ADVERTISEMENT

ಆದಾಯ ಆಯೋಗ ರಚನೆ: ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST
ಆದಾಯ ಆಯೋಗ ರಚನೆ: ರೈತ ಸಂಘ ಆಗ್ರಹ
ಆದಾಯ ಆಯೋಗ ರಚನೆ: ರೈತ ಸಂಘ ಆಗ್ರಹ   

ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್‌ನ ಒಟ್ಟು ಮೊತ್ತದ ಅರ್ಧಭಾಗವನ್ನು ಕೃಷಿಗೆ ಮೀಸಲಿಡಬೇಕು. ಒಣ ಬೇಸಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರೈತರ ಆದಾಯ ಆಯೋಗ ರಚಿಸಬೇಕು. 2ನೇ ಹಸಿರು ಕ್ರಾಂತಿಗೆ ಪೂರಕವಾದ ಅಂಶಗಳು ಬಜೆಟ್‌ನಲ್ಲಿರಬೇಕು. ಬೆಳೆಗಳ ಬೆಲೆಗಳನ್ನು ರೈತರೇ ನಿರ್ಧರಿಸುವಂತಾಗಬೇಕು. ಕೃಷಿ ಮಾರುಕಟ್ಟೆ ಶುಲ್ಕ ಶೇ 50ರಷ್ಟು ಇಳಿಕೆಯಾಗಬೇಕು...

ರಾಜ್ಯ ರೈತ ಸಂಘವು ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಬಜೆಟ್ ಕುರಿತ ವಿಚಾರಗೋಷ್ಠಿಯಲ್ಲಿ ಮೇಲ್ಕಂಡ ಶಿಫಾರಸುಗಳು ಕೇಳಿಬಂದವು.
ಕೃಷಿ ಚಿಂತಕ ದೇವೇಂದ್ರ ಶರ್ಮ ಮಾತನಾಡಿ, ‘ದೇಶದಲ್ಲಿ 40 ವರ್ಷಗಳಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗಿದ್ದು, ಆದಾಯ ಗಳಿಕೆ ಮಾತ್ರ ಗಣನೀಯವಾಗಿ ಇಳಿಕೆಯಾಗುತ್ತಿದೆ. ಉತ್ಪಾದನೆ ಪ್ರಮಾಣ ಹೆಚ್ಚಾದರೂ ಸ್ಥಿರ ಆದಾಯ ದೊರೆಯದಂತಾಗಿದೆ. ಹಾಗಾಗಿ ರೈತರು ಮಾಸಿಕ ಸ್ಥಿರ ಆದಾಯ ಪಡೆಯುವ ನಿಟ್ಟಿನಲ್ಲಿ ರೈತರ ಆದಾಯ ಆಯೋಗ ರಚಿಸಬೇಕು’ ಎಂದರು. ‘ಸಮೀಕ್ಷೆಯೊಂದರ ಪ್ರಕಾರ 2003-04ನೇ ಸಾಲಿನಲ್ಲಿ ದೇಶದಲ್ಲಿ ರೈತರ ಆದಾಯ  ರೂ. 2,300. ಆದರೆ ಕರ್ನಾಟಕದ ರೈತರು ಇದಕ್ಕಿಂತಲೂ ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಆಯೋಗ ರಚನೆ ಜತೆಗೆ ಆದಾಯ ಖಾತರಿ ನೀಡಬೇಕು’ ಎಂದು ಆಗ್ರಹಿಸಿದರು.

