ADVERTISEMENT

ಅಪಘಾತಕ್ಕೆ ಕಡಿವಾಣ: ದುಬಾರಿ ದಂಡ

ಇ.ಎಸ್.ಸುಧೀಂದ್ರ ಪ್ರಸಾದ್
Published 21 ಆಗಸ್ಟ್ 2019, 19:30 IST
Last Updated 21 ಆಗಸ್ಟ್ 2019, 19:30 IST
ದಂಡ ವಸೂಲಿ
ದಂಡ ವಸೂಲಿ   

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ದಾಖಲೆ ಪ್ರಕಾರ ವಾರ್ಷಿಕ ಸುಮಾರು 5 ಲಕ್ಷ ಅಪಘಾತಗಳು ದೇಶದಲ್ಲಿ ಸಂಭವಿಸುತ್ತಿವೆ. ಇದರಲ್ಲಿ ಒಂದೂವರೆ ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅಸುರಕ್ಷಿತ ಹಾಗೂ ಅಜಾಗರೂಕತೆಯ ವಾಹನ ಚಾಲನೆಯೂ ಒಂದು ಕಾರಣ. ಇದನ್ನು ತಡೆಯಲು ಮೋಟಾರು ವಾಹನ ಕಾಯ್ದೆಯಲ್ಲಿ ಕಟ್ಟುನಿಟ್ಟಿನ ತಿದ್ದುಪಡಿ ತರಲಾಗಿದೆ.

***

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರದ ಪ್ರಸ್ತಾವನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅಂಕಿತ ಹಾಕಿದ್ದಾರೆ. ಆ ಮೂಲಕ ವಾಹನ ಪ್ರಪಂಚದಲ್ಲಿ ಹೊಸ ರೀತಿ, ನೀತಿಗಳು ಜಾರಿಗೆ ಬರಲಿವೆ.

ADVERTISEMENT

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ದಾಖಲೆ ಪ್ರಕಾರ, ವಾರ್ಷಿಕ ಸುಮಾರು 5 ಲಕ್ಷ ಅಪಘಾತಗಳು ದೇಶದಲ್ಲಿ ಸಂಭವಿಸುತ್ತಿವೆ. ಇದರಲ್ಲಿ ಒಂದೂವರೆ ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅಸುರಕ್ಷಿತ ಹಾಗೂ ಅಜಾಗರೂಕ ವಾಹನ ಚಾಲನೆಯೂ ಒಂದು ಕಾರಣ. ಇದಕ್ಕಾಗಿ ಕಟ್ಟುನಿಟ್ಟಿನ ಕಾನೂನನ್ನು ಈ ನೂತನ ತಿದ್ದುಪಡಿ ಒಳಗೊಂಡಿದೆ.

ಮೂರು ದಶಕಗಳ ನಂತರ ತಿದ್ದುಪಡಿಗೊಳ್ಳುತ್ತಿರುವ ಈ ಕಾಯ್ದೆಯು ತಂತ್ರಜ್ಞಾನದ ಬಳಕೆ ಮೂಲಕ ಭ್ರಷ್ಟಾಚಾರ ತಡೆಗಟ್ಟುವುದರ ಜತೆಗೆ ವಾಹನ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ನೆರವಾಗಲಿದೆ ಎಂದೇ ಹೇಳಲಾಗುತ್ತಿದೆ. ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಸಮ್ಮತಿ ಪಡೆದು ಈಗ ಕಾಯ್ದೆಯಾಗಿ ಜಾರಿಗೆ ಬಂದಿದೆ.

ಸಂಚಾರ ನಿಯಮ ಉಲ್ಲಂಘಿಸುವವರು, ವೇಗವಾಗಿ, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವವರು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರು, ಹೆಲ್ಮೆಟ್ ಹಾಗೂ ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡುವವರಿಗೆ ಭಾರೀ ದಂಡ ವಿಧಿಸಲು ಈ ಕಾಯ್ದೆ ನೆರವಾಗಲಿದೆ. ಈ ಮಸೂದೆಯು 2016ರಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿತ್ತು. 2017ರಲ್ಲೂ ಮತ್ತೆ ಬಹುಮತಕ್ಕೆ ಇಡಲಾಗಿತ್ತು. ಆಗ ಇದಕ್ಕೆ ರಾಜ್ಯಸಭೆಯಲ್ಲಿ ಸೋಲಾಗಿತ್ತು.

