ADVERTISEMENT

ಆಮದು ಈರುಳ್ಳಿ ಆಗಮನ: ಈರುಳ್ಳಿ ಸಗಟು ದರ ರೂ.10 ಕುಸಿತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 11:21 IST
Last Updated 20 ಸೆಪ್ಟೆಂಬರ್ 2013, 11:21 IST
ಈರುಳ್ಳಿ ಟ್ರಕ್ (ಕಡತ ಚಿತ್ರ)
ಈರುಳ್ಳಿ ಟ್ರಕ್ (ಕಡತ ಚಿತ್ರ)   

ನವದೆಹಲಿ (ಪಿಟಿಐ): ಸಗಟು ಮಾರುಕಟ್ಟೆಗೆ ಅಮದು ಈರುಳ್ಳಿಯ ಆಗಮನದೊಂದಿಗೆ ಈರುಳ್ಳಿಯ ಬೆಲೆ ಶುಕ್ರವಾರ ರಾಜಧಾನಿಯಲ್ಲಿ ಕಿಲೋ ಗ್ರಾಂಗೆ 10 ರೂಪಾಯಿಗಳಷ್ಟು ಇಳಿಯಿತು. ಆದರೆ ಚಿಲ್ಲರೆ ದರ ಕಿಲೋ ಗ್ರಾಂ ಗೆ 70-80 ರೂಪಾಯಿಗಳಲ್ಲೇ ಮುಂದುವರಿಯಿತು.

ವರ್ತಕರ ಪ್ರಕಾರ ಸಗಟು ಮಾರುಕಟ್ಟೆಗೆ ತಲಾ 1500 ರಿಂದ 2000 ಕ್ವಿಂಟಲ್ ನಷ್ಟು ಈರುಳ್ಳಿಯನ್ನು ಹೊತ್ತ 25  ಟ್ರಕ್ ಗಳು ಆಜಾದ್ ಪುರ ಮಂಡಿಗೆ ಆಗಮಿಸಿದೆ.

ಆಫ್ಘಾನಿಸ್ತಾನದಿಂದ ಹೆಚ್ಚುವರಿ ಈರುಳ್ಳಿಯ ಆಗಮನದೊಂದಿಗೆ ಶುಕ್ರವಾರ ಸಗಟು ಮಾರುಕಟ್ಟೆಯಲ್ಲಿ  ಈರುಳ್ಳಿ ಬೆಲೆ ಕಿಲೋ ಗ್ರಾಂಗೆ 10 ರೂಪಾಯಿಯಿಂದ 50 ರೂಪಾಯಿಗಳಷ್ಟು ತಗ್ಗಿದೆ ಎಂದು ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಸುರೇಂದ್ರ ಬುಧಿರಾಜ್ ಹೇಳಿದರು.

ನಗರದಲ್ಲಿ ಕಿಲೋ ಗ್ರಾಂಗೆ ಅಂದಾಜು 60 ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಿರುವ ಮದರ್ ಡೈರಿ ಮಳಿಗೆಗಳು ಈರುಳ್ಳಿಯ ಬೆಲೆ ಸಗಟು ಮಾರಾಟದಲ್ಲಿ ತಗ್ಗಿದ್ದನ್ನು ಅನುಸರಿಸಿ ಶನಿವಾರದಿಂದ ಬೆಲೆ ಇಳಿಸುವ ಬಗ್ಗೆ ಯೋಜಿಸುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈರುಳ್ಳಿಯ ಕನಿಷ್ಠ ರಫ್ತು ದರವನ್ನು (ಎಂಇಪಿ) ಸರ್ಕಾರವು ಟನ್ ಗೆ 900 ಅಮೆರಿಕನ್ ಡಾಲರ್ ಗಳಿಗೆ ಹೆಚ್ಚಿಸಿದ  ಒಂದು ದಿನದ ಬಳಿಕ ಈರುಳ್ಳಿ ದರ ಇಳಿದಿದೆ. ಎಂಇಪಿ ದರಕ್ಕಿಂತ ಕಡಿಮೆ ದರದಲ್ಲಿ ಈರುಳ್ಳಿ ರಫ್ತಿಗೆ ಅವಕಾಶ ಇರುವುದಿಲ್ಲ.

ನಾಸಿಕ್ ನ ಲಾಸಲಗಾಂವ್ ಮಂಡಿಯಲ್ಲಿ ದರ ಇಳಿದದ್ದೂ ಈರುಳ್ಳಿಯ ಸಗಟು ಮಾರಾಟ ದರ ಇಳಿಯಲು ಕಾರಣ ಎಂದೂ ವರ್ತಕರು ಹೇಳುತ್ತಿದ್ದಾರೆ.

ನಾಸಿಕ್ ನ ಲಾಸಲಗಾಂವ್ ಮಂಡಿಯು ಸಾಮಾನ್ಯವಾಗಿ ರಾಷ್ಟ್ರವ್ಯಾಪಿ ದರದ ಮೇಲೆ ಪರಿಣಾಮ ಬೀರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.