ADVERTISEMENT

ಎಫ್‌ಡಿಐ:10 ರಾಜ್ಯಗಳು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಹೂಡಿಕೆಗೆ ಅವಕಾಶ ನೀಡಬೇಕು ಎನ್ನುವ ಕೇಂದ್ರದ ಪ್ರಸ್ತಾವಕ್ಕೆ 10 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ವಾಣಿಜ್ಯ ಖಾತೆಯ ರಾಜ್ಯ ಸಚಿವ ಜ್ಯೋತಿರಾಧಿತ್ಯ ಸಿಂಧ್ಯ ಸೋಮವಾರ ಇಲ್ಲಿ ತಿಳಿಸಿದ್ದಾರೆ.

ದೆಹಲಿ, ಮಣಿಪುರ, ದಿಯು ದಮನ್, ದಾದ್ರಾ ನಗರ್ ಹವೇಲಿ `ಎಫ್‌ಡಿಐ~ಗೆ ಒಪ್ಪಿಗೆ ಸೂಚಿಸಿವೆ ಎಂದು ಸಿಂಧ್ಯ ಆಗಸ್ಟ್ 8ರಂದು ಲೋಕಸಭೆಗೆ ತಿಳಿಸಿದ್ದರು. ಆದರೆ, ಇನ್ನೂ ಆರು ರಾಜ್ಯಗಳು (ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ) ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿವೆ ಎಂದು ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

2011ರ ನವೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ಬಹು ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಶೇ 51ರಷ್ಟು `ಎಫ್‌ಡಿಐ~ ಹೂಡಿಕೆಗೆ ಅವಕಾಶ ನೀಡುವ ಪ್ರಸ್ತಾವ ಅಂಗೀಕರಿಸಿತು. ಆದರೆ, ಇದಕ್ಕೆ `ಯುಪಿಎ~ ಅಂಗಪಕ್ಷ ತೃಣಮೂಲ ಕಾಂಗ್ರೆಸ್ ಮತ್ತು ಕೆಲವು ರಾಜ್ಯ ಸರ್ಕಾರಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ನೆನೆಗುದಿಗೆ ಬಿದ್ದಿತ್ತು.

`ಎಫ್‌ಡಿಐ~ ಹೂಡಿಕೆಗೆ ಸಂಬಂಧಿಸಿದಂತೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದಿಂದ ಬಂಡವಾಳ ಹರಿವು ತಗ್ಗಿದೆ ಎಂಬ ವಿಶ್ಲೇಷಣೆ ಉದ್ಯಮ ವಲಯದಿಂದ ಕೇಳಿಬಂದಿತ್ತು.

ಏಕ ಬ್ರಾಂಡ್: ಆರು ಪ್ರಸ್ತಾವ
ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಬೇಕು ಎಂದು  ಟಾಮಿ ಹಿಲ್‌ಫಿಗರ್, ಪ್ರಮೋದ್, ದಮಿಯಾನಿ ಸೇರಿಂದತೆ 6 `ಎಂಎನ್‌ಸಿ~ ಕಂಪೆನಿಗಳು ಪ್ರಸ್ತಾವ ಸಲ್ಲಿಸಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

`ಪವೇರ್ಸ್ ಇಂಗ್ಲೆಂಡ್ ಮತ್ತು `ಐಕೆಇಎ~ ಸಮೂಹ ಶೇ 100ರಷ್ಟು `ಎಫ್‌ಡಿಐ~ಗೆ ಅವಕಾಶ ಕೋರಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ~ ಎಂದು ವಾಣಿಜ್ಯ ಸಚಿವ ಆನಂದ ಶರ್ಮಾ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ಸರ್ಕಾರ ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿನ `ಎಫ್‌ಡಿಐ~ ಮಿತಿಯನ್ನು           ಶೇ 51ರಿಂದ ಶೇ 100ಕ್ಕೆ ಹೆಚ್ಚಿಸಿತ್ತು. ಇಂಗ್ಲೆಂಡ್ ಮೂಲದ ಪಾದರಕ್ಷೆ ಕಂಪೆನಿ ಪವೇರ್ಸ್, ಸ್ವೀಡನ್ ಮೂಲದ ಪೀಠೋಪಕರಣ ತಯಾರಿಕಾ ಕಂಪೆನಿ `ಐಕೆಇಎ~ ಶೇ 100ರಷ್ಟು `ಎಫ್‌ಡಿಐ~ ಹೂಡಿಕೆಗೆ ಆಸಕ್ತಿ ತೋರಿಸಿವೆ. `ಐಕೆಇಎ~ ರೂ.10,500 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ.

ಮೇ ತಿಂಗಳ ಅಂತ್ಯದವರೆಗೆ ಏಕ ಬ್ರಾಂಡ್ `ಎಫ್‌ಡಿಐ~ ಮೂಲಕ ದೇಶದೊಳಗೆ ್ಙ204 ಕೋಟಿ ಬಂಡವಾಳ ಹರಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.