ADVERTISEMENT

`ಅಮಾನತ್' ಅಕ್ರಮ: ತನಿಖೆಗೆ ನಿರಶನ

ಅಲ್ಪಸಂಖ್ಯಾತರ ಬ್ಯಾಂಕ್‌ನಲ್ಲಿ ಬಡವರ ಠೇವಣಿ ಲೂಟಿ: ಷರೀಫ್ ಆರೋಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಬೆಂಗಳೂರು: ಅಮಾನತ್ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿ ಶುಕ್ರವಾರದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ತಿಳಿಸಿದರು.

ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ಅಮಾನತ್ ಸಹಕಾರ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ ಬಡವರಿಗೆ ಅನ್ಯಾಯವಾಗಿದೆ. ಸಮುದಾಯದ ನಾಯಕರೆಂದು ಬಿಂಬಿಸಿಕೊಂಡ ಹಲವರು ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ.

ಈ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಈವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದೇವೆ' ಎಂದರು.

ಬೆನ್ಸನ್‌ಟೌನ್‌ನ ಹಜರತ್ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಶುಕ್ರವಾರ ತಾವು ಸತ್ಯಾಗ್ರಹದ ನೇತೃತ್ವ ವಹಿಸಲಿದ್ದು, ಶನಿವಾರ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಹೋರಾಟ ಮುಂದುವರಿಯಲಿದೆ.

ಶಾಸಕ ಆರ್.ರೋಷನ್ ಬೇಗ್ ಅವರು ಮೂರನೇ ದಿನದ ಸತ್ಯಾಗ್ರಹದ ನೇತೃತ್ವ ವಹಿಸುವರು. ನಂತರದ ದಿನಗಳಲ್ಲಿ ಅನುಕ್ರಮವಾಗಿ ಕರ್ನಾಟಕ ಮುತ್ತೆಹಾದ ಮಹಜ್ ಮತ್ತು ಹಜರತ್ ಜಾಮೀಯಾ ಬಿಲಾಲ್ ಸಂಘಟನೆಗಳ ಸಾರಥ್ಯದಲ್ಲಿ ಹೋರಾಟ ನಡೆಯಲಿದೆ ಎಂದು ಷರೀಫ್ ವಿವರಿಸಿದರು.

ಬ್ಯಾಂಕ್‌ನ ಹಣ ಲೂಟಿ ಮಾಡಿದವರೇ ಈಗ ಅದನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರ ಶ್ರಮದಿಂದ ಅಸ್ತಿತ್ವಕ್ಕೆ ಬಂದ ಬ್ಯಾಂಕ್ ಇದು. ಅದು ಸಮುದಾಯದ ಜನರ ಆಸ್ತಿಯಾಗಿಯೇ ಉಳಿಯಬೇಕು. ಈ ದಿಸೆಯಲ್ಲಿ ಹೋರಾಟ ಮುಂದುವರಿಯಲಿದೆ.

ADVERTISEMENT

ಸ್ಥಳೀಯ ತನಿಖಾ ಸಂಸ್ಥೆಗಳು ನಡೆಸುವ ತನಿಖೆಯಲ್ಲಿ ಠೇವಣಿದಾರರಿಗೆ ನಂಬಿಕೆ ಉಳಿದಿಲ್ಲ. ಈ ಪ್ರಕರಣದ ಕುರಿತು ಸಿಬಿಐ ತನಿಖೆಯೇ ನಡೆಯಬೇಕು ಎಂದು ಆಗ್ರಹಿಸಿದರು. `ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ. ನಮ್ಮ ಬೇಡಿಕೆಗೆ ಸರ್ಕಾರ ಮಣಿಯುವವರೆಗೂ ಹೋರಾಟ ನಡೆಸುತ್ತೇವೆ.

