ADVERTISEMENT

ಸೀಟ್‌ಬೆಲ್ಟ್ ಸುರಕ್ಷತಾ ಅಭಿಯಾನ

ನಿಸಾನ್‌– ಸೇವ್‌ಲೈಫ್ ಅಧ್ಯಯನ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 19:45 IST
Last Updated 16 ಜನವರಿ 2019, 19:45 IST
   

‘ಕಾರಿನ ಹಿಂಭಾಗದಲ್ಲಿ ಕೂರುವಂತಹ ಪ್ರಯಾಣಿಕರಲ್ಲಿ ಶೇ 90ರಷ್ಟು ಮಂದಿ ಸೀಟ್‌ ಬೆಲ್ಟ್ ಬಳಸದೇ, ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ’–

ಇದು ನಿಸಾನ್ ಸೇವ್‌ಲೈಫ್ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿರುವ ಅಂಶ. ನಿಸಾನ್ ಇಂಡಿಯಾ ಮತ್ತು ಸೇವ್‌ಲೈಫ್ ಫೌಂಡೇಷನ್ ನಡೆಸಿದ ಸಂಶೋಧನೆಯಿಂ ಈ ಮಾಹಿತಿ ಲಭ್ಯವಾಗಿದೆ. ಈ ವರದಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಾದ ದೆಹಲಿ, ಮುಂಬೈ, ಜೈಪುರ, ಕೊಲ್ಕತ್ತಾ ಮತ್ತು ಲಖನೌ ನಗರಗಳನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಪ್ರಕಾರ ಶೇ 98ರಷ್ಟು ಜನರು ಹಿಂಬದಿ ಸೀಟ್‌ಬೆಲ್ಟ್ ಬಳಸುತ್ತಿಲ್ಲ. ಸೀಟ್‌ಬೆಲ್ಟ್‌ ಇರುವ ವಾಹನಗಳ ಸಂಖ್ಯೆಯೂ ಕಡಿಮೆ. ಇದ್ದವರೂ ತಾವು ಬಳಸುತ್ತಿಲ್ಲ ಎಂಬುದನ್ನು ಅಧ್ಯಯನದ ವೇಳೆ ಒಪ್ಪಿಕೊಂಡಿದ್ದಾರೆ.

ADVERTISEMENT

ಅಧ್ಯಯನದ ವೇಳೆ ದೊಡ್ಡವರಷ್ಟೇ ಅಲ್ಲದೇ ಮಕ್ಕಳ ಸುರಕ್ಷತೆಗೂ ಗಮನ ನೀಡಲಾಗಿದೆ.

ಸೀಟ್‌ಬೆಲ್ಟ್‌ ಜೊತೆಗೆ ಹೆಲ್ಮೆಟ್ ಬಳಕೆ ಕುರಿತು ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಶೇ 92.8ರಷ್ಟು ಜನರು ಮಕ್ಕಳಿಗೆ ಹೆಲ್ಮೆಟ್‌ಗಳನ್ನು ಹಾಕುವುದಿಲ್ಲ. ಶೇ 20ರಷ್ಟು ಮಂದಿ ಮಾತ್ರ, ಮಕ್ಕಳ ಹೆಲ್ಮೆಟ್‌ಗಳನ್ನು ಹೊಂದಿದ್ದಾರಂತೆ. ಇತ್ತೀಚೆಗೆ ರಸ್ತೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶಗಳ ಪ್ರಕಾರ 2017ರಲ್ಲಿ 9408 ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನದಲ್ಲಿ ಚಲಿಸುವ ಮಕ್ಕಳ ಸುರಕ್ಷತೆ ಕುರಿತ ಅಧ್ಯಯನ ಅತ್ಯಂತ ಪ್ರಸ್ತುತವಾಗಿದೆ.

ವರದಿ ಕುರಿತು ಮಾತನಾಡಿದ ಸಚಿವ ನಿತಿನ್ ಗಡ್ಕರಿ, ‘ಮೂಲಸೌಕರ್ಯ ಅಭಿವೃದ್ಧಿ ತೀವ್ರಗತಿಯಲ್ಲಿ ಸಾಗುತ್ತಿದೆ. ಈ ವೇಳೆ ರಸ್ತೆ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು. ಈ ಕುರಿತು ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಉತ್ತಮ ಕೆಲಸ. ಸರ್ಕಾರ ಮತ್ತು ಸಂಸ್ಥೆಗಳು ಒಟ್ಟಾಗಿ ಇಂಥ ಕೆಲಸ ಮಾಡಬೇಕು. ರಸ್ತೆ ಸುರಕ್ಷತೆಯ ವಿಚಾರವನ್ನು ಜನರ ಚಳವಳಿಯಾಗಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವರದಿ ಕುರಿತು ನಿಸಾನ್ ಇಂಡಿಯಾದ ಅಧ್ಯಕ್ಷ ಥಾಮಸ್ ಕ್ಯೂಹ್ಲ್, ‘ಭಾರತದಲ್ಲಿ ಹಿಂಬದಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ನಿಸಾನ್ ಕಂಪನಿ ಸೇವ್‌ಲೈಫ್ ಫೌಂಡೇಷನ್ ಮತ್ತು ಶಾರ್ಪ್‌ ಸಂಸ್ಥೆಯ ಸಹಯೋಗದೊಂದಿಗೆ ಸೀಟ್‌ಬೆಲ್ಟ್ ಬಳಕೆ ಮತ್ತು ರಸ್ತೆ ಸುರಕ್ಷತೆ ಕುರಿತು ಜನರ ಗಮನಸೆಳೆಯಲಾಗುತ್ತಿದೆ’ ಎಂದರು. ಈಗಾಗಲೇ ಅಭಿಯಾನದ ಮೊದಲ ಹಂತದಲ್ಲಿ 12 ನಗರಗಳ 240 ಶಾಲೆಗಳಲ್ಲಿನ 2ಸಾವಿರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.