ADVERTISEMENT

ಆರ್ಥಿಕ ವೃದ್ಧಿ ದರ ಹೆಚ್ಚಳ

ಹಿಂದಿನ ಐದು ತ್ರೈಮಾಸಿಕ ಅವಧಿಯಲ್ಲಿನ ಗರಿಷ್ಠ ಮಟ್ಟ

ಪಿಟಿಐ
Published 28 ಫೆಬ್ರುವರಿ 2018, 20:48 IST
Last Updated 28 ಫೆಬ್ರುವರಿ 2018, 20:48 IST
ಆರ್ಥಿಕ ವೃದ್ಧಿ ದರ ಹೆಚ್ಚಳ
ಆರ್ಥಿಕ ವೃದ್ಧಿ ದರ ಹೆಚ್ಚಳ   

ನವದೆಹಲಿ: ಡಿಸೆಂಬರ್‌ಗೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೇಶಿ ಆರ್ಥಿಕತೆಯು ಶೇ 7.2ರಷ್ಟು ಬೆಳವಣಿಗೆ ದಾಖಲಿಸಿದೆ.

ಇದು ಈ ಹಿಂದಿನ 5 ತ್ರೈಮಾಸಿಕ ಅವಧಿಯಲ್ಲಿನ ಗರಿಷ್ಠ ಮಟ್ಟವಾಗಿದೆ.

ಕೃಷಿ, ತಯಾರಿಕೆ, ಕಟ್ಟಡ ನಿರ್ಮಾಣ ಮತ್ತು ಕೆಲ ಸೇವಾ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಕಂಡು ಬಂದಿದ್ದರಿಂದ ಮತ್ತು ಸರ್ಕಾರಿ ವೆಚ್ಚ ಹೆಚ್ಚಳಗೊಂಡಿದ್ದರಿಂದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಬೆಳವಣಿಗೆ ಕಂಡಿದೆ. ಗರಿಷ್ಠ ಮುಖ ಬೆಲೆಯ ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಆಘಾತದಿಂದ ಅರ್ಥ ವ್ಯವಸ್ಥೆಯು ಕೊನೆಗೂ ಹೊರಬಂದಿದೆ. ಜತೆಗೆ, ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಆರ್ಥಕತೆ ಎನ್ನುವ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗಿದೆ.

ADVERTISEMENT

ಎಂಟು ಪ್ರಮುಖ ಮೂಲ ಸೌಕರ್ಯ ವಲಯಗಳೂ ಜನವರಿ ತಿಂಗಳಲ್ಲಿ ಶೇ 6.7ರಷ್ಟು ಏರಿಕೆ ಕಂಡಿವೆ.ತಯಾರಿಕಾ ವಲಯದಲ್ಲಿನ ಒಟ್ಟು ಮೌಲ್ಯ ಸೇರ್ಪಡೆಯು (ಜಿವಿಎ) ಶೇ 8.9ರಷ್ಟಿದ್ದು, ಇದು ಹಿಂದಿನ ತ್ರೈಮಾಸಿಕದಲ್ಲಿನ ಶೇ 6.9ಕ್ಕಿಂತ ಹೆಚ್ಚಿಗೆ ಇದೆ. ಕೃಷಿ ವಲಯದಲ್ಲಿನ ‘ಜಿವಿಎ’ ಕೂಡ ಶೇ 2.7ರಿಂದ ಶೇ 4.1ಕ್ಕೆ ಬೆಳವಣಿಗೆ ಕಂಡಿದೆ.

ಕಟ್ಟಡ ನಿರ್ಮಾಣ ವಲಯವು ಶೇ 6.8ರಷ್ಟು ಮತ್ತು ಹಣಕಾಸು ಸೇರಿದಂತೆ ಸೇವಾ ವಲಯವು ಶೇ 6.7ರಷ್ಟು ವೃದ್ಧಿ ಕಂಡಿದೆ. ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಮಾಡಿರುವ ಎರಡನೆ ಅಂದಾಜಿನ ಪ್ರಕಾರ, ಮಾರ್ಚ್‌ 31ಕ್ಕೆ ಕೊನೆಗೊಳ್ಳುವ ಈ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು ಶೇ 6.6ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. 2016–17ರಲ್ಲಿ ಇದು ಶೇ 7.1ರಷ್ಟಿತ್ತು.

ದ್ವಿತೀಯ ತ್ರೈಮಾಸಿಕದಲ್ಲಿನ ವೃದ್ಧಿ ದರವನ್ನು ಈ ಮೊದಲಿನ ಶೇ 6.3ರ ಬದಲಿಗೆ ಶೇ 6.5ಕ್ಕೆ ಪರಿಷ್ಕರಿಸಲಾಗಿದೆ.

2016–17ರ ಸಾಲಿನ ಜುಲೈ – ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ವೃದ್ಧಿ ದರವು ಶೇ 7.5ರಷ್ಟು ಗರಿಷ್ಠ ಮಟ್ಟದಲ್ಲಿ ದಾಖಲಾಗಿತ್ತು. 2011–12ರ ಸ್ಥಿರ ಬೆಲೆ ಮಟ್ಟದಲ್ಲಿ 2016–17ರಲ್ಲಿನ ಜಿಡಿಪಿಯ ಪರಿಷ್ಕೃತ ಒಟ್ಟು ಮೊತ್ತ ₹ 130.04 ಲಕ್ಷ ಕೋಟಿಗಳಷ್ಟಾಗಲಿದೆ ಎಂದೂ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.