ADVERTISEMENT

ಉಕ್ಕು ಯೋಜನೆ: ಪರಾಮರ್ಶೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಉಕ್ಕು ಸ್ಥಾವರ ಸ್ಥಾಪನೆ ಉದ್ದೇಶದ ಯೋಜನೆಗಳು ತುಂಬ ವಿಳಂಬವಾಗಿರುವ ಬಗ್ಗೆ ಅಸಮಾಧಾನಗೊಂಡಿರುವ ಕೇಂದ್ರ ಸರ್ಕಾರವು ಇಂತಹ ನೂರಾರು ಒಪ್ಪಂದಗಳ ಪರಾಮರ್ಶೆಗೆ ಮುಂದಾಗಿದೆ.

ಕಳೆದ  ಐದಾರು ವರ್ಷಗಳಲ್ಲಿ ಉಕ್ಕು  ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ದೇಶದಾದ್ಯಂತ 236ರಷ್ಟು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದರೂ ಅವುಗಳಲ್ಲಿ ಅನೇಕವು ಇನ್ನೂ ಕಾಗದದ ಮೇಲೆಯೇ ಉಳಿದಿವೆ.

ಉದ್ದಿಮೆ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಲು ತೋರುವ ಉತ್ಸಾಹವನ್ನು ಯೋಜನೆಗಳ ಜಾರಿಯಲ್ಲಿ ತೋರುವುದಿಲ್ಲ. ಕಬ್ಬಿಣ ಮತ್ತು ಉಕ್ಕು ಸ್ಥಾವರಗಳನ್ನು ನಿರ್ಮಿಸಲು ಮುಂದೆ ಬಂದಿರುವ ಉದ್ದಿಮೆ ಸಂಸ್ಥೆಗಳಲ್ಲಿ ಅನೇಕವು ಗಣಿಗಾರಿಕೆಯನ್ನೇ ಗುತ್ತಿಗೆ ಪಡೆದಿಲ್ಲ ಅಥವಾ ಭೂಮಿ ಸ್ವಾಧೀನಕ್ಕೂ ಮುಂದಾಗಿಲ್ಲ ಎಂದು ಉಕ್ಕು ಸಚಿವ ಬೇನಿ ಪ್ರಸಾದ್ ವರ್ಮಾ ಖೇದ ವ್ಯಕ್ತಪಡಿಸಿದ್ದಾರೆ.

ಖಾಸಗಿ ಉದ್ದಿಮೆ ಸಂಸ್ಥೆಗಳು ಕರ್ನಾಟಕ, ಒಡಿಶಾ, ಛತ್ತೀಸಗಡ, ಜಾರ್ಖಂಡ್ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳ ಜತೆ ಇಂತಹ ಒಪ್ಪಂದಗಳನ್ನು ಮಾಡಿಕೊಂಡಿವೆ. ಈ ಎಲ್ಲ ಒಪ್ಪಂದಗಳ ಅಂದಾಜು ವೆಚ್ಚ ್ಙ 11 ಲಕ್ಷ ಕೋಟಿಗಳಷ್ಟು ಇದೆ. 2012ರ  ಮಾರ್ಚ್ ಹೊತ್ತಿಗೆ ವಾರ್ಷಿಕ 120 ದಶಲಕ್ಷ ಟನ್‌ಗಳಷ್ಟು ಉಕ್ಕು ಉತ್ಪಾದನೆಗೆ ಕೇಂದ್ರ ಸರ್ಕಾರವು ಗುರಿ ನಿಗದಿಪಡಿಸಿತ್ತು.

