ನವದೆಹಲಿ: ದೇಶದಲ್ಲಿ ವಾಹನಗಳ ಚಿಲ್ಲರೆ ಮಾರಾಟವು ಜುಲೈ ತಿಂಗಳಲ್ಲಿ ಶೇ 4ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.
ಕಳೆದ ವರ್ಷದ ಜುಲೈನಲ್ಲಿ 20,52,759 ವಾಹನಗಳು ಮಾರಾಟವಾಗಿದ್ದವು. ಈ ಬಾರಿ 19,64,213 ವಾಹನಗಳು ಮಾರಾಟವಾಗಿವೆ. ಪ್ರಯಾಣಿಕ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ಒಟ್ಟು ವಾಹನಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ ಎಂದು ಎಫ್‌ಎಡಿಎ ತಿಳಿಸಿದೆ.
ಪ್ರಯಾಣಿಕ ವಾಹನಗಳು ಕಳೆದ ಜುಲೈನಲ್ಲಿ 3,31,280 ಮಾರಾಟವಾಗಿದ್ದವು. ಈ ಬಾರಿ 3,28,613 ವಾಹನಗಳು ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 6ರಷ್ಟು ಇಳಿಕೆಯಾಗಿದೆ. 76,439 ವಾಣಿಜ್ಯ ವಾಹನಗಳ ಮಾರಾಟವಾಗಿದೆ. ಟ್ರ್ಯಾಕ್ಟರ್ ಮಾರಾಟದಲ್ಲಿ ಶೇ 11ರಷ್ಟು ಹೆಚ್ಚಳವಾಗಿದೆ.
ಬಿತ್ತನೆ ಚಟುವಟಿಕೆ ಮತ್ತು ಹೆಚ್ಚಿದ ಮಳೆಯಿಂದಾಗಿ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆದರೆ, ಆಗಸ್ಟ್‌ನಿಂದ ಹಬ್ಬಗಳ ಋತು ಪ್ರಾರಂಭವಾಗಿದ್ದು, ಮಾರಾಟ ಹೆಚ್ಚಳವಾಗುವ ವಿಶ್ವಾಸವನ್ನು ಡೀಲರ್‌ಗಳು ಹೊಂದಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.