ADVERTISEMENT

ಸ್ತನ ಕ್ಯಾನ್ಸರ್‌ಗೆ ಬೇಕಿದೆ ತುರ್ತು‌ ಜಾಗೃತಿ!

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 15:47 IST
Last Updated 1 ನವೆಂಬರ್ 2025, 15:47 IST
   

ಸ್ತನ ಕ್ಯಾನ್ಸರ್ ಕುರಿತಾದ ನಿರ್ಲಕ್ಷ್ಯವೆಷ್ಟು ಅಪಾಯ ಗೊತ್ತಾ? l ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿ ಮತ್ತು ಇಮ್ಯೂನೋಥೆರಪಿ, ಔಷಧ ಸಲಹೆಗಾರರಾದ ಡಾ.ಪೂನಂ ಪಾಟೀಲ್‌, ಸರ್ಜಿಕಲ್ ಆಂಕಾಲಜಿ ಮತ್ತು ರೊಬೋಟಿಕ್ ಸರ್ಜರಿ ಸಲಹೆಗಾರರಾದ ಡಾ.ಹೇಮಂತ್.ಜಿ.ಎನ್‌ರವರ  ಆರೋಗ್ಯ ಸಲಹೆಗಳು

ಸ್ತ ನ ಕ್ಯಾನ್ಸರ್ ಎನ್ನುವುದು ಭಾರತೀಯ  ಮಹಿಳೆಯರನ್ನು ಅಪಾಯದ ತುದಿಗೆ ತಲುಪಿಸುತ್ತಿದೆ. ಈಗಾಗಲೇ ಈ ಕ್ಯಾನ್ಸರ್‌ನ ಗಂಭೀರತೆ ತೀವ್ರ ಹಂತ ತಲುಪಿದ್ದು, ಪ್ರತಿ 4 ಕ್ಯಾನ್ಸರ್ ಪ್ರಕರಣಗಳಲ್ಲಿ 1 ಸ್ತನ ಕ್ಯಾನ್ಸರ್ ವರದಿಯಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಭಾರತೀಯ ಮಹಿಳೆಯರಲ್ಲಿ ಈ ಕ್ಯಾನ್ಸರ್ ಕುರಿತಾಗಿ ಅಷ್ಟಾಗಿ ಜಾಗೃತಿಯಿಲ್ಲದೇ ನಿರ್ಲಕ್ಷ್ಯ ಭಾವನೆ‌ ಹೆಚ್ಚಾಗಿದೆ. ಹೀಗಾಗಿ, ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯರಿಗೆ ಹೋಲಿಸಿಕೊಂಡರೆ ಭಾರತೀಯ ಮಹಿಳೆಯರು ದಶಕಗಳಷ್ಟು ಹಿಂದುಳಿದಿದ್ದಾರೆ.  ಇದರ ಪರಿಣಾಮ ಎದುರಿಸುತ್ತಿರುವ ಮಹಿಳೆಯರಿಗೆ ಮುನ್ನೆಚ್ಚರಿಕೆ ಮಾತ್ರವಲ್ಲದೆ ಸ್ತನ ಕ್ಯಾನ್ಸರ್‌ನ ಕುರಿತಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಅಗತ್ಯ ಜಾಗೃತಿ, ಪೂರಕ ಸಲಹೆಗಳ‌ ಅಗತ್ಯವಿದೆ.
ಈ ವಿಷಯದಲ್ಲಿ  ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿ ಮತ್ತು ಇಮ್ಯೂನೋಥೆರಪಿ, ಔಷಧ ಸಲಹೆಗಾರರಾದ ಡಾ.ಪೂನಂ ಪಾಟೀಲ್‌ ಮಹಿಳೆಯರ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಸ್ತನ ಕ್ಯಾನ್ಸರ್‌ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರವಾಗಿ ಸೂಚಿಸಿದ್ದಾರೆ. ಜತೆಗೆ, ಪ್ರಸ್ತುತ ಸಮಾಜದಲ್ಲಿರುವ ತಪ್ಪುಕಲ್ಪನೆಗಳಿಗೆ ತಜ್ಞರ ವಾಸ್ತವ ವಿವರಣೆ.