ದೋಷಪೂರಿತ ವಾಹನ ಹಿಂಪಡೆಯಲು ಕಾನೂನು: ನೂತನ ಕಾಯ್ದೆ ಪ್ರಕಾರ ಸುರಕ್ಷಿತ ಸಂಚಾರಕ್ಕೆ ತೊಡಕಾಗುವ ಹಾಗೂ ಪರಿಸರಕ್ಕೆ ಮಾರಕವಾಗಬಲ್ಲ ವಾಹನಗಳ ದೋಷ ಸರಿಪಡಿಸಲು, ದೋಷಪೂರಿತ ವಾಹನಗಳನ್ನು ಕಂಪನಿಗಳು ಹಿಂದಕ್ಕೆ ಪಡೆಯುವಂತೆ ಸೂಚನೆ ನೀಡುವ ಅಧಿಕಾರವನ್ನು ಈ ಕಾಯ್ದೆ ಕೇಂದ್ರಕ್ಕೆ ನೀಡಿದೆ. ಇದರೊಂದಿಗೆ ಹೀಗೆ ಹಿಂಪಡೆದ ವಾಹನದ ಪೂರ್ಣ ಹಣವನ್ನು ಗ್ರಾಹಕರಿಗೆ ನೀಡುವುದು ಅಥವಾ ದೋಷಪೂರಿತ ಬಿಡಿಭಾಗ ಹೊಂದಿದ್ದರೆ ಹೊಸ ವಾಹನವನ್ನು ನೀಡುವುದೂ ಒಳಗೊಂಡಿದೆ.

ವಾಹನ ತಯಾರಿಕೆಯಲ್ಲಿ ಸರ್ಕಾರದ ನಿಯಮಗಳ ಪಾಲನೆ ಆಗದಿದ್ದಲ್ಲಿ ಅಂಥ ಕಂಪನಿಗೆ ₹ 100ಕೋಟಿ ದಂಡ ಅಥವಾ ಇದಕ್ಕೆ ಕಾರಣರಾದವರಿಗೆ ಜೈಲು ಶಿಕ್ಷೆಯೂ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಅಪಘಾತ ಗಾಯಾಳುಗಳಿಗೆ ಹೆಚ್ಚಿನ ನೆರವು: ಅಪಘಾತ ಸಂಭವಿಸಿದಾಗ ಕಾನೂನು ಕಟ್ಟಳೆಗೆ ಹೆದರಿ ಸಂತ್ರಸ್ತರ ನೆರವಿಗೆ ಧಾವಿಸುವವರು ತೀರಾ ಕಡಿಮೆ. ಹರೀಶ್ ನಿಧನದ ನಂತರ ರಾಜ್ಯಸರ್ಕಾರ ಇದಕ್ಕೊಂದು ಕಾನೂನು ತಿದ್ದುಪಡಿಯನ್ನೂ ತಂದಿತ್ತು. ಇಂಥ ಘಟನೆಗಳು ದೇಶವ್ಯಾಪಿ ನಿತ್ಯ ಸಂಭವಿಸುತ್ತಿವೆ. ಇದಕ್ಕೊಂದು ಪರಿಹಾರ ಎಂಬಂತೆ, ಅಪಘಾತಕ್ಕೀಡಾಗಿ ಸಾವು, ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿಯನ್ನು ಮುಂಗಡ ಪಾವತಿ ಇಲ್ಲದೆ ಯಾವುದೇ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಬಹುದಾಗಿದೆ. ಜತೆಗೆ ನೆರವಾಗುವ ವ್ಯಕ್ತಿಗೆ ಕಾನೂನು ಹೆಸರಿನಲ್ಲಿ ತೊಂದರೆ ಕೊಡದಂತೆಯೂ ಮಸೂದೆಯಲ್ಲಿ ಹೇಳಲಾಗಿದೆ.

