ADVERTISEMENT

ಅಬಕಾರಿ ಸುಂಕ ಕಡಿತ; ಕಾರು ಮಾರಾಟ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿನ ಕಾರು ಮಾರಾಟ ಏರಿಕೆ ಕಂಡಿದೆ. ಫೆಬ್ರುವರಿ­ಯಲ್ಲಿ ದೇಶೀಯ ಕಾರು ಮಾರಾಟ ಶೇ 1.39ರಷ್ಟು ಹೆಚ್ಚಿದ್ದು, ಒಟ್ಟು 1.60 ಲಕ್ಷ ಕಾರುಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ಹೇಳಿದೆ.

ಕೇಂದ್ರ ಸರ್ಕಾರ ಮಧ್ಯಾಂತರ ಬಜೆಟ್‌ನಲ್ಲಿ ಅಬಕಾರಿ ಸುಂಕ ಕಡಿತ ಮಾಡಿದ್ದು ಮತ್ತು ಇತ್ತೀಚೆಗೆ ದೆಹಲಿ­ಯಲ್ಲಿ ನಡೆದ ವಾಹನ ಪ್ರದರ್ಶನ ಮೇಳದಲ್ಲಿ ಹೊಸ ಹೊಸ ಮಾದ­ರಿಗಳನ್ನು ಪರಿಚಯಿಸಿದ್ದು, ಉದ್ಯಮಕ್ಕೆ ಚೇತರಿಕೆ ನೀಡಿದೆ. ಇದರಿಂದ ಗ್ರಾಹಕರ ಆತ್ಮವಿಶ್ವಾಸ ಮರಳಿದೆ. ಬೇಡಿಕೆ ನಿಧಾನವಾಗಿ ಏರಿಕೆ ಕಾಣುತ್ತಿದೆ ಎಂದು ‘ಎಸ್‌ಐಎಎಂ’ ಮಹಾ ನಿರ್ದೇಶಕ  ವಿಷ್ಣು ಮಾಥುರ್‌ ಹೇಳಿದ್ದಾರೆ.

2013ರ ಫೆಬ್ರುವರಿಯಲ್ಲಿ ಒಟ್ಟು 1.58 ಲಕ್ಷ ಕಾರುಗಳು ಮಾರಾ­ಟ­ವಾಗಿದ್ದವು. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಫೆ.17ರಂದು ಮಂಡಿಸಿದ ಮಧ್ಯಾಂತರ ಬಜೆಟ್‌ನಲ್ಲಿ ದ್ವಿಚಕ್ರ ವಾಹನ, ಸಣ್ಣ ಕಾರು ಮತ್ತು ವಾಣಿಜ್ಯ ಬಳಕೆ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಶೇ 12ರಿಂದ ಶೇ 8ಕ್ಕೆ ತಗ್ಗಿಸಿದ್ದರು. ‘ಎಸ್‌ಯುವಿ’ ವಾಹ­ನಗಳ ತೆರಿಗೆ ಶೇ 30ರಿಂದ ಶೇ 24ಕ್ಕೆ ಇಳಿದಿತ್ತು. ದೊಡ್ಡ ಕಾರುಗಳ ಮೇಲಿನ ಅಬಕಾರಿ ಸುಂಕ ಶೇ 27ರಿಂದ ಶೇ 24ಕ್ಕೆ  ತಗ್ಗಿತ್ತು. ಈ ಕ್ರಮಗಳು ವಾಹನ ಉದ್ಯಮಕ್ಕೆ  ಚೇತರಿಕೆ ನೀಡಿವೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ –ಫೆಬ್ರುವರಿ ಅವಧಿಯಲ್ಲಿ ಒಟ್ಟಾರೆ ಕಾರು ಮಾರಾಟ ಶೇ 4.6ರಷ್ಟು ಕುಸಿತ ಕಂಡಿದೆ. ಈ ಹಣಕಾಸು ವರ್ಷದ ಒಟ್ಟಾರೆ ಮಾರಾಟ ಮುನ್ನೋಟ ನಕಾರಾ­­ತ್ಮಕವಾಗಿದೆ. ಮಾರ್ಚ್‌­ನಲ್ಲಿ ಮಾರಾಟ ಹೆಚ್ಚಬ­ಹುದು. ಆದರೆ, ಒಟ್ಟಾರೆ ವರ್ಷದಲ್ಲಿ ಪ್ರಯಾಣಿಕ ಮತ್ತು ವಾಣಿಜ್ಯ ಬಳಕೆ ಎರಡೂ ವಿಭಾಗದ ವಾಹನಗಳಿಗೆ ಬೇಡಿಕೆ ಕುಸಿದಿದೆ ಎಂದು ಮಾಥುರ್‌ ಹೇಳಿದ್ದಾರೆ.

ಕಾರು ತಯಾರಿಕಾ ಕ್ಷೇತ್ರದ ದೇಶದ ಅತಿ ದೊಡ್ಡ ಕಂಪೆನಿ ಮಾರುತಿ ಸುಜುಕಿ ಫೆಬ್ರುವರಿಯಲ್ಲಿ 84,595 ಕಾರು­ಗಳನ್ನು ಮಾರಾಟ ಮಾಡಿದೆ. ಪ್ರತಿಸ್ಪರ್ಧಿ ಕಂಪೆನಿ ಹುಂಡೈ ಮೋಟಾರ್‌ 33,875 ಕಾರು ಮಾರಾಟ ಮಾಡಿದೆ.

  ವಾಣಿಜ್ಯ ಬಳಕೆ ವಾಹನಗಳ ಮಾರಾಟವೂ ಫೆಬ್ರುವರಿಯಲ್ಲಿ ಶೇ 29.84ರಷ್ಟು ಕುಸಿದಿದೆ. ಒಟ್ಟು 47,982 ವಾಹನಗಳು ಮಾರಾಟ­ವಾಗಿವೆ.

ಕಳೆದ 10 ತಿಂಗಳಿಂದ ವಾಣಿಜ್ಯ ಬಳಕೆ ವಾಹನಗಳ ಮಾರಾಟ ಕುಸಿಯುತ್ತಿದೆ ಕೇಂದ್ರ ಸರ್ಕಾರ ಗಣಿಗಾರಿಕೆ, ಮೂಲ­ಸೌಕರ್ಯ ಅಭಿವೃದ್ಧಿಗೆ ಯೋಜನೆಗಳಿಗೆ  ಉತ್ತೇಜನ ನೀಡಿದರೆ ಮಾರಾಟ ಚೇತರಿಸಿಕೊಳ್ಳಬಹುದು ಎಂದು ‘ಎಸ್‌ಐಎಎಂ’ ವಿಶ್ಲೇಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.