ಮಿಥ್ಯ 1: ವಯಸ್ಸಾದ ಮಹಿಳೆಯರಿಗೆ ಮಾತ್ರ ಸ್ತನ ಕ್ಯಾನ್ಸರ್ ಬರುತ್ತದೆ.
ವಾಸ್ತವ : ಇದು ಹಿಂದಿನ ಕಾಲದ ಮಾತು. ಸ್ತನ ಕ್ಯಾನ್ಸರ್ ವಯಸ್ಸಾದವರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದು 30 ಮತ್ತು 40ರ ಹರೆಯದ ಕಿರಿಯ ಮಹಿಳೆಯರಲ್ಲಿಯೂ ಸಾಮಾನ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಕಿರಿಯ ಮಹಿಳೆಯರಿಗೂ ಕ್ಯಾನ್ಸರ್ ಬರಬಹುದು. ಆದ್ದರಿಂದ, ಸ್ವಯಂ ಪರೀಕ್ಷೆಯ ಸಮಯದಲ್ಲಿ ಸ್ತನದಲ್ಲಿನ ಲಕ್ಷಣಗಳು ಅಥವಾ ಬದಲಾವಣೆಗಳು ಕಂಡುಬಂದಾಗ, ತಕ್ಷಣ ವೈದ್ಯರನ್ನು ಕಾಣುವುದು ಸೂಕ್ತ.
ಮಿಥ್ಯ 2: ಕುಟುಂಬದ ಇತಿಹಾಸವಿಲ್ಲವೆಂದರೆ ಅಪಾಯವಿಲ್ಲ.
ವಾಸ್ತವ : ಸ್ತನ ಕ್ಯಾನ್ಸರ್‌ಗಳಲ್ಲಿ ಕೇವಲ 5–10% ಮಾತ್ರ ಅನುವಂಶಿಕ. ಉಳಿದ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ವಯಸ್ಸು, ಧೂಮಪಾನ, ಮದ್ಯಪಾನ, ಹಾರ್ಮೋನುಗಳು ಮತ್ತು ಜೀವನಶೈಲಿಯಂತಹ ಇತರ ಅಂಶಗಳಿಗೆ ಸಂಬಂಧಿಸಿವೆ. ನಾನು ಚಿಕಿತ್ಸೆ ನೀಡಿದ ಅತ್ಯಂತ ಕಿರಿಯ ಮಹಿಳೆ 19 ವರ್ಷದ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಯಾವುದೇ ಕುಟುಂಬದ ಇತಿಹಾಸವಿಲ್ಲ.
ಮಿಥ್ಯ 3: ಆರೋಗ್ಯಕರ ಜೀವನಶೈಲಿ ಹೊಂದಿರುವ ಜನರು ಸ್ತನ ಕ್ಯಾನ್ಸರ್‌ ಮುಕ್ತರಾಗುತ್ತಾರೆ.
ವಾಸ್ತವ : ಉತ್ತಮ ಆರೋಗ್ಯ ಪೋಷಣೆ ಮತ್ತು ನಿಯಮಿತ ವ್ಯಾಯಾಮ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಅದನ್ನು ನಿವಾರಿಸುವುದಿಲ್ಲ. ಪ್ರತಿ ಮಹಿಳೆಗೆ ದಿನನಿತ್ಯದ ಸ್ಕ್ರೀನಿಂಗ್ ಮುಖ್ಯವಾಗಿದೆ. ವಯಸ್ಸಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಕಾರ ಆವರ್ತಕ ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು ಸೂಚಿಸಲಾಗುತ್ತದೆ. ಮಣಿಪಾಲ್ ಆಸ್ಪತ್ರೆಯು ಸಮಾಜದಲ್ಲಿ ಜಾಗೃತಿ ಮೂಡಿಸಲು ಕಾಲಕಾಲಕ್ಕೆ ಅಭಿಯಾನಗಳನ್ನು ಕೈಗೊಳ್ಳುತ್ತಿದೆ.
ಮಿಥ್ಯ 4: ಸ್ವಯಂ ಪರೀಕ್ಷೆ ನಿಲ್ಲಿಸಿ!
