ADVERTISEMENT

ಬನಾರಸ್‌ ಸೀರೆಗೆ ಆ್ಯಂಟಿಕ್‌ ಒಡವೆಯ ಸೊಬಗು

ರೇಷ್ಮಾ
Published 29 ಅಕ್ಟೋಬರ್ 2021, 19:30 IST
Last Updated 29 ಅಕ್ಟೋಬರ್ 2021, 19:30 IST
   

ದೀಪಗಳ ಹಬ್ಬಕ್ಕೆ ರೇಷ್ಮೆ ಸೀರೆ ಉಟ್ಟರೆ ಸಂಭ್ರಮ ಕಳೆಗಟ್ಟಿದಂತೆ. ಅದರಲ್ಲೂ ಸಾಂಪ್ರದಾಯಿಕ ಬನಾರಸ್‌ ಸೀರೆ ಉಟ್ಟು, ಅದಕ್ಕೆ ಒಪ್ಪುವ ಚಿನ್ನದ ಒಡವೆಗಳನ್ನು ಧರಿಸಿದರೆ ಕೋವಿಡ್‌ ಕಹಿಯನ್ನು ಅರೆಗಳಿಗೆಯಾದರೂ ಮರೆಯಬಹುದು. ಉಟ್ಟಾಗ ನೀಟಾಗಿ, ಸುಂದರವಾಗಿ ಕಾಣುವ ಈ ಬನಾರಸ್‌ ಸೀರೆ ಕುರಿತ ಆಕರ್ಷಣೆ ಯಾವತ್ತೂ ಕುಂದುವಂಥದ್ದಲ್ಲ. ಆರು ಗಜದ ಈ ಸೀರೆ ಚಿನ್ನ ಹಾಗೂ ಬೆಳ್ಳಿ ಎಳೆಗಳಿಂದ ಕಂಗೊಳಿಸುವಂಥದ್ದು. ಬನಾರಸ್‌ ಸೀರೆಯಲ್ಲಿ ಕಥಾನ್‌ (ಶುದ್ಧ ರೇಷ್ಮೆ ಸೀರೆ), ಅರ್ಗಾಂಝಾ, ಜಾರ್ಜೆಟ್ ಬನಾರಸ್‌ ಸೀರೆ, ಜಂಗ್ಲಾ, ಕಟ್‌ವರ್ಕ್‌, ಟಿಶ್ಯೂ, ಬುಟಿದಾರ್‌.. ಹೀಗೆ ವಿವಿಧ ಬಗೆಯ ಸೀರೆಗಳಿವೆ.

ಬನಾರಸ್‌ ಸೀರೆ ಹಿನ್ನೆಲೆ
ಮೊಘಲರು ಇದರ ಸಂಕೀರ್ಣ ನೇಯ್ಗೆ ಹಾಗೂ ವಿನ್ಯಾಸದ ಕರಕುಶಲತೆಯನ್ನು ಭಾರತಕ್ಕೆ ಪ‍ರಿಚಯಿಸಿದರು ಎನ್ನುತ್ತದೆ ಇತಿಹಾಸ. ವಾರಾಣಸಿಯಲ್ಲಿ ನೇಕಾರರ ಕೈಯಲ್ಲಿ ಅರಳುತ್ತಿದ್ದ ಸೀರೆಗಳಿಗೆ ಖ್ಯಾತ ವಿನ್ಯಾಸಕಾರರು ವಿವಿಧ ರೂಪ ನೀಡಿ ಜನಪ್ರಿಯಗೊಳಿಸಿದ್ದಾರೆ. ಈ ಸೀರೆಯ ಗಾಢ ರಂಗು, ಜರಿಯ ವಿನ್ಯಾಸದ ಒಡಲು, ಸೆರಗು ಮತ್ತು ಅಂಚು ಆಕರ್ಷಕ. ಸಾಂಪ್ರದಾಯಿಕ ಸೀರೆ ಬಹಳ ಭಾರ ಕೂಡ. ಎಷ್ಟೋ ಕುಟುಂಬಗಳಲ್ಲಿ ನೂರಾರು ವರ್ಷಗಳ ಹಿಂದಿನ ಬನಾರಸ್‌ ಸೀರೆಯನ್ನು ಇನ್ನೂ ಕೆಡದಂತೆ ಕಾಪಿಟ್ಟುಕೊಂಡು ಬರಲಾಗುತ್ತಿದೆ.

ಸೀರೆಯೊಂದಿಗೆ ಒಡವೆ
‘ಬನಾರಸ್‌ ಸೀರೆ ಉಟ್ಟಾಗ ದೊಡ್ಡದಾಗಿ ಕಾಣುವ ಒಡವೆಗಳನ್ನು ಧರಿಸಬೇಕು. ಕಿವಿಯೋಲೆ, ಸರ, ಬಳೆ ಎಲ್ಲವೂ ಆಡಂಬರವಾಗಿ ಕಾಣುವಂತಿದ್ದರೆ ಈ ಸೀರೆಯ ಅಂದ ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ಬೆಂಗಳೂರಿನ ಜಯನಗರದ ಅಂಗನಾ ಫ್ಯಾಷನ್ ವುಮೆನ್‌ ಬುಟಿಕ್‌ನ ಸುಪ್ರಿಯಾ ಸಂದೀಪ್‌.

