ADVERTISEMENT

ಅತ್ಯುತ್ತಮ ಡಿಸೈನ್‌ನ‘ಆಲ್ಟ್ರೋಝ್’

ಬಿ.ಎಂ.ಹನೀಫ್
Published 18 ಡಿಸೆಂಬರ್ 2019, 19:30 IST
Last Updated 18 ಡಿಸೆಂಬರ್ 2019, 19:30 IST
ಅಲ್ಟ್ರೋಜ್‌
ಅಲ್ಟ್ರೋಜ್‌   

ಪ್ರೀ ಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಟಾಟಾ ಮೋಟರ್ಸ್ ಎಂಟ್ರಿ ಕೊಟ್ಟಿದೆ. ಟಾಟಾ ಆಲ್ಟ್ರೋಝ್ ಪೆಟ್ರೋಲ್ ಮತ್ತು ಡೀಸೆಲ್‌ ಕಾರುಗಳು ಮುಂದಿನ ಜನವರಿಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಈಗಾಗಲೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಈ ವಿಭಾಗದ ಹುಂಡೈನ ಐ20 ಮತ್ತು ಮಾರುತಿ ಸುಜುಕಿಯ ಬಲೆನೊಕಾರುಗಳಿಗೆ ಪ್ರತಿಸ್ಪರ್ಧೆ ಒಡ್ಡುವುದು ಟಾಟಾ ಮೋಟರ್ಸ್‌ನ ಗುರಿ.

ಈ ಕಾರಿನ ಟೆಸ್ಟ್‌ಡ್ರೈವ್‌ ನಡೆದದ್ದು ರಾಜಸ್ಥಾನದ ಜೈಸಲ್ಮೇರ್‌ ಹೊರವಲಯದಲ್ಲಿ. ಜೈಸಲ್ಮೇರ್‌ನಿಂದ ಪಾಕಿಸ್ತಾನದ ಗಡಿಯ ಲೋಗೋವಾಲ್‌ ಎನ್ನುವ ಹಳ್ಳಿಯವರೆಗೆ ಸುಮಾರು 110 ಕಿ.ಮೀ.ಗಳ ಪ್ರಯಾಣ. ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ ನಿರ್ಮಿಸಿದ ಸಿಂಗಲ್‌ ರಸ್ತೆಯ ಗುಣಮಟ್ಟ ಚೆನ್ನಾಗಿದ್ದರೂ ಏರಿಳಿತ, ತಿರುವುಗಳಿಗೇನೂ ಕೊರತೆ ಇರಲಿಲ್ಲ. ಮರುಭೂಮಿಯ ನಡುವಣ ಈ ರಸ್ತೆಗೆ ಅಲ್ಲಲ್ಲಿ ಮರಳುರಾಶಿಯೂ ಹರಡಿಕೊಂಡಿದೆ. ಹೋಗುವಾಗ ಪೆಟ್ರೋಲ್ ಮತ್ತು ಬರುವಾಗ ಡೀಸೆಲ್‌ ಕಾರು ಚಲಾಯಿಸಿದ್ದು ನಿಜಕ್ಕೂ ಆಹ್ಲಾದಕರ ಡ್ರೈವಿಂಗ್ ಅನುಭವ.