ವಾಸ್ತವ : ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಸ್ವಯಂ ಪರೀಕ್ಷೆ ಬದಲಿಗೆ ಕ್ಲಿನಿಕಲ್ ತಪಾಸಣೆ ಅಗತ್ಯ. ಮುಖ್ಯವಾಗಿ ಸ್ಕ್ಯಾನಿಂಗ್‌ ವಿಭಾಗದ ಮ್ಯಾಮೊಗ್ರಾಮ್‌ಗಳು, ಎಂಆರ್‌ಐ ಮತ್ತು ಬಯಾಪ್ಸಿಗಳು ಸ್ವಯಂ ತಪಾಸಣೆಯಲ್ಲಿ ತಪ್ಪಿಸಿಕೊಳ್ಳಬಹುದಾದ ಕ್ಯಾನ್ಸರ್ ಗೆಡ್ಡೆಗಳನ್ನು ಪತ್ತೆ ಮಾಡಬಹುದು.
ಮಿಥ್ಯ 5: ಡಿಯೋಡರೆಂಟ್ ಅಥವಾ ಬಿಗಿಯಾದ ಒಳ ಉಡುಪು(ಬ್ರಾ) ಬಳಕೆ ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.
ವಾಸ್ತವ : ಈ ರೀತಿಯ ಯಾವುದೇ ಕಾರಣಗಳನ್ನು ದೃಢಪಡಿಸುವ ಪುರಾವೆಗಳಿಲ್ಲ.
ಸ್ತನ ಕ್ಯಾನ್ಸರ್ ಪರೀಕ್ಷೆ ಮತ್ತು‌ ಚಿಕಿತ್ಸಾ ವಿಧಾನ!
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕಾಲಕಳೆದಂತೆ ಹೊಸ ತಂತ್ರಜ್ಞಾನಗಳು ಸೇರ್ಪಡೆಯಾಗಿದ್ದು, ಪತ್ತೆ ಮತ್ತು ಚಿಕಿತ್ಸೆಗೆ ಅತ್ಯಾಧುನಿಕ ಮಾರ್ಗೋಪಾಯಗಳು ಅಳವಡಿಕೆಯಾಗಿವೆ. ಇದು ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಸಾಕಷ್ಟು ನೆರವಾಗುತ್ತಿದೆ. ಮಣಿಪಾಲ್ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಸೆಂಟರ್‌‌ ಅತ್ಯಾಧುನಿಕ ತಂತ್ರಜ್ಞಾನ, ಸೌಕರ್ಯಗಳನ್ನೊಳಗೊಂಡಿದೆ.  ಡಿಜಿಟಲ್ ಮ್ಯಾಮೊಗ್ರಫಿ, ಅಲ್ಟ್ರಾಸೌಂಡ್, ಬಯಾಪ್ಸಿ, ಎಂಆರ್‌ಐ ಮತ್ತು ಪಿಇಟಿ-ಸಿಟಿ ಸೇರಿದಂತೆ ಅತ್ಯಾಧುನಿಕ ರೋಗನಿರ್ಣಯ ಸಾಧನಗಳನ್ನು ಹೊಂದಿದ್ದು, ಇವು ರೋಗ ಪತ್ತೆಗೆ ಸಾಕಷ್ಟು ನೆರವಾಗುತ್ತಿದೆ. ಕೆಲ ಪ್ರಕರಣಗಳಿಗೆ ರಿಫ್ಲೆಕ್ಸ್ ಟೆಸ್ಟಿಂಗ್ ಮತ್ತು ಇಮ್ಯುನೊಹಿಸ್ಟೋಕೆಮಿಸ್ಟ್ರಿ ಮಾರ್ಕರ್‌ಗಳು ನಿಖರ ಕ್ಯಾನ್ಸರ್ ವಿಧಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಮೆಡಿಕಲ್ ಮತ್ತು ಸರ್ಜಿಕಲ್ ಆಂಕಾಲಾಜಿ, ರೇಡಿಯಾಲಜಿ, ರೇಡಿಯೊಥೆರಪಿ, ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಪ್ಯಾಥಾಲಜಿ ತಜ್ಞರನ್ನೊಳಗೊಂಡ ಮಲ್ಟಿಡಿಸಿಪ್ಲೀನರಿ ಟ್ಯೂಮರ್ ಬೋರ್ಡ್ ಚಿಕಿತ್ಸೆಗೆ ಅಗತ್ಯ ಚರ್ಚೆ ನಡೆಸಿ, ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ.  ಸ್ತನ ಕ್ಯಾನ್ಸರ್‌ಗೆ ಡೇಕೇರ್ ಮಾದರಿಯ ಚಿಕಿತ್ಸೆ ಲಭ್ಯವಿದ್ದು, ರೋಗಿಗಳು ನಿತ್ಯದ ಬದುಕಿಗೆ ಯಾವುದೇ ತೊಂದರೆಯಾಗದಂತೆ ಅದೇ ದಿನ ಮನೆಗೆ ಮರಳಲು ಅವಕಾಶ ಮಾಡಿಕೊಡಲಾಗುತ್ತದೆ.
