ADVERTISEMENT

ಉತ್ತಮ ಮುಂಗಾರು: ಜಿಡಿಪಿ ಹೆಚ್ಚಳ

ನೀತಿ ಆಯೋಗದ ಉಪಾಧ್ಯಕ್ಷ ಪನಗರಿಯಾ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 20:06 IST
Last Updated 28 ಜುಲೈ 2016, 20:06 IST
ಉತ್ತಮ ಮುಂಗಾರು: ಜಿಡಿಪಿ ಹೆಚ್ಚಳ
ಉತ್ತಮ ಮುಂಗಾರು: ಜಿಡಿಪಿ ಹೆಚ್ಚಳ   

ನವದೆಹಲಿ (ಪಿಟಿಐ): ‘ ಈ ಬಾರಿಯ ಉತ್ತಮ ಮುಂಗಾರು, ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಶೇ 8ರ ಗಡಿ ದಾಟಿಸುವ ಸಾಧ್ಯತೆ ಇದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್‌ ಪನಗರಿಯಾ  ಅಂದಾಜಿಸಿದ್ದಾರೆ.

‘ಈ ಬಾರಿ ಎಲ್ಲೆಡೆ ಉತ್ತಮ ಮಳೆಯಾಗಲಿರುವುದರಿಂದ ಕೃಷಿ ಉತ್ಪಾದನೆಯೂ ಹೆಚ್ಚಲಿದೆ. ಹಿಂದಿನ ವರ್ಷ ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಕೃಷಿ ರಂಗವು ಪ್ರಸಕ್ತ ಸಾಲಿನಲ್ಲಿ ಗಮನಾರ್ಹವಾಗಿ ಚೇತರಿಕೆ ಕಾಣಲಿದೆ.  ಇದರಿಂದಾಗಿ ಆರ್ಥಿಕ ವೃದ್ಧಿ ದರವು  ಶೇ 8ರ ಗಡಿ ದಾಟುವ ಸಾಧ್ಯತೆ ಹೆಚ್ಚಿದೆ. 2016–17ನೆ ಹಣಕಾಸು ವರ್ಷದಲ್ಲಿ ‘ಜಿಡಿಪಿ’ಯು ಗರಿಷ್ಠ ಮಟ್ಟದಲ್ಲಿ ಇರಲಿದೆ’ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ದೇಶಿ ಆರ್ಥಿಕತೆಯು ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 7.9ರಷ್ಟು ವೃದ್ಧಿ ದಾಖಲಿಸಿದೆ. ತಯಾರಿಕಾ ರಂಗದಲ್ಲಿನ ಉತ್ತಮ ಸಾಧನೆಯ ಫಲವಾಗಿ 2015–16ನೆ ಹಣಕಾಸು ವರ್ಷದಲ್ಲಿ ಶೇ 7.6 ಬೆಳವಣಿಗೆಯು ದಾಖಲಾಗಿರುವುದು 5 ವರ್ಷಗಳಲ್ಲಿನ ಗರಿಷ್ಠ ಮಟ್ಟವಾಗಿದೆ.

ಕೇಂದ್ರ ಸರ್ಕಾರವು ಪಂಚವಾರ್ಷಿಕ ಯೋಜನೆ  ರದ್ದುಮಾಡಿದ್ದರೂ, ರಾಜ್ಯ ಸರ್ಕಾರಗಳು ಈ ಯೋಜನೆ ಮುಂದುವರೆಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಪನಗರಿಯಾ, ಈ ವಿಷಯದಲ್ಲಿ ಕೇಂದ್ರವು, ರಾಜ್ಯಗಳ ಮೇಲೆ ಒತ್ತಡ ಹೇರುವುದಿಲ್ಲ. ಯೋಜನಾ ಆಯೋಗ ರದ್ದುಪಡಿಸಿ ನೀತಿ ಆಯೋಗ ರಚಿಸಲಾಗಿದ್ದು, ಬಹುತೇಕ ರಾಜ್ಯಗಳಲ್ಲಿ  ಯೋಜನಾ ಮಂಡಳಿಗಳ ಅಸ್ತಿತ್ವ ಮುಂದುವರೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.