ADVERTISEMENT

ಅಪೆಕ್ಸ್‌ನಲ್ಲಿ ಇಂಡಸ್ಟ್ರಿಯಲ್ ಕೋ -ಆಪರೇಟಿವ್ ಬ್ಯಾಂಕ್ ವಿಲೀನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:10 IST
Last Updated 18 ಫೆಬ್ರುವರಿ 2011, 17:10 IST

ಶಿವಮೊಗ್ಗ: ನಷ್ಟದಲ್ಲಿರುವ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಬ್ಯಾಂಕ್ ಶೀಘ್ರದಲ್ಲೇ ಅಪೆಕ್ಸ್ ಬ್ಯಾಂಕ್‌ನಲ್ಲಿ ವಿಲೀನಗೊಳ್ಳಲಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತಿಳಿಸಿದರು.

ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಬ್ಯಾಂಕ್ ಸುಮಾರು ್ಙ 32 ಕೋಟಿ  ನಷ್ಟ ಅನುಭವಿಸುತ್ತಿದೆ. ಈಗಾಗಲೇ ಇದರ ಆಡಳಿತ ಮಂಡಳಿ ರದ್ದಾಗಿದೆ. ಸದ್ಯದಲ್ಲೇ ಅಪೆಕ್ಸ್ ಬ್ಯಾಂಕ್ ಜತೆ ವಿಲೀನಗೊಳ್ಳಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಒಪ್ಪಿಗೆಗೆ ಕಾಯುತ್ತಿದ್ದೇವೆ. ಬರುವ ಏಪ್ರಿಲ್‌ನಲ್ಲಿ ವಿಲೀನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದರಿಂದ ಇಂಡಸ್ಟ್ರಿಯಲ್ ಬ್ಯಾಂಕ್‌ನ 37 ಶಾಖೆಗಳು ಅಪೆಕ್ಸ್ ಬ್ಯಾಂಕ್ ಸುಪರ್ದಿಗೆ ಬರಲಿವೆ. ಮಾರ್ಚ್‌ನಲ್ಲಿ 9 ನೂತನ ಶಾಖೆಗಳು ಆರಂಭಗೊಳ್ಳಲಿದ್ದು, ಈ ಮೂಲಕ ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್‌ನ ಒಟ್ಟು 77 ಶಾಖೆಗಳು ಆಗುತ್ತವೆ ಎಂದು ಮಾಹಿತಿ ನೀಡಿದರು.

ಬೆಳೆಗಾರರಿಗೆ ಅಡಮಾನ ಸಾಲ: ಬೆಲೆ ಕುಸಿತದ ಹಿನ್ನೆಲೆಯಲ್ಲಿ ವಹಿವಾಟು ಸ್ಥಗಿತಗೊಂಡಿದ್ದು, ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರ್ಚ್ ಅಂತ್ಯಕ್ಕೆ ಮರುಪಾವತಿ ಮಾಡಬೇಕಾಗುವುದರಿಂದ ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ಎಪಿಎಂಸಿ ಮೂಲಕ ಶೇ. 60ರಷ್ಟು ಬಡ್ಡಿರಹಿತ ಅಡಮಾನ ಸಾಲ ನೀಡಲು ನಿರ್ಧರಿಸಲಾಗಿದೆ. ಈ ಹಣವನ್ನು ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‌ನಿಂದ ನೀಡಲಾಗುವುದು ಎಂದರು.ಅಡಿಕೆ ಖರೀದಿಗೆ ಹಣದ ಕೊರತೆ ಉಂಟಾದರೆ ಅಡಿಕೆ ಮಾರಾಟ ಸಹಕಾರಿ ಸಂಘಗಳಿಗೂ ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ನೀಡಲಾಗುವುದು. ಬೆಳೆಗಾರರು ಹಾಗೂ ವರ್ತಕರು ಹತಾಶರಾಗಬಾರದು ಎಂದು ಭರವಸೆ ನೀಡಿದರು. ಆದರೆ, ಯಾವುದೇ ಕಾರಣಕ್ಕೂ ಅಡಿಕೆ ವಹಿವಾಟು ನಿಲ್ಲಿಸಬಾರದು. ಈಗಾಗಲೇ ಸಾಕಷ್ಟು ಅಡಿಕೆ ದಾಸ್ತಾನು ಇದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಲೆನಾಡು ಅಡಿಕೆ ಬರಲಿದೆ. ಅಂತಹದ್ದರಲ್ಲಿ ವಹಿವಾಟು ಸ್ಥಗಿತಗೊಂಡರೆ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.