ಸ್ತನ ಕ್ಯಾನ್ಸರ್ ಚಿಕಿತ್ಸೆ ಕುರಿತಾದ ತಪ್ಪು ಕಲ್ಪನೆ!
ಸ್ತನ ಕ್ಯಾನ್ಸರ್‌ ಆರಂಭದಲ್ಲೇ ಪತ್ತೆ ಹಚ್ಚುವುದು ಜಾಗೃತಿಯ ಮೊದಲ‌ ಹೆಜ್ಜೆಯಾಗಿದ್ದು, ಅನೇಕ ಜೀವಗಳನ್ನು ಉಳಿಸುವ ಹಾದಿಯಾಗಿದೆ. ಈ ಹಂತದಲ್ಲಿ ಮಹಿಳೆಯರಲ್ಲಿನ ಕೆಲ ಗೊಂದಲ, ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ಮತ್ತು ರೊಬೋಟಿಕ್ ಸರ್ಜರಿ ಸಲಹೆಗಾರರಾದ ಡಾ.ಹೇಮಂತ್.ಜಿ.ಎನ್ ಒಂದಷ್ಟು ಸಲಹೆಗಳನ್ನಿಲ್ಲಿ ನೀಡಿದ್ದಾರೆ.
ಮಿಥ್ಯ 1: ಸ್ತನ ಗೆಡ್ಡೆಯ ಬಯಾಪ್ಸಿ ಕ್ಯಾನ್ಸರ್ ಹರಡಲು ಕಾರಣವಾಗಬಹುದು.
ವಾಸ್ತವ : ಬಯಾಪ್ಸಿಯಿಂದ ಕ್ಯಾನ್ಸರ್ ಹರಡುತ್ತದೆ ಎನ್ನುವುದು ತಪ್ಪು ಕಲ್ಪನೆ. ಸ್ತನ ಗೆಡ್ಡೆಯ ಬಯಾಪ್ಸಿ ಸಂಪೂರ್ಣ ಸುರಕ್ಷಿತ. ಇದು ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡಲು ಕಾರಣವಾಗುವುದಿಲ್ಲ. ಸ್ತನ ಕ್ಯಾನ್ಸರ್ ರೋಗ ನಿರ್ಣಯಕ್ಕೆ ಬಯಾಪ್ಸಿ ಅನಿವಾರ್ಯ. ಬಯಾಪ್ಸಿ ಇಲ್ಲದೆ ನಿಖರವಾದ ಚಿಕಿತ್ಸಾ ಮಾರ್ಗ ಕಂಡುಕೊಳ್ಳಲು ಸಾಧ್ಯವಿಲ್ಲ.
ಮಿಥ್ಯ 2: ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪ್ರತಿಯೊಬ್ಬ ಮಹಿಳೆಗೂ ತೋಳಿನ ಊತ (ಲಿಂಫೋಡೆಮಾ) ಉಂಟಾಗುತ್ತದೆ.