ಆಲ್ಟ್ರೋಝ್‌ನ ಹೆಗ್ಗಳಿಕೆ ಅದರ ಸುರಕ್ಷಾ ಮಾನದಂಡಗಳು ಮತ್ತು ಅತ್ಯುತ್ತಮ ಡಿಸೈನ್ ಎನ್ನುವುದು ಸ್ಪಷ್ಟ. ಹೊಸ ಅಲ್ಫಾ ಪ್ಲಾಟ್‌ಫಾರಂ ಮತ್ತು 2.0 ವಿನ್ಯಾಸ ಇಡೀ ಕಾರಿಗೆ ಮೆರುಗು ನೀಡಿದೆ. ಬಿಎಸ್‌6 ಮಾನದಂಡಗಳನ್ನು ಅಳವಡಿಸಿಕೊಂಡಿರುವ ಈ ಭವಿಷ್ಯದ ಕಾರು, ಸ್ವಲ್ಪ ಎತ್ತರವೇ ಎನ್ನಬಹುದಾದ ಬಾನೆಟ್‌ ಹೊಂದಿದ್ದರೂ, ಸೀಟನ್ನು ಎತ್ತರಿಸುವ ಸೌಕರ್ಯ ಇರುವುದರಿಂದ ಚಾಲನೆಗೆ ಕಿರಿಕಿರಿ ಅನ್ನಿಸಲಿಲ್ಲ. ಭವಿಷ್ಯದ ಮಾನದಂಡಗಳ ಬಗ್ಗೆ ಗಮನ ಹರಿಸಿರುವ ಕಂಪನಿ ಬಿಎಸ್‌6 ಅಳವಡಿಸಿಕೊಂಡಿದೆ. ಕಾರಿನ ಹೊರವಿನ್ಯಾಸದಲ್ಲಿ ಕಪ್ಪು ಬಣ್ಣದ ಬೆಲ್ಟ್‌ ಲೈನ್‌ ಮತ್ತು ತ್ರೀ ಡಿ ಡಿಸೈನ್‌ನ ಟೇಲ್‌ ಲೈಟ್‌ ಗಮನ ಸೆಳೆಯುತ್ತದೆ. ಸಹಜವಾಗಿಯೇ ಗೋಲ್ಡ್ ಪ್ರೀಮಿಯಂ ಟಚ್‌ ಎದ್ದುಕಾಣುತ್ತದೆ.

ADVERTISEMENT

ಕಾರಿನ ಒಳಗಿನ ಇಂಟೀರಿಯರ್‌ ಕೂಡಾ ಉತ್ತಮವಾಗಿದೆ. ಹರ್ಮಾನ್‌ನ 7 ಇಂಚುಗಳ ಎನ್‌ಫೋಟೈನ್‌ಮೆಂಟ್‌ ಸ್ಕ್ರೀನ್‌ನಲ್ಲಿ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಉನ್ನತ ಗುಣಮಟ್ಟದ ಹರ್ಮಾನ್‌ ಸ್ಟೀರಿಯೊ ಈ ಕಾರಿಗೆಂದೇ ವಿಶೇಷವಾಗಿ ಅಭಿವೃದ್ಧಿ ಪಡಿಸಲಾಗಿದೆ. ಆಂಡ್ರಾಯ್ಡ್‌ ಅಟೊ ಮತ್ತು ಆ್ಯಪಲ್‌ ಕಾರ್‌ಪ್ಲೇ ಎರಡೂ ಇವೆ.ರಾತ್ರಿ ವೇಳೆಗೆ ಒಳಭಾಗದ ಆ್ಯಂಬಿಯಂಟ್‌ ಲೈಟಿಂಗ್‌ ಉತ್ತಮವಾಗಿದೆ. ಒಳಾಂಗಣದ ಹೊಳೆಯುವ ನೋಟ, ಡ್ಯಾಶ್‌ಟಾಪ್‌ನ ಅತ್ಯುತ್ತಮ ಫಿನಿಶಿಂಗ್‌, ಬಾಟಲ್‌ ಸಹಿತ ಉಪಯುಕ್ತ ವಸ್ತುಗಳನ್ನು ಇಡಲು ಹಲವು ಕ್ಯಾಬಿನ್‌ಗಳು ವಿಶೇಷ ಎನ್ನಿಸುವಂತಿವೆ. ಚಾರ್ಜಿಂಗ್‌ ಸಾಕೆಟ್‌, ಯುಎಸ್‌ಬಿ ಔಟ್‌ಲೆಟ್‌, ಕೀಲೆಸ್‌ ಸ್ಟಾರ್ಟಿಂಗ್‌, ಅಟೊಮ್ಯಾಟಿಕ್‌ ಹವಾನಿಯಂತ್ರಣ, ಹಿಂದಿನ ಸೀಟಿನಲ್ಲೂ ಹವಾನಿಯಂತ್ರಣದ ಕಿಂಡಿಗಳು, ಆರ್ಮ್ ರೆಸ್ಟ್‌, ಸೈಡ್‌ ಮಿರರ್‌ನ ಪವರ್‌ ಫೋಲ್ಡಿಂಗ್‌, ಫಾಗ್‌ ಲ್ಯಾಂಪ್ಸ್‌, ಹಿಂದಕ್ಕೆ ಚಲಾಯಿಸುವಾಗ ನೆರವಿಗೆ ಬರುವ ಪಾರ್ಕಿಂಗ್‌ ಸೆನ್ಸರ್‌ ಮತ್ತು ಕ್ಯಾಮೆರಾಗಳ ಗುಣಮಟ್ಟ ಅತ್ಯುತ್ತಮವಾಗಿದೆ. ಕಾರಿನ ಬಾಗಿಲು 90 ಡಿಗ್ರಿಯಷ್ಟು ತೆರೆದುಕೊಳ್ಳುವುದು ವಿಶೇಷ. ಪೆಟ್ರೋಲ್‌ ಇಂಡಿಕೇಟರ್‌ನಲ್ಲಿ ನೀಲಿ ಬಣ್ಣ, ನಿಧಾನಕ್ಕೆ ಕೆಳಕ್ಕೆ ಸರಿಯುವುದು ವಿಶಿಷ್ಟ ಅನುಭವ.

