ADVERTISEMENT

ಖರ್ಜೂರದ ಫೇಸ್‌ಪ್ಯಾಕ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:27 IST
Last Updated 3 ಜುಲೈ 2018, 20:27 IST
   

ಖರ್ಜೂರ ತಿಂದರೆ ಭರ್ಜರಿ ಆರೋಗ್ಯ ಎಂಬುದು ಗೊತ್ತಾಗಿದೆ. ಈ ಒಣಹಣ್ಣು ದೇಹಕ್ಕಷ್ಟೇ ಪೌಷ್ಠಿಕಾಂಶ ಕೊಡುವುದಲ್ಲ, ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮಕ್ಕೆ ಹೊಸ ಕಾಂತಿ ನೀಡಿ, ಮೃದುವಾಗಿಸಿ ಚೈತನ್ಯಪೂರ್ಣವಾಗಿಸುವುದು ಖರ್ಜೂರದ ಫೇಸ್‌ಪ್ಯಾಕ್‌ನ ಹೆಚ್ಚುಗಾರಿಕೆ. ಒಣ ಖರ್ಜೂರದ ಬದಲು ತಾಜಾ ಹಣ್ಣು ಸಿಕ್ಕಿದರೆ ಇನ್ನೂ ಉತ್ತಮ ಫಲಿತಾಂಶ ಪಡೆಯಬಹುದು.

ಫೇಸ್‌ಪ್ಯಾಕ್‌ ತಯಾರಿಸಲು 5ರಿಂದ 10 ಖರ್ಜೂರ ಸಾಕು. ಬೀಜ ತೆಗೆದು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್‌ ತಯಾರಿಸಿಕೊಳ್ಳಿ. ಪೇಸ್ಟ್ ನುಣುಪಾಗುತ್ತಿಲ್ಲ ಎಂದಾದರೆ ಒಂದು ಚಮಚದಷ್ಟು ನೀರು ಅಥವಾ ಹಾಲು ಸೇರಿಸಿಕೊಳ್ಳಿ.

ಹಚ್ಚುವುದು ಹೇಗೆ?: ನೀರು ಅಥವಾ ಗುಲಾಬಿ ಜಲದಲ್ಲಿ ಅದ್ದಿದ ಹತ್ತಿಯಿಂದ ಮುಖ ಮತ್ತು ಕತ್ತನ್ನು ಸ್ವಚ್ಛಗೊಳಿಸಿಕೊಂಡು ಒರೆಸಿಕೊಳ್ಳಿ. ಬೆರಳ ತುದಿಯನ್ನು ಇದೇ ಪೇಸ್ಟ್‌ನಿಂದ ತೇವ ಮಾಡಿಕೊಂಡು ವೃತ್ತಾಕಾರವಾಗಿ ಮೃದುವಾಗಿ ಮಸಾಜ್‌ ಮಾಡಿ. ಮತ್ತೆ ಹತ್ತಿಯಿಂದ ಒರೆಸಿ ಸ್ವಚ್ಛ ಮಾಡಿಕೊಳ್ಳಿ.

ADVERTISEMENT

ಈಗ ಪೇಸ್ಟ್‌ಅನ್ನು ತೆಗೆದುಕೊಂಡು ಮುಖಕ್ಕೆ ಲೇಪಿಸಿ. ಪೇಸ್ಟ್‌ ನುಣುಪಾಗಿದ್ದರೆ 10ರಿಂದ 15 ನಿಮಿಷ ಮೃದುವಾಗಿ ಮಸಾಜ್ ಮಾಡಿಕೊಳ್ಳಬಹುದು. ಈ ಪೇಸ್ಟ್‌ ಮುಖದಲ್ಲೇ ಒಣಗಲು ಬಿಡಬಾರದು. ಹಚ್ಚಿಕೊಂಡು 15ರಿಂದ 20 ನಿಮಿಷಗಳ ನಂತರ ನೀರು ಚಿಮುಕಿಸಿಕೊಂಡು, ಐದು ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಮುಂದಿನ 10 ನಿಮಿಷಗಳ ವರೆಗೂ ಮುಖದಲ್ಲಿ ನೀರಿನ ತೇವಾಂಶ ಇರುವಂತೆ ನೋಡಿಕೊಳ್ಳಿ. ಆಮೇಲೆ ಟಿಶ್ಯೂ ಪೇಪರ್‌ ಇಲ್ಲವೇ ಹತ್ತಿಯ ಬಟ್ಟೆಯಿಂದ ಮುಖವನ್ನು ಒತ್ತಿ ಒತ್ತಿ ತೇವ ತೆಗೆಯಿರಿ. ಖರ್ಜೂರದ ಫೇಸ್‌ಪ್ಯಾಕ್‌ ಬಳಸಿದ 24 ಗಂಟೆಯೊಳಗೆ ಮುಖದಲ್ಲಿ ಹೊಸ ಕಾಂತಿಯನ್ನು ಸ್ವತಃ ನೀವೇ ಗಮನಿಸಬಹುದು.

ಖರ್ಜೂರ– ಕಿತ್ತಳೆಯ ಫೇಸ್‌ಪ್ಯಾಕ್‌: ಮುಖದ ಕಾಂತಿಯನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂಬುದು ನಿಮ್ಮಿಷ್ಟವಾದರೆಖರ್ಜೂರದ ಫೇಸ್‌ಪ್ಯಾಕ್‌ ತಯಾರಿಸುವಾಗ ಕಿತ್ತಳೆ ಹಣ್ಣನ್ನು ಬಳಸಬಹುದು. ಕಿತ್ತಳೆಯನ್ನು ತೊಳೆದು ಸಿಪ್ಪೆ ಸಮೇತ ಸಣ್ಣದಾಗಿ ಕತ್ತರಿಸಿಕೊಂಡು ಬೀಜ ಪ್ರತ್ಯೇಕಿಸಿಕೊಳ್ಳಿ. ಬೀಜ ತೆಗೆದ ಖರ್ಜೂರ ಮತ್ತು ಕಿತ್ತಳೆ ತುಂಡುಗಳನ್ನು ಮಿಕ್ಸಿಯಲ್ಲಿ ನಯವಾಗಿ ರುಬ್ಬಿಕೊಳ್ಳಿ.ಈಗ ನೀರು, ಹಾಲು ಬೆರೆಸುವ ಅಗತ್ಯ ಇರುವುದಿಲ್ಲ. ಯಾಕೆಂದರೆ ಕಿತ್ತಳೆ ರಸವೇ ಸಾಕಾಗುತ್ತದೆ.ಫೇಸ್‌ಪ್ಯಾಕ್‌ ಹಚ್ಚುವುದು ಮತ್ತು ತೆಗೆಯುವ ವಿಧಾನ ಮೇಲಿನಂತೆಯೇ.

ಕ್ಷಿಪ್ರವಾಗಿ ಫಲಿತಾಂಶ ನೀಡುವ ಈ ಫೇಸ್‌ಪ್ಯಾಕ್‌ಗಳನ್ನು ವಾರಕ್ಕೊಮ್ಮೆ ಬಳಸಿದರೆ ಮುಖ ಮತ್ತು ಕತ್ತಿನ ಕಾಂತಿ ಸಂಪೂರ್ಣ ಬದಲಾಗಿ ಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.