ADVERTISEMENT

ಹಲವು ಬಗೆಯ ಫೇಷಿಯಲ್‌ ಮಾಡಿಸುವಾಗ ಇರಲಿ ಎಚ್ಚರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 19:30 IST
Last Updated 10 ಮಾರ್ಚ್ 2023, 19:30 IST
   

ಮದುವೆಗೆ ಮುನ್ನ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮದುಮಗಳು ಬ್ಯೂಟಿಪಾರ್ಲರ್‌ಗೆ ಹೋಗಿ ಫೇಷಿಯಲ್‌ ಮಾಡಿಸಿಕೊಂಡು ಬಂದರು. ಆದರೆ, ಮುಖದಲ್ಲಿ ಕಾಂತಿ ಹೆಚ್ಚುವ ಬದಲು ಕಪ್ಪು ಕಲೆಗಳು ಕಾಣಿಸಿಕೊಂಡು, ಮುಖ ವಿಕಾರವಾಯಿತು. ಮದುವೆಯೇ ರದ್ದಾಯಿತು. ಇಂಥದ್ದೊಂದು ಘಟನೆ ಇತ್ತೀಚೆಗೆ ತುಂಬಾ ಸುದ್ದಿಯಾಯಿತು..!

ಫೇಷಿಯಲ್‌ ಎನ್ನುವುದು ಮುಖದ ಅಂದ ಹೆಚ್ಚಿಸುವ ‘ಪ್ರಕ್ರಿಯೆ’ಯೇ ಇರಬಹುದು. ಆದರೆ, ಅದನ್ನು ಮಾಡಿಸುವ ಮುನ್ನ, ಒಂದಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ.

ದೇಹದಲ್ಲಿ ಅತಿ ಸೂಕ್ಷ್ಮ ಅಂಗವೆನಿಸಿಕೊಂಡಿರುವ ಚರ್ಮವೂ ಉಸಿರಾಡುತ್ತದೆ! ಸಿಕ್ಕ ಸಿಕ್ಕ ಕ್ರೀಮುಗಳನ್ನು, ಮನೆಮದ್ದುಗಳನ್ನು ಬಳಸಿ ಈ ಚರ್ಮದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಒಂದು ವಿಷಯ ನೆನಪಿರಲಿ; ಮನೆ ಮದ್ದು ಎಂದಾಕ್ಷಣ ಅಡ್ಡ ಪರಿಣಾಮ ಇರುವುದಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಹಾಗೆಯೇ, ಎಲ್ಲ ಮನೆಮದ್ದುಗಳು ಎಲ್ಲ ಚರ್ಮಕ್ಕೂ ಹೊಂದಿಕೆಯಾಗುವುದಿಲ್ಲ ಎಂಬುದು ಅಷ್ಟೇ ಸತ್ಯ.

ADVERTISEMENT

ಹಲವು ಬಗೆಯ ಫೇಷಿಯಲ್‌!

ಮೊದಲೆಲ್ಲ ಪಾರ್ಲರ್‌ಗಳಿಗೆ ಹೋದರೆ ನಾರ್ಮಲ್‌ ಫೇಷಿಯಲ್‌ ಅಥವಾ ಗೋಲ್ಡನ್‌ ಫೇಷಿಯಲ್‌ ಎಂಬ ಎರಡೇ ಆಯ್ಕೆ ಇರುತ್ತಿತ್ತು. ಆದರೆ, ಈಗ ಹಾಗಿಲ್ಲ ಚರ್ಮದಲ್ಲಿನ ಸುಕ್ಕು ತಡೆಗೆ, ಹೊಳಪಿಗೆ, ಕಣ್ಣಿನ ಕೆಳಗಿನ ಕಪ್ಪು ವರ್ತುಲ ತೆಗೆಯಲು, ಮೊಡವೆ ಕಡಿಮೆ ಮಾಡಲು ಹೀಗೆ ನಾನಾ ಬಗೆಯ ಫೇಷಿಯಲ್‌ಗಳಿವೆ.