ADVERTISEMENT

ಕತ್ತಿನ ಹಾರ
ಬನಾರಸ್‌ ಸೀರೆ ಧರಿಸಿದಾಗ ಆ್ಯಂಟಿಕ್ ಹಾರವನ್ನು ಧರಿಸುವುದು ಸೂಕ್ತ. ಆ್ಯಂಟಿಕ್ ಹಾರವು ಸೀರೆಗೆ ಬೇರೆಯದ್ದೇ ಲುಕ್ ಸಿಗುವಂತೆ ಮಾಡುತ್ತದೆ. ಸಂಪೂರ್ಣವಾಗಿ ಮುಚ್ಚುವ ನೆಕ್ಲೇಸ್ ಧರಿಸಬಹುದು. ಉದ್ದನೆಯ ಒಂದೆಳೆ ಹಾರ ಮಾತ್ರವಲ್ಲ, 3 ಅಥವಾ 4 ಎಳೆಯ ಚಿನ್ನದ ಸರವನ್ನೂ ಧರಿಸಬಹುದು.

ಕಿವಿಯೋಲೆ
ಬನಾರಸ್‌ ಸೀರೆಯೊಂದಿಗೆ ತೂಗುವ ಝಮ್ಕಿ, ಚಾಂದ್‌ಬಾಲಿಯಂತಹ ಅಗಲವಾದ ಕಿವಿಯೋಲೆ ಧರಿಸುವುದು ಹೆಚ್ಚು ಸೂಕ್ತ. ಇದರೊಂದಿಗೆ ಸೀರೆಯದ್ದೇ ಬಣ್ಣದ ಹರಳಿನ ಅಗಲವಾದ ಕಿವಿಯೋಲೆಯನ್ನು ಮ್ಯಾಚಿಂಗ್ ಮಾಡಬಹುದು. ಆ್ಯಂಟಿಕ್ ಕಿವಿಯೋಲೆಗಳು ಸೀರೆಯ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.

ಬ್ಲೌಸ್‌ಗಳು
ಇತ್ತೀಚೆಗೆ ಈ ಸೀರೆಗೆ ಉದ್ದನೆಯ ತೋಳಿನ ರವಿಕೆ ಧರಿಸುವುದು ಟ್ರೆಂಡ್ ಆಗಿದೆ. ಮಣಿಕಟ್ಟಿಗಿಂತಲೂ ಕೆಳಗಿನವರೆಗೆ ಬರುವ ರವಿಕೆಗಳು ಸೀರೆಗೆ ಭಿನ್ನ ನೋಟ ಸಿಗುವಂತೆ ಮಾಡುತ್ತವೆ. ರವಿಕೆಯ ತುದಿಗೆ ಸೀರೆಯ ಅಂಚಿನ ವಿನ್ಯಾಸವನ್ನು ಇರಿಸಿದಾಗ ಇನ್ನಷ್ಟು ಅಂದವಾಗಿ ಕಾಣುತ್ತದೆ. ಬನಾರಸ್‌ ಸೀರೆ ಧರಿಸಿದಾಗ ತೋಳಿಲ್ಲದ ರವಿಕೆಯನ್ನೂ ಧರಿಸಬಹುದು.

ಉಂಗುರ
ಬನಾರಸ್‌ ಸೀರೆ ಉಟ್ಟಾಗ ಕೈ ಬೆರಳಿಗೆ ಅಗಲವಾದ ಒಂದೇ ಒಂದು ಉಂಗುರವನ್ನು ಧರಿಸಬೇಕು. ಸೀರೆಯ ಬಣ್ಣದ್ದೇ ಹರಳಿನ ಉಂಗುರ ಧರಿಸುವುದರಿಂದ ಸೀರೆಯ ಅಂದ ಇನ್ನಷ್ಟು ಹೆಚ್ಚುತ್ತದೆ.

ಬಳೆಗಳು
ಸೀರೆಯದ್ದೇ ಬಣ್ಣದ ಗಾಜಿನ ಬಳೆಗಳನ್ನು ಕೈತುಂಬಾ ಧರಿಸಬಹುದು. ಇದು ಸೀರೆ ಮೆರಗನ್ನು ಹೆಚ್ಚಿಸುತ್ತದೆ. ಬಣ್ಣದ ನೂಲಿನ ನೇಯ್ಗೆಯಿರುವ ಬಳೆಗಳೂ ಕೂಡ ಸೀರೆಗೆ ಇನ್ನಷ್ಟು ರಂಗು ಮೂಡುವಂತೆ ಮಾಡುತ್ತವೆ. ಹಿಂದೆ, ಮುಂದೆ ಆ್ಯಂಟಿಕ್ ಬಳೆಗಳನ್ನು ಧರಿಸಿ ಮಧ್ಯದಲ್ಲಿ 2 ಡಜನ್‌ನಷ್ಟು ಗಾಜಿನಬಳೆಗಳನ್ನು ಧರಿಸಬಹುದು. ಸೀರೆ ಬಣ್ಣದ್ದೇ ಮ್ಯಾಚಿಂಗ್‌ನ ವಿವಿಧ ವಿನ್ಯಾಸದ ಬಳೆಗಳೂ ಕೂಡ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ಸುಪ್ರಿಯಾ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.