಇಂದಿಗೂ ಇತರೆ ಕಂಪೆನಿಗಳ ಎಸ್‌ಯುವಿಗಳಾದ ಟಾಟಾ ಸಫಾರಿ, ಮಿಷುಬಿಷಿಯ ಪಜೆರೊ, ಫೋರ್ಡ್‌ನ ಎಂಡವರ್‌, ಮಹೀಂದ್ರಾ ಕಂಪೆನಿಯ ಎಕ್ಸ್‌ಯುವಿ 500, ರೆಕ್ಸಾನ್‌, ಸ್ಕಾರ್ಪಿಯೊ ಪೈಪೋಟಿ ನೀಡುತ್ತಿದೆ.

ಬೆಲೆ, ಕಾರ್ಯಕ್ಷಮತೆ ಹಾಗೂ ಐಷಾರಾಮಿ ವಿಚಾರದಲ್ಲಿ ಮೇಲೆ ಹೇಳಿದ ಎಲ್ಲ ವಾಹನಗಳಿಗಿಂತ ಮೇಲ್ವರ್ಗದಲ್ಲಿರುವ ಫಾರ್ಚುನರ್‌, ಈ ವರ್ಷದ ಅಂತ್ಯದಲ್ಲಿ ಮತ್ತಷ್ಟು ಬದಲಾವಣೆಯ ಮೂಲಕ ಮತ್ತೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಕಂಪೆನಿ ಮೂಲಗಳು ತಿಳಿಸುತ್ತವೆ. ಮೂರು ಲೀಟರ್‌ ಎಂಜಿನ್‌ ಹೊಂದಿರುವ ವಾಹನ, ನೋಡಲು ಸದೃಢ. ಮುಂದಿನ ಗ್ರಿಲ್‌ ಆಕರ್ಷಕ. ಓಡುವಾಗ ತಂಪಾದ ಗಾಳಿ ಎಂಜಿನ್‌ನತ್ತ ನುಗ್ಗುವಂತೆ ಬಾನೆಟ್‌ ಅನ್ನು ತೆರೆಯಲಾಗಿದೆ. ಇದು ವಾಹನವನ್ನು ಮತ್ತಷ್ಟು ಆಕರ್ಷಕವನ್ನಾಗಿಸಿದೆ.

ಹೆದ್ದಾರಿಯಲ್ಲಿ ಮೈಸೂರು ಹೆದ್ದಾರಿಯ ಮೂಲಕ ಚಾಮರಾಜನಗರದ ರಾಜ್ಯ ಹೆದ್ದಾರಿ ಹಾಗೂ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಓಡಿಸಿ ಪರೀಕ್ಷಿಸಿದ ಅನುಭವದ ಮೇಲೆ ಒಂದೇ ಮಾತಿನಲ್ಲಿ ಹೇಳುವುದಾದರೆ ವಾಹನ ನಂಬಿಕೆಗೆ ಅರ್ಹ. ಇದರಲ್ಲಿ ಪ್ರಯಾಣ ಸುರಕ್ಷಿತ.

ಸರಾಸರಿ 11ರಿಂದ 11.5 ಕಿಲೋ ಮೀಟರ್‌ ಮೈಲೇಜ್‌ ನೀಡುವ ವಾಹನದ ರೋಡ್‌ ಗ್ರಿಪ್‌ ಉತ್ತಮ. ಎಲ್ಲ ಎಸ್‌ಯುವಿಗಳಂತೆ ಹಳ್ಳದ ರಸ್ತೆಗಳಲ್ಲಿ ವಾಹನ ಅಲುಗಾಟ ಇದ್ದೇ ಇದೆ. ತಿರುವುಗಳಲ್ಲಿ ರಸ್ತೆ ಮೇಲಿನ ಹಿಡಿತ ಮತ್ತಷ್ಟು ಉತ್ತಮವಾಗಬೇಕು ಅನಿಸುತ್ತದೆ. ಎಬಿಎಸ್‌ ವ್ಯವಸ್ಥೆಯಿದ್ದರೂ 50 ಡಿಗ್ರಿಗಿಂತ ಹೆಚ್ಚಿನ ತಿರುವುಗಳಲ್ಲಿ ವೇಗವಾಗಿ ಚಲಿಸಲು ಕಷ್ಟವಾಗುತ್ತದೆ. ಹೀಗಾಗಿ ಬ್ರೇಕ್‌ ಮೇಲೆ ಕಾಲು ಇರಿಸಬೇಕಾಗುತ್ತದೆ.

ಆಟೋಗೇರ್‌ ಮತ್ತು ಆಲ್‌ವೀಲ್‌ ಡ್ರೈವ್‌ ವಾಹನಗಳಲ್ಲಿ ಮೊದಲ ಗೇರ್‌ನಲ್ಲಿ ವಾಹನದ ಪಿಕ್‌ಅಪ್‌ ಯಾವಾಗಲೂ ತುಸು ನಿಧಾನ. ಇದು ಕೆಲ ಕ್ಷಣ ಮಾತ್ರ. ನಂತರ ವೇಗವರ್ಧನೆ ಚೆನ್ನಾಗಿದೆ. ಟಾಪ್‌ಗೇರ್‌ನಲ್ಲಿದ್ದಾಗ 4 ಮತ್ತು 3ನೇ ಗೇರ್‌ಗೆ ಬರುವ ಮ್ಯಾನುವಲ್‌ ವ್ಯವಸ್ಥೆಯಿದೆ. ರಿವರ್ಸ್‌ ಕ್ಯಾಮೆರಾ, ಮ್ಯಾಪ್‌, ಟಚ್‌ಸ್ಕ್ರೀನ್‌ ಡಿವಿಡಿ, ಅತ್ಯುತ್ತಮ ಎನ್ನಬಹುದಾದ ಹವಾನಿಯಂತ್ರಣ ವ್ಯವಸ್ಥೆಯಿದೆ. ಮುಂಬದಿ ಕೂರುವ ಇಬ್ಬರಿಗೂ ಏರ್‌ಬ್ಯಾಗ್‌ ವ್ಯವಸ್ಥೆ ಇದ್ದೇ ಇರುತ್ತದೆ.

ರಾತ್ರಿ ವೇಳೆ ಹೆಡ್‌ಲ್ಯಾಂಪ್‌ ಕಾರ್ಯಕ್ಷಮತೆ ಪ್ರಶಂಸೆಗೆ ಅರ್ಹ ಎನ್ನಬಹುದು. ವಾಹನಕ್ಕೆ ಅಳವಡಿಸಿರುವ ಕಡು ಬೂದು ಅಲಾಯ್‌ ವೀಲ್‌, ಬೆಳ್ಳಿ ಬಣ್ಣದ ಫಾಗ್‌ಲ್ಯಾಂಪ್‌ ಮತ್ತು ಹಿಂಬದಿ ದೀಪಗಳು ವಾಹನ ರಸ್ತೆಯಲ್ಲಿ ಎದ್ದು ಕಾಣಿಸುವಂತೆ ಮಾಡುತ್ತವೆ.

ಮಾರುಕಟ್ಟೆಯಲ್ಲಿ ಫಾರ್ಚುನರ್‌ ವೇಗವಾಗೇ ಓಡುತ್ತಿದೆ. ಅಂದಮೇಲೆ ಗ್ರಾಹಕರ ಮನಸ್ಸನ್ನು ಇದು ಗೆದ್ದಿದೆ ಎಂದೇ ಅರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.