ಮುಖದ ಕಾಂತಿ ವೃದ್ಧಿಸಬೇಕಾದ ಫೇಷಿಯಲ್‌ ಕೆಲವರಿಗೆ ಚರ್ಮದ ಅಲರ್ಜಿ ಉಂಟು ಮಾಡಿರುವ ಉದಾಹರಣೆಗಳಿವೆ. ಈ ಅಲರ್ಜಿಯ ಚಿಕಿತ್ಸೆಗೆ ವೈದ್ಯರ ಬಳಿ ತೆರಳಿದಾಗಲೇ,‘ಇದು ಫೇಷಿಯಲ್‌ನಿಂದ ಆಗಿರುವ ಸಮಸ್ಯೆ’ ಎಂದು ಗೊತ್ತಾಗಿದೆ.

‘ಫೇಷಿಯಲ್‌ ಮಾಡಿಸಿಕೊಂಡ ನಂತರ ಕೆಲವರು ಪ್ರವಾಸ ಹೋಗುತ್ತಾರೆ. ಮುಖಕ್ಕೆ ಸನ್‌ ಸ್ಕ್ರೀನ್‌ ಬಳಸದೇ, ಬಿಸಿಲು, ದೂಳು ಮಿಶ್ರಿತಗಾಳಿ, ಸ್ವಿಮ್ಮಿಂಗ್‌ಪೂಲ್‌ಗಳ ನೀರಿಗೆ ಮುಖವೊಡ್ಡುತ್ತಾರೆ. ಈ ಕಾರಣದಿಂದ ಕೆಲವರಿಗೆ ಚರ್ಮ ಕಪ್ಪಾಗುತ್ತದೆ’ ಎನ್ನುತ್ತಾರೆ ಬಾಡಿ ವೇದಾಂತ್‌ ಸಂಸ್ಥೆಯ ಸೌಂದರ್ಯ ತಜ್ಞೆ ಮಧುರಾ.

ಯಾವುದೇ ಫೇಷಿಯಲ್ ಮಾಡಿಸಿಕೊಂಡರೂ, ಕಡ್ಡಾಯ ವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎನ್ನುತ್ತಾರೆ ಅವರು.

ಚರ್ಮಕ್ಕೂ ಗುಣವಿದೆ!

ಏನೇ ಮುಖಕ್ಕೆ ಹಚ್ಚುವ ಮೊದಲು ಚರ್ಮದ ಗುಣವನ್ನು ಅರಿತುಕೊಳ್ಳಿ. ಬೆಳ್ಳಗಿರುವವರ ಚರ್ಮ ಸ್ವಲ್ಪ ಸೂಕ್ಷ್ಮವಾಗಿರುತ್ತದೆ. ಎಣ್ಣೆ ಚರ್ಮ(ಆಯಿಲ್ ಸ್ಕಿನ್‌), ಒಣ ಚರ್ಮ(ಡ್ರೈ ಸ್ಕಿನ್‌) ಹೀಗೆ ಚರ್ಮಕ್ಕೂ ನಾನಾ ಗುಣಗಳಿವೆ. ಚರ್ಮಕ್ಕೆ ಹೊಂದುವಂಥ ಆರೈಕೆ ಮಾಡಿಕೊಳ್ಳುವುದು ಸೂಕ್ತ.

ಸೂಕ್ಷ್ಮ ಚರ್ಮದ ಗುಣವಿರುವವರು, ರಾಸಾಯನಿಕಯುಕ್ತ ಕ್ರೀಮ್‌ಗಳಿಂದ ಫೇಷಿಯಲ್‌ ಮಾಡಿಸಿಕೊಂಡಾಗ ಅಲರ್ಜಿಯಾ ಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಿಗೆ ಫೇಷಿಯಲ್ ಉತ್ಪನ್ನದ ಘಾಟಿನಿಂದ ಅಲರ್ಜಿ ಆಗುವುದೂ ಉಂಟು. ಹಾಗಂತ ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದೇನಿಲ್ಲ.