ಅಪಘಾತದಲ್ಲಿ ಮೃತಪಟ್ಟರೆ ಅಥವಾ ಗಂಭೀರವಾಗಿ ಗಾಯಗೊಂಡರೆ ತಕ್ಷಣದ ನೆರವಿಗಾಗಿ ಮೂರನೇ ವ್ಯಕ್ತಿ ವಿಮೆ ಮೂಲಕ ಕೊಡಿಸಲು ಸರ್ಕಾರ ಯೋಜನೆ ರೂಪಿಸಲು ಅವಕಾಶವಿದೆ.

ಮೃತಪಟ್ಟ ವ್ಯಕ್ತಿಗೆ ₹ 25ಸಾವಿರದಿಂದ ₹ 2ಲಕ್ಷದವರೆಗೆ ಹಾಗೂ ಗಂಭೀರವಾಗಿ ಗಾಯಗೊಂಡರೆ ₹12,500ರಿಂದ ₹50ಸಾವಿರದವರೆಗೆ ಪರಿಹಾರ ಕೊಡಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ದೇಶದ ರಸ್ತೆ ಮೇಲೆ ಸಂಚರಿಸುವ ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಕಲ್ಪಿಸುವ ನಿಟ್ಟಿನಲ್ಲಿ ನಿಧಿ ಸ್ಥಾಪನೆಗೂ ಅವಕಾಶ ಕಲ್ಪಿಸಲಾಗಿದೆ.

ಚಾಲನಾ ಪರವಾನಗಿ ಸುಲಭ: ಇ–ಆಡಳಿತ ಮೂಲಕ ಚಾಲನಾ ಪರವಾನಗಿ ಪಡೆಯಲೂ ಈ ಕಾಯ್ದೆ ಅವಕಾಶ ಕಲ್ಪಿಸಿದೆ. ಆನ್‌ಲೈನ್ ಮೂಲಕವೇ ಕಲಿಕಾ ಚಾಲನಾ ಪರವಾನಗಿ ಪಡೆಯಬಹುದಾಗಿದೆ. ಇದಕ್ಕೆ ವ್ಯಕ್ತಿಯ ಗುರುತು ದಾಖಲಿಸುವ ದಾಖಲೆ ನೀಡುವುದು ಕಡ್ಡಾಯ. ಚಾಲನಾ ಪರವಾನಗಿಗೆ ಆಧಾರ್‌ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ನಕಲಿ ಚಾಲನಾ ಪರವಾನಗಿಗೆ ಕಡಿವಾಣ ಹಾಕಲು ಯತ್ನಿಸಲಾಗಿದೆ.

ವಾಣಿಜ್ಯ ವಾಹನಗಳ ಚಾಲನಾ ಪರವಾನಗಿ ಈ ಮೊದಲು 3 ವರ್ಷಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇದನ್ನು 5 ವರ್ಷಕ್ಕೆ ಹೆಚ್ಚಿಸಲಾಗಿದೆ. ಪರವಾನಗಿ ಅವಧಿ ಪೂರ್ಣಗೊಳ್ಳುವ ಒಂದು ವರ್ಷ ಮೊದಲು ಅರ್ಜಿ ಸಲ್ಲಿಸಬೇಕು. ಅಂಗವಿಕಲರಿಗೆ ಸುಲಭವಾಗಿ ಚಾಲನಾ ಪರವಾನಗಿ ಪಡೆಯಲು ಕಾಯ್ದೆ ಸರಳೀಕರಿಸಲಾಗಿದೆ.