ಪೆಟ್ರೋಲ್‌ ಕಾರಿನಲ್ಲಿ 1.2 ಲೀಟರ್‌, 86 ಹಾರ್ಸ್‌ ಪವರ್‌ನ ಎಂಜಿನ್‌, ಅತ್ಯಧಿಕ ಕಂಪ್ರೆಷರ್‌ ಅನುಪಾತವನ್ನು ಅನುಭವಕ್ಕೆ ತರುತ್ತದೆ. ಚಾಸಿ ಗಟ್ಟಿಮುಟ್ಟಾಗಿದ್ದು ಚಾಲನೆಯ ಸ್ಥಿರತೆ ಗಮನಾರ್ಹ. ಅತ್ಯುತ್ತಮ ರೋಡ್‌ಗ್ರಿಪ್‌ ಮತ್ತು ಸ್ಟೇರಿಂಗ್‌ ತಿರುಗಿಸುವಾಗಿನ ಸರಾಗದ ಅನುಭವ ಖುಷಿ ಕೊಡುತ್ತದೆ. ಆದರೆ ಏಸಿ ಹಾಕಿ ಅತ್ಯಧಿಕ ಸ್ಪೀಡ್‌ನಲ್ಲಿ ಹೋಗುವಾಗ ಗೇರು ಬದಲಾಯಿಸಿ ನಿಧಾನಿಸಿದ ಬಳಿಕ ಮತ್ತೆ ವೇಗ ವರ್ಧಿಸಬೇಕೆಂದರೆ ಸ್ವಲ್ಪ ಸಮಯ ಹಿಡಿಯುತ್ತದೆ. ವೇಗ ಹೆಚ್ಚಿಸಿ ಸ್ಪೀಡೋಮೀಟರ್‌ನಲ್ಲಿ 80, 100 ಮತ್ತು 120 ಕಿಮೀ ದಾಟುವಾಗಎಚ್ಚರಿಕೆಯ ಬೀಫ್‌ ಶಬ್ದ ಬರುವುದು ಸುರಕ್ಷತೆಗೆ ಟಾಟಾ ಒತ್ತು ನೀಡಿರುವುದಕ್ಕೆ ಸಾಕ್ಷಿ.

