ADVERTISEMENT

ಉದ್ಯಮಿಗಳಿಗೆ ಸಾಲದ ನೆರವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST
ಉದ್ಯಮಿಗಳಿಗೆ ಸಾಲದ ನೆರವು
ಉದ್ಯಮಿಗಳಿಗೆ ಸಾಲದ ನೆರವು   

ಕೈಗಾರಿಕೋದ್ಯಮಿ ಆಗಬೇಕು ಎಂದು ಬಹಳಷ್ಟು ಮಂದಿ ಕನಸು ಕಾಣುತ್ತಾರೆ. ಆದರೆ, ಕನಸಿನ  ಕೈಗಾರಿಕೆ ಆರಂಭಿಸಲು ಬೇಕಾದ ಬಂಡವಾಳ ಇಲ್ಲ ಎಂದು ಹೆಚ್ಚಿನ ಮಂದಿ ಉದ್ಯಮಿ ಆಗುವ ಸಾಹಸ ಮಾಡುವುದೇ ಇಲ್ಲ.
 
ಬಂಡವಾಳ, ಧೈರ್ಯದ ಕೊರತೆ ಹಾಗೂ ಹೊಸ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಏನೇನು ಸಲವತ್ತು ಸಿಗುತ್ತದೆ ಎಂಬ ಮಾಹಿತಿ ಇಲ್ಲದಿರುವುದು ಇದಕ್ಕೆಲ್ಲ ಪ್ರಮುಖ ಕಾರಣ.
 
ಕೈಗಾರಿಕೆ ಆರಂಭಿಸುವ ಆಕಾಂಕ್ಷೆ ಹೊಂದಿ, ಬಂಡವಾಳ ಇಲ್ಲದವರಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸಾಲ ಖಾತರಿ ನಿಧಿ ಟ್ರಸ್ಟ್  (ಸಿಜಿಟಿಎಂಎಸ್‌ಇ) ಆರಂಭಿಸಿದೆ.

 ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ನ (ಎಸ್‌ಐಡಿಬಿಐ) ಸಹ ಇದಕ್ಕೆ ಕೈ ಜೋಡಿಸಿದೆ. ಕೈಗಾರಿಕೆ ಆರಂಭಿಸುವ ಅರ್ಹತೆ, ಹಂಬಲ, ಯೋಜನೆ ಇದ್ದು ದೊಡ್ಡ ಮೊತ್ತದ ಬಂಡವಾಳ ಇಲ್ಲದವರಿಗೆ `ಸಿಜಿಟಿಎಂಎಸ್‌ಇ~ ಸಾಲಕ್ಕೆ  ಖಾತರಿ ನೀಡುತ್ತದೆ.

ಯಾವುದೇ ಬ್ಯಾಂಕ್ ಇರಲಿ ನಿರ್ದಿಷ್ಟ ಪ್ರಮಾಣದ ಸಾಲ ನೀಡಬೇಕಾದರೆ ಆ ಮೊತ್ತಕ್ಕೆ ಅನುಗುಣವಾದ ಸಾಲದ ಜಾಮೀನು ಕೇಳುತ್ತದೆ (ಕೊಲ್ಯಾಟ್ರಲ್ ಸೆಕ್ಯುರಿಟಿ).

ಅಂದರೆ ರೂ.  10 ಲಕ್ಷ ಸಾಲ ಪಡೆಯಬೇಕು ಎಂದರೆ ಆ ಮೊತ್ತಕ್ಕೆ ಸರಿ ಹೊಂದುವಂತಹ ಆಸ್ತಿಯ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ. ಕೊಲ್ಯಾಟ್ರಲ್ ಸೆಕ್ಯುರಿಟಿ ಇಲ್ಲದೆ ಯಾವುದೇ ಬ್ಯಾಂಕ್ ದೊಡ್ಡ ಪ್ರಮಾಣದ ಸಾಲ ನೀಡುವುದಿಲ್ಲ.

ಕೈಗಾರಿಕೋದ್ಯಮಿ ಆಗ ಬಯಸುವ ಹಲವು ಮಂದಿ ತಮ್ಮ ಯೋಜನೆಗೆ ಅಗತ್ಯ ಇರುವಷ್ಟು ಸಾಲ ಪಡೆಯಲು ಕೊಲ್ಯಾಟ್ರಲ್ ಸೆಕ್ಯುರಿಟಿ ನೀಡಲಾಗದೆ ಯೋಜನೆ ಕೈಬಿಡುವ ಸನ್ನಿವೇಶ ಇರುತ್ತದೆ.
 
