ADVERTISEMENT

Ornaments: ದುಬಾರಿ ದುನಿಯಾಗೆ ಲೈಟ್‌ವೇಟ್‌ ಆಭರಣ

ಕೃಷ್ಣವೇಣಿ ಪ್ರಸಾದ್ ಮುಳಿಯ
Published 31 ಅಕ್ಟೋಬರ್ 2025, 23:47 IST
Last Updated 31 ಅಕ್ಟೋಬರ್ 2025, 23:47 IST
   
ಬಂಗಾರದ ಒಡವೆ ತೊಡಬೇಕೆಂಬ ಹಂಬಲ ಯಾವ ಹೆಣ್ಣಿಗೆ ತಾನೇ ಇರದು? ಚಿನ್ನದ ಬೆಲೆ ಗಗನಮುಖಿಯಾಗಿರುವ ಈ ತುಟ್ಟಿ ಕಾಲದಲ್ಲಿ, ಜೇಬು ಗಟ್ಟಿ ಇಲ್ಲದವರು ಅದನ್ನು ಕೊಳ್ಳುವುದಾದರೂ ಹೇಗೆ? ಕನಕಾಂಗಿಯರ ಈ ಕನಲಿಕೆಗೆ, ಹೆಚ್ಚು ಚಿನ್ನ ಬೇಡದ, ಆದರೆ ಅತ್ಯಾಕರ್ಷಕವಾಗಿ ಕಾಣುವ ಲೈಟ್‌ವೇಟ್‌ ಬಂಗಾರದ ಆಭರಣಗಳು ‘ಚಿನ್ನದಂತಹ’ ಉತ್ತರ ಕೊಡುತ್ತವೆ. ಬನ್ನಿ, ಅಂತಹ ಆಭರಣಗಳ ಕಡೆಗೊಂದು ದೃಷ್ಟಿ ಹಾಯಿಸಿ ಬರೋಣ.

ಆನಂದ ತರುವ ಮನಮೋಹಕ ಚಿನ್ನವು ಮನೆಗೆ ಶ್ರೀರಕ್ಷೆ. ಈ ಬಂಗಾರಕ್ಕೆ ಹಲವಾರು ಬಂಧಗಳಿವೆ. ಅಷ್ಟೇಅಲ್ಲ ಅದರೊಂದಿಗೆ ಹಲವಾರು ಭಾವನೆಗಳು ಬೆಸೆದುಕೊಂಡಿರುತ್ತವೆ. ಸ್ವರ್ಣವನ್ನು ಖರೀದಿಸುವಾಗ ಸಿಗುವ ಖುಷಿ, ಸಂತೋಷ, ತೃಪ್ತಿ ವರ್ಣಿಸಲಸದಳ.

ಹೊನ್ನು ಇದ್ದರೆ ಅದೊಂದು ಭದ್ರತೆ, ಬಂಗಾರದೊಡವೆ ಧರಿಸಿದರೆ ಶ್ರೀರಕ್ಷೆ ಎನ್ನುವ ಭಾವನೆ ಇದೆ. ಇದೆಲ್ಲಾ ಸರಿ, ಆದರೆ ಈಗಿನ ತುಟ್ಟಿ ಕಾಲದಲ್ಲಿ ಬಂಗಾರದ ಆಭರಣಗಳನ್ನು ಖರೀದಿಸಲು ಎಷ್ಟು ಜನರಿಗೆ ಸಾಧ್ಯವಾಗುತ್ತದೆ? ಆದರೆ ಹೆಚ್ಚು ಹಣ ತೆತ್ತು ಖರೀದಿಸಲು ಸಾಧ್ಯವಾಗದವರು, ದಪ್ಪ ದಪ್ಪವಾಗಿ, ಭಾರವಾಗಿ, ಗಟ್ಟಿಮುಟ್ಟಾಗಿ ಇರುವ ಆಭರಣಗಳನ್ನೇ ಕೊಂಡು ಧರಿಸಬೇಕೆಂದಿಲ್ಲ. ಸರಳವಾಗಿ, ಹಗುರವಾಗಿ, ಕಡಿಮೆ ಚಿನ್ನ ಬಳಸಿದ್ದರೂ ದೊಡ್ಡದಾಗಿ ಕಾಣುವಂತಹ, ಫ್ಯಾಷನಬಲ್‌ ಎನಿಸುವ ಹಲವಾರು ಮಾದರಿಯ ಒಡವೆಗಳು ಚಿನ್ನಾಭರಣ ಮಳಿಗೆಗಳಲ್ಲಿ ಲಭ್ಯವಿವೆ.

