ADVERTISEMENT

ಅಡಿಕೆ:ಕೇಂದ್ರದ ನೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ನವದೆಹಲಿ: ಅಡಿಕೆ ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರ ನೆರವಿಗೆ ಕೇಂದ್ರ ತಕ್ಷಣ ಧಾವಿಸಬೇಕೆಂದು ಆಗ್ರಹಿಸಿ ಕರ್ನಾಟಕ ಒಳಗೊಂಡಂತೆ ಅಡಿಕೆ ಬೆಳೆಯುವ ರಾಜ್ಯಗಳ ಸಂಸದರು ಶುಕ್ರವಾರ ಸಂಸತ್ ಭವನದ ಆವರಣದಲ್ಲಿ ಧರಣಿ ನಡೆಸಿದರು.

ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ ಸಂಸದರು ‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ’ ಅಡಿ ಬೆಲೆ ಕುಸಿದಿರುವ ಅಡಿಕೆ ಖರೀದಿಗೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

‘ಗುಟ್ಕಾ ಪ್ಲಾಸ್ಟಿಕ್ ಸ್ಯಾಶೆ’ ನಿಷೇಧದಿಂದ ಅಡಿಕೆ ಬೆಲೆ ಕುಸಿದಿದ್ದು, ಖರೀದಿಯೇ ನಡೆಯುತ್ತಿಲ್ಲ. ಸರ್ಕಾರ ಫೆಬ್ರುವರಿ 4ರಂದು ಅಧಿಸೂಚನೆ ಹೊರಡಿಸಿ ಪ್ಲಾಸ್ಟಿಕ್ ಸ್ಯಾಶೆ ಬಳಕೆ ನಿಷೇಧಿಸಿದೆ. ಬದಲಿ ಪರಿಸರಸ್ನೇಹಿ ಪ್ಯಾಕೆಟ್ ವ್ಯವಸ್ಥೆ ಅಭಿವೃದ್ಧಿಪಡಿಸುವವರೆಗೆ ಇದರಿಂದ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು. ಪರಿಣತ ಸಮಿತಿ ಶಿಫಾರಸಿನ ಅನ್ವಯ ತಕ್ಷಣ ಅಡಿಕೆಗೆ ಕನಿಷ್ಠ ಬೆಂಬಲ ಪ್ರಕಟಿಸಬೇಕು. ಅಡಿಕೆಗೆ ಬದಲಿ ಪರಿಸರ ಸ್ನೇಹಿ ಪ್ಯಾಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸುವಂತೆ ಕೇಂದ್ರ ಸರ್ಕಾರ ಮುಂಬೈನಲ್ಲಿರುವ  ‘ಭಾರತ ಪ್ಯಾಕಿಂಗ್ ಸಂಸ್ಥೆ’ಗೆ ಸೂಚಿಸಬೇಕು ಎಂದು ಸಲಹೆ ಮಾಡಲಾಯಿತು ಎಂದು ಸಂಸದ ಅನಂತ ಕುಮಾರ್ ಹೆಗಡೆ ತಿಳಿಸಿದ್ದಾರೆ. ರಾಜ್ಯದ ಸಂಸದರಾದ ಜಿ. ಎಸ್. ಬಸವರಾಜ್, ಡಿ.ವಿ. ಸದಾನಂದಗೌಡ, ಡಿ. ಬಿ. ಚಂದ್ರೇಗೌಡ, ಕೆ. ಬಿ. ಶಾಣಪ್ಪ, ಬಿ. ವೈ. ರಾಘವೇಂದ್ರ, ಗದ್ದಿಗೌಡರ್, ಜಿ. ಎಂ. ಸಿದ್ದೇಶ್ವರ್, ಶಾಂತಾ, ಆಯನೂರು ಮಂಜುನಾಥ್, ಸಣ್ಣ ಫಕ್ಕೀರಪ್ಪ, ನಳೀನಕುಮಾರ್ ಕಟೀಲು ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು. ಕೇರಳ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಸಂಸದರುಈ ಧರಣಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.