ಇಂತಹ ಸಂದರ್ಭದಲ್ಲಿ `ಸಿಜಿಟಿಎಂಎಸ್‌ಇ~ ಕೊಲ್ಯಾಟ್ರಲ್ ಸೆಕ್ಯುರಿಟಿ ನೀಡುತ್ತದೆ. ರೂ.1 ಕೋಟಿಗಳವರೆಗೆ ಸಾಲ ಪಡೆಯಬಹುದು. ಬಂಡವಾಳದ ಒಟ್ಟು ಮೊತ್ತದಲ್ಲಿ ಶೇ 15ರಷ್ಟನ್ನು ಸಾಲಗಾರರು ಭರಿಸಬೇಕಾಗುತ್ತದೆ.

ಅಂದರೆ ಬಳಿಯಲ್ಲಿ ರೂ. 15 ಲಕ್ಷ  ಇದ್ದರೆ  ರೂ. 1 ಕೋಟಿ  ಸಾಲ ಪಡೆಯಬಹುದು. ಸಾಲ ನೀಡುವ ಬ್ಯಾಂಕ್‌ಗೆ `ಸಿಜಿಟಿಎಂಎಸ್‌ಇ~ ಖಾತರಿ ನೀಡುತ್ತದೆ. ಸಾಲದ ಮೊತ್ತಕ್ಕೆ ಅನುಗುಣವಾಗಿ ಕನಿಷ್ಠ 0.50ರಿಂದ 1.50ರಷ್ಟು  ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಬ್ಯಾಂಕ್ ವಿಧಿಸಿದ ಬಡ್ಡಿಯ ಮೇಲೆ ಶೇ 1ರಷ್ಟನ್ನು ಖಾತರಿ ಶುಲ್ಕವನ್ನಾಗಿ `ಸಿಜಿಟಿಎಂಎಸ್‌ಇ~ ವಿಧಿಸುತ್ತದೆ.
 
ಅಲ್ಲದೆ ಪ್ರತಿ ವರ್ಷ ಈ ಖಾತರಿ ನವೀಕರಿಸಲು 0.50ರಿಂದ 1.50ರವರೆಗೆ ಶುಲ್ಕ ಕಟ್ಟಬೇಕಾಗುತ್ತದೆ. ಈ ಶುಲ್ಕದ ಪ್ರಮಾಣ ಸಹ ಸಾಲದ ಮೊತ್ತ ಅವಲಂಭಿಸಿರುತ್ತದೆ. `ಸಿಜಿಟಿಎಂಎಸ್‌ಇ~ ಈವರೆಗೆ ರೂ. 30 ಸಾವಿರ ಕೋಟಿಗಳಷ್ಟು ಸಾಲ ಕೊಡಿಸಿದೆ. ಒಟ್ಟು ಏಳು ಲಕ್ಷ ಮಂದಿಯ ಸಾಲಕ್ಕೆ ಖಾತರಿ ನೀಡಿದೆ.

ರೂ.2500 ಕೋಟಿ ಮೂಲ ನಿಧಿಯೊಂದಿಗೆ `ಸಿಜಿಟಿಎಂಎಸ್‌ಇ~ ಕಾರ್ಯಾರಂಭ ಮಾಡಿದೆ. ಆರಂಭದಲ್ಲಿ 40 ಸಹಭಾಗಿತ್ವ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿದ್ದವು. ಆದರೆ ಈಗ ಒಟ್ಟು 125 ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಸಹಭಾಗಿತ್ವ ವಹಿಸಿದೆ.

`ಅನೇಕರಿಗೆ `ಸಿಜಿಟಿಎಂಎಸ್‌ಇ~ ಬಗ್ಗೆ ಮಾಹಿತಿ ಇಲ್ಲ.  ಕೇಂದ್ರ ಸರ್ಕಾರದ ಈ ಯೋಜನೆಯನ್ನು ಯುವ ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳಬೇಕು~ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಪ್ರಧಾನ ಕಾರ್ಯದರ್ಶಿ ಬಿ.ಎಲ್. ಶ್ರೀನಿವಾಸ್ ಹೇಳುತ್ತಾರೆ. ಎಸ್‌ಐಡಿಬಿಐ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು.

ಮಾಹಿತಿಗೆ  ಅಂತರಜಾಲ ತಾಣ www.cgtmse.­com ಗೆ ಭೇಡಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.