ವ್ಯಾಕ್ಸ್‌ಬಾಲ್‌ ನೆಕ್ಲೆಸ್‌

ಚಿನ್ನದ ಹೊಳಪು ಇರಬೇಕು, ದೊಡ್ಡದಾಗಿ ಕಾಣಬೇಕು, ಕುತ್ತಿಗೆಗೆ ಒಪ್ಪುವಂತೆ ಇರಬೇಕು. ಎರಡು ಎಳೆ, ಮೂರು ಎಳೆ ಡ್ರಾಪ್‍ಶೇಪ್, ದೊಡ್ಡ ಗುಂಡು, ಸಣ್ಣ ಗುಂಡು, ವಿನ್ಯಾಸ ಹೊಂದಿರುವ ಗುಂಡು, ರೂಬಿ, ಮುತ್ತು, ಎಮರಾಲ್ಢ್, ಹುದುಗಿರುವ ಗುಂಡು... ಹೀಗೆ ಹಲವು ರೀತಿಯಲ್ಲಿ ಈ ವ್ಯಾಕ್ಸ್‌ ಗುಂಡುಗಳನ್ನು ತಯಾರಿಸಲಾಗುತ್ತದೆ. ಅವರವರ ಭಾವಕ್ಕೆ ತಕ್ಕಂತೆ ಧರಿಸಬಹುದು. ಭಾರವೂ ಇರುವುದಿಲ್ಲ, ಬೆಲೆಯೂ ಕಡಿಮೆ. ಚಿನ್ನದ ಬಳಕೆ ಕಡಿಮೆ ಇದ್ದರೂ ನೋಡಲು ದೊಡ್ಡದಾಗಿರುತ್ತದೆ. ಹಗುರವಾಗಿದ್ದು ವ್ಯಾಕ್ಸ್ ತುಂಬಿರುವುದರಿಂದ ಕುತ್ತಿಗೆಯಲ್ಲಿ ಸರಿಯಾಗಿ ಕುಳಿತುಕೊಳ್ಳುತ್ತದೆ.

ADVERTISEMENT

ಕಲರ್ ಬೀಡ್ಸ್ ನೆಕ್ಲೆಸ್‌

ಇದು ಈಗಿನ ಟ್ರೆಂಡಿ ಆಭರಣ. ನಮ್ಮ ದಿರಿಸಿನ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಅದೇ ಬಣ್ಣದ ಬೀಡ್ಸ್ ಇರುವ ನೆಕ್ಲೆಸ್‌ ಚೆನ್ನಾಗಿ ಕಾಣುತ್ತದೆ. ಬೀಡ್ಸನ್ನು ನೂಲಲ್ಲಿ ಪೋಣಿಸಿ, ಚಿನ್ನದ ಬೀಡಿಂಗ್‍ಗೆ ಮೂರು ತೂತು ಮಾಡಿ ಮೂರು ಎಳೆ ಧರಿಸಬಹುದು. ಎದುರಿಗೆ ಚಿನ್ನದ 3 ಗುಂಡು ಸೇರಿದರೆ ಅದರ ಲುಕ್ಕೇ ಬೇರೆ. ಜೊತೆಗೆ, ನಿಮ್ಮಲ್ಲಿರುವ ಚಿನ್ನದ ಬೆಂಡೋಲೆ, ಜುಮುಕಿ ಧರಿಸಿದರೆ ಇನ್ನಷ್ಟು ಸ್ಮಾರ್ಟ್‌ ಆಗಿ ಕಾಣಬಹುದು.