‘ಕೃಷಿ ಕ್ಷೇತ್ರಕ್ಕೆ ನೀಡುವ ಸಬ್ಸಿಡಿಗಳ ಬಗ್ಗೆ ಆರ್ಥಿಕ ತಜ್ಞರು ಹುಬ್ಬೇರಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಕೈಗಾರಿಕೆಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ರಿಯಾಯ್ತಿ ನೀಡುತ್ತಿದ್ದರೂ ಆ ಕುರಿತು ಚಕಾರ ತೆಗೆಯುತ್ತಿಲ್ಲ. 2010-11ನೇ ಸಾಲಿನಲ್ಲಿ ಕೈಗಾರಿಕೆಗಳಿಗೆ ರೂ. 5.16 ಲಕ್ಷ ಕೋಟಿ ರಿಯಾಯ್ತಿ ನೀಡಿದೆ. ಐದು ವರ್ಷಗಳಲ್ಲಿ ಕೈಗಾರಿಕೆಗಳಿಗೆ ನೀಡಿರುವ ರಿಯಾಯ್ತಿ ಮೊತ್ತ 20 ಲಕ್ಷ ಕೋಟಿ ರೂಪಾಯಿ ಮೀರುತ್ತದೆ. ಇದರ ಬಗ್ಗೆ ಆರ್ಥಿಕತಜ್ಞರು ಆಕ್ಷೇಪ ತೆಗೆಯುವುದಿಲ್ಲ’ ಎಂದು ಕಿಡಿ ಕಾರಿದರು. ‘ಕೀಟನಾಶಕ, ರಸಗೊಬ್ಬರ ಬಳಕೆಯನ್ನು ನಿಲ್ಲಿಸಿ ಸಾವಯವ ಕೃಷಿ ನಡೆಸಬೇಕು. ಸರ್ಕಾರ ಗ್ರಾಮಾಂತರ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಂಡಿ, ಉಗ್ರಾಣಗಳನ್ನು ನಿರ್ಮಿಸಬೇಕು. ರೈತರು ಮತ್ತು ಮಂಡಿಗಳ ನಡುವೆ ಸಂಪರ್ಕ ಕಲ್ಪಿಸಬೇಕು’ ಎಂದರು.

ADVERTISEMENT

ಕೃಷಿ ನಾಶವಾದರೆ ನಕ್ಸಲ್ ಉಲ್ಬಣ: ‘ಒಂದೊಮ್ಮೆ ಇದೇ ಪರಿಸ್ಥಿತಿ ಮುಂದುವರಿದು ಕೃಷಿ ನಾಶವಾದರೆ ನಕ್ಸಲ್ ಚಟುವಟಿಕೆ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಕೃಷಿಗೆ ಆದ್ಯತೆ ನೀಡಿದರೆ ರೈತರು ನೆಮ್ಮದಿಯಿಂದ ಜೀವನ ನಡೆಸಬಹುದು. ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದೇ ಆದರೆ ನಕ್ಸಲ್ ಹೋರಾಟ ಹೆಚ್ಚಾಗಲಿದೆ’ ಎಂದು ಹೇಳಿದರು.ಬೆಂಗಳೂರು ಕೃಷಿ ವಿ.ವಿ ನಿವೃತ್ತ ಕುಲಪತಿ ಡಾ.ಆರ್. ದ್ವಾರಕಿನಾಥ್, ‘ದೇಶದಲ್ಲಿ ಮಳೆಯನ್ನೇ ಹೆಚ್ಚಾಗಿ ಆಶ್ರಯಿಸಿರುವ ಎರಡನೇ ದೊಡ್ಡ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ವಾರ್ಷಿಕವಾಗಿ 100 ಇಂಚು ಮಳೆ ಸುರಿಯುತ್ತದೆ ಎಂಬ ಅಂದಾಜು ಇದೆ. ಇದರಲ್ಲಿ ಅರ್ಧದಷ್ಟು ಮಳೆ ಪಶ್ಚಿಮ ಭಾಗದಲ್ಲಿ ಸುರಿದು ಸಮುದ್ರ ಸೇರುತ್ತಿದೆ. ಹಾಗಾಗಿ ಕೃಷಿ ಚಟುವಟಿಕೆಗೆ ಸಿಗುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಉತ್ಪಾದನೆಯಲ್ಲಿ ಅನಿಶ್ಚಿತತೆ ಇದೆ’ ಎಂದರು.