ವಾಸ್ತವ : ಈ‌ ಮಾತು ಸದ್ಯದ ಮಟ್ಟಿಗೆ ಸಾಕಷ್ಟು ಕಡಿಮೆಯಾಗಿದೆ. ಕಾಲಕ್ರಮೇಣ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಸಾಕಷ್ಟು ಪ್ರಗತಿ ಕಂಡುಕೊಂಡಿದ್ದು, ತೋಳಿನ ಊತ ಬರುವ ಪ್ರಕರಣಗಳು ಇಳಿಕೆಯಾಗಿವೆ. ಕೆಲವು ರೋಗಿಗಳಲ್ಲಿ ಮಾತ್ರ ಲಿಂಪೋಡಿಮಾ ಕಂಡುಬರುತ್ತಿದೆ. ಮಣಿಪಾಲ್ ಕಾಂಪ್ರಹೆನ್ಸೀವ್ ಕ್ಯಾನ್ಸರ್ ಸೆಂಟರ್‌ನಲ್ಲಿ ಲಿಂಫೋವೆನಸ್ ಅನಾಸ್ಟೊಮೊಸಿಸ್‌ನಂತಹ ಕಾರ್ಯವಿಧಾನಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಇದು ಸಂಕೀರ್ಣವಾದ ಸೂಪರ್ ಮೈಕ್ರೋಸರ್ಜರಿ ವಿಧಾನವಾಗಿದ್ದು, ತಡೆಗಟ್ಟಲಾದ ದುಗ್ಧರಸ ಹರಿವನ್ನು ಪುನಃಸ್ಥಾಪಿಸಲು 0.2-0.8 ಮಿಮೀ ಅಳತೆಯ ಸಣ್ಣ ದುಗ್ಧರಸ ನಾಳಗಳನ್ನು ಸಣ್ಣ ರಕ್ತನಾಳಗಳಿಗೆ ಜೋಡಿಸಲಾಗುತ್ತದೆ. ಈ ವಿಧಾನವು ದುಗ್ಧರಸ ಹರಿವನ್ನು ಕಾಪಾಡಿಕೊಳ್ಳಲು ಮತ್ತು ದ್ರವದ ಶೇಖರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಚಿಕಿತ್ಸಾ ವಿಧಾನದಿಂದ ಊತದ ಅಪಾಯವನ್ನು ಕಡಿಮೆ ಮಾಡಲಾಗುತ್ತದೆ.
ಸ್ತನದ ಬಗ್ಗೆ ಎಚ್ಚರ!
ಸದ್ಯ ಸಮಾಜದಲ್ಲಿನ ತಪ್ಪು ಕಲ್ಪನೆ ಗಳಿಂದಾಗಿ ವಿನಾಕಾರಣ ಸ್ತನ ಕ್ಯಾನ್ಸರ್‌ಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಚಿಕಿತ್ಸಾ ವಿಷಯದಲ್ಲಿ ವಿಳಂಬ ಸರಿಯಲ್ಲ. ಪ್ರತಿಯೊಬ್ಬ ಮಹಿಳೆಯೂ ತಿಂಗಳಿಗೊಮ್ಮೆ ಸ್ತನ ಪರೀಕ್ಷೆಗೆ ಒಳಗಾಗಬೇಕು. ಆ ಮೂಲಕ ಸ್ತನಗಳ ಆರೋಗ್ಯ ಸಂರಕ್ಷಣೆ ಸಾಧ್ಯ. ಆರಂಭಿಕ ಹಂತದಲ್ಲೇ ಸ್ತನಗಳಲ್ಲಿನ ಬದಲಾವಣೆ, ಗೆಡ್ಡೆಗಳನ್ನು ಗುರುತಿಸುವುದು ಕ್ಯಾನ್ಸರ್ ತಡೆಗಟ್ಟಲು, ಸೂಕ್ತ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ. ಸ್ತನದ ಗೆಡ್ಡೆಗಳೆಲ್ಲವೂ ಹಾನಿಕಾರಕವಲ್ಲದಿದ್ದರೂ ಸಹ ಮುನ್ನೆಚ್ಚರಿಕೆ ಅನಿವಾರ್ಯ. ಇಂದಿನ‌ ಆನ್‌ಲೈನ್ ಯುಗದಲ್ಲಿ ಸ್ವಯಂ ಚಿಕಿತ್ಸೆಯಂಥಹಾ ತಪ್ಪು ಹಾದಿಗೆ ಹೋಗದೇ, ಸೂಕ್ತ ವೈದ್ಯರ ಭೇಟಿ, ಸಲಹೆ ಪಡೆಯುವುದು ಅತ್ಯವಶ್ಯಕ. ತಪ್ಪು ಮಾಹಿತಿಗಳಿಂದಾಗಿ ವಿನಾಕಾರಣ ಗಂಭೀರ ಅನಾರೋಗ್ಯ ಪರಿಣಾಮ ಎದುರಿಸುವ ಬದಲು ತಮ್ಮ ವೈದ್ಯರು ಅಥವಾ ಆಂಕಾಲಜಿಸ್ಟ್‌ಅನ್ನು ಸಂಪರ್ಕಿಸುವುದು ಒಳ್ಳೆಯದು.
