ADVERTISEMENT

ಮೋಹಕ ನೋಟಕ್ಕೆ ಡೆನಿಮ್‌ ಸ್ಕರ್ಟ್‌

ರೇಷ್ಮಾ
Published 17 ಡಿಸೆಂಬರ್ 2021, 19:30 IST
Last Updated 17 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಶಕಗಳ ಹಿಂದೆ ತೊಡುತ್ತಿದ್ದ ಡೆನಿಮ್‌ ಉಡುಪುಗಳು, ‘ಫ್ಯಾಷನ್‌’ ಲೋಕದಲ್ಲಿ ಈಗಲೂ ತಮ್ಮ ತಾಜಾತನ ಉಳಿಸಿಕೊಂಡಿವೆ. ಹೆಣ್ಣುಮಕ್ಕಳ ನೆಚ್ಚಿನ ಉಡುಪಾದ ಡೆನಿಮ್‌ ಸ್ಕರ್ಟ್‌ಗಳು 1960ರ ಸಮಯದಲ್ಲಿ ಹೆಚ್ಚು ಸದ್ದು ಮಾಡಿದ್ದವು. ಅಂದಿನಿಂದಲೂ ಎಲ್ಲ ವಯೋಮಾನದ ಮಹಿಳೆಯರ ಇಷ್ಟದ ಉಡುಗೆಯಾಗಿರುವ ಈ ಸ್ಕರ್ಟ್‌ಗಳು ಈಗ ಮತ್ತೆ ಟ್ರೆಂಡ್‌ನಲ್ಲಿವೆ. ಫ್ಯಾಷನ್‌ನತ್ತ ಒಲವು ಹೊಂದಿರುವವರು ಈ ಟ್ರೆಂಡ್‌ ಅನ್ನು ಬಲುವಾಗಿ ಮೆಚ್ಚಿಕೊಂಡಿದ್ದಾರೆ.

ಇವು ಎಲ್ಲಾ ರೀತಿಯ ದೇಹಸಿರಿ ಹೊಂದಿರುವವರಿಗೂ ಧರಿಸಲು ಸೂಕ್ತ ಎನ್ನಿಸುತ್ತವೆ. ಅಷ್ಟೇ ಅಲ್ಲ, ಕ್ಲಾಸಿ ಲುಕ್‌ ನೀಡುತ್ತವೆ. ಅಲ್ಲದೇ ಇದರಲ್ಲಿ ವಿವಿಧ ರೀತಿಯ ಪ್ರಿಂಟ್ ಹಾಗೂ ಎಂಬ್ರಾಯ್ಡರಿಗಳಿವೆ. ಈ ವೆರೈಟಿಗಳು ಉಡುಪು ಧರಿಸಿದವರ ಅಂದ ಹೆಚ್ಚುವಂತೆ ಮಾಡುತ್ತವೆ. ಬಟನ್‌, ಕಾಂಟ್ರ್ಯಾಸ್ಟ್‌ ಲೇಸ್‌, ಪ್ರಿಂಟ್‌ ಇರುವ ಸ್ಕರ್ಟ್‌ಗಳು ಭಿನ್ನ ಲುಕ್‌ ಹೊಂದುವಂತೆ ಮಾಡುತ್ತವೆ. ಡೆನಿಮ್ ಸ್ಕರ್ಟ್‌ ಜೊತೆ ಡೆನಿಮ್ ಶರ್ಟ್‌ ಕೂಡ ಧರಿಸಬಹುದು. ಇದರೊಂದಿಗೆ ಟೀ ಶರ್ಟ್, ಜಾಕೆಟ್ ಅನ್ನು ಹೊಂದಿಸಬಹುದು.

ಡೆನಿಮ್ ಮಿನಿ ಫ್ಲೇರ್ಡ್‌ ಸ್ಕರ್ಟ್‌

ADVERTISEMENT

ನೀವು ಡೆನಿಮ್ ಸ್ಕರ್ಟ್‌ನಲ್ಲಿ ಲೇಟೆಸ್ಟ್‌ ಟ್ರೆಂಡ್‌ ಹುಡುಕುತ್ತಿದ್ದರೆ, ಮಿನಿ ಫ್ಲೇರ್ಡ್‌ ಸ್ಕರ್ಟ್‌ ಆರಿಸಿಕೊಳ್ಳಬಹುದು. ಇದು ಮೊಣಕಾಲಿನಿಂದ ಸ್ವಲ್ಪ ಮೇಲೆ ಇರುತ್ತದೆ. ಇದು ಫ್ಲೇರ್ಡ್‌ ವಿನ್ಯಾಸದಲ್ಲಿದ್ದು, ಇದನ್ನು ಧರಿಸಿದರೆ ನವತರುಣಿಯಂತೆ ಕಾಣುತ್ತೀರಿ. ಈ ಸ್ಕರ್ಟ್‌ ಮೇಲೆ, ಟೀ ಶರ್ಟ್ ಅಥವಾ ಸ್ಲೀವ್‌ಲೆಸ್ ಟಾಪ್ ಧರಿಸಬಹುದು. ಆಗ ನೀವು ಬೋಲ್ಡ್ ಆಗಿ ಕಾಣಿಸುತ್ತೀರಿ.