ಟರ್ಕಿ ಆಭರಣ

ಟರ್ಕಿ ಆಭರಣದಲ್ಲಿ ರೂಪದರ್ಶಿ

ಕಡಿಮೆ ಚಿನ್ನದಲ್ಲಿ ತಯಾರು ಮಾಡುವ ಈ ಆಭರಣದಲ್ಲಿ ಬಣ್ಣದ ಹರಳನ್ನು ಪೋಣಿಸಬಹುದು. ಬರೀ ಬಂಗಾರದಲ್ಲೇ ಬೇಕು ಅನ್ನುವವರು ಬಂಗಾರದ್ದೇ ಧರಿಸಬಹುದು. ಹೊಳಪು ಮಾತ್ರ ಸದಾ ಇರುತ್ತದೆ.

ಚಾಂದ್‍ಬಾಲಿ ಕಿವಿಯೋಲೆ/ ಪೆಂಡೆಂಟ್‌

ನೋಡಲು ಚಂದ್ರನಂತೆ ವೃತ್ತಾಕಾರವಾಗಿ ಇದ್ದರೂ ಈ ವಿನ್ಯಾಸಕ್ಕೆ ಕಡಿಮೆ ಚಿನ್ನ ಸಾಕು. ಯಾಕೆಂದರೆ ಮಧ್ಯದಲ್ಲಿ ಚಿನ್ನ ಬಳಸುವ ಅಗತ್ಯವಿಲ್ಲ. ಸುತ್ತಲೂ ಚಿನ್ನದ ಸರಿಗೆಯನ್ನು ಬಳಸಿ ಮುತ್ತಿನ, ಸಣ್ಣ ಹರಳುಗಳ ಗೊಂಚಲು ಬರುವಂತೆ ವಿನ್ಯಾಸಗೊಳಿಸಿದರೆ ಬಹು ಸೊಗಸು. ಕಡಿಮೆ ಚಿನ್ನದಲ್ಲಿ ದೊಡ್ಡ ಓಲೆ ನಿಮ್ಮದಾಗುತ್ತದೆ. ಪೆಂಡೆಂಟ್ ಕೂಡ ಇದೇ ರೀತಿ ಮಾಡಬಹುದು. ಸರದಲ್ಲಿ ಬೀಡ್ಸ್‌ ಅನ್ನು ನೂಲಿನಲ್ಲಿ ಪೋಣಿಸಿ, ಪೆಂಡೆಂಟ್‍ ಧರಿಸಿ.

‘ನಕಾಶೆ’ ಆ್ಯಂಟಿಕ್ ಆಭರಣ

‘ನಕಾಶೆ’ ಆ್ಯಂಟಿಕ್ ಆಭರಣ ಧರಿಸಿರುವ ಯುವತಿ

ನಕಾಶೆ ಎಂದರೆ ಅಚ್ಚು ಮಾಡಿ ಎರಕ ಹೊಯ್ದು ಮಾಡಿದ ತೆಳ್ಳಗಿನ ವಿನ್ಯಾಸ. ಉಬ್ಬು ಉಬ್ಬಾಗಿ ಇರುತ್ತದೆ. ಆದರೆ ಅದರ ಚಂದಕ್ಕೇನೂ ಕೊರತೆ ಇಲ್ಲ. ಜಾಗರೂಕವಾಗಿ ಹ್ಯಾಂಡಲ್ ಮಾಡಬೇಕು. ಜನರಲ್ಲಿ ಆ್ಯಂಟಿಕ್ ಅಂದಾಕ್ಷಣ ಹೆಚ್ಚು ಚಿನ್ನ ಬಳಸಲಾಗುತ್ತದೆ ಎಂಬ ಭಾವನೆ ಇದೆ. ಆದರೆ ನಕಾಶೆ ಮಾದರಿಯ ಆಭರಣಗಳು ಇದಕ್ಕೆ ಹೊರತಾಗಿರುತ್ತವೆ.

