ADVERTISEMENT

ಲಾಕ್‌ಡೌನ್‌ನಲ್ಲಿ ವಾಹನ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 14:35 IST
Last Updated 15 ಜುಲೈ 2020, 14:35 IST
Abstract car and many vehicles parts (done in 3d)Abstract car and many vehicles parts
Abstract car and many vehicles parts (done in 3d)Abstract car and many vehicles parts   

ಬೈಕಾಗಿರಲಿ, ಸ್ಕೂಟರ್ ಆಗಿರಲಿ ಅಥವಾ ಕಾರಾಗಿರಲಿ. ವಾಹನವನ್ನು ಬಹಳ ದಿನ ಬಳಸದೆ ಹಾಗೇ ಇರಿಸಿದರೆ ಒಂದಿಲ್ಲೊಂದು ಸಮಸ್ಯೆ ಎದುರಾಗುವುದು ನಿಶ್ಚಿತ. ಬಹಳ ದಿನ ವಾಹನಗಳನ್ನು ಬಳಸದೆ ಯಾರು ನಿಲ್ಲಿಸುತ್ತಾರೆ ಎನ್ನುತ್ತೀರಾ...? ಮೊದಲ ಸುತ್ತಿನ ಲಾಕ್‌ಡೌನ್‌ ಅಂತಹ ಅನಿವಾರ್ಯತೆಯನ್ನು ತಂದೊಡ್ಡಿತ್ತು. ಈಗ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮತ್ತೆ ಲಾಕ್‌ಡೌನ್ ಶುರುವಾಗಿದೆ. ಹೀಗಾಗಿ ವಾಹನಗಳು ಮತ್ತೊಮ್ಮೆ ನಿಂತಲ್ಲೇ ನಿಲ್ಲಬೇಕಾದ ಸಮಸ್ಯೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಾಹನಗಳ ನಿರ್ವಹಣೆಗೆ ಗಮನ ನೀಡಲೇಬೇಕಿದೆ. ಹೀಗೆ ಗಮನ ನೀಡಬೇಕಾದ ಕೆಲವು ಅಂಶಗಳು ಇಲ್ಲಿವೆ.

ಬ್ಯಾಟರಿ

ಬಹಳ ದಿನಗಳ ಕಾಲ ಬಳಸದೇ ಇದ್ದರೆ ಯಾವುದೇ ವಾಹನಗಳ ಬ್ಯಾಟರಿ ಡಿಸ್‌ಚಾರ್ಜ್ ಆಗುತ್ತದೆ. ಲಾಕ್‌ಡೌನ್‌ ಅವಧಿ ಎಷ್ಟೇ ಆಗಿರಲಿ, ವಾಹನ ನಿಲ್ಲಿಸುವ ದಿನವೇ ಬ್ಯಾಟರಿ ಕಡೆ ಗಮನ ಹರಿಸುವುದು ಒಳಿತು. 2014ಕ್ಕಿಂತ ಹಳೆಯ ಕಾರುಗಳಾದರೆ, ಅದರ ಬ್ಯಾಟರಿಯ ಕನೆಕ್ಟರ್‌ಗಳನ್ನು ತೆಗೆದು ಇರಿಸಿದರೆ ಆಯಿತು. ಅಗತ್ಯವಿದ್ದಾಗ ಬ್ಯಾಟರಿ ಕನೆಕ್ಟ್ ಮಾಡಿ, ಕಾರನ್ನು ಬಳಸಬಹುದು.

ADVERTISEMENT

2014ರ ನಂತರ ಮಾರುಕಟ್ಟೆಗೆ ಬಂದ ಹೊಸ ಮಾದರಿಯ ಬಹುತೇಕ ಕಾರುಗಳಲ್ಲಿ ಸ್ಲೀಪ್‌ ಮೋಡ್ ಎಂಬ ಸವಲತ್ತು ಇದೆ. ದೀರ್ಘಕಾಲ ಕಾರನ್ನು ಬಳಸದೇ ಇದ್ದರೆ ಅದು ಸ್ಲೀಪ್‌ಮೋಡ್‌ಗೆ ಹೋಗುತ್ತದೆ. ಸ್ಲೀಪ್‌ ಮೋಡ್‌ನಲ್ಲಿ ವಾಹನದ ಯಾವ ಉಪಕರಣಗಳೂ ಕೆಲಸ ಮಾಡುವುದಿಲ್ಲ. ಸೆಂಟ್ರಲ್‌ ಲಾಕ್ ಸಹ ಕೆಲಸ ಮಾಡುವುದಿಲ್ಲ. ಆಗ ಚಾಲಕನ ಸೀಟಿನ ಬದಿಯ ಬಾಗಿಲನ್ನು ಕೀಲಿ ಬಳಸಿಯೇ ತೆರೆಯಬೇಕು. ಇಗ್ನಿಷನ್‌ನಲ್ಲಿ ಕೀ ಇರಿಸಿ ಆನ್ ಮಾಡಿದರಷ್ಟೇ ಕಾರು ಸ್ಲೀಪ್‌ ಮೋಡ್‌ನಿಂದ ಹೊರಬರುತ್ತದೆ. ಸ್ಮಾರ್ಟ್‌ ಕೀ ಇರುವ ಕಾರುಗಳಲ್ಲೂ ಈ ಸವಲತ್ತು ಇದೆ. ಆದರೆ, ಕೀಯನ್ನು ಕಾರಿನ ಬಳಿ ತಂದರೆ ಕಾರು ವೇಕ್‌ಅಪ್‌ ಆಗುತ್ತದೆ.

