ADVERTISEMENT

ಬೆಂಗಳೂರಿನಲ್ಲಿ ಷೋರೂಂ ತೆರೆಯಲು ಜಾಗ ಹುಡುಕುತ್ತಿರುವ ಟೆಸ್ಲಾ

ರಾಯಿಟರ್ಸ್
Published 8 ಏಪ್ರಿಲ್ 2021, 16:24 IST
Last Updated 8 ಏಪ್ರಿಲ್ 2021, 16:24 IST
ಅಮೆರಿಕದಲ್ಲಿ ಬಳಕೆಯಲ್ಲಿರುವ ‘ಮಾಡೆಲ್ 3’ ಕಾರು (ಚಿತ್ರ: ರಾಯಿಟರ್ಸ್)
ಅಮೆರಿಕದಲ್ಲಿ ಬಳಕೆಯಲ್ಲಿರುವ ‘ಮಾಡೆಲ್ 3’ ಕಾರು (ಚಿತ್ರ: ರಾಯಿಟರ್ಸ್)   

ನವದೆಹಲಿ: ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧತೆ ನಡೆಸಿರುವ ಟೆಸ್ಲಾ ಕಾರು ಕಂಪನಿಯು ಬೆಂಗಳೂರು ಸೇರಿದಂತೆ ಮೂರು ಕಡೆ ಮಾರಾಟ ಮಳಿಗೆ ತೆರೆಯಲು ಸೂಕ್ತ ಸ್ಥಳದ ಹುಡುಕಾಟದಲ್ಲಿದೆ.

ವಿದ್ಯುತ್ ಚಾಲಿತ ಕಾರುಗಳನ್ನು ತಯಾರಿಸುವ ಟೆಸ್ಲಾ ಕಂಪನಿಯು ಜನವರಿಯಲ್ಲಿ ಭಾರತದಲ್ಲಿ ಕಂಪನಿಯನ್ನು ನೋಂದಾಯಿಸಿದೆ. ತನ್ನ ‘ಮಾಡೆಲ್ 3’ ಕಾರನ್ನು ಈ ವರ್ಷದ ಮಧ್ಯಭಾಗದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

20 ಸಾವಿರದಿಂದ 30 ಸಾವಿರ ಚದರ ಅಡಿ ವಿಸ್ತೀರ್ಣದ ಸ್ಥಳವನ್ನು ಮಳಿಗೆ ಆರಂಭಿಸಲು ಕಂಪನಿ ಹುಡುಕುತ್ತಿದೆ ಎಂದು ಮೂಲಗಳು ತಿಳಿಸಿವೆ. ನವದೆಹಲಿ ಮತ್ತು ಮುಂಬೈನಲ್ಲಿಯೂ ಟೆಸ್ಲಾ ಸ್ಥಳ ಶೋಧ ನಡೆಸಿದೆ.

ADVERTISEMENT

ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಬೆಳೆಸಲು ಮನುಜ್ ಖುರಾನಾ ಅವರನ್ನು ನೇಮಕ ಮಾಡಿಕೊಂಡಿದೆ. ಮನುಜ್ ಅವರು ಈ ಹಿಂದೆ ಇನ್ವೆಸ್ಟ್‌ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಮಾಡಿದ್ದವರು. ಈ ವಿಚಾರವಾಗಿ ಟೆಸ್ಲಾ ಕಡೆಯಿಂದ ‍ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಷೋರೂಂ ತೆರೆಯಲು ಟೆಸ್ಲಾ ಕಂಪನಿಯು ಸಿಬಿಆರ್‌ಇ ಸಮೂಹದ ನೆರವು ಪಡೆದಿದೆ. ಈ ಸಮೂಹವು, ಶ್ರೀಮಂತ ಗ್ರಾಹಕರನ್ನು ಸುಲಭವಾಗಿ ಸೆಳೆಯಲು ನೆರವಾಗುವ ಕಡೆಗಳಲ್ಲಿ ಮಳಿಗೆಗೆ ಸೂಕ್ತ ಜಾಗ ಎಲ್ಲಿದೆ ಎಂಬ ಹುಡುಕಾಟದಲ್ಲಿ ತೊಡಗಿದೆ ಎಂದು ಗೊತ್ತಾಗಿದೆ.

ಭಾರತದಲ್ಲಿ ಟೆಸ್ಲಾ ಕಂಪನಿಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಸುಲಭದ ಕೆಲಸ ಆಗಲಿಕ್ಕಿಲ್ಲ ಎಂಬ ವಾದ ಇದೆ. ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್‌ ಮಾಡಿಕೊಳ್ಳುವ ಸೌಲಭ್ಯ ಇರುವುದು ನಗಣ್ಯ ಪ್ರಮಾಣದಲ್ಲಿ. ಅಲ್ಲದೆ, ಆಮದು ಮಾಡಿಕೊಂಡ ಕಾರುಗಳ ಮೇಲೆ ಇಲ್ಲಿ ಭಾರಿ ತೆರಿಗೆ ವಿಧಿಸಲಾಗುತ್ತದೆ.

ಹಿಂದಿನ ವರ್ಷ ಭಾರತದಲ್ಲಿ ಒಟ್ಟು 24 ಲಕ್ಷ ಕಾರುಗಳು ಮಾರಾಟವಾಗಿದ್ದವು. ಈ ಪೈಕಿ ವಿದ್ಯುತ್ ಚಾಲಿತ ಕಾರುಗಳ ಸಂಖ್ಯೆ ಐದು ಸಾವಿರ ಮಾತ್ರ. ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಜನ ಖರೀದಿ ಮಾಡುವುದು ಕಡಿಮೆ ಪ್ರಮಾಣದಲ್ಲಿದೆ. ‘ಆದರೆ, ಭಾರತದಲ್ಲಿ ಶ್ರೀಮಂತ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಸರ್ಕಾರವು ವಿದ್ಯುತ್ ಚಾಲಿತ ಕಾರುಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಮಾರುಕಟ್ಟೆಯನ್ನು ಟೆಸ್ಲಾ ನಿರ್ಲಕ್ಷಿಸುವಂತೆ ಇಲ್ಲ’ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.