ಮಣಿಪಾಲ್ ಆಸ್ಪತ್ರೆಯಲ್ಲಿದೆ ಅತ್ಯಾಧುನಿಕ ಚಿಕಿತ್ಸೆ!
ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಮಣಿಪಾಲ್ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಸೆಂಟರ್‌‌ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಕ್ಯಾನ್ಸರ್ ಕೇರ್ ಸೆಂಟರ್‌ ಅತ್ಯಾಧುನಿಕ ತಂತ್ರಜ್ಞಾನ, ಸೌಕರ್ಯಗಳನ್ನೊಳಗೊಂಡಿದ್ದು, ಡಿಜಿಟಲ್ ಮ್ಯಾಮೊಗ್ರಫಿ, ಅಲ್ಟ್ರಾಸೌಂಡ್, ಬಯಾಪ್ಸಿ, ಎಂಆರ್‌ಐ ಮತ್ತು ಪಿಇಟಿ-ಸಿಟಿ ಸೇರಿದಂತೆ ಅತ್ಯಾಧುನಿಕ ರೋಗನಿರ್ಣಯ ಸಾಧನಗಳನ್ನು ಹೊಂದಿದೆ. ಕೆಲ ಪ್ರಕರಣಗಳಿಗೆ ರಿಫ್ಲೆಕ್ಸ್ ಟೆಸ್ಟಿಂಗ್ ಮತ್ತು ಇಮ್ಯುನೊಹಿಸ್ಟೋಕೆಮಿಸ್ಟ್ರಿ ಮಾರ್ಕರ್‌ಗಳು ನಿಖರ ಕ್ಯಾನ್ಸರ್ ವಿಧಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಮೆಡಿಕಲ್ ಮತ್ತು ಸರ್ಜಿಕಲ್ ಆಂಕಾಲಾಜಿ, ರೇಡಿಯಾಲಜಿ, ರೇಡಿಯೊಥೆರಪಿ, ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಪ್ಯಾಥಾಲಜಿ ತಜ್ಞರನ್ನೊಳಗೊಂಡ ಮಲ್ಟಿಡಿಸಿಪ್ಲೀನರಿ ಟ್ಯೂಮರ್ ಬೋರ್ಡ್ ಸಹ ಇಲ್ಲಿರುವ ಹಿನ್ನೆಲೆ ಕ್ಯಾನ್ಸರ್ ರೋಗಕ್ಕೆ ಅಗತ್ಯ ಚಿಕಿತ್ಸಾ ವಿಧಾನಗಳನ್ನು ಕಂಡುಕೊಳ್ಳಲು ಸಾಕಷ್ಟು ನೆರವಾಗುತ್ತಿದೆ.
