ADVERTISEMENT

ಅರೇಬಿಕಾ ಕಾಫಿ: ದಾಖಲೆ ಬೆಲೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಚಿಕ್ಕಮಗಳೂರು: ಕಾಫಿ ಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 50 ಕೆಜಿ ತೂಕದ ಅರೇಬಿಕಾ ಕಾಫಿ ಚೀಲಕ್ಕೆ ರೂ. 10,000 ದಾಖಲೆ ಬೆಲೆ ಬಂದಿದೆ.
ಗುರುವಾರ ನಗರದ ಪ್ರಮುಖ ಕಾಫಿ ಖರೀದಿ ಸಂಸ್ಥೆ ಎಬಿಸಿ ಪ್ರತಿ ಚೀಲಕ್ಕೆ ರೂ. 9,900 ಬಿಡ್ ಮಾಡಿ ಖರೀದಿಸಿತು. ಇನ್ನೊಂದೆಡೆ ಮುಕ್ತ ಮಾರುಕಟ್ಟೆಯಲ್ಲಿ ರೂ. 10,100ವರೆಗೂ ಕಾಫಿ ಚೀಲ ಮಾರಾಟವಾಯಿತು. 1995-96ರಲ್ಲಿ ಪ್ರತಿ ಕಾಫಿ ಚೀಲದ ಬೆಲೆ ರೂ. 8000   ಗಡಿದಾಟಿದ್ದೇ ಈವರೆಗಿನ ಅತ್ಯಧಿಕ ಬೆಲೆಯಾಗಿತ್ತು.

ಅಮೆರಿಕ ಮಾರುಕಟ್ಟೆಯಲ್ಲಿ ಒಂದು ಚೀಲ ಕಾಫಿಯ ಧಾರಣೆ 254 ಸೆಂಟ್ಸ್‌ಗೆ ಏರಿದೆ. ಇದನ್ನು ಗಮನಿಸಿದ ಬೆಳೆಗಾರರು ಹೆಚ್ಚು ಕಾಫಿಯನ್ನು ಮಾರುಕಟ್ಟೆಗೆ ತರಬಹುದು ಎಂಬ ನಿರೀಕ್ಷೆಯಲ್ಲಿ ಮಾರಾಟಗಾರರಿದ್ದರು. ಆದರೆ ಮತ್ತಷ್ಟು ಬೆಲೆ ಏರಿಕೆಯ ನಿರೀಕ್ಷೆಯಲ್ಲಿರುವ ಬೆಳೆಗಾರರು ಹೆಚ್ಚು ಕಾಫಿ ಮಾರಲಿಲ್ಲ.

‘ರೂ.10 ಸಾವಿರ ಬೆಲೆ ಬಂದ್ರೆ ತಿಳ್ಸಿ ಅಂತ ಬೆಳೆಗಾರರು ಮೊದ್ಲು ಹೇಳಿದ್ರು. ಇವತ್ತು ಎಷ್ಟೋ ಜನಕ್ಕೆ ಫೋನ್ ಮಾಡ್ದೆ. ಇನ್ನೂ ಸ್ವಲ್ಪ ಸಮಯ ಕಾಯ್ದು ನೋಡೋಣ ಅಂತಿದ್ದಾರೆ’ ಎಂದು ನಗರದ ಎಸ್.ಆರ್.ಕಾಫಿ ಟ್ರೇಡರ್ಸ್‌ ಮಾಲೀಕ ಎನ್.ಶಿವಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ದಾಖಲೆ ಧಾರಣೆ-ಕಾರಣ: ಜಗತ್ತಿನ ಪ್ರಮುಖ (ವಾಷ್ಡ್) ಅರೇಬಿಕಾ ಕಾಫಿ ಉತ್ಪಾದಿಸುವ ರಾಷ್ಟ್ರವಾದ ಕೊಲಂಬಿಯಾದಲ್ಲಿ ಈ ಬಾರಿ ಇಳುವರಿ ಶೇ. 30ರಷ್ಟು ಕಡಿಮೆಯಾಗಿದೆ. ಬ್ರೆಜಿಲ್‌ನಲ್ಲಿಯೂ 11 ದಶಲಕ್ಷ ಚೀಲದಷ್ಟು ಕಾಫಿಯ ವಾರ್ಷಿಕ ಇಳುವರಿ ಕುಸಿದಿದೆ. ಮಧ್ಯ ಅಮೆರಿಕದಲ್ಲಿಯೂ ಕಾಫಿ ಇಳುವರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಧಾರಣೆ ಹೆಚ್ಚಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇಲ್ಲೂ ಇಳುವರಿ ಕುಸಿತ:ಹೂ ಬಿಡುವ ಮತ್ತು ಫಸಲು ಕೊಯ್ಯುವ ಕಾಲದಲ್ಲಿ ಮಳೆ ಏರುಪೇರಾಗಿದ್ದರಿಂದ ಹಾಗೂ ಹಲವು ಎಸ್ಟೇಟ್‌ಗಳು ಈ ಬಾರಿ ಹಳೆಯ ಗಿಡಗಳನ್ನು ಕಿತ್ತು ಹೊಸ ಗಿಡಗಳನ್ನು ನೆಟ್ಟಿರುವುದರಿಂದ ಭಾರತದಲ್ಲಿಯೂ ಈ ಬಾರಿ ಅರೇಬಿಕಾ ಕಾಫಿಯ ಇಳುವರಿ ಕುಸಿದಿದೆ.

