ADVERTISEMENT

ಚಾರ್ಜಿಂಗ್‌ ಸ್ಟೇಷನ್‌; ಹುಂಡೈ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 9:32 IST
Last Updated 22 ಆಗಸ್ಟ್ 2019, 9:32 IST
ಹುಂಡೈ ಕೋನಾ ಎಲೆಕ್ಟ್ರಿಕ್‌
ಹುಂಡೈ ಕೋನಾ ಎಲೆಕ್ಟ್ರಿಕ್‌   

ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಎಸ್‌ಯುವಿ ಕೋನಾ ಬಿಡುಗಡೆ ಮಾಡಿರುವ ಹುಂಡೈ ಕಂಪನಿಯು ಅದಕ್ಕೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗಿದೆ.

ಅತ್ಯಂತ ವೇಗವಾಗಿ ಚಾರ್ಜ್‌ ಮಾಡಲು ಅನುಕೂಲ ಆಗುವಂತೆ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲು ಇಂಡಿಯನ್‌ ಆಯಿಲ್‌ ಕಂಪನಿಯೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ‌ಇಂಡಿಯನ್‌ ಆಯಿಲ್‌ನ ಆಯ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹುಂಡೈ ತಿಳಿಸಿದೆ.

ADVERTISEMENT

‘ವೇಗವಾಗಿ ಚಾರ್ಜ್‌ ಆಗಲು ಬಳಸುವ ಸಾಧನಗಳು ಮತ್ತು ಅದನ್ನು ಅಳವಡಿಸಲು ಹುಂಡೈ ಬಂಡವಾಳ ಹೂಡಿಕೆ ಮಾಡಲಿದೆ. ಒಂದು ಗಂಟೆಯೊಳಗೆ ಶೇ 80ರಷ್ಟು ಚಾರ್ಜ್‌ ಆಗಲಿದೆ’ ಎಂದು ಕಂಪನಿಯ ಸಿಇಒ ಎಸ್‌.ಎಸ್‌. ಕಿಮ್‌ ವಿವರಿಸಿದ್ದಾರೆ.

‘ಎಲೆಕ್ಟ್ರಿಕ್‌ ಎಸ್‌ಯುವಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ.ಬಿಡುಗಡೆ ಆದ 15 ದಿನದೊಳಗೆ 120 ಎಸ್‌ಯುವಿಗೆ ಬುಕಿಂಗ್‌ ಆಗಿದೆ’ ಎಂದು ತಿಳಿಸಿದ್ದಾರೆ.

ಒಮ್ಮೆ ಚಾರ್ಜ್‌ ಮಾಡಿದರೆ 452 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.ಬೆಲೆ ₹ 25.30 ಲಕ್ಷ (ಎಕ್ಸ್‌ಷೋರೂಂ) ಇದೆ.

* ₹ 7 ಸಾವಿರ ಕೋಟಿ - ಚೆನ್ನೈನಲ್ಲಿ ಹುಂಡೈ ಕಂಪನಿ ಮಾಡಲಿರುವ ಹೂಡಿಕೆ

* 500 - ಕಂಪನಿ ನೀಡಲಿರುವ ಉದ್ಯೋಗ

* ಇವಿಗೆ ಗಿಯರ್‌ ಬಾಕ್ಸ್‌: ಕೈನೆಟಿಕ್‌

ಕೈನೆಟಿಕ್‌ ಎಂಜಿನಿಯರಿಂಗ್‌ ಕಂಪನಿಯು ವಿದ್ಯುತ್‌ ಚಾಲಿತ ವಾಹನಗಳಿಗೆ ಗಿಯರ್‌ ಬಾಕ್ಸ್‌ ಮತ್ತು ಆ್ಯಕ್ಸಲ್‌ ತಯಾರಿಸಲು ಮುಂದಾಗಿದೆ. ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಬೇಡಿಕೆ ಬರುತ್ತಿದೆ. ಹೀಗಾಗಿ, 2 ಸ್ಪೀಡ್‌ ಗಿಯರ್‌ ಬಾಕ್ಸ್‌ ಮತ್ತು ರಿಯರ್‌ ಆ್ಯಕ್ಸಲ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ ಮಾಡಲು ನಿರ್ಧರಿಸಲಾಗಿದೆ.

1 ಕಿಲೊವಾಟ್‌ನಿಂದ 10 ಕಿಲೊವಾಟ್‌ ಸಾಮರ್ಥ್ಯದ ಕಿಟ್‌ ಅಭಿವೃದ್ಧಿ ಪಡಿಸಲಾಗುವುದು. ಸ್ಕೂಟರ್‌, ಮೊಪೆಡ್‌, ಪ್ರಯಾಣಿಕ ಮತ್ತು ಸರಕು ಸಾಗಿಸುವ ಮೂರು ಚಕ್ರಗಳ ವಾಹನ ಹಾಗೂ ಟ್ರಕ್‌ ಮತ್ತು ಬಸ್‌ಗಳಿಗೂ ಉಪಯುಕ್ತವಾಗಲಿದೆ.

ಸದ್ಯ ಇಂತಹ ಕಿಟ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ತಯಾರಿಕೆಗೆ ಹೆಚ್ಚಿನ ಅವಕಾಶ ಇದೆ. ಹಂತ ಹಂತವಾಗಿ ಕಿಟ್‌ ತಯಾರಿಕೆ ಮಾಡಲಾಗುವುದು. ಮೊದಲ ಹಂತದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರದ ಕಿಟ್‌ಗಳನ್ನು ತರಲಾಗುವುದು ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.