ಡೆನಿಮ್ ಪೆನ್ಸಿಲ್ ಸ್ಕರ್ಟ್‌

ವಿವಿಧ ಬಣ್ಣದಲ್ಲಿ ಲಭ್ಯವಿರುವ ಮೊಣಕಾಲಿನವರೆಗೆ ಬರುವ ಪೆನ್ಸಿಲ್ ಸ್ಕರ್ಟ್ ಬಹಳ ಹಿಂದಿನಿಂದಲೂ ಟ್ರೆಂಡ್‌ನಲ್ಲೇ ಇದೆ. ಈ ಟ್ರೆಂಡ್ ಇಂದಿಗೂ ಮಾಸಿಲ್ಲ ಎನ್ನುವುದು ವಿಶೇಷ. ಇದರಲ್ಲಿ ವಿವಿಧ ಬಣ್ಣದ ಸ್ಕರ್ಟ್‌ಗಳು ಲಭ್ಯವಿದ್ದು ನಿಮಗೆ ಸೂಕ್ತ ಎನ್ನಿಸುವ ಬಣ್ಣದ ಸ್ಕರ್ಟ್‌ ಅನ್ನು ಖರೀದಿ ಮಾಡಿ ಧರಿಸಬಹುದು. ಈ ಸ್ಕರ್ಟ್‌ನೊಂದಿಗೆ ಕಾಂಟ್ರ್ಯಾಸ್ಟ್ ಬಣ್ಣದ ಟಾಪ್ ಧರಿಸಬಹುದು. ಇದರಲ್ಲಿ ಬೇರೆ ಬೇರೆ ವಿನ್ಯಾಸ ಹಾಗೂ ಪ್ರಿಂಟ್ ಇರುವ ಡ್ರೆಸ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಜಿಪ್‌ ವಿನ್ಯಾಸವಿರುವ ಸ್ಕರ್ಟ್‌ಗಳು ಐಡಿಯಲ್ ನೋಟ ಸಿಗುವಂತೆ ಮಾಡುತ್ತವೆ.

ಹೂವಿನ ಚಿತ್ತಾರವಿರುವ ಸ್ಕರ್ಟ್‌

ಹೂವಿನ ಚಿತ್ತಾರವಿರುವ ಡೆನಿಮ್ ಸ್ಕರ್ಟ್‌ಗಳು ನೋಡಲು ಸುಂದರವಾಗಿ ಕಾಣುವುದಲ್ಲದೇ ನಿಮ್ಮ ಅಂದಕ್ಕೆ ಇನ್ನಷ್ಟು ಮೆರಗು ಮೂಡಿಸುತ್ತವೆ. ಇದನ್ನು ಧರಿಸಿದಾಗ ನಿಮಗೆ ಭಿನ್ನ ನೋಟ ಸಿಗುವುದಲ್ಲದೇ ತಕ್ಷಣಕ್ಕೆ ನೋಡಿದಾಗ ಡೆನಿಮ್ ಅನ್ನಿಸುವುದಿಲ್ಲ. ಸಿನಿಮಾ, ಶಾಪಿಂಗ್ ಹೋಗುವಾಗ ಈ ಸ್ಕರ್ಟ್ ಧರಿಸಬಹುದು. ಈ ಸ್ಕರ್ಟ್‌ 20 ರಿಂದ 40 ವಯಸ್ಸಿನವರು ಧರಿಸಲು ಸೂಕ್ತ ಎನ್ನಿಸುತ್ತದೆ.

ಹೈವೇಸ್ಟ್‌ ಡೆನಿಮ್ ಮಿಡಿ ಸ್ಕರ್ಟ್‌

ಮೊಣಕಾಲಿನಿಂದ ಸ್ವಲ್ಪ ಕೆಳಗೆ ಬರುವ ಮಿಡಿಯಂತೆ ಕಾಣುವ ಈ ಸ್ಕರ್ಟ್‌ ಈಗ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಸೊಂಟಕ್ಕೂ ಮೇಲಿನಿಂದ ಧರಿಸುವ ಈ ಸ್ಕರ್ಟ್‌ ಕ್ಲಾಸಿ ನೋಟ ಸಿಗುವಂತೆ ಮಾಡುತ್ತದೆ. ಇದು ಕಚೇರಿಯ ಫಾರ್ಮಲ್‌ ಮೀಟಿಂಗ್‌, ಪಾರ್ಟಿಗಳಿಗೆ ಧರಿಸಲು ಸೂಕ್ತ ಎನ್ನಿಸುತ್ತದೆ.

