ADVERTISEMENT

ಆರ್ಥಿಕ ವೃದ್ಧಿ ಶೇ 7ಕ್ಕೆ ಏರಿಕೆ

ಪಿಟಿಐ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST

ನವದೆಹಲಿ: ‘2013–14ನೇ ಹಣಕಾಸು ವರ್ಷದಲ್ಲಿ ಆರಂಭಗೊಂಡಿದ್ದ ಮಂದಗತಿಯ ಆರ್ಥಿಕ ಬೆಳವಣಿಗೆಯು ಈಗ ತನ್ನ ಅತ್ಯಂತ ಕಡಿಮೆ ಹಂತ ತಲುಪಿದ್ದು, ಕ್ರಮೇಣ ಚೇತರಿಕೆಯ ಹಾದಿಗೆ ಮರಳಲಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ.

‘ಆರ್ಥಿಕ ವೃದ್ಧಿ ಬೆಳವಣಿಗೆಯು (ಜಿಡಿಪಿ) ಪ್ರಸಕ್ತ ಸಾಲಿನಲ್ಲಿ ಶೇ 6.9 ರಿಂದ ಶೇ 7ರಷ್ಟು ಪ್ರಗತಿ ಕಾಣಲಿದೆ. 2018ರ ಮೊದಲ ತ್ರೈಮಾಸಿಕದ ಹೊತ್ತಿಗೆ ಆರ್ಥಿಕತೆಯ ವೃದ್ಧಿ ದರವು ಗಮನಾರ್ಹ ಚೇತರಿಕೆ ಕಂಡಿರಲಿದೆ. 2017–18ರ ಹಣಕಾಸು ವರ್ಷಕ್ಕಿಂತ, 2018–19ರಲ್ಲಿ ಅರ್ಥ ವ್ಯವಸ್ಥೆಯ ಚಿತ್ರಣ ತುಂಬ ಆಶಾದಾಯಕವಾಗಿರಲಿದೆ. ನಂತರದ ವರ್ಷಗಳಲ್ಲಿ ಇದು ಸುಸ್ಥಿರ ನೆಲೆಯಲ್ಲಿ ಮುಂದುವರೆಯಲಿದೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘2007 ರಿಂದ 2013ರವರೆಗೆ ಆರ್ಥಿಕ ವೃದ್ಧಿ ದರವು ಉತ್ತಮವಾಗಿತ್ತು. 2013–14 ರಲ್ಲಿ ಕುಂಠಿತ ಪ್ರಗತಿ ಆರಂಭಗೊಂಡಿತ್ತು.  ಸಾಕಷ್ಟು ಎಚ್ಚರಿಕೆವಹಿಸದೆ  ಹಲವಾರು ಯೋಜನೆಗಳಿಗೆ ಬ್ಯಾಂಕ್‌ಗಳು ಉದಾರವಾಗಿ ಸಾಲ ವಿತರಿಸಿದ್ದವು.

ADVERTISEMENT

‘ಯೋಜನೆಗಳ ಮೇಲೆ ಯಾವುದೇ ನಿಯಂತ್ರಣ ಇದ್ದಿರಲಿಲ್ಲ. ಅಸಮರ್ಪಕ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳ್ಳಲಿಲ್ಲ. ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಹೆಚ್ಚುತ್ತ ಸಾಗಿತು. ಇದು ಆರ್ಥಿಕ ಕುಂಠಿತಕ್ಕೆ ಕಾರಣವಾಗಿತ್ತು. ಅದೀಗ ತನ್ನ ಕೊನೆಯ ಹಂತ ತಲುಪಿದೆ. ಇನ್ನು ಮುಂದೆ ಚೇತರಿಕೆ ಕಾಣಲಿದೆ. ಇನ್ನು ಮುಂದೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.