18 ಕ್ಯಾರೆಟ್‌ ಚಿನ್ನ + ಡೈಮಂಡ್‌

ಎಲ್ಲರಿಗೂ ತಿಳಿದಿರುವಂತೆ, 22 ಕ್ಯಾರೆಟ್‌ ಆಭರಣಗಳು ಪ್ರಸಿದ್ಧಿ ಹೊಂದಿವೆ. 18 ಕ್ಯಾರೆಟ್‌ನಲ್ಲಿ ಚಿನ್ನದ ಪ್ರಮಾಣ ಕಡಿಮೆ ಇದ್ದು, ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ. ಆದರೆ ಆಕರ್ಷಕ ನೋಟಕ್ಕೆ, ಹೊಳಪಿಗೇನೂ ಕೊರತೆಯಿಲ್ಲ. ಖರೀದಿಸುವಾಗಲೂ ಬೆಲೆ ಕಡಿಮೆ, ಮಾರಿದರೂ ಅದೇ ಬೆಲೆ ಸಿಗುತ್ತದೆ. ವಜ್ರದ ಆಭರಣದಲ್ಲೂ ಈ ಚಿನ್ನ ಬಳಸಿ, ಅಷ್ಟರಮಟ್ಟಿಗೆ ಕೊಳ್ಳುವ ಆಭರಣದ ಬೆಲೆ ಕಡಿಮೆ ಮಾಡಿಕೊಳ್ಳಬಹುದು.

ಮುತ್ತಿನ ಆಭರಣ/ ಗೊಂಚಲು ಪೆಂಡೆಂಟ್

ಮುತ್ತನ್ನು ನೂಲಿನಲ್ಲಿ ಪೋಣಿಸಿ ಎಳೆಯನ್ನು ಹೆಣೆದು, ಚಿನ್ನದ ಕಡ್ಡಿ ವಿನ್ಯಾಸದ ಪೆಂಡೆಂಟ್ ತಯಾರಿಸಿ ಮುತ್ತಿನ ಗೊಂಚಲನ್ನು ವಿನ್ಯಾಸಗೊಳಿಸಿದಾಗ ಹಾರ ತಯಾರಾಗುತ್ತದೆ. ನೋಡಲು ಸುಂದರವಾಗಿರುತ್ತದೆ, ಚಿನ್ನದ ಬಳಕೆಯೂ ಕಡಿಮೆ. ಮುತ್ತಿನ ಆಭರಣ ಇಷ್ಟಪಡುವವರಿಗೆ ಉದ್ದನೆಯ ಮೂರು ಎಳೆಯ ಮುತ್ತಿನ ಹಾರಕ್ಕೆ ಒಂದು ಪೆಂಡೆಂಟ್ ಸಾಕು, ತೊಟ್ಟವಳ ಸೌಂದರ್ಯ ಇಮ್ಮಡಿಸುವಂತೆ ಮಾಡಲು.

ಚೇಂಜಬಲ್ ಸರ, ಪೆಂಡೆಂಟ್

ಯಾವುದೇ ಸರ ಅಥವಾ ಪೆಂಡೆಂಟ್ ನಮಗೆ ಬೇಕಾದಂತೆ ಬದಲಿಸಲು ಅನುವಾಗುವಂತಹ ಹುಕ್ಕನ್ನು ಹೊಂದಿರಬೇಕು. ಆಗ ಕಡಿಮೆ ಚಿನ್ನದಲ್ಲಿ ಕಲರ್ ಮ್ಯಾಚ್ ಮಾಡಿಕೊಂಡು ಸೀರೆ, ಲೆಹೆಂಗಾ, ಚೂಡಿದಾರ್‌ಗೆ ಹೊಂದಿಸಿಕೊಳ್ಳಬಹುದು. ಕಡಿಮೆ ಚಿನ್ನದಲ್ಲಿ ತಯಾರಿಸಿದ ವಿವಿಧ ನೆಕ್ಲೆಸ್‌, ಸರಗಳನ್ನು ನಾವೇ ಮನೆಯಲ್ಲಿ ಪುನರ್ ಜೋಡಿಸಿಕೊಂಡು ಧರಿಸಬಹುದು.

