ADVERTISEMENT

ಅಕ್ಷಯ ತೃತೀಯ: ಚಿನ್ನದ ಬೆಲೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:30 IST
Last Updated 2 ಮೇ 2014, 19:30 IST
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಶುಕ್ರವಾರ ಮೈಸೂರಿನ ಆಭರಣ ಮಳಿಗೆಯೊಂದರಲ್ಲಿ ಗ್ರಾಹಕರು ಚಿನ್ನ ಖರೀದಿಸಲು ಮುಗಿಬಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ  ಈ ಬಾರಿ  ದಕ್ಷಿಣ ಭಾರತದಲ್ಲಿ ಚಿನ್ನದ ಮಾರಾಟ ಶೇ 10 ರಿಂದ ಶೇ 15ರಷ್ಟು ಹೆಚ್ಚಿದೆ 	 – ಪ್ರಜಾವಾಣಿ ಚಿತ್ರ
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಶುಕ್ರವಾರ ಮೈಸೂರಿನ ಆಭರಣ ಮಳಿಗೆಯೊಂದರಲ್ಲಿ ಗ್ರಾಹಕರು ಚಿನ್ನ ಖರೀದಿಸಲು ಮುಗಿಬಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಕ್ಷಿಣ ಭಾರತದಲ್ಲಿ ಚಿನ್ನದ ಮಾರಾಟ ಶೇ 10 ರಿಂದ ಶೇ 15ರಷ್ಟು ಹೆಚ್ಚಿದೆ – ಪ್ರಜಾವಾಣಿ ಚಿತ್ರ   

ನವದೆಹಲಿ (ಪಿಟಿಐ): ಅಕ್ಷಯ ತೃತೀಯ ದಿನದಂದು ಬಂಗಾರದ ಬೆಲೆ  ಹೆಚ್ಚಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ನವದೆಹಲಿ­ಯಲ್ಲಿ ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ ಶುಕ್ರವಾರ 10 ಗ್ರಾಂಗಳಿಗೆ ರೂ195 ಇಳಿಕೆಯಾಗಿದ್ದು ರೂ30,390ಕ್ಕೆ ಇಳಿದಿದೆ. ಮುಂಬೈನಲ್ಲಿ ರೂ29,800ಕ್ಕೆ ಮತ್ತು ಚೆನ್ನೈ­ನಲ್ಲಿ ರೂ29,950ರಲ್ಲಿ ಮಾರಾಟ­ವಾಗಿದೆ. ಬೆಂಗಳೂರಿ­ನಲ್ಲಿ ಧಾರಣೆ 10 ಗ್ರಾಂಗಳಿಗೆ ರೂ30,246ಕ್ಕೆ ಇಳಿದಿದೆ.

ಬೆಳ್ಳಿ ಬೆಲೆಯೂ ಕಳೆದ ಮೂರು ದಿನಗಳಿಂದ ಸತತ ಇಳಿಕೆ ಕಾಣುತ್ತಿದೆ. ಶುಕ್ರವಾರ ನವದೆಹಲಿಯಲ್ಲಿ ಬೆಳ್ಳಿ ಬೆಲೆ ಕೆ.ಜಿಗೆ ರೂ430 ತಗ್ಗಿದ್ದು ರೂ41,650ಕ್ಕೆ ಕುಸಿದಿದೆ.

‘ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಶ್ರೇಷ್ಠ ಎನ್ನುವ ನಂಬಿಕೆ ಇದೆ. ಆದರೆ, ಈ ಬಾರಿ ಗ್ರಾಹಕರು ಅಷ್ಟೊಂ­ದು ಆಸಕ್ತಿ ತೋರಿಸಿಲ್ಲ. ಹಣದುಬ್ಬರ, ಆರ್ಥಿಕ ಅಸ್ಥಿರತೆ ಕೂಡ ಇದಕ್ಕೆ ಕಾರಣವಾಗಿರಬಹುದು’ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಶುಕ್ರವಾರ ದಕ್ಷಿಣ ಭಾರತದಲ್ಲಿ ಚಿನ್ನದ ಮಾರಾಟ  ಶೇ 10ರಿಂದ 15ರಷ್ಟು ಹೆಚ್ಚಿದೆ ಎಂದು ವಿಶ್ವ ಚಿನ್ನ ಮಂಡಳಿ ವ್ಯವಸ್ಥಾಪಕ ನಿರ್ದೇಶಕ  ಸೋಮಸುಂದರನ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಿನ್ನದ ನಾಣ್ಯ ಮತ್ತು ಗಟ್ಟಿ ಖರೀದಿ ತಗ್ಗಿದೆ ಎಂದು ಅಖಿಲ ಭಾರತ ಚಿನ್ನಾಭ­ರಣ ವರ್ತಕರ ಒಕ್ಕೂಟದ ಅಧ್ಯಕ್ಷ ಹರೀಶ್‌ ಸೋನಿ ಹೇಳಿದ್ದಾರೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಆರ್ಥಿಕ ಉತ್ತೇಜನ ಕೊಡುಗೆಗಳನ್ನು ಕಡಿತ ಮಾಡುವುದಾಗಿ ಹೇಳಿದೆ.  ಇದರಿಂದ ಅಂತರರಾಷ್ಟ್ರೀಯ ಮಾರು­ಕಟ್ಟೆಯಲ್ಲಿ ಚಿನ್ನದ ಬೇಡಿಕೆ ತಗ್ಗಿದೆ. ಜಾಗತಿಕ ಷೇರುಪೇಟೆಗಳು ಚೇತರಿಕೆ ಕಂಡಿರು­ವುದರಿಂದ ಹೂಡಿಕೆ ಉದ್ದೇಶಕ್ಕೆ ಚಿನ್ನದ ಖರೀದಿಯೂ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದ ಬೆಲೆ ಸತತ ಇಳಿಕೆ ಕಾಣುತ್ತಿದೆ ಎಂದು ಚಿನ್ನಾಭರಣ ವರ್ತಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.