ತಪ್ಪು ಕಲ್ಪನೆಗಳಿಂದ‌‌ ಹೊರಬನ್ನಿ!: ಸಾಮಾಜಿಕವಾಗಿ ಸ್ತನ ಕ್ಯಾನ್ಸರ್ ಕುರಿತಾಗಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಈ ಪೈಕಿ ಕೆಲವೊಂದು ವಿಚಾರಗಳಿಂದಾಗಿ ಮಹಿಳೆಯರು ಗಂಭೀರ ಪರಿಣಾಮಗಳನ್ನು ಎದುರಿಸುವಂತಾಗಿದೆ. ಮಣಿಪಾಲ್ ಆಸ್ಪತ್ರೆಯ ಮೆಡಿಕಲ್‌ ಆಂಕಾಲಜಿ ಮತ್ತು ಇಮ್ಯೂನೋಥೆರಪಿ ಔಷಧ ಸಲಹೆಗಾರರಾದ ಡಾ.ಪೂನಂ ಪಾಟೀಲ್‌ರವರು ಚಿಕಿತ್ಸೆ ನೀಡಿದ ಸಾಕಷ್ಟು ಮಹಿಳೆಯರಲ್ಲಿ ನಾನಾ ತಪ್ಪು ಗ್ರಹಿಕೆಗಳಿದ್ದವು. ಮುಖ್ಯವಾಗಿ 'ಸ್ತನ ಕ್ಯಾನ್ಸರ್ ವಯಸ್ಸಾದವರಿಗಷ್ಟೇ ಬರುತ್ತದೆ, ಅನುವಂಶಿಕವಾಗಿ ಮಾತ್ರ ಈ ಕ್ಯಾನ್ಸರ್ ಬರುತ್ತದೆ' ಎನ್ನುವ ತಪ್ಪು ಗ್ರಹಿಕೆಗಳನ್ನು ವೈದ್ಯರು ಗುರುತಿಸಿದ್ದರು. ಈ ತಪ್ಪು ಕಲ್ಪನೆಗಳಿಂದಾಗಿ ಅನೇಕ ಮಹಿಳೆಯರು ಸ್ತನ ಕ್ಯಾನ್ಸರ್‌ ಎದುರಿಸಿದ್ದಾರೆ. ಕಾಲ ಬದಲಾದಂತೆ ವಿದ್ಯಾವಂತ ಸಮಾಜವೆಂದು ಗುರುತಿಸಿಕೊಂಡಿರುವ ನಾವು ಸ್ತನ ಕ್ಯಾನ್ಸರ್ ಎನ್ನುವ ಪಿಡುಗಿನ ವಿರುದ್ಧ ಗೆಲುವು ಸಾಧಿಸಬೇಕೆಂದರೆ ಎಲ್ಲರೂ ಜಾಗೃತರಾಗಬೇಕೆನ್ನುವುದು ವೈದ್ಯರ ಆಶಯ.

ಮಹಿಳೆಯರೆ ಭಯ ಬೇಡ, ಎಚ್ಚರವಿರಲಿ!
ಸ್ತನ ಕ್ಯಾನ್ಸರ್‌ ಕುರಿತಾಗಿ ಜಾಗೃತಿಯಿರಲಿ.
ಆರಂಭದಲ್ಲೇ ಪತ್ತೆ ಹಚ್ಚುವುದರಿಂದಾಗಿ ಗುಣಮುಖರಾಗಲು ಸಾಧ್ಯ.
ಸರಳ ಚಿಕಿತ್ಸೆಯಿಂದಲೇ ಗುಣಮುಖರಾಗಬಹುದು.
ಸ್ತನಗಳಲ್ಲಿನ ಆರಂಭಿಕ ಬದಲಾವಣೆ, ಗೆಡ್ಡೆಗಳಾದಾಗ ವೈದ್ಯರನ್ನು ಸಂಪರ್ಕಿಸಿ.
ಆನ್‌ಲೈನ್‌ ಮಾಹಿತಿಗಳಿಂದಾಗಿ ದಾರಿತಪ್ಪುವ ಸಾಧ್ಯತೆಗಳೇ ಹೆಚ್ಚುರುವ ಹಿನ್ನೆಲೆ ಎಚ್ಚರಿಕೆ ಅಗತ್ಯ.
ಶಸ್ತ್ರಚಿಕಿತ್ಸೆಗಳ ಕುರಿತಾಗಿ ಯಾವುದೇ ಭಯ ಬೇಡ.
ಮಣಿಪಾಲ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಕರ್ಯಗಳುಳ್ಳ ಚಿಕಿತ್ಸಾ ಸೇವೆ ಲಭ್ಯ.
ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಪರಿಣಿತ ವೈದ್ಯರ ‍ಪಡೆ ಸದಾ ರೋಗಿಗಳ ಸೇವೆ ಸಿದ್ಧ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.