ADVERTISEMENT

ಆಂತರಿಕ ಸಾಲ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ನವದೆಹಲಿ (ಐಎಎನ್‌ಎಸ್): ದೇಶದ ಆಂತರಿಕ ಸಾಲದ ಪ್ರಮಾಣ 2011ರ ಮಾರ್ಚ್ ಅಂತ್ಯದ ವೇಳೆಗೆ 305 ಶತಕೋಟಿ ಡಾಲರ್ (ರೂ1,37,25,000) ಗಳಷ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 17ರಷ್ಟು ಹೆಚ್ಚಿದ್ದು, 44 ಶತಕೋಟಿ ಡಾಲರ್‌ಗಳಷ್ಟು (ರೂ1,98,000 ಕೋಟಿ) ಹೆಚ್ಚಾಗಿದೆ.

ಗರಿಷ್ಠ ಬಡ್ಡಿ ದರ, ವಾಣಿಜ್ಯ ಸಾಲದ ಹೆಚ್ಚಳ ಮತ್ತು  ವಿಶೆಷವಾಗಿ ಅಲ್ಪಾವಧಿ ಸಾಲ-ಬಡ್ಡಿ ದರಗಳು ಹೆಚ್ಚಿರುವುದು ಆಂತರಿಕ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚುವಂತೆ ಮಾಡಿದೆ.

ಒಟ್ಟು ಆಂತರಿಕ ಸಾಲದಲ್ಲಿ ವಾಣಿಜ್ಯ ಸಾಲದ ಪ್ರಮಾಣ ಶೇ 28ರಷ್ಟಿದೆ. 2005ರಲ್ಲಿ ಇದು ಶೇ 19ರಷ್ಟಿತ್ತು.  ಮಾರುಕಟ್ಟೆ ಏರಿಳಿತ  ಆಧರಿಸಿ ಸಾಲ ಪಡೆಯಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಡ್ಡಿ ದರ ಗಣನೀಯವಾಗಿ ಹೆಚ್ಚಿದೆ. ಆದಾಗ್ಯೂ, ಒಟ್ಟಾರೆ ಆಂತರಿಕ ಸಾಲದ ಪ್ರಮಾಣ ಸಮತೋಲನದಲ್ಲಿದ್ದು, ನಿರ್ವಹಿಸಬಹುದಾದ ಮಿತಿಯಲ್ಲಿದೆ  ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಒಟ್ಟು ಆಂತರಿಕ ಸಾಲದ ಪ್ರಮಾಣ ಮತ್ತು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ನಡುವಿನ ಅನುಪಾತ ಶೇ 17ರಷ್ಟಿತ್ತು. ಈ ಅವಧಿಯಲ್ಲಿ ಸಾಲ ಸೇವೆಗಳ ಅನುಪಾತ ಶೇ 4.2ರಷ್ಟಾಗಿತ್ತು ಎಂದು ಆರ್ಥಿಕ ವ್ಯವಹಾರಗಳ ವಿಭಾಗದ ಅಂಕಿ ಅಂಶಗಳು ತಿಳಿಸಿವೆ. 
 
ಆಂತರಿಕ ಸಾಲ ಮತ್ತು `ಜಿಡಿಪಿ~ ನಡುವಿನ ಅನುಪಾತ 1991-92ರಲ್ಲಿ ಶೇ 38ರಷ್ಟಿತ್ತು. 2000-01ರಲ್ಲಿ ಇದು ಶೇ 22ಕ್ಕೆ ಇಳಿಯಿತು ಮತ್ತು 2011ರಲ್ಲಿ ಶೇ 17ರಷ್ಟಾಗಿದೆ. 1991-92ರಲ್ಲಿ ಶೇ 30ರಷ್ಟಿದ್ದ ಸಾಲ ಸೇವೆಗಳ ಅನುಪಾತ ಕೂಡ 2011ರಲ್ಲಿ ಶೇ 4ಕ್ಕೆ ಇಳಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರ ಸಾಲದ ಪ್ರಮಾಣ ತಗ್ಗಿಸಲು ಕಳೆದ ವರ್ಷ ಆಂತರಿಕ ಸಾಲ ನಿರ್ವಹಣೆ ನೀತಿ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.