ಹರಳು ಬದಲಿಸುವ ಆಭರಣ

ಈಗಿನ ದಿನಗಳಲ್ಲಿ ಇದೊಂದು ಬಹಳ ಪ್ರಸಿದ್ಧಿ ಪಡೆದಿರುವ ಆಭರಣ. ನೆಕ್ಲೆಸ್‌ ಆಗಲಿ, ಕಿವಿಯೋಲೆ ಆಗಲಿ, ಪೆಂಡೆಂಟ್ ಆಗಲಿ, ಮಧ್ಯದಲ್ಲಿ ಒಂದು ರಂಧ್ರ ಇರುತ್ತದೆ. ಅಲ್ಲಿಗೆ ಬಣ್ಣಬಣ್ಣದ ಹರಳುಗಳನ್ನು ಪೋಣಿಸಲು ವ್ಯವಸ್ಥೆ ಇರುತ್ತದೆ. ಆಗ ಒಂದೇ ಆಭರಣವನ್ನು ನಮಗೆ ಬೇಕಾದ ಬಣ್ಣದ ಆಭರಣವನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮಲ್ಟಿಪಲ್ ಬಳಕೆಯ ಒಡವೆ

ಇದೊಂದು ವಿಶೇಷ ಆಭರಣ. ದೊಡ್ಡ ಹಾರಗಳನ್ನು ಸಣ್ಣ ಲಾಕ್ ಸಿಸ್ಟಮ್ ಬಳಸಿ ನೆಕ್ಲೆಸ್‌ ಮಾಡಬಹುದು, ಕೈಗೆ ವಂಕಿಯಾಗಿ ಧರಿಸಬಹುದು, ಮುಂದಲೆ ಬೊಟ್ಟಾಗಿ ಬಳಸಬಹುದು. ಅಂದರೆ, ಆಯಾ ಸಮಾರಂಭಕ್ಕೆ ತಕ್ಕಂತೆ ಹೊಂದಿಸಿಕೊಂಡು ಆಭರಣದ ಸ್ಟೈಲ್ ಬದಲಿಸಿ ಧರಿಸಿಕೊಳ್ಳಬಹುದು. ಹಲವಾರು ರೀತಿಯಲ್ಲಿ ಶರೀರದ ಬೇರೆ ಬೇರೆ ಭಾಗಗಳಿಗೆ ಧರಿಸಬಹುದಾದ ಆಭರಣ ಇದು.

ಬಗೆ ಬಗೆ ಚೋಕರ್‌ 

ಕಡಿಮೆ ತೂಕದ, ಆದರೆ ಸುಂದರವಾಗಿ ಕಾಣುವ ವಿವಿಧ ಬಗೆಯ ‘ಚೋಕರ್‌’ಗಳು ಒಂದು ಗ್ರಾಮ್‌ನಲ್ಲಿ ಕೂಡ ಲಭ್ಯವಿವೆ.

ಗಮನಿಸಿ, ನಮ್ಮ ಬುದ್ಧಿಕೌಶಲದಿಂದ ಕಡಿಮೆ ಚಿನ್ನದಲ್ಲಿ ಹಲವಾರು ರೀತಿಯ ಆಭರಣಗಳನ್ನು ಕೊಂಡು ಧರಿಸಬಹುದು. ತಿಳಿದವರ ಬಳಿ ಮಾತನಾಡಿದರೆ ಇನ್ನಷ್ಟು ಐಡಿಯಾಗಳು ಹೊಳೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.