ಒಣ ಚರ್ಮ ಇರುವವರು ಮುಲ್ತಾನಿ ಮಿಟ್ಟಿ, ಕಡಲೆ ಹಿಟ್ಟು ಬಳಸಿದರೆ ಚರ್ಮ ಇನ್ನಷ್ಟು ಒಣ ಎನಿಸುತ್ತದೆ. ಅದೇ ರೀತಿ ಆಯಿಲ್‌ ಸ್ಕಿನ್‌ ಇರುವವರು ಕೆನೆ, ಎಣ್ಣೆ ಮಸಾಜ್‌ ಮಾಡಿಕೊಂಡರೆ ಮೊಡವೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಚರ್ಮಕ್ಕೆ ಯಾವ ಫೇಷಿಯಲ್ ಸೂಕ್ತ ಎಂದು ಅರಿಯಬೇಕು ಎನ್ನುತ್ತಾರೆ ಚರ್ಮರೋಗ ತಜ್ಞೆ ಡಾ.ನಾಗಲಕ್ಷ್ಮಿ.

ಮುಖದ ಕಾಂತಿವೃದ್ಧಿಗೆ ಅಲೋವೆರಾ(ಲೋಳೆಸರ) ಒಳ್ಳೆಯದು ಎಂದು ನಿತ್ಯ ಬಳಸಿದರೆ ಚರ್ಮ ಕಪ್ಪಾಗುತ್ತದೆ. ಅದೇ ರೀತಿ ತಿಂಗಳಿಗೊಮ್ಮೆ ಬ್ಲೀಚ್, ವೈಟ್ನಿಂಗ್ ಮಾಡಿಸಿ ಕೊಳ್ಳುವುದು, ಅವಧಿ ಮುಗಿದಿರುವ ಉತ್ಪನ್ನಗಳ ಬಳಕೆ ಇವೆಲ್ಲ ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ. ತುರ್ತು ಸಂದರ್ಭಗಳಲ್ಲಿ ಮಾತ್ರ ಲೇಸರ್ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ಫೇಷಿಯಲ್ ಮಾಡಿಸಿಕೊಳ್ಳುವಾಗ ಮತ್ತು ನಂತರವೂ ಕೆಲವು ಮುಂಜಾಗ್ರತಾ ಕ್ರಮಗಳಿರುತ್ತವೆ ಅದನ್ನು ಸರಿಯಾಗಿ ಪಾಲಿಸದಿದ್ದರೂ ಸಮಸ್ಯೆಯಾಗುತ್ತದೆ ಎನ್ನುವ ಎಚ್ಚರಿಕೆ ನಾಗಲಕ್ಷ್ಮಿ ಅವರದ್ದು.

ಮುಖಕ್ಕೆ ಮಸಾಜ್‌ ಇರಲಿ

ರಾಸಾಯನಿಕಯುಕ್ತ ಸೋಪು, ಕ್ರೀಮ್‌, ಫೇಸ್‌ವಾಶ್‌ನ ಹೊಸ ಪ್ರಯೋಗಗಳಿಂದ ಚರ್ಮ ಹಾಳಾಗುವ ಸಾಧ್ಯತೆ ಇರುತ್ತದೆ. ‘ಮುಖದ ಸಹಜ ಕಾಂತಿಗಾಗಿ ನಿತ್ಯ ಎಣ್ಣೆಯಿಂದ ಮಸಾಜ್‌ ಮಾಡಬೇಕು. ಆದರೆ ಮಸಾಜ್ ಮಾಡಿಕೊಳ್ಳುವಾಗ ವೃತ್ತಾಕಾರದಲ್ಲಿ ಮಾಡಬೇಕು. ಅದೇ ರೀತಿ ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದಾದರೆ ದೇಹದ ರೋಮ ಯಾವ ದಿಕ್ಕಿನೆಡೆಗೆ ಮುಖ ಮಾಡಿರುತ್ತದೋ ಆ ಮಾರ್ಗದಲ್ಲಿ ಮಾಡಬೇಕಾಗುತ್ತದೆ. ಅಂದರೆ ಮೇಲ್ಮುಖದಿಂದ ಕೆಳಮುಖಕ್ಕೆ ಮಸಾಜ್ ಇರಲಿ. ಇದರಿಂದ ರಕ್ತ ಸಂಚಲನ ಸರಾಗವಾಗಿ ಆಗುತ್ತದೆ’ ಎನ್ನುತ್ತಾರೆ ಚನ್ನರಾಯಪಟ್ಟಣದ ಸ್ವಸ್ತಿ ಆಯುರ್ವೇದಾಲಯದ ವೈದ್ಯೆ ಡಾ.ರಶ್ಮಿಕಲಾ.

