ADVERTISEMENT

ವಾಹನಗಳ ಚಾರ್ಜಿಂಗ್‌ ವೈರ್‌ಲೆಸ್ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST
ರಸ್ತೆಯಲ್ಲಿಯೇ ಚಾರ್ಜಿಂಗ್‌ ಸೌಲಭ್ಯ
ರಸ್ತೆಯಲ್ಲಿಯೇ ಚಾರ್ಜಿಂಗ್‌ ಸೌಲಭ್ಯ   

ಪರಿಸರಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಗೆ ಬಂದರೆ, ವಾತಾವರಣದಲ್ಲಾಗುವ ವೈಪರೀತ್ಯ, ಉಷ್ಣಾಂಶದಲ್ಲಾಗುತ್ತಿರುವ ಹೆಚ್ಚಳವನ್ನು ಕಡಿಮೆ ಮಾಡಲು ನೆರವಾಗಲಿದೆ. ವಾಹನಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಲು ಬೇಕಾದ ವಿದ್ಯುತ್ ಪೂರೈಕೆ ಕೇಂದ್ರಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಬೇಕಾದ ಅಗತ್ಯವಿದೆ.

ಈ ನಿಟ್ಟಿನಲ್ಲಿ ವಿನೂತನವಾಗಿ ಯೋಚಿಸಿರುವ ದುಬೈ ತಂತ್ರಜ್ಞರು ವೈರ್‌ಲೆಸ್‌ ಚಾರ್ಜಿಂಗ್ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಈಚೆಗಷ್ಟೇ ಈ ಚಾರ್ಜಿಂಗ್ ತಂತ್ರಜ್ಞಾನದ ಕುರಿತು ದುಬೈನ ರಸ್ತೆ ಸಾರಿಗೆ ಪ್ರಾಧಿಕಾರ ಮಾಹಿತಿ ಹಂಚಿಕೊಂಡಿದೆ.

ಸುಮಾರು 60 ಮೀಟರ್‌ ಉದ್ದದ ಚಾರ್ಜಿಂಗ್ ಕೇಂದ್ರವನ್ನು ರಸ್ತೆಯ ಅಡಿಯಲ್ಲಿ ಅಳವಡಿಸಲಾಗುತ್ತದೆ. ಈ ಹಾದಿಯ ಮೇಲೆ ಹಾದು ಹೋಗುವಾಗ ವಾಹನಕ್ಕೆ ಬೇಕಾದ ವಿದ್ಯುತ್ ಪೂರೈಕೆಯಾಗುವಂತೆ ರೂಪಿಸಿರುವ ವಿಶೇಷ ತಂತ್ರಜ್ಞಾನ ಇದು. ಇದಕ್ಕಾಗಿ ರೆಸೊನ್ಯಾನ್ಸ್‌ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ADVERTISEMENT

ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿದ್ದು, ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯುತ್ ಚಾಲಿತ ಬೈಕ್‌, ಕಾರುಗಳ ಜತೆಗೆ ಬಸ್‌ಗಳಿಗೂ ವಿದ್ಯುತ್ ಪೂರೈಸಬಹುದು ಎಂದು ಪ್ರಾಧಿಕಾರ ತಿಳಿಸಿದೆ. ಈ ತಂತ್ರಜ್ಞಾನ ಪೂರ್ಣಪ್ರಮಾಣದಲ್ಲಿ ಬಳಕೆಗೆ ಬಂದರೆ, ವಾಹನವನ್ನು ಎಲ್ಲೂ ನಿಲ್ಲಿಸದಂತೆ ಚಾರ್ಜಿಂಗ್ ಮಾಡಿಕೊಳ್ಳಬಹುದು. ಚಾರ್ಜಿಂಗ್ ಕೇಂದ್ರವಿರುವ ರಸ್ತೆಯಲ್ಲಿ ಹಾದು ಹೋದರೆ ಸಾಕು.

ವಾಹನಕ್ಕೆ ಇಂಧನ ತುಂಬವರೆಗೂ ವಾಹನ ನಿಲ್ಲಿಸಿದ್ದರೆ, ವಾಹನ ದಟ್ಟಣೆಯೂ ಆಗುತ್ತದೆ. ಈ ವ್ಯವಸ್ಥೆಯಿಂದ ಸರಾಗ ಸಾರಿಗೆಯ ಪರಿಕಲ್ಪನೆಯನ್ನು ದುಬೈ ತಂತ್ರಜ್ಞರು ಪರಿಚಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.