ಸರ್ಕಾರ ಮಣಿಯದೇ ಇದ್ದರೆ ಮಣಿಸುವುದು ಹೇಗೆ ಎಂಬುದು ಜನರಿಗೆ ಗೊತ್ತು. ಸರ್ಕಾರ ಯಾರಿಗೂ ಅಂಜಬೇಕಿಲ್ಲ. ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧವೂ ಕ್ರಮ ಜರುಗಿಸಲಿ' ಎಂದರು. ಸಿಬಿಐ ತನಿಖೆಗೆ ಆದೇಶಿಸದಂತೆ ಯಾರಾದರೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರಾ? ಎಂಬ ಪ್ರಶ್ನೆಗೆ, `ಯಾರು ಒತ್ತಡ ಹೇರುತ್ತಾರೋ? ಇಲ್ಲವೋ ಎಂಬುದು ತಿಳಿದಿಲ್ಲ.

ಜನರಿಗೆ ನ್ಯಾಯ ದೊರೆಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಜನರು ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅದನ್ನು ಸಾಕಾರಗೊಳಿಸುವುದಕ್ಕೆ ಅವರು ಮುಂದಾಗಬೇಕು' ಎಂದು ಉತ್ತರಿಸಿದರು.

ಅಮಾನತ್ ಸಹಕಾರ ಬ್ಯಾಂಕ್‌ಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಮುಖ್ಯಮಂತ್ರಿಯವರು ಈ ಬೇಡಿಕೆಯನ್ನು ಈಡೇರಿಸಿಲ್ಲ. ತಕ್ಷಣವೇ ಈ ಬೇಡಿಕೆಯನ್ನು ಈಡೇರಿಸಬೇಕು. ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ರಂಜಾನ್ ಮಾಸದಲ್ಲಿ ಸಂಕಷ್ಟದಲ್ಲಿರುವ ಠೇವಣಿದಾರರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು.

ಕಾಲೇಜು ಟ್ರಸ್ಟ್‌ಗೇ ಬರಲಿ
`ಸಮುದಾಯದ ಅಲ್ ಅಮೀನ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದ್ದ ವಿಜಾಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜನ್ನು ಅಕ್ರಮವಾಗಿ ಖಾಸಗಿ ಬಿಲ್ಡರ್ ಒಬ್ಬರ ಒಡೆತನದ ಟ್ರಸ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಸಮುದಾಯದ ಜನರಿಗೆ ಅನ್ಯಾಯವಾಗಿದೆ. ಕಾಲೇಜನ್ನು ಪುನಃ ಅಲ್ ಅಮೀನ್ ಟ್ರಸ್ಟ್‌ಗೆ ಹಸ್ತಾಂತರಿಸಲು ಸರ್ಕಾರ ಕ್ರಮ ಜರುಗಿಸಬೇಕು' ಎಂದರು.

ಭಾರತೀಯ ವೈದ್ಯಕೀಯ ಮಂಡಳಿಯ ನಿಯಮ ಬದಲಾವಣೆ ನೆಪ ಮುಂದಿಟ್ಟು ವೈದ್ಯಕೀಯ ಕಾಲೇಜನ್ನು ಖಾಸಗಿ ಟ್ರಸ್ಟ್‌ಗೆ ವರ್ಗಾಯಿಸಿರುವುದ ಹಿಂದೆ ಕಾಲೇಜಿನ ಆಸ್ತಿಯನ್ನು ಕಬಳಿಸುವ ಸಂಚು ಇದೆ. ಈ ಪ್ರಕರಣದ ಬಗ್ಗೆಯೂ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

`ವಕ್ಫ್ ಮಂಡಳಿಗೆ ಸೇರಿದ ಆಸ್ತಿಗಳನ್ನು ಕಬಳಿಸಿರುವವರ ವಿರುದ್ಧವೂ ಸರ್ಕಾರ ಕ್ರಮ ಜರುಗಿಸಬೇಕು. ವಕ್ಫ್ ಮಂಡಳಿ ಮತ್ತು ಮುಸ್ಲಿಂ ಸಮುದಾಯದ ಸಂಘ ಸಂಸ್ಥೆಗಳ ಹೆಸರಿನಲ್ಲಿ ಸಾಕಷ್ಟು ಆಸ್ತಿ, ಜಮೀನುಗಳು ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಈ ಆಸ್ತಿಗಳನ್ನು ಕಡಿಮೆ ದರಕ್ಕೆ ಬಾಡಿಗೆಗೆ ಪಡೆದಿರುವ ಕೆಲವರು ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.