ಬೇರಿಲ್ಲದ ಬಜೆಟ್ ಬೇಡ:‘ಕೃಷಿ ಬಜೆಟ್ ನಿರ್ದಿಷ್ಟ ಯೋಜನೆ, ಗುರಿ ಹೊಂದಿರಬೇಕು. ಕೆಲವು ಯೋಜನೆಗಳನ್ನು ರೂಪಿಸಿ ಅದಕ್ಕೆ ಇಂತಿಷ್ಟು ಹಣ ಮೀಸಲಿಡುವುದಾಗಿ ಅಂಕಿ ಅಂಶ ನೀಡುವ ಬೇರಿಲ್ಲದ ಬಜೆಟ್ ಬೇಡ. ನಿಗದಿತ  ವರ್ಷದಲ್ಲಿ ಒಂದು ನಿರ್ದಿಷ್ಟ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಬಜೆಟ್ ಒಳಗೊಂಡಿರಬೇಕು’ ಎಂದು ಒತ್ತಾಯಿಸಿದರು. ಆರ್ಥಿಕ ತಜ್ಞ ಪ್ರೊ. ಅಬ್ದುಲ್ ಅಜೀಜ್, ‘ರಾಜ್ಯದಲ್ಲೇ ಎರಡನೇ ಹಸಿರು ಕ್ರಾಂತಿಯಾಗುವುದಕ್ಕೆ ಪೂರಕವಾದ ಅಂಶಗಳನ್ನು ಕೃಷಿ ಬಜೆಟ್ ಒಳಗೊಂಡಿರಬೇಕು. ಕೃಷಿ ಉತ್ಪಾದನೆ ಹೆಚ್ಚಾಗಬೇಕು. ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸುವ ಕೆಲಸ ಆಗಬೇಕು. ಅದಕ್ಕೆ ಪೂರಕವಾಗಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ರೈತರು ದೇಶದ ಬೆನ್ನೆಲುಬು ಎನ್ನುವ ಬದಲಿಗೆ ಕೃಷಿ ದೇಶದ ಆರ್ಥಿಕತೆಯ ಬೆನ್ನೆಲು ಎನ್ನುವಂತಾಗಬೇಕು’ ಎಂದರು.

ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ರಾಮಕೃಷ್ಣಪ್ಪ, ‘ಕೃಷಿ ಅವಲಂಬಿತ ಉದ್ಯಮಗಳು ಹಾಗೂ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಡೀ ಬಜೆಟ್‌ನ ಹಣವನ್ನು ಕೃಷಿಗೆ ನೀಡಿದರೂ ಕೃಷಿ ಉತ್ಪನ್ನ ಹೆಚ್ಚಿಸಲು ಸಾಧ್ಯವಿಲ್ಲದಂತ ಸ್ಥಿತಿ ಇದೆ. ದಲ್ಲಾಳಿಗಳ ಕಾಟ ತೀವ್ರವಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಮಯಕ್ಕಿಂತ ರಾಜಕೀಯ ಕುರಿತ ಚರ್ಚೆಗೆ ಸಮಯ ವ್ಯರ್ಥ ಮಾಡುವುದೇ ಹೆಚ್ಚು’ ಎಂದರು. ‘ಕೃಷಿ ಉತ್ಪನ್ನ ಹೆಚ್ಚಳ ಹಾಗೂ ಉತ್ತಮ ಬೆಲೆ ಪಡೆಯಲು ರೈತರ ಒಡೆತನದ ಸಂಘಗಳು ಸ್ಥಾಪನೆಯಾಗಬೇಕು. ಎಲ್ಲರೂ ಒಂದೇ ಉತ್ಪನ್ನ ಬೆಳೆಯುವ ಬದಲಿಗೆ ವಿವಿಧ ಉತ್ಪನ್ನ ಬೆಳೆಯಲು ಚಿಂತಿಸಬೇಕು. ಸ್ಥಳೀಯ ತಳಿಗಳ ಅಭಿವೃದ್ಧಿ ಹಾಗೂ ಗೋಶಾಲೆಗಳ ಸ್ಥಾಪನೆಗೆ ಮುಂದಾಗಬೇಕು’ ಎಂದು ಹೇಳಿದರು.ಕೃಷಿ ವಿ.ವಿ ನಿವೃತ್ತ ಕುಲಪತಿ ಡಾ.ಪಿ.ಜಿ. ಚೆಂಗಪ್ಪ, ‘ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 58ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಬಜೆಟ್‌ನ ಶೇ 58ರಷ್ಟು ಅನುದಾನವನ್ನು ಕೃಷಿಗೆ ನೀಡಬೇಕು’ ಎಂದು ಆಗ್ರಹಿಸಿದರು.ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ಕೃಷಿ ಬಜೆಟ್ ಎಂದರೆ ಕೇವಲ ಪ್ರತ್ಯೇಕ ಆಯವ್ಯಯ ಪುಸ್ತಕ ಮುದ್ರಿಸಿ ಹಂಚುವಂತಾಗಬಾರದು. 64 ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ಕೃಷಿರ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಹೊಂದಿರಬೇಕು. ಎಲ್ಲ ಅಭಿಪ್ರಾಯಗಳನ್ನೂ ಕ್ರೋಢೀಕರಿಸಿ ಸಮಗ್ರ ವರದಿಯನ್ನು ಇದೇ 15ರೊಳಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.