ನವದೆಹಲಿ (ಪಿಟಿಐ): ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (ಆರ್‌ಆರ್‌ಬಿ) ರೂ 632 ಕೋಟಿಗಳಷ್ಟು ಬಂಡವಾಳ ನೆರವು ಒದಗಿಸಲು ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.
`ಆರ್‌ಆರ್‌ಬಿ~ಗಳಿಗೆ ಅಗತ್ಯವಿರುವಷ್ಟು ಮೂಲಧನ ಒದಗಿಸುವುದು ಮತ್ತು ಬ್ಯಾಂಕುಗಳ ಕೃಷಿ ಸಾಲ ಸಾಮರ್ಥ್ಯ ಹೆಚ್ಚಿಸಲು ಈ ನೆರವು ನೀಡಲಾಗುತ್ತಿದೆ~ ಎಂದು ಸಚಿವರೊಬ್ಬರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಅಧ್ಯಕ್ಷತೆಯಲ್ಲಿನ ಸಮಿತಿ ನೀಡಿದ ಶಿಫಾರಸು ಆಧರಿಸಿ ಈ ನೆರವು ನೀಡಲಾಗುತ್ತಿದೆ.
ಕೇಂದ್ರ ಸರ್ಕಾರ 2009-10ನೇ ಸಾಲಿನಿಂದಲೂ ನಷ್ಟಪೀಡಿತ 40 ಪ್ರಾದೇಶೀಕ ಗ್ರಾಮೀಣ ಬ್ಯಾಂಕುಗಳಿಗೆ ಅಗತ್ಯವಿರುವ ಮೂಲಧನ ಒದಗಿಸುತ್ತಾ ಬಂದಿದೆ. ಈ ಬ್ಯಾಂಕುಗಳು ಮುಖ್ಯವಾಗಿ ಗ್ರಾಮೀಣ ಮತ್ತು ಕೃಷಿ ವಲಯಗಳಿಗೆ ಸಾಲ ನೀಡುತ್ತವೆ.
ಕಳೆದ ಮಾರ್ಚ್ 2012ರ ವರೆಗೆ ಕೇಂದ್ರ ಸರ್ಕಾರ 16 `ಆರ್‌ಆರ್‌ಬಿ~ಗಳಿಗೆ ಬಂಡವಾಳ ನೆರವು ಒದಗಿಸಿದೆ. ಆದರೆ, ರಾಜ್ಯಗಳು ಇದುವರೆಗೆ ತಮ್ಮ ಪಾಲಿನ ಬಂಡವಾಳ ಬಿಡುಗಡೆ ಮಾಡಿಲ್ಲ .ಒಂದು ವೇಳೆ ರಾಜ್ಯಗಳು ಮತ್ತು ಷೇರುದಾರರು ತಮ್ಮ ಪಾಲಿನ ಕೊಡುಗೆ ನೀಡಿದರೆ ಈ ಬ್ಯಾಂಕುಗಳು ಸುಮಾರು ರೂ 1,264 ಕೋಟಿಗಳಷ್ಟು ಬಂಡವಾಳ ನೆರವು ಪಡೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.
ನಷ್ಟಪೀಡಿತ `ಆರ್‌ಆರ್‌ಬಿ~ಗಳಿಗೆ ಮೂಲಧನ ಒದಗಿಸುವಿಕೆಯಲ್ಲಿ ಕೇಂದ್ರದ ಪಾಲು ಶೇ 50ರಷ್ಟಿದ್ದರೆ, ರಾಜ್ಯದ ಪಾಲು ಶೇ 15. ಇನ್ನುಳಿದ ಶೇ 35ರಷ್ಟು ಬಂಡವಾಳವನ್ನು ಪ್ರಾಯೋಜಿತ ಬ್ಯಾಂಕ್ ನೀಡುತ್ತದೆ. ಸದ್ಯ ದೇಶದಲ್ಲಿ 82 `ಆರ್‌ಆರ್‌ಬಿ~ಗಳಿದ್ದು, ಹೆಚ್ಚಿನ ಬ್ಯಾಂಕುಗಳು `ಕೋರ್~ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಿಕೊಂಡಿವೆ.
ಮೂಲಧನ ಒದಗಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಂಡವಾಳ ನೆರವು ಯೋಜನೆಯನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.