ADVERTISEMENT

ಅಗ್ರಿಗೋಲ್ಡ್‌ ಆಸ್ತಿ ಖರೀದಿಗೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಅಗ್ರಿಗೋಲ್ಡ್‌ ಆಸ್ತಿ ಖರೀದಿಗೆ ಸಮ್ಮತಿ
ಅಗ್ರಿಗೋಲ್ಡ್‌ ಆಸ್ತಿ ಖರೀದಿಗೆ ಸಮ್ಮತಿ   

ಹೈದರಾಬಾದ್‌: ಠೇವಣಿದಾರರಿಗೆ ವಂಚನೆ ಎಸಗಿರುವ ಕಳಂಕಿತ ಅಗ್ರಿಗೋಲ್ಡ್‌ನ ಆಸ್ತಿಗಳ ಖರೀದಿಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದ ಝೀ ಎಸ್ಸೆಲ್‌ ಸಮೂಹವು ಈಗ ತನ್ನ ನಿಲುವು ಬದಲಿಸಿದೆ.

ಅಗ್ರಿಗೋಲ್ಡ್‌ನ ಸಂಪತ್ತು ಖರೀದಿಸಿ ಠೇವಣಿದಾರರು ಮತ್ತು ಏಜೆಂಟರ ಹಿತರಕ್ಷಣೆ ಮಾಡುವುದಾಗಿ ತಿಳಿಸಿದೆ. ಕಡಿಮೆ ಮೌಲ್ಯದ ಕಾರಣಕ್ಕೆ ಆಸ್ತಿ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದ ಝೀ ಸಮೂಹದ ಈ ಮೊದಲಿನ ಅರ್ಜಿಯನ್ನು ವಾಪಸ್‌ ಪಡೆಯುತ್ತಿರುವುದಾಗಿ ಸಂಸ್ಥೆಯ ಪರ ವಕೀಲರು ಮಂಗಳವಾರ ಹೈಕೋರ್ಟ್‌ ಪೀಠದ ಗಮನಕ್ಕೆ ತಂದರು. ಅಗ್ರಿಗೋಲ್ಡ್‌ನ 10 ಸಂಪತ್ತುಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದ ವಿವರಗಳನ್ನು ಝೀ ಸಮೂಹವು ಪೀಠದ ಗಮನಕ್ಕೆ ತಂದಿತು. ಇದೇ 8ರಂದು ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಈ ಸಂಪತ್ತುಗಳ ಮೌಲ್ಯದ ವಿವರ ಸಲ್ಲಿಸಬೇಕು ಎಂದು ಪೀಠವು ಅಗ್ರಿಗೋಲ್ಡ್‌ ಸಂಸ್ಥೆಗೆ ಮತ್ತು ಆಂಧ್ರಪ್ರದೇಶ ಸಿಐಡಿಗೆ ಸೂಚಿಸಿತು.

ಆಸ್ತಿ ಖರೀದಿಯಿಂದ ಹಿಂದೆ ಸರಿಯುವುದಾಗಿ ಝೀ ಸಮೂಹ ಪ್ರಕಟಿಸಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವಾಧೀನ ಪ್ರಕ್ರಿಯೆಯನ್ನು ಪದೇ ಪದೇ ಮುಂದೂಡುತ್ತಿರುವ ಝೀ ಸಮೂಹಕ್ಕೆ ದಂಡ ವಿಧಿಸಿ ಬುದ್ಧಿ ಹೇಳಬೇಕು ಎಂದು ಠೇವಣಿದಾರರ ಸಂಘಟನೆಗಳು ಕೋರ್ಟ್‌ಗೆ ಒತ್ತಾಯಿಸಿದ್ದವು.

ADVERTISEMENT

ಅಗ್ರಿಗೋಲ್ಡ್‌ಗೆ ಸೇರಿದ ಸಂಪತ್ತುಗಳ ಮೌಲ್ಯ ನಿಗದಿ ಮಾಡಲು ಜಿಲ್ಲಾ ಮಟ್ಟದ ಸಮಿತಿ ರಚಿಸಲು ಝೀ ಸಮೂಹವು ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.