ಶಾರ್ಟ್ ಡೆನಿಮ್‌ ಎ–ಲೈನ್ ಸ್ಕರ್ಟ್

ಎ–ಲೈನ್ ಶಾರ್ಟ್ ಡೆನಿಮ್ ಸ್ಕರ್ಟ್‌ಗಳು ಫ್ಯಾಷನ್‌ ಪ್ರಿಯರಿಗೆ ಮೆಚ್ಚುಗೆಯಾಗುವುದರಲ್ಲಿ ಎರಡು ಮಾತಿಲ್ಲ. ಇದನ್ನು ಧರಿಸಿದಾಗ ಆಕರ್ಷಕವಾಗಿ ಕಾಣಬಹುದು. ಮುಂದಿನಿಂದ ಉದ್ದಕ್ಕೆ ಬಟನ್‌ಗಳಿರುವ ಈ ಸ್ಕರ್ಟ್ ಮೇಲೆ ಬಿಳಿ ಬಣ್ಣದ, ಉದ್ದ ತೋಳಿರುವ ಟೀ ಶರ್ಟ್ ಧರಿಸಬಹುದು. ಇದು ಧರಿಸಿದವರಿಗೆ ಬೋಲ್ಡ್ ಹಾಗೂ ವೈಬ್ರೆಂಟ್ ನೋಟ ಸಿಗುವಂತೆ ಮಾಡುತ್ತದೆ.

ಪ್ಲಸ್ ಸೈಜ್ ಡೆನಿಮ್ ಸ್ಕರ್ಟ್

ನೀವು ದಪ್ಪ ಇದ್ದು, ನಿಮ್ಮ ಸೊಂಟ ಅಗಲವಿರುವ ಕಾರಣಕ್ಕೆ ನೀವು ಡೆನಿಮ್ ಸ್ಕರ್ಟ್ ಧರಿಸದೇ ಇರಬಹುದು. ಆದರೆ ಪ್ಲಸ್‌ ಸೈಜ್ ಇರುವವರಿಗೆಂದೇ ಡೆನಿಮ್ ಸ್ಕರ್ಟ್‌ಗಳಿವೆ. ಇವು ನಿಮಗೆ ಹೊಂದಿಕೆಯಾಗುತ್ತವೆ, ಅಲ್ಲದೇ ನಿಮ್ಮನ್ನೂ ಟ್ರೆಂಡ್‌ಗೆ ತೆರೆದುಕೊಳ್ಳುವಂತೆ ಮಾಡುತ್ತವೆ. ಇದರಲ್ಲಿ ಹೂವಿನ ಚಿತ್ತಾರ ಮೂಡಿಸಿರುವ ಡೆನಿಮ್‌ ಸ್ಕರ್ಟ್‌ಗಳು ನಿಮ್ಮ ಅಂದ ಹೆಚ್ಚಿಸಲು ಪ್ಲಸ್ ಪಾಯಿಂಟ್. ಮಧ್ಯದಲ್ಲಿ ಬಟನ್‌ ಇರಿಸಿರುವ ಸ್ಕರ್ಟ್‌ಗಳು ಪ್ಲಸ್‌ ಸೈಜ್ ಇರುವವರಿಗೆ ಹೆಚ್ಚು ಹೊಂದುತ್ತವೆ.

ನೆರಿಗೆ ಇರುವ ಲೇಯರ್ಡ್‌ ಸ್ಕರ್ಟ್‌

ನೆರಿಗೆ ಹಾಗೂ ಲೇಯರ್‌ ಇರುವ ಡೆನಿಮ್ ಸ್ಕರ್ಟ್‌ಗಳನ್ನು ಧರಿಸಿದಾಗ ಭಿನ್ನ ನೋಟ ಸಿಗುತ್ತದೆ. ಇದನ್ನು ಧರಿಸಿದಾಗ ಮನಮೋಹಕವಾಗಿ ಕಾಣುವುದರಲ್ಲಿ ಎರಡು ಮಾತಿಲ್ಲ. ಕಡು ನೀಲಿ ಬಣ್ಣದ ಲೇಯರ್ಡ್ ಮಿನಿ ಸ್ಕರ್ಟ್‌ಗಳು ಕಾಲಿನ ಅಂದ ಹೆಚ್ಚಿಸುವ ಜೊತೆಗೆ ಟ್ರೆಂಡಿ ಆಗಿ ಕಾಣಿಸುವಂತೆಯೂ ಮಾಡುತ್ತವೆ.

ವಯಸ್ಸಿನ ಮಿತಿ ಇಲ್ಲ...

ಡೆನಿಮ್‌ ಸ್ಕರ್ಟ್ ಧರಿಸಲು ವಯಸ್ಸಿನ ಮಿತಿ ಇಲ್ಲ. ಎಲ್ಲಾ ವಯೋಮಾನದವರು‌ ಧರಿಸಬಹುದು. ಹದಿಹರೆಯದ ಹುಡುಗಿಯರಿಂದ ಹಿಡಿದು 40 ವರ್ಷ ವಯಸ್ಸಿನವರೆಗೂ ಈ ಸ್ಕರ್ಟ್ ಧರಿಸಬಹುದು. ನೀವು ಯಾವ ಸಂದರ್ಭದಲ್ಲಿ ಧರಿಸುತ್ತಿದ್ದೀರಿ ಎಂಬುದರ ಮೇಲೆ ಯಾವ ವಿಧದ ಸ್ಕರ್ಟ್ ಧರಿಸಬಹುದು ಎಂಬುದನ್ನು ನಿರ್ಧರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.