ADVERTISEMENT

ತ್ವಚೆಯ ಆರೋಗ್ಯಕ್ಕಿರಲಿ ಲ್ಯಾವೆಂಡರ್ ಸ್ನಾನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 19:30 IST
Last Updated 1 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರತಿದಿನ ಸ್ನಾನ ಮಾಡಿದ ಕೂಡಲೇ ಮನಸ್ಸಿನಲ್ಲಿ ಆಹ್ಲಾದಕರ ಭಾವನೆ ಮೂಡುತ್ತದೆ. ದಣಿದ ದೇಹಕ್ಕೆ ಸ್ನಾನವೇ ಮದ್ದು. ಸ್ನಾನ ಮಾಡಿದ ಮೇಲೆ ಮನಸ್ಸು ಹಾಗೂ ದೇಹ ಎರಡಕ್ಕೂ ಖುಷಿ ಸಿಗುತ್ತದೆ. ‌ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಸ್ನಾಯುಗಳಿಗೆ ಆರಾಮ ಎನ್ನಿಸಿ, ಮನಸ್ಸಿನ ಒತ್ತಡ ಕಡಿಮೆಯಾಗಿ ಉತ್ತಮ ನಿದ್ದೆಗೆ ಸಹಕಾರಿ. ಅಲ್ಲದೇ ಚರ್ಮದ ಆರೋಗ್ಯಕ್ಕೂ ಸ್ನಾನ ಉತ್ತಮ. ಆದರೆ ಸುಮ್ಮನೆ ಬಕೆಟ್ ಅಥವಾ ಟಬ್‌ನಲ್ಲಿ ನೀರು ತುಂಬಿಸಿಕೊಂಡು ಸ್ನಾನ ಮಾಡುವುದಕ್ಕಿಂತ ಕೆಲವೊಂದು ನೈಸರ್ಗಿಕ ಉತ್ಪನ್ನಗಳನ್ನು ಸೇರಿಸಿಕೊಂಡರೆ ಆಹ್ಲಾದದೊಂದಿಗೆ ಚರ್ಮದ ಆರೋಗ್ಯವೂ ಚೆನ್ನಾಗಿರುತ್ತದೆ.

ಲ್ಯಾವೆಂಡರ್‌
ಲ್ಯಾವೆಂಡರ್ ಹನಿಯನ್ನು ನೀರಿಗೆ ಹಾಕಿಕೊಂಡು ಸ್ನಾನ ಮಾಡುವುದರಿಂದ ಆರಾಮ ಎನ್ನಿಸುತ್ತದೆ. ಯಾಕೆಂದರೆ ಇದರಲ್ಲಿರುವ ಚಿಕಿತ್ಸಕ ಗುಣ ದೇಹವನ್ನು ಹಗುರವಾಗಿಸುತ್ತದೆ. ಅಲ್ಲದೇ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಎಂಬುದನ್ನು ಥಾಯ್ಲೆಂಡ್ ಮೂಲದ ಅಧ್ಯಯನವೊಂದು ನಿರೂಪಿಸಿದೆ. ಲ್ಯಾವೆಂಡರ್‌ ಸ್ನಾನದಿಂದ ಗುಣಮಟ್ಟದ ನಿದ್ದೆಗೂ ಸಹಕಾರಿ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ ಸ್ನಾಯುಗಳಿಗೆ ಆರಾಮ ನೀಡುತ್ತದೆ. ಇದರಲ್ಲಿ ಸ್ನಾನ ಮಾಡುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಉತ್ತಮ.

ಬಳಕೆ: ಸ್ನಾನದ ನೀರಿಗೆ 6 ರಿಂದ 8 ಹನಿ ಲ್ಯಾವೆಂಡರ್ ಜಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ನೀರಿನಲ್ಲಿ ಸ್ನಾನ ಮಾಡಿದ ತಕ್ಷಣಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ADVERTISEMENT