ದೇಹಪ್ರಕೃತಿ, ಪ್ರದೇಶ, ಋತುವಿಗನುಗುಣವಾಗಿ ಮನೆಯಲ್ಲೇ ಲಭ್ಯವಿರುವ ಎಣ್ಣೆ, ತುಪ್ಪ, ಬೆಣ್ಣೆಯಂತಹ ಪದಾರ್ಥಗಳಿಂದ ಮಸಾಜ್ ಮಾಡಿಕೊಳ್ಳಬಹುದು. ಜಿಡ್ಡಿನ ಚರ್ಮ ಇರುವವರು ಸೀಗೆಪುಡಿ, ಕಡಲೇ ಹಿಟ್ಟು, ಹೆಸರುಬೇಳೆ ಹೆಸರು ಹಿಟ್ಟು, ಮೈಸೂರು ಬೇಳೆ ಹಿಟ್ಟಿನಂತಹ ಒಗರು ರುಚಿ ಇರುವ ಪುಡಿಗಳಿಂದ ಮುಖವನ್ನು ತೊಳೆಯಬಹುದು. ಅದೇ ಒಣ ಚರ್ಮದವರು ಈ ಪುಡಿಗಳೊಂದಿಗೆ ಹಾಲು/ಮೊಸರು, ಎಣ್ಣೆ/ ತುಪ್ಪ ಸೇರಿಸಿ ಮುಖ ಉಜ್ಜಿ ತೊಳೆಯಬಹುದು. ಮುಖಕ್ಕೆ ಏನೇ ಹಚ್ಚುವ ಮುನ್ನ ಕೈ ಚರ್ಮಕ್ಕೆ ಹಚ್ಚಿ, ಅಲರ್ಜಿ ಆಗದೇ ಇದ್ದರೆ ಮಾತ್ರ ಬಳಸುವ ರೂಢಿ ಮಾಡಿಕೊಳ್ಳಬೇಕು.

ಆಹಾರ–ನಿದ್ರೆಯೂ ಅಗತ್ಯ

ಸರಿಯಾದ ಸಮಯಕ್ಕೆ ಊಟ, ಸರಿಯಾದ ಸಮಯಕ್ಕೆ ನಿದ್ರೆ ಮಾಡಿದರೆ, ಚರ್ಮದ ಆರೋಗ್ಯವೂ ಚೆನ್ನಾಗಿರುತ್ತದೆ. ಮುಖದಲ್ಲಿ ಮೊಡವೆ ಆಗಿದೆ ಎಂದರೆ ರಕ್ತಶುದ್ಧಿ ಇಲ್ಲವೆಂದೇ ಅರ್ಥ. ಕಣ್ಣಿನ ಕೆಳಗೆ ಕಪ್ಪುವರ್ತುಲ, ಸುಕ್ಕು ಇದ್ದರೆ ನಿದ್ರೆ ಸರಿಯಾಗುತ್ತಿಲ್ಲ ಅಥವಾ ಮಾಸಿಕ ಋತು ಚಕ್ರ ಸರಿಯಾಗಿ ಆಗುತ್ತಿಲ್ಲ ಎಂಬುದರ ಸೂಚನೆ. ಸರಿಯಾದ ಸೂಕ್ತ ಆಹಾರ– ಸರಿಯಾದ ಸಮಯದಲ್ಲಿ ನಿದ್ರೆ ಮಾಡುವ ಅಭ್ಯಾಸ ಮಾಡಿಕೊಂಡರೆ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

