ADVERTISEMENT

ಆಮದು-ರಫ್ತು ಅಂತರ ಮತ್ತಷ್ಟು ಹೆಚ್ಚಳ

ದೇಶದ ಪ್ರಗತಿ ಗತಿಗೆ ಬಂಗಾರ ಬಲು ಭಾರ!

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ನವದೆಹಲಿ(ಪಿಟಿಐ): ಮೇ ತಿಂಗಳಲ್ಲಿ ಆಮದು ಮತ್ತಷ್ಟು ಹೆಚ್ಚಿದೆ, ರಫ್ತು ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಆಗಿದೆ. ಇದು ದೇಶದ ವಿದೇಶಿ ವಹಿವಾಟು ಅಂತರವನ್ನು ಕಳೆದ ಏಳು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಒಯ್ದಿದೆ.

ಸದ್ಯ ಹೊರ ದೇಶಗಳಿಗೆ ರವಾನೆ ಆಗುವ ಸರಕುಗಳಿಗಿಂತ ವಿವಿಧ ದೇಶಗಳಿಂದ ಭಾರತ ಖರೀದಿಸುವ ಪ್ರಮಾಣವೇ 2010 ಕೋಟಿ ಅಮೆರಿಕನ್ ಡಾಲರ್(ಈಗಿನ ಲೆಕ್ಕದಲ್ಲಿ ರೂ 1,15,575 ಕೋಟಿ)ಗಳಷ್ಟು ಹೆಚ್ಚಾಗಿದೆ.

ಮೇ ತಿಂಗಳಲ್ಲಿ ದೇಶದಿಂದ 2451 ಕೋಟಿ ಡಾಲರ್ರೂ1,40,932 ಕೋಟಿ) ಮೌಲ್ಯದ ಸರಕು ರಫ್ತಾಗಿದ್ದು, 2012ರ ಮೇ ತಿಂಗಳಿಗೆ ಹೋಲಿಸಿದರೆ ಶೇ 1.1ರಷ್ಟು ಕುಸಿತವಾಗಿದೆ. ಆಮದು ಪ್ರಮಾಣ 4465 ಕೋಟಿ ಡಾಲರ್ರೂ2,56,737 ಕೋಟಿ)ಗಳಿಗೆ ಮುಟ್ಟಿದ್ದು, ಶೇ 6.99ರಷ್ಟು ಹೆಚ್ಚಳವಾಗಿದೆ.

ದೇಶದ ಆಮದು-ರಫ್ತು ಚಟುವಟಿಕೆ ನಡುವಿನ ವ್ಯತ್ಯಾಸ ಏಪ್ರಿಲ್‌ನಲ್ಲಿ 1780 ಕೋಟಿ ಡಾಲರ್ರೂ1,02,350 ಕೋಟಿ)ಗಳಷ್ಟಿತ್ತು. ನಂತರದ ಒಂದೇ ತಿಂಗಳಲ್ಲಿ ಈ ಅಂತರ ಮತ್ತಷ್ಟು ವಿಸ್ತಾರವಾಗಿದೆ. 2012ರ ಮೇ ತಿಂಗಳಲ್ಲಿನ 1690 ಕೋಟಿ ಡಾಲರ್‌ಗಳಿಗೆ ಹೋಲಿಸಿದರಂತೂ `ಚಾಲ್ತಿ ಖಾತೆ ಕೊರತೆ' ಅಂತರ ಯಾವ ಪ್ರಮಾಣದಲ್ಲಿ ಹೆಚ್ಚುತ್ತಾ ಹೋಗುತ್ತಿದೆ ಎಂಬುದು ಮನವರಿಕೆ ಆಗುತ್ತದೆ. ಇದು ರೂಪಾಯಿಯನ್ನು ಇನ್ನಷ್ಟು ಅಪಮೌಲ್ಯಗೊಳಿಸಲಿದೆ. ದೇಶದ ಒಟ್ಟಾರೆ ಪ್ರಗತಿಗೆ ಮಾರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಚಿನ್ನ ಆಮದು ಶೇ89 ಅಧಿಕ
ಈ ಪರಿಯಲ್ಲಿ ಆಮದು ಹೆಚ್ಚುತ್ತಾ ಹೋಗಲು ಚಿನ್ನದ ಖರೀದಿಯೇ ಮುಖ್ಯ ಕಾರಣವಾಗಿದೆ. ಚಿನ್ನದ ಆಮದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಶೇ 89.70ರಷ್ಟು ಹೆಚ್ಚಳ ಕಂಡಿದೆ. ಅಂದರೆ, 840 ಕೋಟಿ ಡಾಲರ್ರೂ48,300 ಕೋಟಿ) ಮೌಲ್ಯದ ಬಂಗಾರವನ್ನು ವಿದೇಶದಿಂದ ತರಿಸಿಕೊಳ್ಳಲಾಗಿದೆ. ಸದ್ಯ ಬಂಗಾರ ಎಂಬುದು ದೇಶದ ಮುನ್ನಡೆಗೆ ಬಲು ಭಾರವಾಗಿ ಪರಿಣಮಿಸಿದೆ.

ಇನ್ನೊಂದೆಡೆ ಯೂರೋಪ್ ಮಾರುಕಟ್ಟೆಯಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿ ಭಾರತದ ರಫ್ತು ಚಟುವಟಿಕೆ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಈ ಅಂಶವೂ ರಫ್ತು ಪ್ರಮಾಣ ಕಡಿಮೆ ಆಗಲು ಮುಖ್ಯ ಕಾರಣವಾಗಿದೆ.

`ಆಮದು ಸತತವಾಗಿ ಹೆಚ್ಚುತ್ತಲೇ ಇರುವುದು, ರಫ್ತು ಕಡಿಮೆ ಆಗುತ್ತಿರುವ ಈಗಿನ ಸ್ಥಿತಿ ನಿಜಕ್ಕೂ ದೇಶದ ಪ್ರಗತಿಯ ಹಾದಿಗೆ ತೊಡಕಾಗಿದ್ದು, ಚಿಂತೆ ಹೆಚ್ಚುವಂತೆ ಮಾಡಿದೆ. ಭಾರಿ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಆಮದಾಗುತ್ತಿರುವುದೇ ಇದಕ್ಕೆ ಮೂಲವಾಗಿದೆ' ಎಂದು ಕೇಂದ್ರದ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಎಸ್.ಆರ್.ರಾವ್ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.