ಡೀಸೆಲ್‌ ಕಾರಿನಲ್ಲಿ 1.5 ಲೀಟರ್‌, ನಾಲ್ಕು ಸಿಲಿಂಡರ್‌ಗಳ 90 ಎಚ್‌ಪಿ ಎಂಜಿನ್‌ ಹಿತಕರ ಡ್ರೈವಿಂಗ್‌ನ ಅನುಭವ ನೀಡುತ್ತದೆ. ಐದು ಗೇರ್‌ಗಳ ವಿಭಾಗದಲ್ಲಿ ಇದು ಅತ್ಯುತ್ತಮ ಕಾರು ಎನ್ನಬಹುದು. ಹೈಯರ್‌ ಫುಯೆಲ್‌ ಇಂಜೆಕ್ಷನ್‌ ಕಾರಿನ ಕ್ಷಮತೆಯನ್ನು ಹೆಚ್ಚಿಸಿದೆ. ಆದರೆ 110 ಕಿಮೀ ವೇಗ ದಾಟಿದಾಗ ಕಾರು ಸಣ್ಣಗೆ ಅಲುಗಾಡುವ ಅನುಭವ ಆಗುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಎರಡರಲ್ಲೂ ಎಂಜಿನ್‌ನ ಸಣ್ಣ ಶಬ್ದ ಕೇಳಿಸುವುದು ಮೈನಸ್‌ ಪಾಯಿಂಟ್.

ಕಾರಿನಲ್ಲಿ ಲಗೇಜ್‌ ಸ್ಥಳಾವಕಾಶ ಹೆಚ್ಚಿದೆ. ಆದರೆ ಈ ಕಾರಣಕ್ಕಾಗಿ ಇಂಧನ ಟ್ಯಾಂಕರ್‌ನ ಅಳತೆ ಕಡಿಮೆ ಆದಂತಿದೆ. 37 ಲೀಟರ್‌ಗಳಷ್ಟು ಪೆಟ್ರೋಲ್‌/ ಡೀಸೆಲ್‌ ತುಂಬಿಸಬಹುದು. ಎರಡು ಏರ್‌ ಬ್ಯಾಗ್‌ಗಳಿವೆ. ‘ಕಾರಿನಲ್ಲಿ ಸುರಕ್ಷತೆಯ ತಂತ್ರಜ್ಞಾನಕ್ಕೆ ಹೆಚ್ಚು ಒತ್ತುಕೊಟ್ಟಿರುವುದರಿಂದ ಹಿಂದಿನ ಸೀಟುಗಳಿಗೆ ಏರ್‌ಬ್ಯಾಗ್‌ಗಳ ಅವಶ್ಯಕತೆ ಕಾಣಿಸಲಿಲ್ಲ’ ಎನ್ನುವುದು ಕಂಪನಿಯ ವಿವರಣೆ. ಹಿಂದಿನ ಸೀಟಿನಲ್ಲಿ ಕಾಲಿಡುವಲ್ಲಿ ಏರುತಗ್ಗು ಇಲ್ಲದಿರುವುದು ಮೂವರು ಆರಾಮವೆನ್ನಿಸುವಂತೆ ಕೂರಲು ಅನುಕೂಲವಾಗಿದೆ. ಆದರೆ ಹೆಡ್‌ರೂಮ್‌ ಇನ್ನೂ ಸ್ವಲ್ಪ ಎತ್ತರವಿದ್ದರೆ ಒಳ್ಳೆಯದಿತ್ತು ಅನ್ನಿಸಿತು.ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಟಿ, ಎಕ್ಸ್‌ಝಡ್ ಮತ್ತು ಎಕ್ಸ್‌ಝಡ್‌ (ಒ) ಹೀಗೆ ಹಲವು ವೈವಿಧ್ಯಗಳಿಗೆ ತಕ್ಕಂತೆ 14 ಮತ್ತು 15 ಇಂಚುಗಳ ಟೈರ್‌ಗಳಿವೆ.

ಒಂದಂತೂ ಸ್ಪಷ್ಟ– ಈ ವಿಭಾಗದಲ್ಲಿ ಆಲ್ಟ್ರೋಝ್‌ನ ಅತ್ಯುತ್ತಮ ವಿನ್ಯಾಸ ಪ್ರತಿಸ್ಪರ್ಧಿಗಳಿಗೆ ತಲೆನೋವು ತರುವಂತಿದೆ. ಸಾಮಾನ್ಯವಾಗಿ ಬೆಲೆಸಮರದಲ್ಲಿ ಟಾಟಾ ಒಂದು ಹೆಜ್ಜೆ ಮುಂದೇ ಇರುವುದರಿಂದ, ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.