‘ಇಳುವರಿ ಕಡಿಮೆಯಾಗಿರುವುದು ಮತ್ತು ಕಾರ್ಮಿಕರ ಕೂಲಿ ಹೆಚ್ಚಿರುವುದರಿಂದ ಬಂಪರ್ ಬೆಲೆ ಬಂದರೂ ಬೆಳೆಗಾರರಿಗೆ ಹೆಚ್ಚೇನು ಲಾಭವಾಗುವುದಿಲ್ಲ’ ಎನ್ನುತ್ತಾರೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎನ್.ಕೆ.ಪ್ರದೀಪ್.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಅರೇಬಿಕಾ ಕಾಫಿಗೆ ಈ ಋತುವಿನಲ್ಲಿ ಉತ್ತಮ ಬೆಲೆ ಬಂದಿದೆ. ವಿಶ್ವದ ಪ್ರಮುಖ ಕಾಫಿ ಬೆಳೆಯುವ ರಾಷ್ಟ್ರಗಳಲ್ಲಿ ಬೆಳೆ ನಷ್ಟವಾಗಿರುವುದೂ ಬೆಲೆ ಏರಿಕೆಗೆ ಪ್ರಮುಖ ಕಾರಣ’ ಎನ್ನುವುದು ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಸಹದೇವ್ ಬಾಲಕೃಷ್ಣ ಅವರ ಅನುಭವದ ಮಾತು.

ಮುಂದಿನ ವರ್ಷ ಬ್ರೆಜಿಲ್‌ಗೆ ಡೌನ್ ಕ್ರಾಪ್ ಇದೆ. ಹೀಗಾಗಿ ಬೆಲೆಗಳು ಮತ್ತಷ್ಟು ಏರಬಹುದು ಎಂದು ಅನೇಕ ಬೆಳೆಗಾರರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಇಟಲಿ ಮೂಲದ ಕಾಫಿ ಖರೀದಿ ಸಂಸ್ಥೆಯ ಮಾರ್ಕೆಟಿಂಗ್ ಅಧಿಕಾರಿ, ‘ಕಮಾಡಿಟಿ ಟ್ರೇಡಿಂಗ್‌ನಿಂದಾಗಿ ಕಾಫಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿದೆ. ಬೆಳೆಗಾರರು, ಇನ್ನೂ ಧಾರಣೆ ಏರುತ್ತದೆ ಎಂದು ಕಾಯುವುದು ಅಪಾಯ. ಸೂಕ್ತ ಸಮಯ ನೋಡಿ ಕಾಫಿ ಮಾರುವುದೇ ಜಾಣತನ’ ಎಂಬ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.