ಆ್ಯಪಲ್ ಸೈಡರ್ ವಿನೆಗರ್‌
ಅಂದದ ತ್ವಚೆ, ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ. ಚರ್ಮದ ಕಾಂತಿ ಹೆಚ್ಚಲು, ಕೂದಲಿನ ಆರೋಗ್ಯಕ್ಕೆ ಆ್ಯಪಲ್ ಸೈಡರ್ ವಿನೆಗರ್‌ ಉತ್ತಮ. ಸ್ನಾನದ ನೀರಿನೊಂದಿಗೆ ಆ್ಯಪಲ್‌ ಸೈಡರ್ ವಿನೆಗರ್‌ ಸೇರಿಸಿಕೊಳ್ಳುವುದರಿಂದ ಹಲವು ಉಪಯೋಗಗಳಿವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ ಅಂಶ ಕಪ್ಪುಕಲೆಗಳನ್ನು ನಿವಾರಿಸುತ್ತದೆ. ಚರ್ಮದ ಉರಿಯೂತವನ್ನು ನಿವಾರಿಸುತ್ತದೆ. ಇದು ಸೋಂಕು ಹಾಗೂ ಬ್ಯಾಕ್ಟೀರಿಯಾ ನಿವಾರಕವಾದ ಕಾರಣ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದು ಬೆವರಿನ ಕೊಳೆಯನ್ನು ತೆಗೆದುಹಾಕಿ ಚರ್ಮಕ್ಕೆ ತಾಜಾ ಅನುಭವ ಸಿಗುವಂತೆ ಮಾಡುತ್ತದೆ.

ಬಳಕೆ: ಒಂದು ಬಕೆಟ್‌ ನೀರಿಗೆ 1 ಚಮಚ ಆ್ಯಪಲ್ ಸೈಡರ್ ವಿನಿಗರ್ ಸೇರಿಸಿ, ಸ್ನಾನ ಮಾಡಿ. ಕಂಕುಳ ಕೆಳಗೆ, ತೊಡೆ ಸಂಧಿಯಲ್ಲಿ ಈ ನೀರನ್ನು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಇದರಿಂದ ಬೆವರಿನ ದುರ್ವಾಸನೆಯೂ ನಿವಾರಣೆಯಾಗುತ್ತದೆ.

ಓಟ್‌ಮೀಲ್‌
ತೂಕ ಇಳಿಸಲು ಹಾಗೂ ಸಮತೋಲಿತ ಡಯೆಟ್ ಪಾಲಿಸುವಲ್ಲಿ ಓಟ್‌ಮೀಲ್‌ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದರೊಂದಿಗೆ ಚರ್ಮದ ಆರೋಗ್ಯ ಕಾಪಾಡುವಲ್ಲೂ ಓಟ್‌ಮೀಲ್‌ನ ಪಾತ್ರ ದೊಡ್ಡದು. ಒಣಚರ್ಮ, ಚರ್ಮದ ಕಿರಿಕಿರಿ, ತುರಿಕೆ, ಸನ್‌ಬರ್ನ್‌ ಮುಂತಾದ ಸಮಸ್ಯೆ ಇರುವವರು ಸ್ನಾನದ ನೀರಿಗೆ ಓಟ್‌ಮೀಲ್‌ ಸೇರಿಸಿಕೊಳ್ಳಬೇಕು. ಅಲರ್ಜಿ ತೊಂದರೆ ಇರುವವರು ಕೂಡ ಓಟ್‌ಮೀಲ್‌ ಬಳಸುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಓಟ್‌ಮೀಲ್‌ನಲ್ಲಿ ಪ್ರೊಟೀನ್‌, ಕೊಬ್ಬು, ವಿಟಮಿನ್ ಸೇರಿದಂತೆ ಹಲವು ಬಗೆಯ ಪೋಷಕಾಂಶಗಳಿವೆ. ಇದು ಚರ್ಮವನ್ನು ಸ್ವಚ್ಛಗೊಳಿಸಿ, ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ.

ಬಳಕೆ: ಒಂದು ಕಪ್‌ ಓಟ್‌ಮೀಲ್‌ ಅನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನೀರಿಗೆ ಓಟ್‌ಮೀಲ್ ಪುಡಿ ಸೇರಿಸಿ ಕಲೆಸಿ 15 ನಿಮಿಷ ಹಾಗೇ ಬಿಡಿ. ಮತ್ತೆ 15 ರಿಂದ 20 ನಿಮಿಷ ಕಲೆಸಿ. ಚರ್ಮಕ್ಕೆ ಉಜ್ಜಿಕೊಂಡು ಸ್ನಾನ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.