ಈ ಎಲ್ಲದರ ಮೂಲಕ ಸಂಚಾರ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ, ಹೊಸ ಕಾನೂನುಗಳ ರಚನೆ ಹಾಗೂ ಆರ್‌ಟಿಒ ಇಲಾಖೆ ಹಸ್ತಕ್ಷೇಪ ತಪ್ಪಿಸುವ ನಿಟ್ಟಿನಲ್ಲಿ ನೂತನ ತಿದ್ದುಪಡಿ ಸಹಕಾರಿಯಾಗಲಿದೆ ಎಂದೇ ವಾಹನ ಪ್ರಪಂಚ ಹೇಳುತ್ತಿದೆ.

ಡೀಲರ್ ಹಂತದಲ್ಲಿ ವಾಹನ ನೋಂದಣಿ: ಖರೀದಿಸುವ ಹೊಸ ವಾಹನಗಳ ನೋಂದಣಿ ಇನ್ನು ಮುಂದೆ ಡೀಲರ್‌ ಹಂತದಲ್ಲೇ ನಡೆಯಲಿದೆ. ಜತೆಗೆ ತಾತ್ಕಾಲಿಕ ನೋಂದಣಿಗೆ ಕಡಿವಾಣ ಹಾಕಲಾಗಿದೆ.

ಸದ್ಯಕ್ಕೆ ಬಹಳಷ್ಟು ವಾಹನಗಳು ತಾತ್ಕಾಲಿಕ ನೋಂದಣಿ ಪಡೆದು ವರ್ಷಗಟ್ಟಲೆ ಕಾಯಂ ನೋಂದಣಿಯಾಗದೆ ಸಂಚರಿಸುತ್ತಿವೆ. ಇದಕ್ಕೆ ಕಾಯ್ದೆ ಕಡಿವಾಣ ಹಾಕಲಿದೆ. ನೋಂದಣಿ ಸಂದರ್ಭದಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಡೀಲರ್‌ ಬಳಿಯೇ ಹೋಗಿ ವಾಹನ ತಪಾಸಣೆ ಕೈಗೊಳ್ಳಲು ಕಾಯ್ದೆ ತಿಳಿಸಿದೆ.

ವಾಹನಗಳ ನೋಂದಣಿ ಮತ್ತು ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ರಾಷ್ಟ್ರೀಕೃತಗೊಳಿಸಲಾಗುತ್ತಿದೆ. ಇದಕ್ಕಾಗಿ ‘ವಾಹನ್‌’ ಮತ್ತು ‘ಸಾರಥಿ’ ಎಂಬ ವೇದಿಕೆ ಮೂಲಕ ದೇಶವ್ಯಾಪಿ ಏಕರೂಪ ಸಾರಿಗೆ ಸಂಬಂಧಿತ ನೋಂದಣಿ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ.

ಟ್ಯಾಕ್ಸಿಗಳಿಗೂ ಕಾಯ್ದೆಯಲ್ಲಿ ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ. ಕಾಯ್ದೆಯ ಈ ಹಿಂದಿನ ಆವೃತ್ತಿಯಲ್ಲಿ ಇವುಗಳ ಕುರಿತು ಸ್ಪಷ್ಟ ನೀತಿ ಇರಲಿಲ್ಲ. ಈ ನೂತನ ತಿದ್ದುಪಡಿಯಲ್ಲಿ ಟ್ಯಾಕ್ಸಿ ಸೇವೆಗಳನ್ನು ಪಡೆಯಲು ಗ್ರಾಹಕರನ್ನು ಚಾಲಕರೊಂದಿಗೆ ಬೆಸೆಯಲು ಡಿಜಿಟಲ್‌ ಸ್ವರೂಪ ನೀಡಿದೆ. ರಾಜ್ಯ ಸರ್ಕಾರದ ವತಿಯಿಂದ ಈ ಟ್ಯಾಕ್ಸಿಗಳಿಗೆ ಪರವಾನಗಿ ವಿತರಿಸಲಾಗುತ್ತದೆ. ಈ ವ್ಯವಸ್ಥೆಗೆ ಸಾರಿಗೆ ಕಾಯ್ದೆ ಜತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.