ದ್ವಿಚಕ್ರ ವಾಹನಗಳನ್ನು ಎರಡು ಮೂರು ದಿನಗಳಿಗೆ ಒಮ್ಮೆ ಸ್ಟಾರ್ಟ್‌ ಮಾಡಿ, ಒಂದಷ್ಟು ದೂರ ಚಲಾಯಿಸುವುದು ಒಳಿತು.

ಇಂಧನ

ನಿಮ್ಮ ವಾಹನ ಯಾವುದು? ಯಾವುದೇ ಆಗಿರಲಿ, ದೀರ್ಘಕಾಲ ಅದನ್ನು ನಿಲ್ಲಿಸಬೇಕಾದ ಸಂದರ್ಭ ಎದುರಾದಾಗ ಅದರ ಇಂಧನ ಟ್ಯಾಂಕ್ ಭರ್ತಿಯಾಗಿದ್ದರೆ ಚೆನ್ನ. ಡೀಸೆಲ್ ವಾಹನಗಳಲ್ಲಿ ಇಂಧನ ಅರ್ಧ ಟ್ಯಾಂಕ್‌ಗಿಂತಲೂ ಹೆಚ್ಚು ಇದ್ದರೆ ಆಯಿತು. ಆದರೆ, ಪೆಟ್ರೋಲ್ ವಾಹನಗಳಲ್ಲಿ ಇಂಧನ ಭರ್ತಿಯಾಗಿರುವುದು ಅಗತ್ಯ.

‍ಪೆಟ್ರೋಲ್‌ ಟ್ಯಾಂಕ್‌ನಲ್ಲಿ ಗಾಳಿ ಆಡಲು ಜಾಗವಿದ್ದರೆ, ಪೆಟ್ರೋಲ್ ನಿಧಾನವಾಗಿ ಆವಿಯಾಗುತ್ತದೆ. ಟ್ಯಾಂಕ್‌ನಲ್ಲಿ ಪೆಟ್ರೋಲ್ ಇಲ್ಲದೇ ಇರುವ ಜಾಗ ತುಕ್ಕು ಹಿಡಿಯಲು ಆರಂಭಿಸುತ್ತದೆ. ತುಕ್ಕಿನ ಕಣಗಳು ಕಾರ್ಬೊರೇಟರ್‌ ಮತ್ತು ಇಂಜೆಕ್ಟರ್‌ ಸೇರಿ ಅವು ಕಟ್ಟಿಕೊಳ್ಳುವ (ಬ್ಲಾಕ್ ಆಗುವ) ಅಪಾಯವಿರುತ್ತದೆ. ಹೀಗಾಗಿ ಟ್ಯಾಂಕ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಇರುವುದು ಒಳಿತು.

ಎಂಜಿನ್ ಆಯಿಲ್

ದೀರ್ಘಕಾಲ ಬಳಸದೇ ಇದ್ದರೆ ವಾಹನಗಳ ಎಂಜಿನ್ ಆಯಿಲ್ ಗಟ್ಟಿಯಾಗುತ್ತದೆ. ಹಾಗಾಗಿ, ಬಹಳ ದಿನ ನಿಂತಲ್ಲೇ ನಿಂತಿದ್ದ ವಾಹನವನ್ನು ಮೊದಲ ಬಾರಿ ಚಾಲೂ ಮಾಡಿದಾಗ ಐದಾರು ನಿಮಿಷ ಎಂಜಿನ್ ಅನ್ನು ಐಡಲ್ ಸ್ಪೀಡ್‌ನಲ್ಲೇ ಇರಿಸಬೇಕು. ನಂತರವಷ್ಟೇ ವಾಹನ ಚಲಾಯಿಸಬೇಕು. ಇಲ್ಲದಿದ್ದಲ್ಲಿ ಆಯಿಲ್‌ ಸರಿಯಾಗಿ ಪೂರೈಕೆಯಾಗದೆ, ಎಂಜಿನ್‌ನ ಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದು ತಕ್ಷಣದಲ್ಲಿ ಯಾವುದೇ ಸಮಸ್ಯೆ ನೀಡದಿದ್ದರೂ, ಎಂಜಿನ್‌ನ ಆಯಸ್ಸು‌ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.