ನಿಮ್ಮ ಚರ್ಮ ಹೇಗಿದೆ ಎಂಬುದನ್ನು ಅರಿತು, ಸೋಪು, ಫೇಸ್‌ವಾಶ್‌ ಅಥವಾ ಕಡಲೇಹಿಟ್ಟ ಯಾವುದಾದರೂ ಬಳಸಬಹುದು. ಜಂಟಲ್ ಕ್ಲೆನ್ಸಿಂಗ್‌ ಹಾಗೂ ಮಾಶ್ಚರೈಸಿಂಗ್‌ ಅಗತ್ಯವಾಗುತ್ತದೆ. ಟೋನರ್‌ನ ನಿರಂತರ ಬಳಕೆ ಒಳ್ಳೆಯದಲ್ಲ.
ಡಾ.ನಾಗಲಕ್ಷ್ಮೀ, ಚರ್ಮ ತಜ್ಞೆ

ಹಿತವಾದ ಆಹಾರ, ಮಿತವಾದ ವ್ಯಾಯಾಮ, ಸುಖವಾದ ನಿದ್ದೆ ಜೊತೆ ಮನಸ್ಸನ್ನು ಸದಾ ಖುಷಿಯಾಗಿ ಇಟ್ಟುಕೊಳ್ಳುವುದು ಸ್ವಸ್ಥ ಆರೋಗ್ಯದ ಗುಟ್ಟಾಗಿದ್ದು, ಇದರ ಕಾಂತಿ ಮುಖದಲ್ಲಿ ಕಾಣಿಸುತ್ತದೆ. ಕಪ್ಪಗಿದ್ದವರೂ ಲಕ್ಷಣವಾಗಿ ಅಥವಾ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ.

ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವವರು ತಿಂಗಳಿಗೊಮ್ಮೆ ಫೇಷಿಯಲ್ ಮಾಡಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇದರಲ್ಲಿ ಡೆಡ್‌ಸ್ಕಿನ್ ತೆಗೆಯುವುದು, ಮಸಾಜ್‌ ಮಾಡುವುದು, ಟ್ಯಾನ್‌ ತೆಗೆಯುವುದು, ನಾರ್ಮಲ್ ಪ್ಯಾಕ್ ಹಾಕಲಾಗುವುದು. ಫೇಷಿಯಲ್ ಮಾಡಿಸಿಕೊಂಡ ನಂತರ ನೈಟ್‌ ಕ್ರಿಮ್‌/ ಸೀರಮ್‌ ಹಾಗೂ ಹಗಲಿನಲ್ಲಿ ಸನ್‌ಸ್ಕ್ರೀನ್‌ ಲೋಷನ್‌ ಬಳಕೆ ಮಾಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ಬೇಗ ಟ್ಯಾನ್ ಆಗಬಹುದು ಅಥವಾ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ. ಪ್ರೋಟಿನ್ ಹೆಚ್ಚಿರುವ ಆಹಾರ ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ ಎಂಬುದು ಸೌಂದರ್ಯ ತಜ್ಞೆ ಮಧುರಾ ಅವರ ಕಿವಿಮಾತು.

ಹಗಲಿನಲ್ಲಿ ಸನ್‌ಸ್ಕ್ರೀನ್ ಬಳಸುವಾಗ, ಮನೆಯಲ್ಲೇ ಇರುವವರು ಎಸ್‌ಪಿಎಫ್‌ ಇರುವ ಕ್ರೀಮ್ ಬಳಸಿದರೆ ಸಾಕು. ದಿನದ ಒಂದು ಗಂಟೆ ಬಿಸಿಲಿಗೆ ಹೋಗುವವರು ಎಸ್‌ಪಿಎಫ್ 30 ಕ್ರೀಮ್ ಬಳಸಬೇಕು. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವವರು, ಮಾರ್ಕೆಟಿಂಗ್ ವೃತ್ತಿಯಲ್ಲಿರುವವರು ಎಸ್‌ಪಿಎಫ್‌ ಬ್ಲಾಕ್‌ (60–70) ಕ್ರೀಮ್ ಬಳಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.