ಆದರೆ, ಇದುವರೆಗೆ ಅದರಲ್ಲಿ 75 ರಿಂದ 78 ದಶಲಕ್ಷ ಟನ್‌ಗಳಷ್ಟು ಸಾಮರ್ಥ್ಯದ ಉತ್ಪಾದನೆ ಮಾತ್ರ ಸಾಧ್ಯವಾಗಿದೆ. ಸ್ಥಾವರಗಳ ನಿರ್ಮಾಣ ನೆನೆಗುದಿಗೆ ಬಿದ್ದಿರುವುದರಿಂದ ನಿಗದಿಪಡಿಸಿರುವ ಗುರಿ ಈಡೇರಿಕೆಗೆ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಾಗದದ ಮೇಲೆಯೇ ಉಳಿದಿರುವ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಕೇಂದ್ರವು ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸಲು ಮುಂದಾಗಲಿದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವರ್ಮಾ, `ಎಲ್ಲಕ್ಕೂ ಮೊದಲು, ಸಹಿ ಆಗಿರುವ ಒಪ್ಪಂದಗಳನ್ನು ಪರಾಮರ್ಶಿಸಲಾಗುವುದು. ಯೋಜನೆ ಕಾರ್ಯಗತಗೊಳ್ಳಲು ಅಡ್ಡಿಯಾಗಿರುವ ಮತ್ತು ವಿಳಂಬದ ಕಾರಣ ತಿಳಿದುಕೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಉದ್ದಿಮೆ ಸಂಸ್ಥೆಗಳ ಮಧ್ಯೆ ಆಗಿರುವ  ಒಪ್ಪಂದಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಂಡರೆ ಉಕ್ಕು ಉತ್ಪಾದನೆಯಲ್ಲಿ ಭಾರತ ಅಮೆರಿಕವನ್ನು ಹಿಂದೆ ಹಾಕಲಿದೆ. ಆದರೆ, ಪೋಸ್ಕೊ ಯೋಜನೆಯಲ್ಲಿನ ಪ್ರಗತಿ ಹೊರತುಪಡಿಸಿದರೆ ಉಳಿದ ಎಲ್ಲ ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ಈ ಎಲ್ಲ ಯೋಜನೆಗಳನ್ನು 15ರಿಂದ 20  ದಿನಗಳಲ್ಲಿ ಪರಾಮರ್ಶಿಸಲಾಗುವುದು ಎಂದು ವರ್ಮಾ ಹೇಳಿದ್ದಾರೆ. ಭೂ ಸ್ವಾಧೀನ ಮತ್ತು ಗಣಿ ಗುತ್ತಿಗೆ ನೀಡುವ ವಿಷಯಗಳು ರಾಜ್ಯದ ವ್ಯಾಪ್ತಿಗೆ ಬರುತ್ತಿದ್ದರೂ,  ಯೋಜನೆಗಳನ್ನು ಜಾರಿಗೆ ನಿಟ್ಟಿನಲ್ಲಿ ಇರಬೇಕಾದ ಗಂಭೀರತೆ ಯಾರಲ್ಲೂ ಕಾಣುತ್ತಿಲ್ಲ. ರಾಜ್ಯ ಸರ್ಕಾರಗಳು ಮತ್ತು  ಖಾಸಗಿ ಉದ್ದಿಮೆ ಸಂಸ್ಥೆಗಳಿಗೆ ಇಚ್ಛಾಶಕ್ತಿ ಇದ್ದಿದ್ದರೆ, ಅಡೆತಡೆಗಳನ್ನೆಲ್ಲ ನಿವಾರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದವು.

ಜಾರ್ಖಂಡ್ ಮತ್ತು ಒಡಿಶಾದಲ್ಲಿನ (ರೂ 1 ಲಕ್ಷ ಕೋಟಿ)  ಅರ್ಸೆಲ್ ಮಿತ್ತಲ್, ಒಡಿಶಾದಲ್ಲಿನ ಪೋಸ್ಕೊದ (್ಙ 54 ಸಾವಿರ ಕೋಟಿ), ಸಜ್ಜನ್ ಜಿಂದಾಲ್ ನೇತೃತ್ವದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಪಶ್ಚಿಮಬಂಗಾಳದ ್ಙ 35 ಸಾವಿರ ಕೋಟಿ ವೆಚ್ಚದ ಯೋಜನೆಗಳು ನೆನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆಗಳಾಗಿವೆ ಎಂದು ಸಚಿವ ವರ್ಮಾ ತಿಳಿಸಿದ್ದಾರೆ.

ರಾಜ್ಯದ ಯೋಜನೆ
ಉದ್ಯಮಿಗಳ ಪಾಲಿಗೆ ಬಂಡವಾಳ ಹೂಡಿಕೆಯ ನೆಚ್ಚಿನ ತಾಣವಾಗಿರುವ ಕರ್ನಾಟಕದಲ್ಲಿನ ಇಂತಹ ಅನೇಕ ಯೋಜನೆಗಳದ್ದೂ ಇದೇ ಕತೆ - ವ್ಯಥೆ.

ಪೋಸ್ಕೊ, ಅರ್ಸೆಲ್ಲರ್ ಮಿತ್ತಲ್ ಮತ್ತು ಎಸ್ಸಾರ್ ಸ್ಟೀಲ್ ಉದ್ದಿಮೆ ಸಂಸ್ಥೆಗಳು ತಲಾ 6 ದಶಲಕ್ಷ ಟನ್‌ಗಳಷ್ಟು ವಾರ್ಷಿಕ ಸಾಮರ್ಥ್ಯದ ಸ್ಥಾವರಗಳನ್ನು ಸ್ಥಾಪಿಸಲು ಮುಂದಾಗಿವೆ. ಈ ಎಲ್ಲ ಯೋಜನೆಗಳ ಒಟ್ಟು ವೆಚ್ಚ ್ಙ 90 ಸಾವಿರ ಕೋಟಿಗಳಷ್ಟು ಇದೆ.

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಇಸ್ಪತ್ ನಿಗಮ್ (ಆರ್‌ಐಎನ್‌ಎಲ್) ಕೂಡ 3 ದಶಲಕ್ಷ ಟನ್ ಸಾಮರ್ಥ್ಯದ ಘಟಕವನ್ನು ್ಙ 15 ಸಾವಿರ ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಉತ್ತರ ಕರ್ನಾಟಕದಲ್ಲಿ ್ಙ 87 ಸಾವಿರ ಕೋಟಿ ವೆಚ್ಚದಲ್ಲಿ ಚೀನಾದ ಸಂಸ್ಥೆ ಮತ್ತು ಸ್ಥಳೀಯ ಮೂರು ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಬ್ಬಿಣದ ಉಂಡೆ ಮತ್ತು ಉಕ್ಕು ಘಟಕ ಸ್ಥಾಪಿಸುವ ಯೋಜನೆ ಕೂಡ ಯಾವುದೇ ಪ್ರಗತಿ ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT